ಮಹಾಕ್ಷತ್ರಿಯ/ಅಕಾಲದ ಅನರ್ಥ

ವಿಕಿಸೋರ್ಸ್ದಿಂದ

==೧.ಅಕಾಲದ ಅನರ್ಥ==

ದೇವಾಧೀಶ್ವರನಾದ ಇಂದ್ರನು ಶಚೀಸಮೇತನಾಗಿ ದೇವಸಭೆಯಲ್ಲಿ ಸಿಂಹಾಸನದಲ್ಲಿ ಕುಳಿತು ವಿರಾಜಿಸುತ್ತಿದ್ದಾನೆ. ದೇವತೆಗಳು, ಋಷಿಗಳು, ತಮ್ಮ ತಮ್ಮ ಪುಣ್ಯಕರ್ಮಗಳಿಂದ ಸ್ವರ್ಗಲೋಕವನ್ನು ಸಾಧಿಸಿದವರು, ಎಲ್ಲರೂ ಸ್ವಸ್ಥಾನಗಳನ್ನು ಅಲಂಕರಿಸಿದ್ದಾರೆ. ಒಂದು ಕಡೆ ಅಪ್ಸರೆಯರೂ, ಗಂಧರ್ವರೂ ನರ್ತನ ಸಂಗೀತಗಳಿಂದ ಆ ಸಭೆಯನ್ನು ಆರಾಧಿಸುತ್ತಿದ್ದಾರೆ. ಇನ್ನೊಂದು ಕಡೆ ಚತುರ್ವೇದಗಳೂ ಮೂರ್ತಿಮತ್ತಾಗಿ ನಿಂತು ವೇದಾಧ್ಯಯನ ಮಾಡುತ್ತ ಆ ದೇವಸಭೆಯನ್ನೆಲ್ಲಾ ಆಶೀರ್ವಾದಮಾಡುತ್ತಿದೆ. ಮರುತ್ತರು, ವಸುಗಳು, ರುದ್ರರು ಮೊದಲಾದವರು ಗಣಗಣಗಳಾಗಿ ನಿಂತು ಇಂದ್ರನನ್ನು ಓಲಗಿಸುತ್ತಿದ್ದಾರೆ. ದಿವ್ಯಾಯುಧಗಳೆಲ್ಲವೂ ದೇವೇಂದ್ರನ ಸಿಂಹಾಸನದ ಹಿಂದೆ ನಿಂತು ತೇಜೋವಿರಾಜಮಾನವಾಗಿ ಆತನಿಗೆ ರಕ್ಷೆಯನ್ನು ನೀಡುತ್ತಿವೆ. ಧರ್ಮಾರ್ಥಕಾಮಗಳೆಂಬ ತ್ರಿವರ್ತಗಳೂ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳೂ ಸರ್ವಸಿದ್ಧಿಗಳೂ ಎಡದಲ್ಲಿ ನಿಂತು ಪರಾಕು ಹೇಳುತ್ತಿವೆ. ಇಂದ್ರನಂತೆಯೇ ಲೋಕಪಾಲಕರೂ ತಮ್ಮ ತಮ್ಮ ಪತ್ನಿಯರೊಡಗೂಡಿ ದೇವರಾಜನ ಸಿಂಹಾಸನದ ಬಲಗಡೆಯಲ್ಲಿ ಮಂಡಿಸಿದ್ದಾರೆ. ಎಲ್ಲರ ದೇಹದಿಂದಲೂ ಹೊರಡುತ್ತಿರುವ ಸಹಜವಾದ ಸುವಾಸನೆಯು ಅವರವರು ಧರಿಸಿರುವ ಪುಷ್ಟಮಾಲೆಗಳ ಗಂಧದೊಡನೆ ಸೇರಿ ಸಭೆಯನ್ನೆಲ್ಲಾ ವ್ಯಾಪಿಸಿದೆ. ಜೊತೆಗೆ ಸಭಾಸ್ಥಾನದಲ್ಲಿ ಎಲ್ಲೆಲ್ಲೂ ಕೆತ್ತಿರುವ ಜೀವರತ್ನಗಳ ಕಾಂತಿಯು ಸಭಾಸದರು ಧರಿಸಿರುವ ರತ್ನಾಭರಣಗಳ ಕಾಂತಿಯೊಡನೆ ಬೆರೆತು, ಅವರವರ ತೇಜೋಮಂಡಲಗಳ ಪ್ರಭಾವಸಂವಲಿತವಾಗಿ ಆಸ್ಥಾನವನ್ನೆಲ್ಲಾ ಬೆಳಗುತ್ತಲಿದೆ.

