ವಿಷಯಕ್ಕೆ ಹೋಗು

ಮಹಾಕ್ಷತ್ರಿಯ/ಇನ್ನೊಬ್ಬರ ಕೈವಾಡ

ವಿಕಿಸೋರ್ಸ್ದಿಂದ

==೨೦.ಇನ್ನೊಬ್ಬರ ಕೈವಾಡ==

ಶಚಿಯ ಅರಮನೆಯಲ್ಲಿ ಸುರಾಚಾರ್ಯರ ಅಭಿಮಂತ್ರಗಳಿಂದ ಶಚಿಯ ಉಪಚಾರದಿಂದ, ದೇವೇಂದ್ರನು ಎಚ್ಚರಗೊಂಡನು. ಆದರೂ ಆತನಿಗೆ ಮೈ ನಡುಗುತ್ತಿದೆ. ಸುರಾಚಾರ್ಯನು ಕೇಳಿದನು ; ‘ನೀನೇಕೆ ಮೂರ್ಛೆಗೊಂಡೆ?” ಇಂದ್ರನು ಹೇಳಿದನು ‘ದೇವ, ಏನು ಹೇಳಲಿ? ವೃತ್ರನು ‘ಹೊಡೆ ಹೊಡೆ’ ಎಂದು ಬಲವಂತ ಮಾಡಿದನು. ಮಹಾವಿಷ್ಣುವು ಸಮಯವು ಸನ್ನಿಹಿತವಾಗಿದೆ, ‘ವಜ್ರವನ್ನು ಆರೋಪಿಸಿ ಹೊಡೆ’ ಎಂದನು. ನಾನು ನನ್ನ ಬಲವನ್ನೆಲ್ಲಾ ಶೇಖರಿಸಿ, ವಜ್ರವನ್ನು ಆ ನೊರೆಯಲ್ಲಿ ಆರೋಪಿಸಿ ಹೊಡೆದೆನು. ಮಹಾವಿಷ್ಣುವಿನ ಕೃಪೆಯಿಂದ ತಲೆಯು ಹಾರಿಹೋಯಿತು. ಮತ್ತೆಲ್ಲಿ ಆ ತಲೆಯು ಮುಂಡಕ್ಕೆ ಸೇರಿ ಅನರ್ಥ ಮಾಡೀತೋ ಎಂದು, ಆ ಕೂಡಲೇ ಪಂಚಭೂತಗಳು ವಿಘಟಿತವಾಗುವಂತೆ ಆಜ್ಞೆ ಮಾಡಿದೆನು. ಇನ್ನು ಅಂತಃಕರಣದಲ್ಲಿರುವ ತನ್ಮಾತ್ರೆಗಳನ್ನು ಹಂಚಿಹಾಕಬೇಕು ಎಂದು ಯೋಚಿಸುತ್ತಿರುವಾಗ, ನನಗಿನ್ನು ಶಕ್ತಿಯೇನೂ ಉಳಿದಿಲ್ಲ ಎಂದು ಬೋಧೆಯಾಯಿತು. ಅಲ್ಲದೆ, ಒಂದು ಗಳಿಗೆಯ ಹಿಂದೆ ನನ್ನ ಎದುರಿಗೆ ಪರ್ವತಾಕಾರವಾಗಿ ನಿಂತಿದ್ದ ದೇಹವು ಪಂಚಭೂತಗಳು ಬೇರೆಯಾಗುತ್ತಲೂ ಕರಗಿಹೋಯಿತು. ಅದನ್ನು ನೋಡಿ ನನಗೆ ಹೇಗೆಹೇಗೋ ಆಯಿತು. ಮೈ ಮರೆಯಿತು. ಸದ್ಯಕ್ಕೆ ನೀವೆಲ್ಲ ಆ ವೇಳೆಗೆ ಬರದಿದ್ದರೆ ಏನಾಗುತ್ತಿತ್ತೋ ?”

