ಮಹಾಕ್ಷತ್ರಿಯ/ಕಿಚ್ಚು ಏಳುತ್ತಿದೆ

ವಿಕಿಸೋರ್ಸ್ದಿಂದ

೧೧. ಕಿಚ್ಚು ಏಳುತ್ತಿದೆ[ಸಂಪಾದಿಸಿ]

ಪಾತಾಳಲೋಕದಲ್ಲಿ ಸಮರಸಿದ್ಧತೆಯು ನಡೆದಿದೆ. ದಾನವಕುಲವೆಲ್ಲ ಸಬಾಂಧವರಾಗಿ ಸಪರಿವಾರರಾಗಿ ಅಲ್ಲಿಗೆ ಬಂದಿದ್ದಾರೆ. ಪ್ರಕಟವಾಗಿ “ನಾವು ಸ್ವರ್ಗದ ಮೇಲೆ ದಾಳಿ ಮಾಡುವೆವು” ಎಂದು ಉದ್ಘೋಷಿಸುತ್ತಾರೆ. ಮುಚ್ಚು ಮರೆಯೇನೂ ಇಲ್ಲ. ಬಹುದಿನದಿಂದ ಕಾದಿದ್ದ ಅವಕಾಶವು ಇಂದು ದೊರಕಿದೆಯೆಂದು ಅವರಿಗೆಲ್ಲ ಪರಮಸಂತೋಷವಾಗಿದೆ. ಎಲ್ಲರ ಬಾಯಲ್ಲೂ ವೃತ್ರಾಸುರನ ಮಾತೇ! ಎಲ್ಲರೂ ಅವನನ್ನು ಹೊಗಳುವವರೆ! ಅವನೀಗ ಚಕ್ರವರ್ತಿ, ಸುರದ್ವೇಷಿಗಳೆಲ್ಲ ಅವನ ಹಿಂಬಾಲಿಗರು. ಅವನ ಸೇನೆಗೆ ಅಂತ್ಯವಿಲ್ಲ ಪಾರವಿಲ್ಲ. ಎಲ್ಲೆಲ್ಲಿಯೂ ಅವನ ಸೇನೆ.

ಪಾತಾಳಲೋಕದಲ್ಲಿರಲಿ, ಮಧ್ಯಮಲೋಕದಲ್ಲಿಯೂ ವೃತ್ರಾಸುರನ ಪ್ರಭಾವವು ತಲೆಹಾಕಿದೆ. ಆದರೆ ಚಕ್ರವರ್ತಿಯಾದ ಆಯುವಿನ ಪ್ರಭಾವದ ಮುಂದೆ ಅದು ಅಷ್ಟು ಪರಿಣಾಮಕಾರಿಯಾಗಿಲ್ಲ. ಹಾಗೆಂದು ಪರಿಣಾಮಕಾರಿಯಾಗದೆಯೂ ಇಲ್ಲ. ಜನರೆಲ್ಲ ಕಾಮೋಪಭೋಗಗಳಲ್ಲಿ ವಹಿಸಿರುವಷ್ಟು ಆಸಕ್ತಿಯನ್ನು ಇನ್ನು ಯಾವುದರಲ್ಲೂ ವಹಿಸಿಲ್ಲ. ಬಹುವಾಗಿ ಪ್ರೇಯೋ ಮಾರ್ಗದ ಕಡೆಗೆ ತಿರುಗಿದ್ದಾರೆ ಜನವೆಲ್ಲ ಎಂದರೆ ಅತಿಶಯೋಕ್ತಿಯಲ್ಲ. ಚಕ್ರವರ್ತಿಯು “ಏನೋ ಆಗಿದೆ. ಇದು ನನ್ನ ತಪ್ಪೋ ? ನಾನೇನಾದರು ತಪ್ಪು ಮಾಡಿದ್ದೇನೋ ?” ಎಂದು ಒಮ್ಮೊಮ್ಮೆ ಸಂದೇಹ ಪಡುತ್ತಾನೆ. ಮತ್ತೆ “ಸತ್ತ್ವಗುಣವು ರಜೋಗುಣದ ಕಡೆಗೆ ತಿರುಗುತ್ತಿರುವಂತಿದೆ ಅದರಿಂದ ಹಾಗಾಗಿರಬೇಕು. ಯಾವಾಗಲೂ ಜಗತ್ತು ಹೀಗೆ ಅಧೋಮುಖ ಗತಿಯಾಗಿರುವುದೇ ಸ್ವಭಾವ. ಆದರೂ ನನ್ನ ಪ್ರಜೆಗಳು ಹೀಗಾಗಬಾರದು, ಅವರನ್ನು ಸನ್ಮಾರ್ಗದಲ್ಲಿ ಹೋಗುವಂತೆ ಮಾಡುವುದು ನನ್ನ ಧರ್ಮ” ಎಂದು ಹೊಸ ಹೊಸ ದಾನಗಳನ್ನು ಹೊಸ ಹೊಸ ವ್ರತಗಳನ್ನು ಅರಮನೆಯಲ್ಲಿ ಮಾಡುತ್ತಾ ಪ್ರಜಾಮುಖಂಡರಿಂದ ಮಾಡಿಸುತ್ತಾ ಧರ್ಮಾಭಿವೃದ್ಧಿಯ ಕಡೆಗೆ ಜನರ ಮನಸ್ಸು ತಿರುಗಿಸುತ್ತಾನೆ.

