ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶನರೇಂದ್ರಬಾಬು, ಎಂ

ವಿಕಿಸೋರ್ಸ್ದಿಂದ

ನರೇಂದ್ರಬಾಬು, ಎಂ (1920-1999). ಚಿತ್ರ ಸಾಹಿತಿ ಎಂ.ನರೇಂದ್ರಬಾಬು 1926ರಲ್ಲಿ ಮೈಸೂರಿನಲ್ಲಿ ಜನಿಸಿದರು. ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಮಹಾರಾಜ ಕಾಲೇಜಿನಲ್ಲಿ ಪದವಿ ಗಳಿಸಿದರು.ವಿದ್ಯಾರ್ಥಿ ದೆಸೆಯುಲ್ಲಿಯೇ ಸಾಹಿತ್ಯದತ್ತ ಒಲವು ಬೆಳೆಸಿಕೊಂಡು, ಇಂಟರ್‍ಮಿಡಿಯೆಟ್‍ನಲ್ಲಿ ಚಿರದುಃಖಿ ಕಥೆ ಬರೆದರು. ಮೈಸೂರು ವಿಶ್ವವಿದ್ಯಾಲಯ ಇವರಿಗೆ ಚಿನ್ನದ ಪದಕ ನೀಡಿ ಗೌರವಿಸಿತು. ಪ್ರಬುದ್ಧಕರ್ನಾಟಕ ಪತ್ರಿಕೆಯಲ್ಲಿ ಹಲವಾರು ಲೇಖನಗಳು ಪ್ರಕಟಗೊಂಡವು. ವಿಸೀ, ಅನಕೃ, ತರಾಸು ಮುಂತಾದವರ ಒಡನಾಟದಿಂದ ಸಾಹಿತಿಯಾಗುವ ಅಭಿಲಾಷೆ ಮೂಡಿತು. ಭಾರತಿ (1949) ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಹಾಗೂ 13 ಹಾಡುಗಳನ್ನು ರಚಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ನರೇಂದ್ರಬಾಬು ಡಿ.ಶಂಕರಸಿಂಗ್ ಅವರ ಮಹಾತ್ಮ ಸಂಸ್ಥೆಯ ಮೂಲಕ ಹೊರ ಬಂದ ಬಹಳಷ್ಟು ಚಿತ್ರಗಳಿಗೆ ಸಾಹಿತ್ಯ ರಚಿಸಿದರು. ರಾಜಕುಮಾರ್ ಅಭಿನಯದ ಸರ್ವಜ್ಞಮೂರ್ತಿ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರೂ ಆದರು. ಸಂಧ್ಯಾರಾಗ, ಎಡಕಲ್ಲುಗುಡ್ಡದಮೇಲೆ, ಪ್ರೊಫೆಸರ್ ಹುಚ್ಚೂರಾಯ, ಭಾಗ್ಯಜ್ಯೋತಿ, ಅತ್ತೆಗೆ ತಕ್ಕ ಸೊಸೆ, ದೇವರದುಡ್ಡು ಮುಂತಾದ 80ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ರಚಿಸಿದ್ದಾರೆ. ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ (ಸರ್ವಜ್ಞಮೂರ್ತಿ), ಎಲ್ಲ ಸ್ವಾರಸ್ಯ ಇಲ್ಲೇ ಇದೆ (ಕಾಣದಕೈ), ಈ ಜೀವನ ಬೇವು ಬೆಲ್ಲ (ಮನಸಿದ್ದರೆಮಾರ್ಗ), ಜಾಣೆಯಾಗಿರು ನನ್ನ ಮಲ್ಲಿಗೆ (ಧರ್ಮದಾರಿತಪ್ಪಿತು) ಹೂವು ದೇವರ ಸೇವೆಗೆ ಮುಂತಾದ ಸತ್ವಪೂರ್ಣ ಗೀತೆಗಳನ್ನು ಇವರು ರಚಿಸಿದ್ದಾರೆ. ನಾಲ್ಕನೆಯಮನೆ, ಸ್ವಯಾರ್ಜಿತ, ಚಿತ್ರಬವಣೆ ಮುಂತಾದ ಕಾದಂಬರಿಗಳು ಹಾಗೂ ಹಲವು ಸಣ್ಣ ಕಥೆಗಳನ್ನು ರಚಿಸಿದ್ದಾರೆ. ನರೇಂದ್ರಬಾಬು 1999ರ ಅಕ್ಟೋಬರ್ 17ರಂದು ನಿಧನರಾದರು. (ಎ.ಎನ್.ಪ್ರಹ್ಲಾದ್‍ರಾವ್)