ಕೋಸಲೇಂದ್ರ : (ನಗುತ್ತ) ಹೀಗೆ ಸಿಟ್ಟಿಗೆದ್ದೇನು ಪ್ರಯೋಜನ, ಕಾಃಮ್ರೇಡ್ ಮೃಣಾಲಿನಿ? ಮೇಲುವರ್ಗದ ಜನರಲ್ಲಿ ನಿಮ್ಮ ತತ್ವಪ್ರಸಾರ ಮಾಡುವದು ನಿಮ್ಮ ಕರ್ತವ್ಯವಾಗಿದೆ. ಹಾಗೆ ಮಾಡದೆ ಹೋದರೆ ನೀವು ಕರ್ತವ್ಯಚ್ಯುತರಾಗುತ್ತೀರಿ!
ಮೃಣಾಲಿನಿ : (ಕವಕ್ಕನೆ) ನನ್ನ ಕರ್ತವ್ಯದ ಬಗ್ಗೆ ನಿಮ್ಮಿಂದ ಉಪನ್ಯಾಸ ಬೇಕಾಗಿಲ್ಲ! ನನ್ನ ಕರ್ತವ್ಯವನ್ನು ಪಾಲಿಸಲು ನನಗೆ ನೂರು ವೇದಿಕೆಗಳಿವೆ; ಕೂಲಿಕಾರರಿದ್ದಾರೆ; ಒಕ್ಕಲಿಗರಿದಾರೆ, (ಕಿಶನ್‌ಕಿಶೋರರನ್ನು ಬೊಟ್ಟು ಮಾಡಿ ತೋರಿಸಿ) ಇವರಂತೆ ಗಜರ್, ಹಲವಾ ತಿಂದು ಹೊಟ್ಟೆ ಉಬ್ಬಿಸಿಕೊಳ್ಳದ ಮಧ್ಯಮವರ್ಗದವರಿದ್ದಾರೆ. ಇಂಥ ಈ ಪ್ರಾಣಿಗಳನ್ನು ತೆಗೆದುಕೊಂಡು ನನಗೇನು ಮಾಡಬೇಕಾಗಿದೆ!!
[ಮೋರೆ ತಿರುವಿ ಕೂಡುತ್ತಾಳೆ ಕಿಶನ್ ಕಿಶೋರರು ಗಾಬರಿಯಾಗಿ ತನ್ನ ದುರಿಗಿರುವ ಗಜರ್ ಹಲವಾದ ಪ್ಲೇಟನ್ನು ನೋಡುತ್ತಾರೆ.]
ರೋಹಿಣಿದೇವಿ : (ಬಿಗುವಿನಿಂದ) ಹಾಗೆ ಮಾತಾಡಬಾರದು, ಮೃಣಾಲಿನಿ! ಇನ್ನೊಬ್ಬರ ಬಗ್ಗೆ ಆದರವಿರದಿದ್ದರೆ ಹೋಗಲಿ. ಕನಿಷ್ಟ ಅವರನ್ನು ಹೀಗೆ ಅಪಮಾನಗೊಳಿಸಬಾರದು. ನಿನ್ನ ಪಿತಾಜಿಯವರಿಗೆ ಇದು ಗೊತ್ತಾದರೆ ಅವರು ಏನಂದಾರು!
ಮೃಣಾಲಿನಿ : ನನ್ನ ಪಿತಾಜಿಯವರು ನನ್ನ ಹಾದಿಯನ್ನು ಅದೆಂದಿಗೋ ಬಿಟ್ಟುಬಿಟ್ಟಿದ್ದಾರೆ. ಹೀಗೆ ಮಾತಾಡದಿದ್ದರೆ ಹೇಗೆ ಮಾತಾಡಬೇಕು? ಮಾತು-ಮಾತಿಗೆ ಹೂಂಗುಡುತ್ತ ಕವಲೆತ್ತಿನಂತೆ ತಲೆ ಹಾಕಬೇಕೊ?
ರುಕ್ಮಿಣಿದೇವಿ : (ಉದ್ವಿಗ್ನಳಾಗಿ) ಅದೇಕಾದೀತು? ಹೀಗೆಯೇ ಸಾಗಲಿ! (ಮೃಣಾಲಿನಿಯ ಎದುರಿಗಿದ್ದ ಭಜಿಯ ಭೇಟನ್ನು ತೋರಿಸುತ್ತ) ಗಜರ್ ಹಲವಾದ ವಿಷಯ ಹಾಗಿರಲಿ, ನೀವು ಖಾರ ತುಂಬಿದ ಈ ಭಜಿಗಳನ್ನು ತಿನ್ನುತ್ತ ಹೀಗೆಯೇ ಉರುಪು ಬೀಳುವಂತೆ ಮಾತಾಡುತ್ತ ಹೋಗಿರಿ! ಕೋಸಲೇಂದ್ರ, ಇನ್ನು ನಡೆ, ಗಾಡಿಯ ಹೊತ್ತಾಯಿತು!
[ಏಳುತ್ತಾಳೆ, ಓಂಪ್ರಕಾಶನೆಂಬ ಕಿಶನ್ ಕಿಶೋರರ ಸೇವಕನು ಬರುತ್ತಾನೆ.]
ಓಂಪ್ರಕಾಶ : ಗಾಡಿಯು ಪ್ಲಾಟಫಾಃರ್ಮಿಗೆ ಬಂದಿದೆ, ಸರಕಾರ! ಇನ್ನು ಹೊರಡುವದಾಗಬೇಕು.