ಮಧ್ಯಮಲೋಕದಲ್ಲಿ ಜನರ ಮನಃಪ್ರವೃತ್ತಿಯು ಕಾಮೋಪಭೋಗಗಳ ಕಡೆಗೆ ತಿರುಗಿರುವುದನ್ನು ನೋಡಿ, ದೇವತೆಗಳು “ಇದು ಇಂದ್ರನು ಕೊಟ್ಟ ವರದ ಫಲ” ಎನ್ನುತ್ತಾರೆ. “ಬ್ರಹ್ಮಹತ್ಯೆಯನ್ನು ಮಧ್ಯಮಲೋಕದಲ್ಲಿ ಹಂಚಿದ ಫಲವಿದು” ಎಂದು ಯಾರೂ ಚಿಂತಿಸುವುದೂ ಇಲ್ಲ. ಅದೇ ತಾನೇ ಸ್ವಭಾವ ! ಕೆಟ್ಟುದು ಬಂದಾಗ ಇತರರಿಂದ ಬಂತು ಎಂದು ಬಯ್ಯುವುದು, ಒಳ್ಳೆಯದು ಆದಾಗ ಅದು ತನ್ನಿಂದ ಆಯಿತು, ತಾನುಮಾಡಿದ ಪ್ರಯತ್ನದ ಫಲ ಎನ್ನುವುದು. ಆದರೆ, ಒಳ್ಳೆಯದು ಯಾವುದು? ಕೆಟ್ಟುದು ಯಾವುದು ಎಂದು ಗೊತ್ತುಮಾಡಿರುವವರು ಯಾರು? ಅವರವರ ರಾಗದ್ವೇಷಗಳಿಂದ ಗೊತ್ತಾಗುವ ಸುಖದುಃಖಗಳಿಗೆ ಕಾರಣವಾದ ಒಳ್ಳೆಯದು ಕೆಟ್ಟುದು ಇವಕ್ಕೆ ನಿಯತ ಸ್ವರೂಪವುಂಟೇನು? ಕಾಲ ದೇಶವರ್ತಮಾನಗಳಿಂದ ಬದಲಾಯಿಸುವ ಈ ಒಳ್ಳೆಯದು ಕೆಟ್ಟುದು ಇವಕ್ಕೆ ಖಚಿತವಾದ ಸ್ವರೂಪವಿದೆ ಎಂದುಕೊಂಡಿದೆ ಲೋಕ. ಅವುಗಳನ್ನು ಅಳೆಯುವ ಕೋಲು ತನ್ನ ಮನಸ್ಸಿನಲ್ಲಿದೆ ಎಂಬುದನ್ನು ಕಾಣದು.