ದೇವೇಂದ್ರನು ಸುತ್ತಲೂ ನೊಡಿದನು. ಎಲ್ಲರೂ ಬಂದಿದ್ದಾರೆ. ಆದರೆ ದೇವಗುರುಗಳಾದ ಬೃಹಸ್ಪತಿಗಳು ಮಾತ್ರ ಬಂದಿಲ್ಲ. ಅವರ ಆಸನವೊಂದು ಬಿಡುವಾಗಿದೆ. ಶಚೀಪತಿಗೆ ಅದನ್ನು ಕಂಡು ಅಸಮಾಧಾನವಾಗಿದೆ. ಹಾಗೆಂದು ಯಾರೊಡನೆಯಾದರೂ ಹೇಳಿಕೊಳ್ಳುವುದಕ್ಕೆ ಉಂಟೇನು? ತಿರುಗಿ ಶಚಿಯನ್ನು ನೋಡಿದನು. ಪತಿಯ ಅಭಿಪ್ರಾಯವು ಆಕೆಗೆ ತಿಳಿಯಿತು. ಆದರೂ ಆಕೆಯು ತಾನೇ ಏನು ಹೇಳಿಯಾಳು?

ಇನ್ನೂ ಒಂದು ಗಳಿಗೆಯಾಯಿತು. ಬೃಹಸ್ಪತಿಯು ಬರಲಿಲ್ಲ. ಇಂದ್ರನ ಅಸಮಾಧಾನಕ್ಕೆ ಬಣ್ಣ ಬಂದು ಅದು ಕೋಪದ ಕಡೆಗೆ ಹೊರಳಿತು. ಆದರೆ ತುಂಬಿದ ಸಭೆಯಲ್ಲಿ ಕೋಪಮಾಡಿಕೊಳ್ಳುವುದುಂಟೆ? ಅದೂ ಗುರುವೂ, ಪುರೋಹಿತನೂ ಆದ ಬೃಹಸ್ಪತಿಯ ಮೇಲೆ? ಇಂದ್ರನು ಎಷ್ಟೋ ಸಮಾಧಾನ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದಾನೆ. ಇರುವುದನ್ನೆಲ್ಲ ಬಿಟ್ಟು ಇಲ್ಲದುದನ್ನೇ ಎತ್ತಿ ತೋರಿಸುವ ಮನಸ್ಸು ಸಮಾಧಾನವಾಗಲೊಲ್ಲದೆ “ದೇವಗುರುಗಳು ಬಂದಿಲ್ಲವಲ್ಲ?” ಎಂದು ರೇಗಲು ಹವಣಿಸುತ್ತಿದೆ.

ಅಷ್ಟರಲ್ಲಿ ಪ್ರಹರಿಯ ದೀರ್ಘೋಚ್ಚಧ್ವನಿಯು ಕೇಳಿಸಿತು : “ಪುರುಹೂತನಿಗೆ ಪರಾಕ್, ಪುರಂದರನಿಗೆ ಪರಾಕ್, ಮಹೇಂದ್ರನಿಗೆ ಪರಾಕ್, ಶಚೀಪತಿಗೆ ಪರಾಕ್, ಸ್ವರ್ಗಲೋಕಾಧಿಪತಿಗೆ ಪರಾಕ್, ತ್ರಿಲೋಕಾಧಿಪತಿಗೆ ಪರಾಕ್, ತಪೋಲೋಕದಿಂದ ಒಂದು ಮಹರ್ಷಿಗಣವು ದರ್ಶನಾರ್ಥವಾಗಿ ದಯಮಾಡಿಸಿದೆ.” ಪ್ರಹರಿಯ ವಿಜ್ಞಾಪನವು ಮುಗಿಯುತ್ತಿರುವ ಹಾಗೆಯೇ ಸಾಮಗಾನಮಾಡುತ್ತಿರುವ ಮಹರ್ಷಿ ಗಣವು ಪ್ರವೇಶಿಸಿತು. ಅವರನ್ನು ಸ್ವಾಗತಿಸಿ ಕರೆತರಲು ಬೃಹಸ್ಪತಿಯು ಇಲ್ಲವಲ್ಲಾ ಎಂದು ಇಂದ್ರನ ಮನಸ್ಸು ಮತ್ತಷ್ಟು ಕ್ಷುಬ್ಧವಾಯಿತು. ಆದರೂ ಆ ಕ್ಷೋಭವನ್ನು ತೊರಿಸದೆ, ಗಂಭೀರವೃತ್ತಿಯವರಿಗೆ ಸಹಜವಾದ ಗಾಂಭೀರ್ಯವನ್ನು ಬಿಡದೆ, ಯಜ್ಞೇಶ್ವರನಾದ ಅಗ್ನಿಯ ಮುಖವನ್ನು ನೋಡಿದನು. ಅದನ್ನು ತಿಳಿದು ಅಗ್ನಿಯು ಹೋಗಿ ಅವರನ್ನು ಕರೆತಂದನು. ಧರ್ಮಾಧಿಪತಿಯಾದ ಯಮನು ಇಂದ್ರನಾಜ್ಞೆಯಂತೆ ಅವರಿಗೆ ಮಧುಪರ್ಕವನ್ನು ಒಪ್ಪಿಸಿದನು. ಅವರೂ ಋಷಿಸಹಜವಾದ ಕಾಣಿಕೆಗಳನ್ನೂ ಆಶೀರ್ವಾದಗಳನ್ನೂ ಒಪ್ಪಿಸಿ, ಆತನ ಅನುಮತಿಯಿಂದ ಆಸನಗಳನ್ನು ಪರಿಗ್ರಹಿಸಿದರು. ಇಂದ್ರನು ಅವರನ್ನು ಕುಶಲ ಪ್ರಶ್ನೆಗಳಿಂದ ಗೌರವಿಸಿ ಅವರು ಬಂದ ಕಾರಣವನ್ನು ವಿಚಾರಿಸಿದನು. ಅವರು ಹೇಳಿದರು:

“ದೇವರಾಜನಿಗೆ ಸ್ವಸ್ತಿಯಾಗಲಿ. ತಪೋಲೋಕದಲ್ಲಿ ನಮಗೊಂದು ಸಂದೇಹ ಬಂತು. ಅದು ಸಪ್ತರ್ಷಿಗಳ ಅನುಗ್ರಹದಿಂದ ಒಂದು ಪ್ರಶ್ನವಾಯಿತು. ಅವರು ‘ಈ ಪ್ರಶ್ನವನ್ನು ಪುರಂದರನಾದ ಇಂದ್ರನು ಅನುಗ್ರಹಿಸಿ ಬಿಡಿಸಬೇಕು. ನಾವೂ ಆತನ ಅನುಗ್ರಹದಿಂದ ಉತ್ತರವನ್ನು ಹೇಳಬೇಕು. ಅಥವ ಅಗ್ನಿವಾಯುಗಳು ಒಂದು ವೇಳೆ ಹೇಳಿದರೂ ಹೇಳಬಹುದು. ಕೇಳಿನೋಡಿ.’ ಎಂದರು. ನಾವು ಯಜ್ಞೇಶ್ವರನನ್ನು ಅರ್ಚಿಸಿ ಕೇಳಿದೆವು. ಜಾತವೇದನಾದ ಆತನು, ‘ಇಂದ್ರನು ನಮಗೆಲ್ಲಾ ಜ್ಯೇಷ್ಠನು. ಆ ಜ್ಯೇಷ್ಠತ್ವವನ್ನು ಬ್ರಹ್ಮನು ಆತನಿಗೆ ಅನುಗ್ರಹಿಸಿದುದು.

ಈ ಪ್ರಶ್ನವನ್ನು ಪುರಂದರನಾದ ಆತನಲ್ಲದೆ, ಇನ್ನು ಯಾರೂ ಪರಿಹರಿಸಲಾರರು’ ಎಂದನು. ಅದರಿಂದ ಇಲ್ಲಿಗೆ ಬಂದೆವು.”

ಇಂದ್ರನು ಯಜ್ಞೇಶ್ವರನ ಮುಖವನ್ನು ನೋಡಿ, ಆತನ ಮಂದಹಾಸದಿಂದಲೇ ಋಷಿಗಳ ಮಾತು ನಿಜವೆಂಬುದನ್ನು ಅರಿತು, “ಅಪ್ಪಣೆಯಾಗಲಿ. ಜಾತವೇದನೂ, ಸಪ್ತರ್ಷಿಗಳೂ ನಿಮಗೆ ಬಿಟ್ಟಿರುವ ಆ ಪ್ರಶ್ನವೆಂತಹುದು ಹೇಳಿ ಕೇಳೋಣ” ಎಂದನು.

ಋಷಿಗಳು ಹೇಳಿದರು. “ಪುರಂದರನಿಗೆ ಜಯವಾಗಲಿ. ದೇಹವು ನಾನಲ್ಲವೆಂದು ತಿಳಿದಿದ್ದರೂ, ದೇಹಗತವಾಗಿರುವ ಮನೋಬುದ್ಧಿಗಳನ್ನು ಪ್ರತ್ಯೇಕಿಸುವುದೆಂತು? ಇದನ್ನು ದಯವಿಟ್ಟು ತಿಳಿಹಿಸಿಕೊಡಬೇಕು.”

ಇಂದ್ರನು ಅದನ್ನು ಕೇಳಿ ನಕ್ಕನು. “ಈ ಪ್ರಶ್ನಕ್ಕೆ ಉತ್ತರವೂ ಬೇಕೆ ? ನಮ್ಮನ್ನು ದೊಡ್ಡವರನ್ನು ಮಾಡುವುದಕ್ಕೆ ಈ ಪ್ರಶ್ನವನ್ನು ಕೇಳುತ್ತಿರುವಿರಿ. ಆಗಲಿ ಹೇಳೋಣ” ಎಂದನು.

