ವಿಷಯಕ್ಕೆ ಹೋಗು

ಪುಟ:Yugaantara - Gokaak.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೪
ಯುಗಾಂತರ


ಬನಸಿಲಾಲ : ಇಲ್ಲ, ಕಾ:ಮ್ರೇಡ್ ಮೃಣಾಲಿನಿ ! ಈಗ ಸುರುವಾಯಿತು ! ನೀವು ಇಷ್ಟು ತಲ್ಲೀನರಾಗಿ ಓದುತ್ತಿದ್ದ ಆ ಪುಸ್ತಕ ಯಾವುದು ? ಓದುವದು ಮುಗಿದ ಮೇಲೆ ನನಗೆ ಕೆಲವು ದಿನ ಅದನ್ನು ಕೊಡಿರಿ !

ಮೃಣಾಲಿನಿ : ಅವಶ್ಯವಾಗಿ ! ಆದರೆ ಅದು ಸುಲಭವಾಗಿ ತಿಳಿಯಲಾರದು. ಅದರ ಮೇಲೆ ನಿಮಗೊಂದು ಉಪನ್ಯಾಸ ಕೊಡಬೇಕಾದೀತು !

ಬನಸಿಲಾಲ : ಆಗಬಹುದು. ಅದನ್ನು ಯಾರು ಬರೆದಿದ್ದಾರೆ !

ಮೃಣಾಲಿನಿ : ಮಾರ್ಕ್ಸ-ಎಂಜಲ್ಪರ ಪತ್ರವ್ಯವಹಾರ ಇದು.
ಬನಸಿಲಾಲ : ಮಾರ್ಕಸ್ ಏನ್ ಜಲಸಾ ?

[ ಎಲ್ಲರೂ ನಗುತ್ತಾರೆ.]

ಮೃಣಾಲಿನಿ : ನಿಮಗೆ ಗೊತ್ತಿರುವದು ಜಲಸಾ ಒಂದೇ ! ಅದೂ ನಿಶ್ಚಿತವಿಲ್ಲ. ರೂಪಾಯಿಯ ಸಂಗೀತ ನಿಮ್ಮ ಕಿವಿ ಕಟ್ಟಿದೆ ಅಲ್ಲವೆ ?

ಬನಸಿಲಾಲ : ಹ್ಹ! ಹ್ಹ! ನಿಮ್ಮಂಥವರ ಸಹವಾಸದಿಂದ ಮಾತ್ರ ನಮ್ಮಲ್ಲಿ ಸುಧಾರಣೆಯಾಗಬೇಕು ! ಬರುತ್ತೇನೆ, ನಮಸ್ತೇ! (ಕಾಂತಿಚಂದ್ರ.ರೋಹಿಣಿ ದೇವಿಯರ ಕಡೆಗೆ ಬಿಗುವಿನಿಂದ ನೋಡುತ್ತ ) ನಮಸ್ತೆ !

[ಹೋಗುತ್ತಾನೆ ಒಂದು ಕ್ಷಣಹೊತ್ತು ಸುಮ್ಮನಿದ್ದು ಎಲ್ಲರೂ ಒಬ್ಬರ ಮೊರೆಯನ್ನೊಬ್ಬರು ನೋಡುತ್ತಾರೆ.]

ರೋಹಿಣಿದೇವಿ : ಏನು ಮೃಣಾಲಿನಿ ? ಹೇಗಿತ್ತು ನಮ್ಮ ಧರ್ಮಯುದ್ದ ?

ಮೃಣಾಲಿನಿ : ಧರ್ಮಯುದ್ಧ ? ಇದು ಪ್ರತಿಷ್ಠೆಗಳ ತಾಕಲಾಟ. ದುರಭಿಮಾನಗಳ ಗುದುಮುರಿಗೆ !”

ರೋಹಿಣಿದೇವಿ: (ಸರಕ್ಕನೆ ಸರಿದು ನೊಂದ ಧ್ವನಿಯಲ್ಲಿ) ಯಾಕೆ ಮೃಣಾಲಿನಿ ಹೀಗೆಯೇ ನೀನು ನಮ್ಮ ಮನಸ್ಸನ್ನು ನೋಯಿಸುತ್ತೀ! ನನ್ನ ಹೊಟ್ಟೆ ಯಲ್ಲಿ ಹುಟ್ಟಿದ ಮಗಳಂತೆ ನಿನ್ನನ್ನು ಕಂಡರೆ ನನಗೆ ಪ್ರೀತಿ ಬರುತ್ತದೆ. ಆದರೆ ನಿನ್ನ ಮಾತಿನ ಬಾಣಕ್ಕೆ ಸಿಲುಕಿ ದಿನಂಪ್ರತಿ ನಾನು ಗಾಸಿ ಗೊಳ್ಳುತ್ತೇನೆ !

[ ಆಳುಮೋರೆ ಮಾಡುತ್ತಾಳೆ. ]

ಕಾಂತಿಚಂದ್ರ: ನಮ್ಮ ಮೇಲೆ ಇಷ್ಟೇಕೆ ಅವಕೃಪೆ, ಮೃಣಾಲಿನಿ !