ವಿಷಯಕ್ಕೆ ಹೋಗು

ಪುಟ:Yugaantara - Gokaak.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಂಕು ೩

“ ನೀನು ಬರ್ಫಿ ” ಹಂಚು. ಈಗಾದರೂ ಆಯಿತೆ ?........ಒಟ್ಟಾರೆ ನೀನೇ ದೈವಶಾಲಿ, ಮೃಣಾಲಿನಿ ! ನೀನು ಬಯಸುವಂತೆ ನೀನೇ ಕೋಸಲೇಂದ್ರ ನಾಗಿದ್ದರೆ, ಅದೆಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು.

ಮೃಣಾಲಿನಿ : ಯಾವ ಸಮಸ್ಯೆಗಳು, ಕೋಸಲೇಂದ್ರ ?

ಕೋಸಲೇಂದ್ರ : ಒಂದೇ ! ಎರಡೇ ! ಈಗ ನೋಡು, ನಮ್ಮ ಸಾದಾಜೀವನ ರುಕ್ಮಿಣಿದೇವಿಯರಿಗೆ ಮನಸ್ಸು ಬರುವದಿಲ್ಲ. ಇದ್ದುದನ್ನೆಲ್ಲ ಬಡವರಿಗೆ ಕೊಟ್ಟು ಬಡವರಂತೆ ಬಾಳುವದರಲ್ಲಿ ಏನು ಸಾರ್ಥಕತೆಯಿದೆ ? ಎಂದು ಅವರು ಕೇಳುತ್ತಾರೆ.

ಮೃಣಾಲಿನಿ: ಅದರಲ್ಲೇನಿದೆ ? ಅವರ ಹಣಕ್ಕೆ ನಾವು ಕೈ ಹಾಕಿಲ್ಲವಲ್ಲ ? ನಮ್ಮ ಬರವಣಿಗೆಯಿಂದ ನಮ್ಮ ಜೀವಿತ ಸಾಗಿದೆ. ನೀನು ಇದನ್ನು ಸಮಸ್ಯೆಯೆಂದು ತಿಳಿಯಬೇಕಾಗಿಲ್ಲ, ಕೋಸಲೇಂದ್ರ, ರುಕ್ಮಿಣಿದೇವಿಯವರೊಡನೆ ನಾನು ಅದನ್ನೆಲ್ಲ ಸರಿಪಡಿಸುತ್ತೇನೆ.

ಕೋಸಲೇಂದ್ರ : ಇನ್ನು ದೇಶದ ಕಡೆಗೆ ಹೊರಳಿದರೆ, ಭಾರತವೇನೋ ಸ್ವತಂತ್ರವಾಗಿದೆ. ಆದರೆ ಅದರ ಅತಂತ್ರ ಸ್ಥಿತಿಮಾತ್ರ ಹಾಗೆಯೇ ಉಳಿದಿದೆ. ಅಜ್ಞಾನ, ದ್ವೇಷ, ಸ್ವಾರ್ಥ... ...

ಮೃಣಾಲಿನಿ : ಇದು ನಿನ್ನೊಬ್ಬನ ಸಮಸ್ಯೆಯಲ್ಲ. ಎಲ್ಲರ ಸಮಸ್ಯೆ, ಎಲ್ಲ ತ್ಯಾಗಕ್ಕೆ ಸಿದ್ಧರಾಗಿದ್ದೇವೆ. ಅದೇ ನಮ್ಮ ಸಮಾಧಾನ.

ಕೋಸಲೇಂದ್ರ : ಒಮ್ಮೊಮ್ಮೆ ನಾನು ಮಾಡುತ್ತಿರುವ ಈ ಸೇವೆಯನ್ನು ಸಹ ಮಂಜು ಕವಿಯುತ್ತಿದೆ. ಈ ಪೀಳಿಗೆಗಾಗಿ ಸಂಸ್ಥೆಗಳನ್ನು ಕಟ್ಟಬೇಕೋ ಇಲ್ಲವೆ ಒಟ್ಟು ಜನಾಂಗದ ಏಳಿಗೆಗಾಗಿ ಕವನಗಳನ್ನು ಕಟ್ಟಬೇಕೋ ? ಎರಡನ್ನೂ ಮಾಡಲು ಹೋಗಿ ಈ ಎರಡೂ ಕೆಲಸ ಅಪೂರ್ಣವಾಗುತ್ತವೆ.

ಮೃಣಾಲಿನಿ : ' ನಸುನಕ್ಕು ) ಒಮ್ಮೊಮ್ಮೆ ನನ್ನಂತಹ ಸಾಮಾನ್ಯರ ಬುದ್ದಿಯೂ ನಿನ್ನಂಥ ಪ್ರತಿಭಾಶಾಲಿಗಳಿಗೆ ಉಪಯೋಗವಾಗುವದು, ಕೋಸಲೇಂದ್ರ ! ವಿಚಾರಮಾಡು. ಈ ಎರಡೂ ಕೆಲಸಗಳ ಅಪೂರ್ಣತೆಯಲ್ಲಿಯೇ ನಿನ್ನ ಪೂರ್ಣತೆಯಿದೆ; ನಿನ್ನ ಜೀವಿತಕ್ಕೆ ಬೇಕಾದ ವೈಶಾಲ್ಯ ವಿದೆ. ವ್ಯಕ್ತಿತ್ವದ ತಿರುಳನ್ನೆಲ್ಲ ಜೀವಿತಕ್ಕೆ ತಿರುಗಿಸುವದೇ ಪೂರ್ಣತೆಯ ಕುರುಹು. ಇದನ್ನುಳಿದ ಪೂರ್ಣತೆ ಯಾವುದು ?