ಅಷ್ಟರಲ್ಲಿ ಸಭೆಯಲ್ಲಿ ಮಂದಮಾರುತನಿಂದ ಸಾಗರದಲ್ಲಿ ಏಳುವ ಸಣ್ಣ ಅಲೆಗಳಂತೆ ಕೊಂಚ ಚಲನವು ತೋರಿ ಎಲ್ಲರ ಕಣ್ಣುಗಳೂ ಬಾಗಿಲ ಕಡೆಗೆ ತಿರುಗಿದವು. ಇಂದ್ರನ ಮನಸ್ಸು ಪ್ರಶ್ನಕ್ಕೆ ಉತ್ತರ ಕೊಡುವತ್ತ ತಿರುಗಿದ್ದುದು ಬಲವಂತವಾಗಿ ಹಿಡಿದೆಳೆದಂತಾಗಿ, ಮುಖವು ಅಪ್ರಸನ್ನ ಮುದ್ರೆಯನ್ನು ಧರಿಸಿ, ಹುಬ್ಬುಗಳು ಗಂಟಿಕ್ಕಿದುವು. ಆ ವೇಳೆಗೆ ಸರಿಯಾಗಿ ಪ್ರಹರಿಯು ದೀರ್ಘೋಚ್ಛ ಧ್ವನಿಯಲ್ಲಿ “ಪರಾಕ್, ದೇವಗುರುಗಳು ದಯಮಾಡಿಸುತ್ತಿರುವರು!” ಎಂದು ಕೂಗಿದನು.

ಸಕಾಲದಲ್ಲಿ ದೇವಗುರುಗಳು ಆಸನದಲ್ಲಿ ಇರಲಿಲ್ಲವೆಂಬುದೊಂದು, ಋಷಿಗಣಗಳು ಬಂದಾಗ ಅವರಿಗೆ ಉಪಚಾರಮಾಡಲು ಇರಲಿಲ್ಲವೆಂಬುದೊಂದು, ತಾನು ಇನ್ನೆತ್ತಲೋ ತಿರುಗಿರುವಾಗ ಬಂದರೆಂಬುದೊಂದು, ಹೀಗೆ ನಾನಾ ಮುಖವಾದ ಅಸಮಾಧಾನಗಳೆಲ್ಲ ಸೇರಿ ಸಣ್ಣದೊಂದು ಆಕ್ರೋಶವು ಇಂದ್ರನ ಮನಸ್ಸಿನಲ್ಲಿ ಸುಳಿಯುತ್ತಿರುವಾಗ ದೇವಗುರುಗಳು ಸಭೆಯನ್ನು ಪ್ರವೇಶಿಸಿದರು. ಬರುತ್ತಿರುವ ಹಾಗೆಯೇ “ವಿಜಯೀಭವ” ಎನ್ನುತ್ತ ಕೈಯೆತ್ತಿಕೊಂಡು ಆಶೀರ್ವಾದ ಮಾಡುತ್ತಲೇ ಬಂದರು. ಆದರೆ ದೇವರಾಜನ ಮುಖಮುದ್ರೆಯನ್ನು ಕಾಣುತ್ತಿದ್ದ ಹಾಗೆಯೇ ತಾವೇನೋ ಅಕಾರ್ಯ ಮಾಡುತ್ತಿರುವವರಿಗೆ ಆಗುವಂತೆ, ಏನೋ ನಾಚಿಕೆಯಾಗಿ, ಹಾಗೆಯೇ ನಿಂತುಬಿಟ್ಟರು. ಬಾಯಲ್ಲಿ ಬರುತ್ತಿದ್ದ ಆಶೀರ್ವಾದೋಕ್ತಿಯೂ ಹಾಗೆಯೇ, ಅರ್ಧದಲ್ಲಿ,

‘ವಿಜಯೀ....’ ಎನ್ನುವಲ್ಲಿಗೆ ನಿಂತುಬಿಟ್ಟಿತು. ದೇವೇಂದ್ರನೂ ಋಷಿಗಣದ ಪ್ರಶ್ನಕ್ಕೆ ಉತ್ತರವನ್ನು ಚಿಂತಿಸುತ್ತಿದ್ದವನು ತನ್ನ ಭಾವವನ್ನು ಬದಲಿಸಲಿಲ್ಲ. ಎಂದಿನಂತೆ ವಿನಯದಿಂದ ಅವರ ಆಶೀರ್ವಾದವನ್ನು ಪ್ರತೀಕ್ಷಿಸುತ್ತ ನಮ್ರನಾಗಿ ಏಳುವ ಬದಲು, ಗಂಭೀರಮುದ್ರೆಯಲ್ಲಿದ್ದುಬಿಟ್ಟನು. ತಾನು ತಳೆದಿರುವ ಅನುಗ್ರಹ ಮುದ್ರೆಯನ್ನು ಬದಲಾಯಿಸಿ ಅನುಗ್ರಾಹ್ಯಮುದ್ರೆಯನ್ನು ಧರಿಸಿದರೆ ಮತ್ತೆ ಪೂರ್ವಮುದ್ರೆಯು ಬರುವುದೋ ಇಲ್ಲವೋ ಎಂದು ಸಂಶಯಿಸುವವನಂತೆ ಹಾಗೆ ಇದ್ದುಬಿಡಲು, ದೇವಗುರುವು ಅದು ತನಗೆ ಅವಮಾನವಾಯಿತು ಎಂದುಕೊಂಡನು. ‘ತಾನು ಆಗಾಗ ಅಕಾಲದಲ್ಲಿ ದೇವಸಭೆಗೆ ಬರುತ್ತಿದ್ದುದುಂಟು. ಆಗಲೆಲ್ಲ ಉಪಚಾರಗಳಿಂದ ತನ್ನನ್ನು ಗೌರವಿಸುತ್ತಿದ್ದ ಇಂದ್ರನಿಂದೇಕೆ ಹೀಗೆ ವಿಮುಖನಾಗಿರುವನು?’ ಎಂದು ಆಶ್ಚರ್ಯಪಟ್ಟನು. ಆತನಿಗೆ ಏಕೋ ಅಭಿಮಾನವು ವಿಜೃಂಭಿಸಿ ತನಗೆ ಇದು ಅಪಮಾನ ಎನ್ನಿಸಿತು. ಕೂಡಲೇ ಆ ಭಾವವೂ ಬೆಳೆಯಿತು. ಕೋಪವು ಬಂತು. ಆ ಕೋಪದಲ್ಲಿ ಸಭಾಪ್ರವೇಶಮಾಡಿದ್ದೇನೆ ಎಂಬುದನ್ನೂ ಮರೆತು ಅಲ್ಲಿಯೇ ಅಂತರ್ಧಾನವನ್ನು ಹೊಂದಿದನು.