ಮಧ್ಯಲೋಕದಲ್ಲಿ ಧರ್ಮಕ್ಕಿಂತ ಅರ್ಥಕಾಮಗಳ ಮೇಲೆ ಜನಕ್ಕೆ ಅಭಿಮಾನವು ಹೆಚ್ಚುತ್ತಿರುವುದನ್ನು ನೋಡಿ ಪಾತಾಳವು ‘ಇದು ನಮ್ಮ ವೃತ್ರನ ಪ್ರಭಾವ’ ಎನ್ನುತ್ತಿದೆ. “ನೋಡಿ, ನಮ್ಮ ವೃತ್ರಾಸುರನ ಪ್ರಭಾವ ಮನುಷ್ಯ ಲೋಕವನ್ನೆಲ್ಲಾ ಆವರಿಸಿದೆ. ಗುರುಕುಲ ಬೇಕೆ ? ಜನಗಳ ಮನಸ್ಸು ಎತ್ತಕಡೆ ತಿರುಗಿದೆ ನೋಡಿ. ಎಲ್ಲರೂ ಅರ್ಥಕಾಮಗಳ ಕಡೆ ತಿರುಗಿದ್ದಾರೆ. ಯಾರಿಗಾದರೂ ಧರ್ಮ ಬೇಕಾಗಿದೆಯೇ ? ಅಥವಾ ಧರ್ಮಮಾಡುವವರೂ ಆಡಂಬರವಾಗಿ ನಿಜ ವೈಭವವನ್ನು ಪ್ರದರ್ಶಿಸಲು ಮಾಡುತ್ತಿರುವರೇ ಹೊರತು ಅಲ್ಲಿಂದಾಚೆಗೆ ಇನ್ನೇನಾದರೂ ಉದ್ದೇಶವಿದೆಯೇ ನೋಡಿ. ದೇವತೆಗಳ ಆಟ ಇನ್ನು ಸಾಗುವಂತಿಲ್ಲ ಅವರದೆಲ್ಲ ಮುಗಿಯುತ್ತ ಬಂತು. ಅಬ್ಬಾ ! ತಮ್ಮ ಕೈ ಮೇಲಾದಾಗ ಅವರು ಏನೇನು ಮಾಡಿಬಿಟ್ಟರು ? ಇರಲಿ, ಇನ್ನೆರಡು ದಿನ ಅವರನ್ನು ಮೂಲೆಗುಂಪು ಮಾಡಿ ಸ್ವರ್ಗದಲ್ಲಿಯೂ ನಮ್ಮ ಪ್ರಭುತ್ವವನ್ನು ಸ್ಥಾಪಿಸದಿದ್ದರೆ ನಾವೇಕೆ ಆದೇವು?” ಎಂದು ದಾನವೇಂದ್ರರು ಅತೀವ ಸಮಾಧಾನದಿಂದ ಮೀಸೆ ತಿರುವುತ್ತಾರೆ.