“ಮಧ್ಯಾಹ್ನವೇ ನನಗೆ ಈ ದಿನ ಹೀಗಾಗಬಹುದು ಎನ್ನಿಸಿತ್ತು. ಅಲ್ಲದೆ ವೃತ್ರನ ಬಾಯಿಂದ ವಿಧಿಯು ‘ನಾಳಿನಿಂದ ನೀನು ಇಂದ್ರ’ ಎಂದು ಮೂರು ಸಲ ಹೇಳಿಸಿತು. ಅವೆಲ್ಲದರಿಂದ ಎಚ್ಚರಗೊಂಡು ನಾನೂ ಅಗ್ನಿವಾಯುಗಳೂ ಶಚಿಯೂ ನಿನ್ನ ಹಿಂದೆಯೇ ಕಾದಿದ್ದೆವು. ನಿನ್ನ ಆಯುಧಗಳೆಲ್ಲ ಬಂದುದನ್ನೂ ಕಂಡೆವು. ನಿನಗಿನ್ನು ದಿಗಿಲಿಲ್ಲ ಎಂದುಕೊಳ್ಳುತ್ತಿರುವಾಗ, ನೀನು ಹೊಡೆದೆ, ಬಿದ್ದೆ.”

“ನನಗಿನ್ನೂ ದಿಗಿಲು ದೇವ. ಆ ತ್ವಷ್ಟೃವು ಹಿಂದಿನ ದ್ವೇಷವನ್ನು ಸಾಧಿಸಿ, ಮತ್ತೆ ಆ ಪ್ರೇತಕ್ಕೆ ರೂಪವನ್ನು ಕೊಟ್ಟರೆ ಗತಿಯೇನು? ಎಂದು ನನಗೆ ಅಂಜಿಕೆಯಾಗುತ್ತಿದೆ.”

“ಆ ದಿಗಿಲು ನಿನಗೆ ಬೇಕಿಲ್ಲ. ಮಹಾಪೂಜೆಯಾದ ದಿನ ದಧೀಚಿಯು ತ್ವಷ್ಟೃವಿನ ಮೋಹಕ್ಕೆ ಔಷಧವನ್ನು ಕೊಟ್ಟಿದ್ದಾನೆ. ಆದರೆ, ಆ ಶುಕ್ರಾಚಾರ್ಯನು ಏನು ಮಾಡುವನೋ ನೋಡಬೇಕು.”

“ಆತನೇನು ಮಾಡಬಹುದು?”

“ಆ ಪ್ರೇತಕ್ಕೆ ಶರೀರವನ್ನು ಕೊಡಬಹುದು. ನೀನು ಪಂಚಭೂತಗಳನ್ನು ಒಡೆದಿರುವುದರಿಂದ ಅದು ಸಾಧ್ಯವಿಲ್ಲ ಎನ್ನುವೆಯೇನೋ? ಆತನಿಗೆ ಸಂಜೀವಿನೀ ವಿದ್ಯೆಯು ಗೊತ್ತು ಅದನ್ನು ವ್ಯುತ್ಕ್ರಮವಾಗಿ ಉಪಯೋಗಿಸಿ ಪಂಚಭೂತಗಳನ್ನು ಮತ್ತೆ ಸೇರುವಂತೆ ಮಾಡಿದರೆ ಏನು ಮಾಡುತ್ತೀಯೆ? ಅದರಿಂದ, ಒಂದು ಕೆಲಸ ಮಾಡು. ನಿದ್ರಾದೇವಿಯನ್ನು ಬರಮಾಡು ಹೇಳುತ್ತೇನೆ.”

