ಪುಟ:Yugaantara - Gokaak.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇಂದು ಜಗತ್ತಿನಲ್ಲಿಯೇ ಒಂದು ಸಂಧಿಕಾಲವು ಒದಗಿ ಬಂದಿದೆ. ವಿಜ್ಞಾನದ ಅದ್ಭುತ ಪ್ರಗತಿಯಿಂದ ಮಾನವನ ಆರ್ಥಿಕ ಹಾಗು ಸಾಮಾಜಿಕ ಜೀವನದಲ್ಲಿ ಕ್ರಾಂತಿಯಾಗಿದೆ. ಹೀಗೆ ಹೊಸತಾಗಿ ಪ್ರಸ್ತಾಪಿತವಾದ ವಿಚಾರಸರಣಿಯು ಎಲ್ಲಿ ಯಾವ ಬೆಳಕಿಂಡಿಯೊಳಗಿಂದ ನೋಡಿದರೂ ಸಮ ತೆಯು ನೆಲೆಗೊಂಡ ಮಾನವಕುಲದೆದುರು ನಮ್ಮನ್ನು ಒಯ್ದು ನಿಲ್ಲಿಸುತ್ತದೆ. ಮಾರ್ಕ್ಸ್‌ವಾದವು ಈ ಸಮತೆಯ ಅವತಾರವನ್ನು ಬರಮಾಡಿಕೊಳ್ಳುವ ಮಾರ್ಗವೊಂದನ್ನು ಸೂಚಿಸಿರುವದಲ್ಲದೆ ಅದನ್ನು ಒಂದೆಡೆಗೆ ಕಟ್ಟಿ ನಿಂತಿದೆ. ಹೀಗಾಗಿ ಇಂದಿನ ಯಾವ ದರ್ಶನವೂ ಮಾರ್ಕ್ಸ್‌ದರ್ಶನವನ್ನು ಒಂದಿಲ್ಲೊಂದು ರೀತಿಯಿಂದ ಒಳಪಡಿಸಿಕೊಳ್ಳದೆ ಪೂರ್ಣವಾಗಲಾರದು. ಆದರೆ ಮಾರ್ಕ್ಸ್‌ವಾದವು ಮೂಲದಲ್ಲಿ ಭೌತಿಕವಾಗಿದೆ. ಬುದ್ದಿವಿಜ್ಞಾನಗಳ ಸಹಾಯದಿಂದ ಕಂಡಿರುವದೇ ಸತ್ಯವೆಂದು ಅದು ಸಾರುತ್ತದೆ. ಸಾವಿರಾರು ವರ್ಷಗಳಿಂದ ಬೆಳೆದು ಬಂದ ಅನುಭಾವದ (mysticism) ಪರಂಪರೆಯನ್ನು ಅದು ಅಲ್ಲಗಳೆಯುತ್ತದೆ. ಬುದ್ದಿ ಯಿಲ್ಲದೆ ಬೇರೊಂದು ಜ್ಞಾನಸಾಧನೆಯೂ ಇದೆ; ಅದೇ ಸಮಗ್ರ ಮಾನವನ ಒಳನುಡಿ (Intuition). ಅದರ ಪ್ರಮಾಣಗಳು ಬೆರೆ; ಅದು ತೆರೆಯುವ ಸೂಕ್ಷ್ಮತರ ಜೀವನದ ಮೀಮಾಂಸೆಯೂ ಇದೆ: ಎಂಬುದನ್ನು ಮಾರ್ಕ್ಸ್‌ವಾದವು ಒಪ್ಪುವದಿಲ್ಲ. ಸಂತತ ಸಂಚಲನೆಯೇ ಸೃಷ್ಟಿಯ ನಿತ್ಯ ನಿಯಮವೆಂದು ಸಾರಿ ಚಲನರಹಿತ ವಾದ ಸ್ಟಾಣು ಬ್ರಹ್ಮದ ಇಲ್ಲವೆ ಅಕ್ಷರ ಪುರುಷನ ಅಸ್ತಿತ್ವವನ್ನು ಮಾರ್ಕ್ಸ್ ವಾದವು ಅಲ್ಲಗಳೆಯುತ್ತದೆ. ಆದರೆ ಈ ಸಂತತ ಸಂಚಲನೆಯು ಏಕೆ ? ಅದರ ತುದಿಮೊದಲೇನು ? ಎಂಬ ಪ್ರಶ್ನೆಗಳಿಗೆ ಮಾರ್ಕ್ಸ್‌ವಾದವು ಉತ್ತರ ಕೊಡುವದಿಲ್ಲ. ಯಾಕಂದರೆ ವಿಜ್ಞಾನವೇ ಅವಳ ಉತ್ತರವನ್ನು ಇನ್ನೂ ಕಂಡುಹಿಡಿದಿಲ್ಲ. ಹೀಗಾಗಿ ವಿಜ್ಞಾನದ ಅಪೂರ್ಣ ತೆಯೆ ಮಾರ್ಕ್ಸ್‌ವಾದವನ್ನು ಆವರಿಸಿದೆ. ಈ ಅಪೂರ್ಣತೆಯ ಮೇಲೆ ಸಮಗ್ರ ಜೀವನದ ತಳಹದಿಯನ್ನು ಹಾಕುವದು ಶಕ್ಯವಾಗುವದಿಲ್ಲ. ಮಾರ್ಕ್ಸ್‌ವಾದವೇ ಹೇಳಿದೆ : ಸಮತೆಯು ನೆಲೆಗೊಂಡ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಂಸ್ಕೃತಿಕ