ವೃತ್ರಾಸುರನು ಹೆಚ್ಚುತ್ತಿರುವ ತನ್ನ ಪ್ರಭಾವಪ್ರತಾಪಪೌರುಷಗಳನ್ನು ನೋಡಿಕೊಳ್ಳುತ್ತ ತನ್ನ ಅನುಯಾಯಿಗಳಾದ ದಾನವೇಂದ್ರರಿಗೆಲ್ಲ “ಅವಸರವಿಲ್ಲ ಇಂದ್ರನನ್ನು ಕಳಿತ ಬಾಳೆಯ ಹಣ್ಣನ್ನು ಕಿವುಚಿಹಾಕುವ ಹಾಗೆ ಕಿವುಚಿ ಬಿಡುತ್ತೇನೆ. ಬೆಕ್ಕು ಇಲಿಯ ಮರಿಯನ್ನು ನುಂಗುವ ಹಾಗೆ ನುಂಗಿಬಿಡುತ್ತೇನೆ. ಇನ್ನೇನು ಕೆಲವು ದಿನಗಳು ತಡೆಯಿರಿ ! ಕೊಂಚ ತಡೆದುಕೊಳ್ಳಿ” ಎನ್ನುತ್ತಾನೆ. ದಾನವೇಂದ್ರರು ಹಿಂದೆ ತಮಗೆ ದೇವತೆಗಳಿಂದ ಆದ ಅಪರಾಧಗಳನ್ನೆಲ್ಲಾ ಹೇಳಿಕೊಳ್ಳುತ್ತಾರೆ. “ಮಹಾಸ್ವಾಮಿ ! ಇಂತಹದೊಂದು ಕಾಲ ಬಂದೀತೆ ಎಂದು ಕಾದಿದ್ದೆವು. ಈ ದೇವತೆಗಳಿಗೆ ಈಗ ನಡುಮುರಿಯುವಂತಹ ಏಟು ಹೊಡೆದು, ದೇವತೆಗಳು ಎಂದರೆ ದಾನವೇಂದ್ರರ ಮನೆಯ ಪಶುಗಳು ಎನ್ನುವಂತೆ ಮಾಡಬೇಕು” ಎಂದು ಮುಂತಾಗಿ ತಮ್ಮ ಹೊಟ್ಟೆಯಲ್ಲಿರುವ ದ್ವೇಷವನ್ನೆಲ್ಲ ತೋಡಿಕೊಳ್ಳುತ್ತಾರೆ. ವೃತ್ರಾಸುರನು ನಗುತ್ತ ಆಗಲಿ ಏನೇನು ಮಾಡುವಿರೋ ನೋಡೋಣ. ನನಗೆ ಅವರ ಶಕ್ತಿಬಲಪರಾಕ್ರಮಗಳು ಎಷ್ಟು ಎನ್ನುವ ಯೊಚನೆಯೂ ಬೇಕಾಗಿಲ್ಲ. ಪರ್ವತವು ಎದ್ದು ಓಡಾಡುವುದು ಎನ್ನಿ, ದಾರಿಯಲ್ಲಿರುವ ಪಟ್ಟಣಗಳಲ್ಲಿ ಎಂತಹ ದೊಡ್ಡ ದೊಡ್ಡ ಮನೆಗಳು ಇವೆ ಎಂದು ಯೊಚಿಸುವುದೇನು ? ಹಾಗೆ ಎನ್ನಿ ನಾನು ಒಂದು ಸಮಯವನ್ನು ಕಾಯುತ್ತಿದ್ದೇನೆ. ಈಗ ನಾನು ಐರಾವತದ ಎರಡರಷ್ಟು ಬಲವಾಗಿದ್ದೇನೆ. ಇದು ಇನ್ನೂ ಐದು ಪಟ್ಟು ಬೆಳೆಯಬೇಕು. ಅದಕ್ಕೇನು, ಅಬ್ಬಬ್ಬಾ ಎಂದರೆ ಒಂದು ವರ್ಷವಾದೀತೆ? ಒಂದೇ ಏಟು ಬರಿಯ ಕೈಯಲ್ಲಿ ಹೊಡೆದರೆ, ಐರಾವತವೂ ಅದನ್ನೇರಿರುವ ಇಂದ್ರನೂ ಹತ್ತು ಸಲ ಉರುಳಿ ಬೀಳಬೇಕು. ಹಾಗೆ ನಾನಾಗಬೇಕು. ಈ ಅಗ್ನಿ, ಯಮ, ವರುಣ ಮೊದಲಾದವರೆಲ್ಲ ನನ್ನನ್ನು ಕಂಡರೆ ಓಡಬೇಕು, ಹಾಗೆ ಮಾಡಬೇಕು. ಕಾದಾಡಿ ಗೆಲ್ಲುವುದು ಏನು ಮಹಾ !” ಎನ್ನುತ್ತಾನೆ.

