ರುಕ್ಕಿಣಿದೇವಿ: ಇನ್ನೂ ದಿಲ್ಲಿಯ ಆಸೆ ನಿನಗೆ ಬಿಟ್ಟಿಲ್ಲ. ಅಂತೇ. ಹೀಗೆ ಹೊಯ್ದಾಡುತ್ತಿದ್ದೀ, ಇನ್ನೂ ಪರಿಪಕ್ವವಾಗಿಲ್ಲ ನಿನ್ನ ಮನಸ್ಸು !
ಕಿಶನ್‌ಕಿಶೋರ : ಎಲ್ಲರ ದೀಪಗಳನ್ನು ಹಚ್ಚಲು ಹೋಗಿ ನನ್ನಂತೆ ನಿನ್ನ ದೀಪವನ್ನೇ ನೀನು ನಂದಿಸಿಕೊಂಡಿಲ್ಲ. ಅಂತೇ ಹೀಗೆ ಮಾತನಾಡುತ್ತೀ ?
ಕೋಸಲೇಂದ್ರ: ಈ ರಮ್ಯ ಪ್ರಕೃತಿಯ ಛಿದ್ರ-ಛದ್ಮಗಳು ನಿಮಗಿನ್ನೂ ಗೊತ್ತಾಗಿಲ್ಲ. ಅಂತೇ ಈ ಮಾತು. ಇರಲಿ. ಕಿಶನ್ ಕಿರೋರಜಿ ! ಇದನ್ನು ಒರೆಗೆ ಹಚ್ಚಿ ಬಿಡೋಣ ! ಇನ್ನು ಕೆಲವು ತಿಂಗಳ ಮೇಲೆ ನಾನು ಮತ್ತೆ ಇಲ್ಲಿ ಬರುತ್ತೇನೆ ಆಗ ಇನ್ನೂ ಇದೇ ವಿಚಾರ ನಿಮ್ಮ ತಲೆಯಲ್ಲಿ ಸುಳಿಯುತ್ತಿದ್ದರೆ,-- ನಾನೂ ನಿಮ್ಮ ಜೊತೆಗೆ ಇಲ್ಲಿ ಇದ್ದು ಬಿಡುತ್ತೇನೆ, ಇದಕ್ಕೆ ಒಪ್ಪಿಗೆಯಷ್ಟೆ ?
ರುಕ್ಕಿಣಿದೇವಿ : ಓಹೊ ! ಒಪ್ಪಿಗೆ !
ಕಿಶನ್ ಕಿಶೋರ : ಆಗಬಹುದು. ಇದರಿಂದ ಈಗ ನಿಲ್ಲುವದೇ ಇನ್ನು ಕೆಲವು ತಿಂಗಳ ಮೇಲೆ ನೀನು ಇಲ್ಲಿ ನೆಲಿಸುವಿಯೆಂದು ನಾನು ತಿಳಿಯುತ್ತೇನೆ !
ಕೋಸಲೇಂದ್ರ : (ನಗುತ್ತ) ಹಾಗೇ ಆಗಲಿ. ಇನ್ನು ನಾಳೆ ಹೊರಡಲು ನನಗೆ ಅಪ್ಪಣೆಯಷ್ಟೆ ?
ಕಿಶನ್ ಕಿಶೋರ : (ಮುಗುಳು ನಗೆಯಿಂದ) ಅಪ್ಪಣೆಯಿರದಿದ್ದರೆ ನೀನು ಕೇಳುತ್ತೀಯಾ ?
[ ಒಳಗೆ ಊಟದ ಗಂಟೆಯಾಗುತ್ತದೆ.]
ಓಹೊ ! ಊಟದ ಹೊತ್ತಾಯಿತು. ನಡೆ, ಕೋಸಲೇಂದ್ರ, ಇದೊಂದು ರಾತ್ರಿ ನಮ್ಮೊಡನೆ ನಿಮ್ಮ ಮನೋಪಹಾರವಾಗಲಿ, ನಾಳಿನಿಂದ ಚೀಲದಲ್ಲಿ ಅರಳೆ ತುಂಬುವಂತೆ ಹೊಟ್ಟೆಗೆ ಹಾಕುವದಿದ್ದೇ ಇದೆ ! ಊಟವೂ ಇಲ್ಲಿಯ ಸೌಂದರ್ಯೋಪಾಸನೆಯ ಒಂದು ಭಾಗವಾಗಿದೆ.
ರುಕ್ಕಿಣಿದೇವಿ : ತುಂಬಿಗಳು ಜೇನನ್ನು ಸವಿಯುವಂತೆ ಇಲ್ಲಿಯ ಸ್ವಚ್ಛಂದ ಜೀವನ ಹೀಗೆಯೇ ನಿಶ್ಚಿಂತನಾಗಲಿ !
[ಹೊರಡುತ್ತಾರೆ. ತೆರೆ.]