ಪುಟ:Yugaantara - Gokaak.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಮೃಣಾಲಿನಿ : ( ಮುಗುಳು ನಗೆಯಿಂದ ) ಅಂದರೆ ? ಕೋಸಲೇಂದ್ರ : ನೀ ಭೆಟ್ಟಿಯಾಗದಿದ್ದರೆ ಈ ಧರ್ಮದ ಸೂತ್ರ ನನಗೆ ಅಷ್ಟು ಸುಲಭವಾಗಿ ಹೊಳೆಯುತ್ತಿರಲಿಲ್ಲ. ನಿನ್ನಿಂದ ನಾನು bourgouisie, proletariat ಮೊದಲಾದ ಶಬ್ದಗಳನ್ನು ಮಾತ್ರ ಕಲಿಯಲಿಲ್ಲ. ನಿರ್ಮಲ ಚಿತ್ರದ ನಿರ್ಭಿತಿ, ಎಣೆಯಿಲ್ಲದ ಉತ್ಸಾಹ, ಇವುಗಳನ್ನು ನಿನ್ನಲ್ಲಿ ಮೊದಲಿಗೆ ಕಂಡೆ. ಅವುಗಳ ಸಹಾಯ ದಿನವೂ ನನಗೆ ದೊರಕದೆ ಹೋದರೆ ನನ್ನ ಬಾಳ- ರಥ ಮುಂದೆ ಸಾಗಲಾರದು. ನನ್ನ ಕಾವ್ಯ ಪರಿಣತಿಯನ್ನು ನಿನಗೆ ಕಾಣಿಕೆಯಾಗಿ ಕೊಡುತ್ತೇನೆ. ನನಗೆ ನಿನ್ನ ಉತ್ಸಾಹ-ಕರ್ಮಕುಶಲತೆಗಳ ಜೋಡಣೆ ಇರಲಿ. ಮೃಣಾಲಿನಿ : ಕೋಸಲೇಂದ್ರ ! ಇಲ್ಲಿದೆ ನನ್ನ ಕಾಣಿಕೆ, ( ಉಂಗುರವನ್ನು ತೆಗೆದು ಕೊಡುತ್ತಾಳೆ. ) ಮದುವೆಯೆಂದರೆ ಬಂಡುವಲಶಾಹಿಯು ಹೂಡಿದ ಇನ್ನೊಂದು ಸಂಸ್ಥೆಯೆಂದುಕೊಂಡಿದ್ದೆ. ಕಾಮವನ್ನು ಸಂಸ್ವೀಕರಿಸುವದೇ ಮದುವೆಯೆಂದುಕೊಂಡಿದ್ದೆ ನಾನು ! ಆದರೆ, ಓ ನರ್ಮುದೆ ! ನಿನ್ನ ಈ ದಂಡೆಗೆ ಬಂದು ದಡ ಮುಟ್ಟಿದೆ. ಈ ರಮ್ಯ ಸೂರ್ಯೋದಯದಲ್ಲಿ- ಅರಿಸಿಣಕುಂಕುಮದ ಮೆರುಗನ್ನು ಪಡೆದ ನಿನ್ನ ತರಂಗಗಳ ಮಂತ್ರಪಠಣದಲ್ಲಿ ವಿಹಂಗಮಗಳ ಮಂಗಲಾಚರಣದಲ್ಲಿ ಸೂರ್ಯನ'ಪ್ರಭೆ ಎಲ್ಲೆಡೆಗೆ ಶೋಭನ ಶೋಭೆಯನ್ನು ಪಡೆದ ಕಾಲದಲ್ಲಿ-ನನ್ನ ಉತ್ಸಾಹವನ್ನು ಕೋಸಲೇಂದ್ರನ ಬಾಳಿಗೆ ಜೊತೆಯಾಗಿಸುತ್ತೇನೆ. ಅವನ ದರ್ಶನವು ನನ್ನ ಹಣೆಗಣ್ಣಾಗಲಿ. ಇದೇ ಪಾಣಿಗ್ರಹಣ, [ ಮೆಲ್ಲಗೆ ಕೈ ನೀಡುತ್ತಾಳೆ, ಕೋಸಲೇಂದ್ರನು ಆವಳ ಕೈ ಹಿಡಿಯುತ್ತಾನೆ. ] [ ತರೆ]