ಇಂದ್ರನು ನಿದ್ರಾದೇವಿಯನ್ನು ಧ್ಯಾನಿಸಿದನು. ಆಕೆಯು ಬಂದು ದೇವರಾಜನಿಗೆ ಕೈಮುಗಿದು “ಏನಪ್ಪಣೆ?” ಎಂದಳು ಸುರಾಚಾರ್ಯನು ಹೇಳಿದನು, - “ನೀನೀಗ ಶುಕ್ರಾಚಾರ್ಯನ ಬಳಿ ಹೋಗು. ಅಲ್ಲಿ ವೃತ್ರನ ಪ್ರೇತವಿರುವುದು. ಅದಕ್ಕೆ ಆತನು ಸಂಜೀವಿನೀ ವಿದ್ಯೆಯನ್ನು ಉಪದೇಶ ಮಾಡಿಯಾನು. ಹಾಗೇನಾದರೂ ಇದ್ದರೆ, ವೃತ್ರನ ಪ್ರೇತಕ್ಕೆ ನಿದ್ದೆಯು ಬರುವಂತೆ ಮಾಡು. ಶುಕ್ರಾಚಾರ್ಯನ ಉಪದೇಶವು ಅದಕ್ಕೆ ಸಂಪೂರ್ಣವಾಗಿ ಹಿಡಿಯದಂತೆ ಮಾಡು. ಈ ದೇವಕಾರ್ಯವನ್ನು ನಿರ್ವಹಿಸಿ ಬಂದು ನಡೆದುದೆಲ್ಲವನ್ನೂ ದೇವರಾಜನಿಗೆ ವರದಿ ಮಾಡು.”

ನಿದ್ರಾದೇವಿಯು ‘ಅಪ್ಪಣೆ’ ಎಂದು ಹೊರಟುಹೋದಳು.

ಸುರಾಚಾರ್ಯನು ಮತ್ತೆ ಇಂದ್ರನಿಗೆ ಹೇಳಿದನು; ನಾಳೆಯ ದಿನ ದೇವಸಭೆಯಾಗಬೇಕು. ಅದರಿಂದ ಸಿಂಹಾಸನಾಭಿಮಾನೀ ದೇವತೆಯನ್ನೂ ಕರೆದು ಆಜ್ಞಾಪಿಸು. ಇಂದ್ರನು ಆಕೆಯನ್ನು ಕರೆದನು. ಆಕೆಯು ಬಂದು ಕೈಮುಗಿದು “ಏನಪ್ಪಣೆ?” ಎಂದಳು. ಇಂದ್ರನು ಮರುದಿನ ನಡೆಯಬೇಕಾದ ದೇವಸಭೆಯ ವಿಷಯವನ್ನು ಹೇಳಿದನು. ಆಕೆಯು ವಿನಯದಿಂದ, “ದೇವರಾಜ, ಇದೇಕೆ ತಿಳಿಯದವನಂತೆ ಮಾತನಾಡುತ್ತಿರುವೆ? ನಿನ್ನನ್ನು ನೀನು ಚೆನ್ನಾಗಿ ಪರೀಕ್ಷೆ ಮಾಡಿಕೊ. ನಿನಗೆ ವೃತ್ರಹತ್ಯಾಪಾತಕವು ಬಂದಿರುವುದು. ಸುರಾಚಾರ್ಯನೂ ಅದನ್ನು ನೋಡಬಲ್ಲನಾದರೂ ನೋಡಿಲ್ಲ. ಶಚೀದೇವಿಯೂ ಅಗ್ನಿದೇವ ವಾಯುದೇವರೂ ನಿನ್ನ ಮೇಲಣ ಅಭಿಮಾನದಿಂದ ಕುರುಡಾಗಿರುವರು. ಆ ಹತ್ಯೆಯನ್ನು ಕಟ್ಟಿಕೊಂಡು ನೀನೆಂತು ದೇವಸಿಂಹಾಸನವನ್ನು ಹತ್ತುವೆ ? ಅದರಿಂದ, ಮೊದಲು ಹತ್ಯೆಯನ್ನು ನಿವಾರಿಸಿಕೊ. ಆನಂತರ ನಿನ್ನ ಸಿಂಹಾಸನವನ್ನು ನೀನು ಏರಲು ಯಾರಡ್ಡಿ ?” ಎಂದಳು.