ಇಂದ್ರನು ಏನು ಮಾಡಬೇಕು? “ತಾನು ಯಾವ ಭಾವದಲ್ಲಿರುವೆನೆಂಬುದನ್ನು ಪರೀಕ್ಷಿಸದೆ ದೇವಗುರುವು ಹೀಗೆ ಹೊರಟುಹೋದನು” ಎಂದು ಆತನಿಗೂ ಕೋಪವು ಬಂತು. ಆದರೂ ಸಭಾಮರ್ಯಾದೆಯನ್ನು ಮೀರಬಾರದೆಂದು ತನ್ನ ಸುತ್ತಲೂ ನಿಂತಿದ್ದ ಮರುತರಲ್ಲಿ ಜ್ಯೇಷ್ಠನಾದವನ ಮುಖವನ್ನು ನೋಡಿದನು. ಆತನು ಕೂಡಲೇ ಅಣ್ಣನ ಭಾವವನ್ನು ಗ್ರಹಿಸಿ, ದೇವಗುರುಗಳನ್ನು ಹುಡುಕಿಕೊಂಡು ಹೋದನು. ಇಂದ್ರನು ಋಷಿಗಣಗಳ ಪ್ರಶ್ನಕ್ಕೆ ಸಮಾಧಾನವನ್ನು ಹೇಳಹೊರಟನು.

ತಪೋಧನರೆ, ತಾವು ಈ ಪ್ರಶ್ನವನ್ನು ದೇವಸಭೆಗೆ ತಂದಿರುವಿರಿ. ಇದು ಅಧಿಕಾರಕ್ಷೇತ್ರ. ಇಲ್ಲಿ ರಜೋಗುಣವು ತಾನೇ ತಾನಾಗಿರುವುದು. ಆದರೆ ಅದೃಷ್ಟ ವಿಶೇಷದಿಂದ ಇಂದು ಇಲ್ಲಿ ಲೋಕಾಲೋಕಗಳ ವಿಚಾರವು ಯಾವುದೂ ಬಂದಿಲ್ಲವಾಗಿ, ತಮ್ಮ ಪ್ರಶ್ನಕ್ಕೆ ಉತ್ತರವನ್ನು ಹೇಳೋಣ. ಸಾವಧಾನವಾಗಿ ಕೇಳಿ.”

“ತಮ್ಮ ಪ್ರಶ್ನವು ಬಹು ಸುಲಭವಾದುದು. ತಾವು ವಿಚಾರಮಾಡಿರುವುದು ಮನೋಬುದ್ಧಿಗಳಿಂದ. ಅವೆರಡೂ ದೇಹವೃಕ್ಷದ ಅಂಗಗಳೇ ಹೊರತು ಬೇರೆಯಲ್ಲ. ಅದರಿಂದ ಅವು ದೇಹಬಂಧನವನ್ನು ದಾಟುವ ಮಾರ್ಗವನ್ನು ತೋರಿಸಲಾರವು. ಅದರಿಂದ, ಅವುಗಳನ್ನು ಗೆಲ್ಲುವುದಕ್ಕಾಗಿ ಅವಸ್ಥಾತ್ರಯವನ್ನು ಅವಲಂಬಿಸಿ.”

“ಹಿಂದೊಮ್ಮೆ ಪ್ರಜಾಪತಿಯು ತನ್ನಲ್ಲಿ ಅಜರವನ್ನೂ ಅಮರವನ್ನೂ

ಮಾಡುವ ಆತ್ಮವಿದ್ಯೆಯುಂಟು, ಅದನ್ನು ತಿಳಿದವರು ಅಜರರೂ, ಅಮರರೂ ಆಗುವರು ಎಂದು ಘೋಷಿಸಿದನು. ಅದನ್ನು ತಿಳಿದುಬರಲು ದೆವತೆಗಳು ನನ್ನನ್ನೂ, ದೈತ್ಯರು ವಿರೋಚನನನ್ನೂ ಕಳುಹಿಸಿಕೊಟ್ಟರು. ಅತನು ಆತ್ಮವಿದ್ಯೆಯನ್ನು ಬೋಧಿಸಿದುದು ಹೀಗೇ ಅವಸ್ಥಾತ್ರಯಗಳನ್ನು ಹಿಡಿದು. ಅದನ್ನೇ ಈಗ ನಾನು ತಮಗೆ ಹೇಳುತ್ತಿರುವೆನು.” “ಆಯಿತು. ದೇವರಾಜನು ಪ್ರಸನ್ನನಾಗಲಿ. ಅವಸ್ಥಾತ್ರಯವನ್ನು ಹಿಡಿಯುವುದು ಎಂದರೇನು?”

