ಮಾಕಳಿ ದುರ್ಗ

ವಿಕಿಸೋರ್ಸ್ ಇಂದ
Jump to navigation Jump to search
ಮಾಕಳಿ ದುರ್ಗ ಬೆಂಗಳೂರಿನ ಉತ್ತರ ದಿಕ್ಕಿನಲ್ಲಿ ೬೦ ಕಿ ಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ ೪೪೬೦ ಅಡಿ ಎತ್ತರದ ಬೆಟ್ಟದ ಮೇಲಿದೆ. ಬೆಟ್ಟದ ಬುಡದಿಂದ ಸುಮಾರು ೧೧೧೭ ಅಡಿ ಎತ್ತರದಲ್ಲಿ ಎರಡು ಹಂತದ ಕೋಟೆಯೊಂದನ್ನು ಕಟ್ಟಲಾಗಿದೆ. ಕೋಟೆಯು ಅಂಡಾಕಾರದಲ್ಲಿದ್ದು ಒಂದು ಕಿ ಮೀ ಸುತ್ತಳತೆ ಹೊಂದಿದೆ. ಇಲ್ಲಿ ಮದ್ದಿನಮನೆ, ಉಗ್ರಾಣ ಹಾಗು ಹಲವು ಕೋಣೆಗಳನ್ನು ಕಟ್ಟಲಾಗಿದೆ. ಇಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಿವ, ಮಾರ್ಕಂಡೇಯನ ದೇವಸ್ಥಾನಗಳಿವೆ. ಮಾರ್ಕಂಡೇಯ ಋಷಿಗಳು ಇಲ್ಲಿ ತಪಸ್ಸು ಮಾಡಿದ್ದರೆಂದು ನಂಬಲಾಗುತ್ತದೆ. ಪ್ರಾರಂಭದಲ್ಲಿ ವಿಜಯನಗರದ ಅರಸರು ತಮ್ಮ ಸೈನ್ಯ ತರಬೇತಿಗಾಗಿ ಈ ಸ್ಥಳವನ್ನು ಉಪಯೋಗಿಸುತ್ತಿದ್ದರೆಂದು ತಿಳಿದು ಬರುತ್ತದೆ. ಆಗಲೇ ಮೊದಲ ಹಂತದ ಕೋಟೆಯನ್ನು ಕಟ್ಟಲಾಯಿತು. ಈ ಕೆಲಸವನ್ನು ಆಗ ವಿಜಯನಗರದ ಅರಸರ ಮಾಂಡಲೀಕರಾಗಿದ್ದ ಆವತಿ ನಾಡಪ್ರಭುಗಳು ಮಾಡಿ ಮುಗಿಸಿದರು. ನಂತರ ಕಾಲಾನುಕ್ರಮದಲ್ಲಿ ಇದನ್ನು ಮರಾಠರು ನಂತರ ಅವರಿಂದ ಯಲಹಂಕ ನಾಡಪ್ರಭುಗಳು ಕೊನೆಯದಾಗಿ ಟಿಪ್ಪು ಸುಲ್ತಾನ್ ನು ವಶಪಡಿಸಿಕೊಂಡನು. ಆಗ ಅವನೇ ಕೋಟೆಯ ಎರಡನೇ ಹಂತದ ಗೋಡೆಯನ್ನು ಎತ್ತರಿಸಿದನು. ಈ ಎರಡನೇ ಹಂತದ ಗೋಡೆ ಮೊದಲ ಹಂತದ ಗೋಡೆಗಿಂತ ಚಿಕ್ಕ-ಚಿಕ್ಕ ಕಲ್ಲುಗಳಿಂದ ಕಟ್ಟಲ್ಪಟ್ಟಿದ್ದನ್ನು ನಿಚ್ಚಳವಾಗಿ ಗುರುತಿಸಬಹುದು. ಅಲ್ಲಿ ಅವನು ತನ್ನ ನೆಚ್ಚಿನ ಬಂಟ ಲತೀಫಬೇಗ್ ಎಂಬುವವನನ್ನು ಉಸ್ತುವಾರಿಗೆ ನೇಮಿಸಿಟ್ಟ. ಮರಾಠರ ಕೈವಶವಾಗಿದ್ದ ಕಾಲದಲ್ಲಿ ಅವರು ಮಾಕಳಿದುರ್ಗದ ಜೊತೆಗೆ ಮಧುಗಿರಿ, ರಾಯದುರ್ಗ, ಶಿರಾ, ಹೊಸಕೋಟೆ ಹಾಗು ದೊಡ್ಡ ಬಳ್ಳಾಪುರ ಕೋಟೆಗಳನ್ನು ನೋಡಿಕೊಳ್ಳಲು ಗುತ್ತಿಯ ಮುರಾರಿರಾಯ ಎಂಬುವವನನ್ನು ನೇಮಿಸಿದ್ದರು. ಕಟ್ಟಕಡೆಯದಾಗಿ ೧೭೯೦ರಲ್ಲಿ ಟಿಪ್ಪುವಿನಿಂದ ಬ್ರಟಿಷರು ದುರ್ಗವನ್ನು ಗೆದ್ದುಕೊಂಡರು. 

ಬ್ರಿಟಿಷರಿಂದ ಟಿಪ್ಪುವಿನ ಪತನವಾದ ನಂತರ ಮಾಕಳಿ ದುರ್ಗ ಅನಾಥವಾಯ್ತು. ಸಾಥು-ಸನ್ಯಾಸಿಗಳ, ಸಿದ್ಧರ ನೆಲೆವೀಡಾಯ್ತು. ಬಿಟಿಷ್ ಸರ್ವೆಯರ್ ನೊಬ್ಬ ದಾಖಲಿಸಿರುವಂತೆ ಇಲ್ಲಿನ ಜಂಗಮರಿಗೆ ಮಲ್ಲೇಶ್ವರ ಸ್ವಾಮಿಗಳೆಂದು ಕರೆಯಲಾಗುತ್ತಿತ್ತಂತೆ. ಅವರು ಆಗಾಗ ಬೆಟ್ಟದಿಂದ ಕೆಳಗೆ ಇಳಿದು ಬಂದು ಕೆಳ ಊರುಗಳಲ್ಲಿ ಭಕ್ಷೆ ಸ್ವೀಕರಿಸಿ ಅಲ್ಲಿನ ಜನಕ್ಕೆ ಔಷಧಿ ಕೊಟ್ಟು ಮತ್ತೆ ಬೆಟ್ಟದ ಮೇಲೆ ಹೋಗಿ ತಂಗುತ್ತಿದ್ದರಂತೆ. ಇದೊಂದು ವಾರಾಂತ್ಯದ ಪ್ರೇಕ್ಷಣೀಯ ಸ್ಥಳವಾಗಿದ್ದು ಬೆಟ್ಟ ಗುಡ್ಡ ಏರಬೇಕೆನ್ನುವ ಸಾಹಸಿಗರನ್ನು ಕೈ ಬೀಸಿ ಕರೆಯುವ ತಾಣವೂ ಹೌದು.