383
ದ್ಯಾವರ ಮ್ಯಲೆ ಭಾರ ಆಕಿ ಆ ಮರ ಅತ್ತಿದೆ. ರೆಂಬೆ ಮ್ಯಾಲೆ ತೆವಳಿ ಕಂಡೋಗಿ, ಒಂದು ಗೂಡ ಬಿಚ್ಚಿಗಂಡು ತಂದೇ ಬುಟ್ಟೆ!....
ಸಿವುನಿ ಕಾಕು ಅಕ್ಕಂಡು ವೋಟಗಲಕೂ ಕುಣಿದಾಡಿಬುಟ್ಲು.
ವೋಟರಲ್ಲಿ ನಾ ಕೈಲಿ ಇಡಿದಿದ್ದ ಗೂಡ್ನ ವಳೀಕೆ ಮೊಕ ಆಕಿ ನ್ವಾಡಿದ ನಾನು, ಮಳೆ ಎರಚಲು ವಳೀಕೆ ಬಡೀದಂಗೆ ಕೆಳೀಕೆ ಮುನ್ನ ಬಾಯಿ ಮಾಡಿ, ಆ ಗೂಡ ನೆಯ್ದು, ತಲೆ ಕೆಳೀಕೆ ಮಾಡಿ, ಆ ಗೂಡ ಮರದ ರೆಂಬೆಗೆ ನ್ಯಾತು ಆಕಿದ್ದ ಆ ಗಿಝಗನ ಹಕ್ಕಿ ಕರಾಮತ್ಗೆ ಬೆರುಗಾದೆ. ಆದ್ರೆ ಗೂಡ್ನ ವಳುಗಡೆ ಅದು ಮೊಟ್ಟೆ ಆಕಕ್ಕೆ, ಮರಿ ಮಾಡಕ್ಕೆ ನೇಯ್ದಿದ್ದ ಅಗಲಾದ ಜಾಗ ಕಂಡು ನಂಗೆ ಇನ್ನೂ ಚೊಚಿಗ ಆಯ್ತು- ಅದರ ವಳುಗಡೆ ಕಣ್ಣಾಯ್ಸಿ, ಇನ್ನೂ ಸುಕ್ಸ್ಮಾಗಿ ನ್ವಾಡಿದಾಗ, ಆಗ್ಲೆ ವಳುಗಡೆ ಮರಿಗಳು ಬಾಳಬಾಳ ಮೆತ್ಗೆ ಕಿಚಪಚ ಅಂತಿದ್ದದ್ದು ಕೇಳುಸ್ತು... ವೊಟೇ ಅಲ್ಲ. ವಳುಗಡೆ ಆ ಮರಿಗಳ್ಗೆ ಬೆಳಕು ಕಾಣಲಿ ಅಂತ, ಮಿಣಕುಹುಳುಗೊಳ ಕೆರೆ ಅಂಗಳದಿಂದ ಕಚ್ಚಿಗಂಬಂದು ವಳುಗಡೆ ಅಲಲ್ಲೆ ಅಲ್ಲಲ್ಲೆ ದೀಪ ಕತ್ತಿಸಿದಂಗೆ ಇಟ್ಟಿತ್ತು ಆ ಗಿಜಗನ ಹಕ್ಕಿ!...
ನಾನು ನ್ವಾಡಿದ ಮ್ಯಾಲೆ, ಗಿಜಗನ ಗೂಡು ಸಿಕ್ತೂಂತ ತಪ್ಪಾಳೆ ತಟ್ಕಂಡು ರಕುಪ್ಪುಳಸ್ತಿದ್ದ ಸಿವುನಿಯೂ ಬಂದು ಆ ಗೂಡ್ನ ವಳೀಕೆ ನನ್ನಂಗೆ ಬೊಗ್ಗಿ ನ್ವಾಡಿದ್ಲು.
“ಓ, ಪುಟಪುಟಾಣಿ ಮರಿಗಳು, ಎಟು ಚೆಂದಾಗವೆ!.... ಮಿಣಕುಳ ಎಂಗೆ ಪಿಣಿಪಿಣೀಂತಾ ಅವೆ. “ನಂಗಿಂತಲೂವೆ ಕುಸಿಪಟ್ಟು ಕುಣದಾಡಿದ್ಲು...
“ಅಂಗಾರೆ ಇನ್ನೂ ಈ ಗೂಡ, ನಮ್ಮ ಗುಡ್ಲಿಗೆ ತಕ್ಕಂಡೋಗಿ ನ್ಯಾತಾಕಳಾವ?” ಕ್ಯಾಳಿದೆ.
ತಟಕ್ನೆ ಸಿವುನಿ, ಕಣ್ಣ ವೋಟಗಲಕೂ ಅಗಲಿಸಿ,
“ಬ್ಯಾಡಪ್ಪಾ ಬ್ಯಾಡ. ನಾನು ತಕ್ಕೊಂಡೋಗಿ ಗುಡ್ಲೊಳಗೆ ಇಟ್ಕಂಡರೆ, ಪಾಪ ಈ ಮರಿಗಳ್ಗೆ ಅಲ್ಲಿ ಗುಟುಕು ಕ್ವಡೋರು ಯಾರು?... ಬ್ಯಾಡ, ಬ್ಯಾಡ- ಈಗ ನಾನು ನ್ವಾಡಾಯ್ತು. ನೀನು ಇದ್ನ ತಕ್ಕೊಂಡೋಗಿ ಮೊದ್ಲು ಅದು ಎಲ್ಲಿ ನ್ಯಾತಾಡಿತ್ತೊ ಅದೇ ಜಾಗ್ದಲ್ಲಿ ನ್ಯಾತಾಕುಬುಟ್ಟು ಬಾ” ಅಂದ್ಲು.
“ನೀನೊಳ್ಳೆ ಗ್ಯಾನ ಕೆಟ್ಟೋಳು ಕಣೆ” ಅಂತ ಗೊಣಗಿ, ಆ ಮರದತ್ರ ವದೆ. ಕೆಳಗಡೆ ನಿಂತು ಕತ್ತ ಅಂತು ಮ್ಯಾಕೆ ನ್ವಾಡ್ದೆ.
ಕೈಕಾಲು ವದರು ಬಂದುಬುಡ್ತು!
ಅಯ್ಯಯ್ಯಾಪ್ಪಾಂತ ಬೇಳುಗರಿದು, ಇಂದ್ಕೆ ಓಡೋಡ್ತ ಬಂದೆ.