“ಕೇಳಿ, ಜಾಗ್ರತ್ತಿನಲ್ಲಿರುವವರೆಗೂ ಬುದ್ಧಿಮನಸ್ಸುಗಳು ಏಕೆ ಹೀಗೆ ಮಡುತ್ತಿವೆ? ಹೀಗೆ ಮಾಡು ಎಂದು ಯಾರು ಇವನ್ನು ಪ್ರೇರೇಪಿಸಿದರು ಎಂದು ಪರೀಕ್ಷೆ ಮಾಡುತ್ತಿರುವುದು. ಜಾಗ್ರದವಸ್ಥೆಯು ಅಹಂಕಾರ ಸ್ಥಾನವು. ರಜೋಗುಣದ ಆವೇಶವುಳ್ಳದು. ಅದರಿಂದ ಅಲ್ಲಿ ಅಹಂಕಾರವನ್ನು ವಿಜೃಂಭಿಸದಂತೆ ತಡೆದು, ರಜಸ್ಸಿನ ಆವೇಶಕ್ಕೆ ಎಡೆಗೊಡದೆ, ಎಚ್ಚರವಾಗಿರಬೇಕು. ಹಾಗಿರುವುದೇ ಜಾಗ್ರತ್ತಿನ ಅನ್ವೇಷಣವು.”

“ಇದರಿಂದ ಏನಾಗುವುದು ಮಹಾದೇವ?”

“ಇದರಿಂದ ತನ್ನ ಸುತ್ತಲೂ ತುಂಬಿರುವ ಪ್ರಾಣದ ಪರಿಚಯವಾಗುವುದು. ಪ್ರಾಣವೇನು ಎನ್ನುವಿರಾ? ಆತ್ಮನ ನೆರಳೇ ಪ್ರಾಣವು. ಪ್ರಾಣವನ್ನು ನೋಡುತ್ತ ಅದರ ಹಿಂದಿರುವ ಆತ್ಮನ ಜಾಡೆ ಹಿಡಿದು ಭೇದಿಸಿದರೆ, ಬ್ರಹ್ಮಸಾಕ್ಷಾತ್ಕಾರವಾಗುವುದು.”

“ದೇವದೇವ, ಬ್ರಹ್ಮಸಾಕ್ಷಾತ್ಕಾರವಾಗುವುದು ಎಂದರೇನು?”

“ಬ್ರಹ್ಮವು ಅತೀಂದ್ರಿಯವು. ಇಂದ್ರಿಯಗೋಚರವಾಗುವುದಲ್ಲ ಎಂಬುದು ಸಿದ್ಧಾಂತವಾಗಿ ಮನಸ್ಸಿಗೆ ಹಿಡಿಯುವುದೇ ಬ್ರಹ್ಮಸಾಕ್ಷಾತ್ಕಾರವು. ಶ್ರವಣಕಾಲದಲ್ಲಿ ಅದು ಶಾಸ್ತ್ರೋಕ್ತಿಯಾಗಿ ಗ್ರಹಣವಾಗುವುದು. ಮನನ ಕಾಲದಲ್ಲಿ ಸತತವಾಗಿ ಅನುಚಿಂತಿತವಾಗುತ್ತ ಬೇರೆ ಬೇರೆ ಯುಕ್ತಿಗಳಿಂದ ಸಿದ್ಧವಾಗುತ್ತಿರುವುದು. ನಿಧಿಧ್ಯಾಸನ ಕಾಲದಲ್ಲಿ ಅದು ಸಿದ್ಧಾಂತವಾಗಿ, ಭೂಮಿಯಲ್ಲಿರುವ ನಿಧಿಯಂತೆ ಸಾಕ್ಷಾತ್ಕಾರವಾಗಿರುವುದು. ಅಲ್ಲಿಯವರೆಗೂ ದೇಹೋವಹಂಭ್ರಾಂತಿಯು ಬಿಟ್ಟುದ್ದಲ್ಲ. ಈ ಭ್ರಾಂತಿನಿರಸನವಾಗಲು ಮುಮುಕ್ಷು-ಜನರು ನನ್ನನ್ನು ಉಪಾಸನ ಮಾಡುವರು.”

“ಬ್ರಹ್ಮ ವಿದ್ಯಾಸಂಪ್ರದಾಯಕರ್ತೃವೆಂದು ನಿನ್ನನ್ನು ಬಲ್ಲವರು ಹೊಗಳುವ ಕಾರಣವು ಈಗ ತಿಳಿಯಿತು. ಬ್ರಹ್ಮನ್, ಇನ್ನು ಸುಷುಪ್ತಿಯ ವಿಚಾರವು ಅಪ್ಪಣೆಯಾಗಬೇಕು.”