ಇಂದ್ರನು ಆಕೆಯ ಮಾತನ್ನು ಕೇಳಿ ಗಾಬರಿಯಾದನು. ಸುರಾಚಾರ್ಯನು ನೋಡಿ, “ಆತುರದಲ್ಲಿ ನಾನೂ ನೋಡಲಿಲ್ಲ. ದೇವಮೃತ್ಯುವು ಕಳೆಯಿತಲ್ಲಾ ಎಂದು ಅತ್ತಕಡೆ ಸಂಭ್ರಮದಲ್ಲಿದ್ದು ಬಿಟ್ಟೆನು. ಆಕೆಯ ಮಾತು ನಿಜ. ಈ ಹತ್ಯೆಯನ್ನು ಆದಷ್ಟು ಬೇಗ ಕಳೆದುಕೊಳ್ಳಬೇಕು” ಎಂದನು.

ಇಷ್ಟೆಲ್ಲಾ ಆಗುವುದರೊಳಗಾಗಿ ನಿದ್ರಾದೇವಿಯು ಮತ್ತೆ ಬಂದು ಕಾಣಿಸಿಕೊಂಡು “ದೇವರಾಜ, ನಿನ್ನ ಅಪ್ಪಣೆಯಂತೆ ನಡೆಸಿದ್ದೇನೆ. ಆದರೂ ಶುಕ್ರಾಚಾರ್ಯನೂ ನಿನ್ನನ್ನು ಹಿಂಸಿಸಬೇಕೆಂದು ಕೃತಸಂಕಲ್ಪನಾಗಿದ್ದಾನೆ. ಆತನು ಪ್ರೇತವನ್ನು ಭೂತಸಂಪಾದನಕ್ಕೆ ಪ್ರೇರಿಸಿದ್ದಾನೆ. ಅದು ಆ ಕಾರ್ಯವನ್ನು ಆರಂಭಿಸಿದೆ. ಇನ್ನು ಅಪ್ಪಣೆಯಾದರೆ ಬರುವೆನು” ಎಂದು ಕೈಮುಗಿದು ಹೊರಟುಹೋದಳು.

ಸುರಾಚಾರ್ಯನು “ಇದೊಂದು ಹೊಸ ಸಂಕಟವು ಬಂತು” ಎಂದು ನೊಂದುಕೊಂಡನು. ಹಾಗೆಯೇ ಯೋಚಿಸಿ, “ಶಚೀದೇವಿ, ಈ ಭೂತಗಳ ಪ್ರಪಂಚವು ನಿನ್ನದು. ವೃತ್ರನು ಭೂತಾಂಶವನ್ನು ಸಂಗ್ರಹಿಸಿ, ಶರೀರವನ್ನು ಮಾಡಿಕೊಳ್ಳದಂತೆ ನೀನು ಎಚ್ಚರವಾಗಿದ್ದು ನಿನ್ನ ಗಂಡನಿಗೆ ಸಹಾಯ ಮಾಡು” ಎಂದನು.

ಶಚಿಯು “ಅಪ್ಪಣೆ” ಎಂದಳು. ಧ್ಯಾನಮಾಡಿ ನೋಡಿದಳು. ಭೂತಭೂತಗಳಿಗೂ “ನನ್ನ ಅಪ್ಪಣೆಯಿಲ್ಲದೆ ನೀವು ಯಾರಿಗೂ ಏನನ್ನೂ ಕೊಡಕೂಡದು” ಎಂದಳು. ಪಂಚಭೂತಾಭಿಮಾನೀ ದೇವತೆಗಳೂ ಬಂದು ಆ ಅಪ್ಪಣೆಯನ್ನು ಶಿರಸಾವಹಿಸಿದರು.

ಆಚಾರ್ಯನು ಮತ್ತೆ ಹೇಳಿದನು ; “ದೇವರಾಜ, ನೀನೂ ಅಷ್ಟೇ ! ಶಚಿಯು ಬೇಕೆಂದಾಗ ನೀನು ಆಕೆಗೆ ಸಾಯುಧನಾಗಿ ಸಹಾಯಮಾಡು” ಎಂದನು. ದೇವರಾಜನೂ ‘ಅಪ್ಪಣೆ’ ಎಂದು ಕೈಮುಗಿದನು. ಆತನಿಗೆ ‘ತನಗೆ ಬಂದಿರುವ ಹತ್ಯೆಯನ್ನು ಕಳೆದುಕೊಳ್ಳುವುದು ಎಂತು ?’ ಎಂಬುದೇ ದೊಡ್ಡ ಯೋಚನೆಯಾಗಿದೆ.

