ಬೆರೆತಾಗ ತತ್ವವು ನೇರವಾಗಿ ಹೃದಯವನ್ನು ಸೇರುತ್ತದೆ. ಅದು ಬರಿ ಬುದ್ಧಿ ಗ್ರಾಹ್ಯವಾಗುವದಿಲ್ಲ; ರಕ್ತದೊಡನೆ ಬೆರೆಯುವದು !
ಮೃಣಾಲಿನಿ : ( ಉತ್ಸಾಹದಿಂದ ) ನಿಮ್ಮ ಇಚ್ಛೆ ಇಷ್ಟು ನೈಜವಾಗಿದ್ದರೆ ನಿಮ್ಮ ಜೊತೆಗೆ ಓದಲು ನನಗೆ ಸಂತೋಷವಿದೆ. ಮಧ್ಯಮ ವರ್ಗದ ಒಬ್ಬ ಉದಿತೋದಿತ ಕವಿಯನ್ನು ಮತಾಂತರಿಸಿದ ಶ್ರೇಯಸ್ಸು ನನಗೆ ಬರುವದಿದ್ದರೆ,- ಏಕೆ ಬೇಡವೆನ್ನಲಿ ! ಒಂದು ಮಾತು, ಕವಿವರ್ಯರೆ ! ಆ ಗ್ರಂಥಗಳನ್ನು ಓದಿದಾಗ ನಿಮ್ಮ ಕಾವ್ಯ ಜೀವನದಲ್ಲಿ ಕ್ರಾಂತಿಯಾಗುವದು. ನಿಮ್ಮ ತತ್ವಮಂದಿರವೆಲ್ಲ ಕಳಚಿ ಬಿದ್ದು ಅದರ ಹಾಳಿನೊಳಗಿಂದ ಇನ್ನೊಂದು ಉಜ್ವಲ ಕಟ್ಟಡವೇಳುವದು, ಬರಲಿರುವ ಕ್ರಾಂತಿಯ ವೈತಾಳಿಕರಾಗುವಿರಿ ನೀವು !
ಕೋಸಲೇಂದ್ರ : (ಎಳೆನಗೆಯಿಂದ ಮೇಜಿನ ಮೇಲಿನ ಒಂದು ಚಿಕ್ಕ ಹೊತ್ತಿಗೆಯನ್ನು ತೆಗೆದುಕೊಂಡು) ಏನೇನಾಗುವದೋ ನೋಡೋಣ, ಕಾಃಮ್ರೆಡ್ ಮೃಣಾಲಿನಿ ! ಮೊನ್ನೆ ಮೊನ್ನೆ ರ್‍ಯಾಫೆಲ್ ಆಲ್‍ಬರ್ತೈ ಎಂಬ ಸ್ಪಾನಿಶ್ ಕವಿಯ ಕೆಲವು ಕವನಗಳನ್ನು ಓದುತ್ತಿದ್ದೆ. ಅವುಗಳಲ್ಲಿ ಒಂದರ ಕೆಲವು ಚರಣಗಳಿವು !
A spectre is haunting Europe,
The world.
We call him Comrade!
ನಿಮ್ಮನ್ನು ನೋಡಿದಂದಿನಿಂದ ಒಂದು ಹೊಸ ಚೈತನ್ಯವು ನನ್ನ ಕಣ್ಣುಕಟ್ಟಿದೆ. I call that, - Comrade Mrunalini !
ಮೃಣಾಲಿಸಿ: ಏನು ! ಆಲ್ಬರ್ತೈನ ಕವನಗಳನ್ನು ಓದಿದ್ದೀರಾ ! ತೀರ ಈಚೆಗಿನ ಪ್ರಕಟನೆ ಅದು.
ಕೋಸಲೇಂದ್ರ : ಇಂಥ ಕಾವ್ಯವನ್ನು ಆಗೀಗ ಓದುತ್ತಿರುತ್ತೇನೆ. ಅದಿರಲಿ, ಕಾಃಮ್ರೆಡ್ ಮೃಣಾಲಿನಿ, ವಾರಕ್ಕೊಂದು ಸಲ ನಮ್ಮ ಪಾಠ ನಿಶ್ಚಿತವಾಯಿತಲ್ಲ! ಇನ್ನು ನೀನೇ ಇಲ್ಲಿಗೆ ಬರುವಿರಾ? ಏನು ನಾನೇ ನಿಮ್ಮಲ್ಲಿಗೆ ಬರಲೊ?