“ಆಗಲಿ, ಅದನ್ನೂ ಹೇಳೋಣ, ಆದರೆ ಅದಕ್ಕಿಂತ ಮುಂಚೆ ಸ್ವಪ್ನ ವಿಚಾರವನ್ನು ತಿಳಿದುಕೊಳ್ಳಬೇಕು. ಜೀವನು ತನ್ನ ವಾಸನಾಭಂಡಾರವನ್ನು ಬರಿದುಮಾಡಿಕೊಳ್ಳುವ ಪ್ರಯತ್ನವೇ ಸ್ವಪ್ನವು. ಬಾಹ್ಯೇಂದ್ರಿಯಗಳು ಇಲ್ಲದಿರಲು, ಅಂತರಿಂದ್ರಿಯಗಳು ತಾವೇ ತಾವಾಗಿ ವಾಸನಾಭಂಡಾರವನ್ನು ಬಿಚ್ಚಲು ಅಲ್ಲಿ, ಕಾಲದೇಶಪ್ರಭಾವದಿಂದ ಸ್ವಪ್ನವಾಗುವುದು. ಅದೂ ಜಾಗ್ರತ್ತಿನಂತೆಯೇ ಒಂದು ವೃತ್ತಿಯು ; ಎಂದರೆ ಮನೋವ್ಯಾಪಾರವು. ಸ್ವಪ್ನವು ಜಾಗ್ರತ್ತಿನಲ್ಲಿ ಪ್ರಕಟವಾಗದ, ಪ್ರಕಟವಾಗಲಾರದ, ವಾಸನೆಗಳ ಹೊರಚೆಲ್ಲುವಿಕೆಯು. ಕೆರೆಗೆ ಕೋಡಿ ಇರುವಂತೆ, ಅಂತಃಕರಣದ ಕೋಡಿ ಅದು. ಅಲ್ಲಿ ಹರಿಯುವ ನೀರಿನ ಸ್ವಭಾವದಿಂದ ಕೆರೆಯಲ್ಲಿನ ನೀರಿನ ಸ್ವಭಾವವನ್ನು ಊಹಿಸಿಕೊಳ್ಳುವಂತೆ, ತನ್ನ ತನ್ನ ಸ್ವಪ್ನವನ್ನು ನೋಡಿಕೊಂಡು ಅಂತಃಕರಣದ ಮಾಲಿನ್ಯವನ್ನು ತೊಳೆದುಕೊಳ್ಳಬೇಕು. ಸ್ವಪ್ನವನ್ನು ನೋಡುವ ತನ್ನಿಂದ ಅದು ಭಿನ್ನವೆಂದು ತಿಳಿದುಕೊಳ್ಳುವುದೇ ಅಲ್ಲಿರುವ ಮಾಲಿನ್ಯವು. ಸ್ವಪ್ನವನ್ನು ಕಂಡವನು’ ಈ ಸ್ವಪ್ನವು ತನ್ನಿಂದಲೇ ಸೃಷ್ಟವಾದುದು : ಅದೂ ‘ಅದನ್ನು ಕಾಣುವವನೂ ಬೇರಲ್ಲ’ ಎಂದು ಯಾವತ್ತು ತಿಳಿದುಕೊಳ್ಳುವನೋ ಅದೇ ಅದು ಶುದ್ಧವಾಗುವಿಕೆ. ಮೊದಲು ಇದು ಸ್ವಪ್ನ ಎಂದು ಅರಿವಾಗಿ ಆನಂತರ, ಅದು ಶುದ್ಧವಾದಾಗ, ಜಾಗ್ರತ್ತಿನಲ್ಲಿರುವ ಮುಖ್ಯ ವೃತ್ತಿಯು ಅಲ್ಲಿಯೂ ತಲೆದೋರುವುದು. ಅದು ಸ್ವಪ್ನಜಯವು.”