ಆತನು ತಡೆಯದೆ ತನ್ನ ಸಮಸ್ಯೆಯನ್ನು ಆಚಾರ್ಯನಿಗೆ ತಿಳಿಸಿದನು. ಆತನು “ನಾನು ಅದನ್ನೇ ಕುರಿತು ಯೋಚಿಸುತ್ತಿದ್ದೇನೆ. ಅದಕ್ಕೆ ಒಂದು ಅಶ್ವಮೇಧವನ್ನು ಮಾಡಬೇಕಾದೀತು” ಎಂದನು.

ಇನ್ನೊಂದು ಗಳಿಗೆಯಂದು, ತಮಗೆ ಲಭಿಸಿದ ಅನಿರೀಕ್ಷಿತವಾದ ಅದ್ಭುತ ವಿಜಯವನ್ನು ಕುರಿತು ಮಾತಾಡುತ್ತಿದ್ದು, ಸುರಾಚಾರ್ಯನೂ ಅಗ್ನಿವಾಯುಗಳೂ ಶಚಿಯನ್ನೂ ಇಂದ್ರನನ್ನೂ ಬೀಳ್ಕೊಂಡು ಹೊರಟರು.

ಅರಮನೆಯಿಂದ ಈಚೆಗೆ ಬಂದ ಮೇಲೆ ಆಚಾರ್ಯನು ಅಗ್ನಿವಾಯುಗಳನ್ನು ಕರೆದು ಗುಟ್ಟಾಗಿ, “ನಾವು ಇಂದ್ರಸಿಂಹಾಸನವನ್ನು ಏರುವುದಕ್ಕೆ ಯೋಗ್ಯತೆಯುಳ್ಳ ಇನ್ನೊಬ್ಬನನ್ನು ನೋಡಿರಬೇಕು. ಇಂದ್ರನು ಅಶ್ವಮೇಧವಾಗುವವರೆಗೂ ಸಿಂಹಾಸನವನ್ನು ಹತ್ತುವಂತಿಲ್ಲ. ನೋಡಿದರೆ ಸದ್ಯದಲ್ಲಿ ಅಶ್ವಮೇಧವಾಗುವಂತಿಲ್ಲ” ಎಂದನು.

ಅಗ್ನಿವಾಯುಗಳು ಪರಸ್ಪರ ಮುಖ ನೋಡಿಕೊಂಡರು. “ಸರಿ, ಪಾತಾಳ ಲೋಕವಾಯಿತು. ಇನ್ನು ಮಧ್ಯಮಲೋಕದವನೂ ಒಬ್ಬನು ಇಂದ್ರನಾಗಬೇಕೇನೋ! ಹಾಗೇನಾದರೂ ಆದರೆ, ಇನ್ನು ಯಾರು? ಆ ನಹುಷಚಕ್ರವರ್ತಿಯೇ ಆಗಬೇಕು ಎಂದರು.

ಆಚಾರ್ಯನು “ಹೌದು, ಆತನು ಧರ್ಮಪರ. ಆದರೂ ಆಗಬಹುದು. ಆದರೆ ಇಂದ್ರನನ್ನು ವರಿಸುವ ಕೆಲಸ ನಮ್ಮದಲ್ಲ. ದೇವ, ಋಷಿ, ಪಿತೃಗಳೆಲ್ಲ ಸೇರಿದ ಸಭೆಯಲ್ಲಾಗಬೇಕು. ಅಂತೂ ಆ ವಿಷಯ ಮನಸ್ಸಿನಲ್ಲಿರಲಿ” ಎಂದು ಒಬ್ಬರನ್ನೊಬ್ಬರು ಬೀಳ್ಕೊಂಡರು.

* * * *