ವಿಷಯಕ್ಕೆ ಹೋಗು

ಪುಟ:Vyshakha.pdf/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

382

ಆಮ್ಯಾಕೆ ಕಾಡಾದೀಲಿ ಬತ್ತಾ ಇರಬೇಕಾರೆ, ಮುಟ್ಟಿದರೆ ಮುನಿ ಗಿಡ ಸಿಕ್ತವೆ ಅಂದರೆ ಅವಳಿಗೆ ಬೋ ಸಂತೋಸ. ಆ ಗಿಡಗಳ ಮುಟ್ಟಿದೇಟಿಗೆ ಕೆಲವು ವಳೀಕೆ ಮುಚ್ಚಿಗತ್ತವೆ, ಕೆಲವು ವೊರೀಕೆ ಮುಚ್ಚಿಗತ್ತವೆ. ವಳಮುಚ್ಚದ ಗಿಡ ಕಂಡರೆ, ಅಲ್ಲಿ ನಿಂತುಕಳಾದು. “ವಳಮುಚ್ಚುಗ, ವಳಮುಚ್ಚಗ- ನಿನ್ನ ಮೊಕ ಮುಚ್ಚ “ಅಂದು ಆ ಗಿಡವ ಮುಟ್ಟಿಗೊಂದ್ರೆ, ಆ ಗಿಡದ ಪುಟ್ಟಪುಟಾಣಿ ಎಲೆಗೋಳೆಲ್ಲ ಸರಕ್ನೆ ವಳೀಕೆ ಮುಚ್ಚಕೊಳೋವು! ಆಮ್ಯಾಕೆ ಅಂಗೇಯ ವೊರಮುಚ್ಚುಗದ ಗಿಡದ ಮುಂದೆ ನಿಂತು, “ವೊರಮುಚ್ಚುಗ, ವೊರಮುಚ್ಚುಗ- ನಿನ್ನ ಕುಂಡಿ ಮುಚ್ಚ” ಅಂದು,,ಆ ಗಿಡ ಮುಟ್ಟಿತೊಂದ್ರೆ ಆ ಗಿಡದ ಎಲೆಗೋಳೆಲ್ಲ ವೊರೀಕೆ ಮೊಡಚಿಕೊಳ್ಳೊವು!... ಅದ ಕಂಡು ಅವಳು ಕೇಕೆ ಆಕಿದ್ದೂ ಆಕಿದ್ದೇ. ಪುನಾ ಪುನಾ ಅಂತಾ ಗಿಡ ಎಲ್ಲೆಲ್ಲಿ ಕಾಣ್ತಾವೆ ಅಲ್ಲೆಲ್ಲ ನಿಂತು ನಿಂತು, ಅವಳ್ದು ಇದೇ ಆಟ ಆಗೋದು!...

ಗೌರಿ ತಿಂಗಳು ಬಂತು ಅಂದರೆ, ಅವಳು ನಾನು ಇಬ್ಬರೂವೆ ಸೀತಪಲದ ಹಣ್ಣ ಬಿಟ್ಟದಕಿಬ್ಬಿ ತಾವ್ನಿಂದ ಕಿತ್ತುಗಂಬಂದ ಬೇಲಿ ವಳಾಗಡೆ ಇಟ್ಟು ಅಡ ಹಾಕೋವು. ಅವು ಕಣ್ಣಾಗಬುಟ್ಟಾಗ ಅದೇಟು ಕಿಲಿಕಿಲೀಂತ ತಿನ್ನೋಳು!..... ಜೇನುತುಪ್ಪ ಅಂದರೂ ಅವಳಿಗೆ ಅಪೆಕ್ಸೆ. ನಾನು ಕಾಡಿಗೆ ದನ ಅಟ್ಟಗಂಡು ಹ್ವಾದಾಗ ಯವಾಗಲಾರೂ ಕೋಲುಜೇನುತುಪ್ಪಾನೊ ತುಡುವೆ ಜೇನುತುಪ್ಪಾನೊ ತಂದು ಕ್ವಟ್ರೆ ನನ್ನ ತಬ್ಬಿಕಂಡು ನನ್ನ ಸುತ್ತ ಕುಣಿದಾಡೋಳು... ಹಂಗೇಯ ಗಿಜಗನ ಗೂಡು ತಂದು ಕ್ವಡೊ ಅಂತ ಒಂದು ಜಿನ ಗಂಟು ಬಿದ್ದಿದ್ದು. ಯಾರ ದನನು ಮೇಯಿಸಕ್ಕೋಗದಿದ್ದ ಒಂದು ಜಿನ, ಅವಳು ನಾನು ಇಬ್ಬರೂವೆ ಅತ್ತಿರದ ಕಾಡಿಗೆ ಪುಳ್ಳೆ ಮುರಿಕಂಡು ಬರಕ್ಕೋಗಿದ್ದೊ. ಕೆರೆ ಆಚೆಗಿದ್ದ ಕಾಡ್ನಲ್ಲಿ ಸಮೀಪ್ದಲ್ಲೆ ಒಂದು ಮರದಲ್ಲಿ ಮಸ್ತಾಗಿ ಗೀಜಗಳ ಹಕ್ಕಿಗಳು ಗೂಡ ಕಟ್ಟಿದ್ದೊ. ತಂಗೆಮ್ಮ ನೋಡಿಬುಟ್ಟಲು. ಅದರಲ್ಲಿ ಒಂದು ಗೂಡ ಕಿತ್ತುಗೊಡೊ, ಕಿತ್ತುಗೊಡೊ- ಅಂತ ಇಂವುಸೆ ಮಾಡಿದ್ಲು. ಆ ಗೂಡಗಳತ್ರ ಮೊಪಟ್ಟೇನೂ ಮರಿಗಳನ್ನೂ ತಿನ್ನಕೆ ಸರ್ಪಗಳು ಬತ್ತವೆ. ನಾನು ಆ ದೊಡ್ಡ ಮರ ಅತ್ತ, ಆ ರೆಂಬೆಗೆ ತೂಗುಬಿದ್ದಿರೊ ಗೂಡ ಬಿಚ್ಕಂಡು ಬರಕ್ಕೆ ಎದುರಿಕಾಯ್ತದೆ, ಅಂದೆ... ಅವಳ್ಗೆ ಕ್ವಾಪತ್ತಿ ಕೆನ್ನೆಯ ವೋಟು ದಪ್ಪ ಊದಿಸ್ಕಂಡು, “ಒಂದು ಮರ ಅತ್ತ, ಗೀಜನಗನ ಗೂಡ ಕಿತ್ತುಗಂಡು ಬರನರದೋನು, ನೀ ಯಾವ ಸೀಮೆ ಗಂಡಸ?” ಅಂದೇ ಬುಟ್ಟಲು!

ಆ ಚೋಟುದ್ದ ಎಣ್ಣಿನ ಕೈಲಿ ಈ ಮಾತ ಕೇಳಿ, ನಂಗೆ ನಾಚಿಕಾಯ್ತು.