“ಹಾಗೆಯೇ ನಿದ್ರಾಜಯವನ್ನು ಹೇಳುವೆನು ಕೇಳಿ. ಜಾಗ್ರತ್ಸ್ವಪ್ನಗಳಲ್ಲಿ ಎಡಬಿಡದೆ ನುಡಿಯುತ್ತಿರುವ ಉದಾನವಾಯುವು ಸುಷುಪ್ತಿಕಾಲದಲ್ಲಿ ಸುಮ್ಮನಿರುವುದು. ಆ ಉದಾನವಾಯುವು ಆಗ ಮಂತ್ರ ಜಪಮಾಡುವಂತೆ ಮಾಡುವುದೇ ಸುಷುಪ್ತಿ ಜಯವು. ಸುಷುಪ್ತಿಜಯವಾದವನಿಗೆ ಜಾಗ್ರತ್ಸ್ವಪ್ನಗಳೆರಡರಲ್ಲೂ ಉದಾನವಾಯುವು ಮಂತ್ರಜಪವನ್ನು ಮಾಡುವುದು. ಆಗ ದೃಶ್ಯವೆಲ್ಲವೂ ದಾಳಿಂಬದ ಹಣ್ಣು ಬಿರಿಯುವಂತೆ ಬಿರಿದು ತನ್ನೊಳಗೆ ಹೊರಗೆ ಎಲ್ಲೆಲ್ಲೂ ತುಂಬಿರುವ ಬ್ರಹ್ಮವಸ್ತುವನ್ನು ಪ್ರದರ್ಶಿಸುವುದು. ಆ ಬ್ರಹ್ಮವಸ್ತುವು ತಾನೊಲಿದವರಿಗೆ ಒಲಿಯುವುದಲ್ಲದೆ ಇತರರಿಗೆ ಒಲಿಯುವುದಿಲ್ಲ. ಅದರಿಂದ ಆ ಬ್ರಹ್ಮವಸ್ತುವಿನ ಒಲವನ್ನು ಪಡೆದಾಗ, ಅದು ಒಲಿದಾಗ ಜಾಗ್ರತ್ ಸ್ವಪ್ನ ಸುಷುಪ್ತಿಗಳು ಮೂರೂ ಇಲ್ಲವಾಗಿ, ಇವೊಂದೂ ಅಲ್ಲದ ಇನ್ನೊಂದು ಅವಸ್ಥೆಯು ಬರುವುದು. ಅದನ್ನು ತುರೀಯವೆನ್ನುವರು. ಆ ತುರೀಯವು ಬಂದಾಗ ಈ ದೇಹವು ಒಂದು ದುರ್ಗವಾಗಿ ತನ್ನನ್ನು ಹಿಡಿದುಕೊಂಡಿದೆಯೆಂಬುದು ಗೊತ್ತಾಗುವುದು.

“ಈ ದೇಹವು ಇರುವಂತೆಯೇ ಅದು ವಿಪನ್ನವಾಗುವುದಕ್ಕೆ ಮೊದಲೇ, ಈ ಸ್ಥಿತಿಯನ್ನು ಕಾಣುವುದೇ ಪುರಂದರೋಪಾಸನೆಯ ಫಲವು. ಅದು ದೊರೆಯಲೆಂದು ನನ್ನನ್ನು ಆಶ್ರಯಿಸಿ. ನಾನು ಪ್ರಜಾಪತಿಯ ದಯೆಯಿಂದ ಪಡೆದ ಈ ವಿದ್ಯೆಯನ್ನು ಬಲ್ಲವರು ಉಪಾಸನೆ ಮಾಡುವರು. ಇದರಿಂದ ನನ್ನಲ್ಲಿ ಅಪ್ಯಯವನ್ನು ಪಡೆದು ಮನ್ವಂತರದ ಕೊನೆಯವರೆಗೂ ನನ್ನಲ್ಲಿದ್ದು ನನ್ನೊಡನೆ ಮುಕ್ತರಾಗುವರು. ‘ಅದು ಬೇಡ, ಸದ್ಯೋಮುಕ್ತಿಯು ಬೇಕು’ ಎನ್ನುವವರು ಪರಶಿವವನ್ನು ಆಶ್ರಯಿಸಿ, ಶುದ್ಧವಿದ್ಯೆಯಿಂದ ಉಪಾಸನೆ ಮಾಡಿದರೆ, ಆತನು ದೇಹದಲ್ಲಿರುವ ಸ್ಥೂಲಸೂಕ್ಷ್ಮ ಕಾರಣ ಪುರತ್ರಯಗಳು ಒಟ್ಟು ಸೇರಿದಾಗ ಅವನ್ನು ಭೇದಿಸಿ ಭಕ್ತನನ್ನು ಕೃತಾರ್ಥಮಾಡುವನು.”

“ಇದು ತಮ್ಮ ಪ್ರಶ್ನಕ್ಕೆ ಉತ್ತರವು. ಇನ್ನೇನಾಗಬೇಕು ? ಇದು ತಿಳಿಯಿತೆ?” ಋಷಿಗಣವು ತಾವು ಕೃತಾರ್ಥರಾದೆವೆಂದು ಪುರಂದರನಿಗೆ ವೇದೋಕ್ತವಾದ ಇಂದ್ರಮಂತ್ರಗಳ ಪೂರ್ವಕವಾದ ನಮಸ್ಕಾರ ಮಾಡಿದರು.

ಇಂದ್ರನಿಗೆ ಬ್ರಹ್ಮ ವಿಚಾರಮಾಡುತ್ತ ಪೂರ್ಣಭಾವವು ಬಂದಿತು. ಆಗ ಮತ್ತೆ ಯಾರದೂ ನೆನಪಿರಲಿಲ್ಲ. ವೇಳೆಯಾಯಿತೆಂದು ಪ್ರಹರಿಯು ದೀರ್ಘ-ಉಚ್ಚ-ಸ್ವರದಿಂದ ಸಭೆಯ ಮುಕ್ತಾಯವನ್ನು ಸೂಚಿಸಿದನು. ಇಂದ್ರನು ಶಚೀಸಮೇತನಾಗಿ ಎದ್ದನು. ಸಭಾಸದರೂ ಎದ್ದರು.

* * * *