ವೃತ್ರನು ಅವನು ಹೇಳಿದಂತೆಯೇ ಮಾಡಬಲ್ಲನೆಂಬುದಕ್ಕೆ ಅವನ ಆಕಾರವೇ ಸಾಕ್ಷಿ. ಈಗಾಗಲೇ ಒಂದು ಆನೆಯಷ್ಟು ಇದ್ದಾನೆ. ಅವನು ದಿನವೂ ಬೆಳೆಯುತ್ತಿರುವುದು ಸೊಂಪಾಗಿ ಬೆಳೆಯುವ ಗಿಡದ ಬೆಳವಣಿಗೆಯಂತೆ ಬರಿಯ ಕಣ್ಣಿಗೇ ಕಾಣಿಸುತ್ತಿದೆ. ಅವನ ತೋಳುಗಳು ಆನೆಗಳ ಕಾಲುಗಳಂತೆ ಇವೆ. ತಲೆಯು ಪರ್ವತದ ಗುಂಡು ಬಂಡೆಯಂತೆ ಇದೆ. ಅವನು ನಡೆಯುತ್ತಿದ್ದರೆ ಸಾಮಾನ್ಯ ಭೂಮಿಯು ಹಳ್ಳ ಬಿದ್ದುಹೋಗುತ್ತದೆ. ಈಗ ಅವನು ನಡೆದಾಡುವ ಕಡೆಗೆ ದಾನವರು ಬಂಡೆಗಳನ್ನೂ ಕಲ್ಲುಗಳನ್ನೂ ಹಾಕಿ ಭದ್ರವಾದ ರಾಜವೀಧಿಯನ್ನು ಮಾಡಿದ್ದಾರೆ. ದಿನವೊಂದಕ್ಕೆ ನೂರು ಜನ ರಾಕ್ಷಸರಿಗೆ ಆಗುವ ಊಟ ಅವನಿಗೊಬ್ಬನಿಗೇ ಬೇಕು. ಅವನು ಮಲಗಲು ರತ್ನಖಚಿತವಾದ ಮಂಚಗಳು ತಡೆಯದೆ, ಅವನಿಗೆಂದೇ ವಿಶೇಷವಾಗಿ ಮಂಚವನ್ನೂ ಹಾಗೆಯೇ ಕೂರಲು ವಿಶೇಷವಾದ ಆಸನವನ್ನೂ ದಾನವಶಿಲ್ಪಿಯು ರಚಿಸುತ್ತಿದ್ದಾನೆ.

ದಾನವಲೋಕದಲ್ಲಿ ಎಲ್ಲರಿಗಿಂತ ಸಂತೋಷಪಡುವವನೆಂದರೆ ಶುಕ್ರಾಚಾರ್ಯ. ಆತನು ದಿನದಿನವೂ ಬಂದು ವೃತ್ರಾಸುರನಿಗೆ ‘ದೇವತೆಗಳಿಗಿಂತ ಹೆಚ್ಚಿನ ವೈಭವದಿಂದ ಬಾಳು. ಅತೀಂದ್ರನಾಗು' ಎಂದು ಹರಕೆ ಹೊತ್ತು ಆಶೀರ್ವಾದ ಮಾಡುತ್ತಾನೆ. ಆತನಿಗೆ ಗೊತ್ತು “ಬ್ರಹ್ಮನಿಂದಲೂ ದಿಗಿಲಿಲ್ಲ ಆದರೆ, ಆ ಮಹಾವಿಷ್ಣು ಆತನು ಏನು ಉಪಾಯಮಾಡುವನೋ ? ಆತನು ಏನುಮಾಡಿ ಈ ವೃತ್ರನನ್ನು ಉರುಳಿಸುವನೋ? ಆತನ ದಿಗಿಲು ತಪ್ಪಿದರೆ, ಈ ಕಲ್ಪದ ಕೊನೆಯವರೆಗೂ ಇವನೇ ಇಂದ್ರನಾಗಿರುವ ಹಾಗೆ ಮಾಡಿಬಿಡಬಹುದು.’ ಎಂದು ಯೋಚಿಸುತ್ತಾನೆ ಹಾಗೆಯೇ “ಮೊದಲು ಇಂದ್ರಪದವಿಯನ್ನು ಪಡೆದು ಆಮೇಲೆ ಕಾಪಾಡಿಕೊಳ್ಳುವ ಯೋಚನೆ ಮಾಡೋಣ. ಮೊದಲು ಯೋಗ, ಆಮೇಲೆ ಕ್ಷೇಮ” ಎಂದು ಸುಮ್ಮನಾಗುತ್ತಾನೆ. ಆ ಪಾತಾಳದಲ್ಲಿರುವ ನಿವಾಸಿಗಳಿಗೆಲ್ಲ ವೃತ್ರಾಸುರನನ್ನು ದೇವತೆಗಳ ಮೇಲೆ ಯುದ್ಧಕ್ಕೆ ತ್ವರೆಗೊಳಿಸುತ್ತಾರೆ. ಆದರೆ ಶುಕ್ರಾಚಾರ್ಯನು ಮಾತ್ರ “ತಡೆಯಬೇಕು. ವೃತ್ರೇಂದ್ರನು ಹೇಳುವುದು ಸರಿ, ಇನ್ನೂ ಕಾಲಬಂದಿಲ್ಲ” ಎಂದು ತಡೆಯುತ್ತಿದ್ದಾನೆ.

* * * *