ವಿಷಯಕ್ಕೆ ಹೋಗು

ಪುಟ:YASHODARA CHARITE.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೯

ಯಶೋಧರ ಚರಿತೆ


ಅಮೃತಮತಿಯೆತ್ತ ರೂಪಾ

ಧಮನಷ್ಟಾವಂಕನೆತ್ತ ಚಿತ್ರಮಪಾತ್ರೇ

ರಮತೇ ನಾರೀ ಎಂಬುದು

ಸಮನಿಸಿದುದು ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ 34


ಎನುತುಂ ಬಂದು ವಿಷಣ್ಣಾ

ನನೆಯಂ ಮಾರ್ಗಾವಲಗ್ನ ನೇತ್ರೆಯನುಚ್ಛ್ವಾ

ಸ ನಿತಪ್ತಾಧರರುಚಿಯಂ

ಮನುಜೇಂದ್ರಾಂಗನೆಯನೆಯ್ದಿ ಕಂಡಿಂತೆಂದಳ್ 35


ಕಂತುವಿನ ಕಯ್ಯ ಕೂರಸಿ

ಯಂತಿರೆ ಗರಗರಿಕೆವಡೆದು ಪೊಳೆವಸಿಯಳೆ ನೀ

ನಿಂತಪ್ಪ ಕಾಮದೇವಂ

ಗಂತೆಂತಾಯ್ದರಸಿ ಕೂರ್ತೆಯೆಂದಾನರಿಯೆಂ 36

_____

ಹಿಂತಿರುಗಿದಳು. 34. “ಅಯ್ಯೋ ದೇವರೇ ! ಅಮೃತಮತಿಯೆಲ್ಲಿ, ರೂಪಾಧಮನಾದ ಅಷ್ಟಾವಂಕನೆಲ್ಲಿ? ‘ಚಿತ್ರಂ ! ಅಪಾತ್ರೇ ರಮತೇ ನಾರೀ’ [ಆಶ್ಚರ್ಯ ! ಹೆಂಗಸು ಅಯೋಗ್ಯನೊಡನೆ ರಮಿಸುತ್ತಾಳೆ!] ಎಂಬ ಮಾತು ಸಂಭವಿಸಿತಲ್ಲ ! ಆ ಸುಟ್ಟ ವಿಧಿಗೆ ಕಣ್ಣೇ ಇಲ್ಲವೋ!” 35. ಎಂದೆಲ್ಲ ಯೋಚನೆ ಅವಳ ತಲೆಯಲ್ಲಿ ಸುಳಿಯಿತು. ಇದನ್ನೇ ಹೊತ್ತು ಅವಳು ಮರಳಿದಳು. ಇಲ್ಲಿ ನೋಡುವುದೇನು? ಆ ರಾಜೇಂದ್ರನ ಪತ್ನಿ ಅಮೃತಮತಿ ಮುಖ ಬಾಡಿಸಿಕೊಂಡೇ ಇದ್ದಾಳೆ. ತನ್ನ ಗೆಳತಿ ಯಾವಾಗ ಮರಳಿಯಾಳು ಎಂದು ಅವಳು ಬರುವ ದಾರಿಯಲ್ಲೇ ಕಣ್ಣಿಟ್ಟುಕೊಂಡಿದ್ದಾಳೆ. ಬಿಡುವ ಬಿಸಿಯುಸಿರು ತಾಗಿ ತುಟಿಯ ಸಹಜವಾದ ಕೆಂಬಣ್ಣವೆಲ್ಲ ಕಳೆದುಹೋಗಿದೆ. ಹೀಗೆ ಉತ್ಕಂಠಿತೆಯಾಗಿದ್ದ ಒಡತಿಯನ್ನು ಸಮೀಪಿಸಿ ಅವಳು ಹೇಳಿದಳು : 36. “ಕಾಮನ ಕೈಯ ಖಡ್ಗದಂತೆ ಬಹಳ ಚೆಲುವನ್ನು ಪಡೆದು ಶೋಭಿಸುವ ತನುಗಾತ್ರಿ ನೀನು. ಇಂತಹ ನೀನು, ಈ ಬಗೆಯ ಕಾಮದೇವನನ್ನು ಹೇಗೆ ಶೋಧನೆ ಮಾಡಿದೆ!