ವಿಷಯಕ್ಕೆ ಹೋಗು

ಪುಟ:YASHODARA CHARITE.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಶೋಧರ ಚರಿತೆ

ಆದುದರಿಂದ ಇದರ ವಿಷಯವಾಗಿ ಸ್ವಲ್ಪ ವಿಸ್ತಾರವಾಗಿ ಪರಿಶೀಲಿಸೋಣ.

ಯಶೋಧರ ಚರಿತೆಯ ವಿಷಯವಾಗಿ ಆರ್. ನರಸಿಂಹಾಚಾರ್ಯರು ಬರೆದ ‘ಕವಿಚರಿತೆ’ಯ ಪ್ರಥಮಾವೃತ್ತಿಯಲ್ಲಿ ಈ ಮಾತುಗಳಿವೆ:- “ಇದು ವರ್ಣಕ ಪ್ರಬಂಧವು; ಇದರಲ್ಲಿ ಗದ್ಯಭಾಗವೇ ಇಲ್ಲ; ಸುಮಾರು ಎಂಟು ಹತ್ತು ವೃತ್ತಗಳು ಹೊರತು ಉಳಿದುವೆಲ್ಲಾ ಕಂದ ಪದ್ಯಗಳೇ ಆಗಿವೆ. ಈ ಗ್ರಂಥವು ನಾಲ್ಕು ಅವತಾರಗಳಾಗಿ ಭಾಗಿಸಲ್ಪಟ್ಟಿದೆ; ಇದರಲ್ಲಿ ಒಟ್ಟು ಕಂದ ವೃತ್ತಗಳು ಸಹ 311 ಇವೆ ... ಇದೇ ಕಥೆಯನ್ನು ಈ ಕವಿಯ ಕಾಲಕ್ಕೆ ಹಿಂದೆ ಇತರ ಕವಿಗಳು ಸಂಸ್ಕೃತದಲ್ಲಿಯೂ ಕನ್ನಡದಲ್ಲಿಯೂ ಬರದಿದ್ದರು ....

ಗ್ರಂಥಾವತಾರದಲ್ಲಿ ಇಪ್ಪತ್ತೆನೆಯ ತೀರ್ಥಂಕರನಾದ ಮುನಿಸುವ್ರತನನ್ನು ಸ್ತುತಿಸಿ ಬಳಿಕ ಸಿದ್ಧಾದಿಗಳನ್ನೂ ವೀರಸೇನ, ಜಿನಸೇನ, ಸಿಂಹನಂದಿ, ಕೊಂಡ ಕುಂದ, ಸಮಂತಭದ್ರ, ಗುಣಭದ್ರ, ಪುಜ್ಯಪಾದ ಎಂಬಿವರುಗಳನ್ನು ಹೊಗಳಿದ್ದಾನೆ. ಅನಂತರ-ಹುಲಿ ಪಾಯೆ ಗುರುಗಳ್ ‘ಸಳಹೊಯ್’ ಎಂದು ಕುಂಚದ ಸೆಳೆಯಂ ಕೊಡಲು ಹುಲಿಯನಟ್ಟಿ ಹೊಯ್ಸಳನಾದನು. ಅವನ ಮಗ ವಿನಯಾದಿತ್ಯ; ಅವನ ಪುತ್ರ ಎರೆಯುಂಗ; ಅವನ ಸುತ ಬಿಟ್ಟಿದೇವ; ಆತನ ಮಗ ನರಸಿಂಹ ; ಅವನ ಪುತ್ರ ವೀರಬಲ್ಲಾಳ - ಎಂದು ಹೊಯ್ಸಳ ರಾಜರ ಪರಂಪರೆಯನ್ನು ಹೇಳಿ, ವೀರಬಲ್ಲಾಳನು ತನಗೆ ಸ್ವಾಮಿಯಾದುರಿಂದ ಅವನನ್ನು ವಿಶೇಷವಾಗಿ ಸ್ತುತಿಸಿದ್ದಾನೆ. ಗ್ರಂಥಾಂತ್ಯದಲ್ಲಿಯೂ ‘ಅಸಹಾಯ ಶೂರನ ಭುಜಕ್ಕೆ ಜಯಂ ಸಮಸಲ್ಗೆ’ ಎಂದು ವೀರಬಲ್ಲಾಳನನ್ನು ಆಶೀರ್ವದಿಸಿದ್ದಾನೆ ....”

ಯಶೋಧರ ಚರಿತೆಯನ್ನು ಜನ್ನನು ಬರೆದು ಮುಗಿಸಿದುದು ಕ್ರಿ. ಶ. 1209ರಲ್ಲಿ ಎಂದು ಈ ಕೆಳಗಣ ಪದ್ಯದಿಂದ ತಿಳಿದುಬರುತ್ತದೆ:

ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ

ಕ್ಕಾಗಿರೆ ಶುಕ್ಲದಾಶ್ವಯಜ ಕೃಷ್ಣದ ಪಂಚಮಿ ಪುಷ್ಯತಾರೆ ಪೂ

ರ್ಣಾಗುರುವಾಗೆ ಭೂತಳದೊಳೀ ಕೃತಿ ಪೆತ್ತುದು ಸುಪ್ರತಿಷ್ಠೆಯಂ

ಚಾಗದ ಭೋಗದಗ್ಗಳಿಕೆಯಂ ಮೆರೆದಂ ಕವಿಭಾಳಲೋಚನಂ

(ಯಶೋಧರ ಚರಿತೆ : 4-86)

ಇದಿಷ್ಟು ಯಶೋಧರ ಚರಿತೆಯ ಬಾಹ್ಯ ಪರಿಚಯ ಮಾತ್ರ. ಇನ್ನು, ಕೃತಿಯ ಒಳಗನ್ನು ನೋಡಬಹುದು. ‘ಕವಿಚರಿತೆ’ಯಲ್ಲಿ “ಮಾರಿದತ್ತನೆಂಬ ರಾಜನು ಮಾರಿಗೆ ಬಲಿಕೊಡುವುದಕ್ಕಾಗಿ ಇಬ್ಬರು ಕುಲೀನರಾದ ಹುಡುಗರನ್ನು ಹಿಡಿದು