ವಿಷಯಕ್ಕೆ ಹೋಗು

ಪುಟ:Yugaantara - Gokaak.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೦
ಯುಗಾಂತರ

ಮೃಣಾಲಿನಿ: ನಮಸ್ತೆ,

ಬನಸಿಲಾಲ : ನಿಮ್ಮ ಪುಸ್ತಕ ಬರಲಿಲ್ಲವಲ್ಲ ? ಈಗ ಇಲ್ಲಿ ಕವಿಗಳಿಗೂ ಪಾಠ ಹೇಳುವುದು ನಡೆದಿದೆಯೇನು ?

ಮೃಣಾಲಿನಿ : ಕವಿಗಳಿಗೂ ಹೇಳುತ್ತೇನೆ; ಕಪಿಗಳಿಗೂ ಹೇಳುತ್ತೇನೆ. ನನ್ನಲ್ಲಿ ಭೇದಭಾವವಿಲ್ಲ.

( ಎಲ್ಲರೂ ನಗುತ್ತಾರೆ. )

ಬನಸಿಲಾಲ : ಕಾ:ಮ್ರೆಡ್ ಮೃಣಾಲಿನಿಯವರು ವಿನೋದಪ್ರಿಯರು. ಅವರ ಮಾತು ಯಾವಾಗಲೂ ಸ್ವಾರಸ್ಯಮಯವಾಗಿರುತ್ತದೆ.

ಕೋಸಲೇಂದ್ರ: ಹೌದು, ಸೇಠ್ ! ಅಂತೇ ಇನ್ನು ಮೇಲೆ ನಾನೂ ವಾರಕ್ಕೊಂದು ಸಲ ಅವರಿಂದ ಪಾಠ ಹೇಳಿಸಿಕೊಳ್ಳಬೇಕೆಂದಿದ್ದೇನೆ !

ಬನಸಿಲಾಲ : ಓಹೊ ! ವಾರಕ್ಕೊಂದು ಸಲವೆ ? ಹಾಗಾದರೆ, ಕಾ:ಮ್ರೆಡ್ ಮೃಣಾಲಿನಿಯವರೆ, ನನ್ನ ಸಲುವಾಗಿ ನಿಮಗೆ ಹೆಚ್ಚಿನ ತೊಂದರೆ ಏಕೆ ? ಕೋಸಲೇಂದ್ರಬಾಬುಗಳ ಪಾಠ ಮುಗಿಯಲಿ. ಆಮೇಲೆ ನಮ್ಮದನ್ನು ಪ್ರಾರಂಭಿಸೋಣ.

ಕೋಸಲೇಂದ್ರ : ( ನಗುತ್ತ ) ಇದೊಳ್ಳೆಯ ಯುಕ್ತಿ ! ಕಾ:ಮ್ರೆಡ್ ಮೃಣಾಲಿನಿಯವರ ಕೈಯೊಳಗಿಂದ ಪಾರಾಗಲು ನೀವು ಒಳ್ಳೆಯ ಹಂಚಿಕೆ ಹಾಕಿದಿರಿ ! ಆದರೆ, ಸೇಠ್, ನೀವು ನೆನಪಿಡಬೇಕು. ಅವರ ಪಾಠಗಳನ್ನು ಕೇಳದೆ ಹೋದರೆ ನಿಮಗೆ ನಿಮ್ಮ ಚಟುವಟಿಕೆಗಳಲ್ಲಿ ಅವರ ಸಹಕಾರ ಸಿಗಲಾರದು !

ಬನಸಿಲಾಲ : ಹ್ಹ! ಹ್ಹ! ಹ್ಹ! ಈ ಮಾತಿನಿಂದ ನೆನಪಾಯಿತು. ಇಂಥ ಸಹಕಾರ ಕೇಳಲೆಂದೇ ನಾನು ಈಗ ಬಂದಿದ್ದೇನೆ.

ಕೋಸಲೇಂದ್ರ : ಯಾವುದರಲ್ಲಿ ? ನೀವು 'ಸಹಕಾರ' ಎಂದ ಕೂಡಲೆ ನನ್ನ ಮೈಮೇಲಿನ ಕೂದಲು ನೆಟ್ಟಗಾಗುತ್ತವೆ!

ಬನಸಿಲಾಲ: ಹ್ಹ! ಹ್ಹ! ಒಳ್ಳೇ ತಮಾಷೆ ! ನೀವು ಅಂಜುವ ಕಾರಣವಿಲ್ಲ, ಕೋಸಲೇಂದ್ರಬಾಬು! ಬಡ ವಿದ್ಯಾರ್ಥಿಗಳ ಸಹಾಯಕ್ಕಾಗಿ ಹಣ ಕೂಡಿಸಲು ಒಂದು ಸಾಹಿತ್ಯಗೋಷ್ಠಿಯನ್ನು ಏರ್ಪಡಿಸಬೇಕೆಂದಿದ್ದೇನೆ.