ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಜೀವಿಕರು

ವಿಕಿಸೋರ್ಸ್ ಇಂದ
Jump to navigation Jump to search

ಅಜೀವಿಕರು

 ಬುದ್ಧ ಮತ್ತು ಮಹಾವೀರರ ಕಾಲದಲ್ಲಿ (ಕ್ರಿ.ಪೂ. 6ನೆಯ ಶತಮಾನ) ಭಿಕ್ಷಾಟನೆಯಿಂದ ಜೀವಿಸುತ್ತಿದ್ದ ಒಂದು ಪಂಥದ ಅನುಯಾಯಿಗಳು. ಗೊಸಾಲ ಮಂಖಲಿ ಪುತ್ತ ಈ ಪಂಥದ ಸ್ಥಾಪಕ. ಅಜೀವವೆಂದರೆ ಜೀವನಕ್ರಮ, ಕರ್ಮದ ಶೃಂಖಲೆಯಿಂದ ಮುಕ್ತನಾಗುವವನೇ ಅಜೀವಿಕ, ಭಿಕ್ಷಾಟನೆಯೇ ಇವನ ಜೀವನವೃತ್ತಿ ಎಂದು ಗೊಸಾಲ ಹೇಳಿರುವನು. ಬೌದ್ಧಮತದ ಪ್ರಕಾರ ಭಿಕ್ಷುಗಳು ಅನುಸರಿಸಬೇಕಾದ 8ರಲ್ಲಿ ಸಮ್ಯಕ್-ಜೀವನ ಒಂದು ಮುಖ್ಯ ಮಾರ್ಗ. ಮಹಾವೀರನಿಗೆ ಗೊಸಾಲನ ಪರಿಚಯವಿತ್ತು. ಅಪ್ರಾಮಾಣಿಕನೆಂದು ತಿಳಿದ ಮೇಲೆ ಗೋಸಾಲನ ಸ್ನೇಹ ಬಿಟ್ಟನು. ಮತ್ತೆ ಇವರಿಬ್ಬರು ಕಕ್ಷಿ-ಪ್ರತಿಕಕ್ಷಿಗಳಾಗಿ ಸಂಧಿಸಿ ಹೋರಾಡಿದರು. ಕೊನೆಗೆ ತನ್ನ ಹೀನ ಕೃತ್ಯಗಳನ್ನು ಒಪ್ಪಿಕೊಂಡ ಗೋಸಾಲ ಮಹಾವೀರನ ಶಿಷ್ಯನಾದ. ಅಜೀವಿಕರಿಗೆ ದಶರಥ (ಅಶೋಕನ ಮೊಮ್ಮಗ) ಗುಹೆಗಳಲ್ಲಿ ಕೆಲವು ಆಶ್ರಮಗಳನ್ನು ಕೊಟ್ಟಿದ್ದನು.

 ಪುರುಷ ಪ್ರಯತ್ನದ ಮೇಲೆ ಯಾವುದೂ ಆಧಾರಗೊಂಡಿಲ್ಲ. ಮನುಷ್ಯರಲ್ಲಿ ಕಂಡುಬರುವ ವ್ಯತ್ಯಾಸಕ್ಕೆ, ಭ್ರಷ್ಟತೆಗೆ, ಪಾತಿತ್ಯಕ್ಕೆ ವಿಧಿ(ವಾತಾವರಣ, ಸ್ವಭಾವ) ಕಾರಣವೆಂದು ಈ ಪಂಥದ ತತ್ವ.     

(ಎಚ್.ಕೆ.)