ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಡ್ಡಗಟ್ಟು
ಅಡ್ಡಗಟ್ಟು
ಅಧಿಕ ನೀರಿನಾಳವನ್ನು ಪಡೆಯಲು ಹರಿಯುವ ನದಿಗಡ್ಡಲಾಗಿ ನಿರ್ಮಿಸುವ ಕೃತಕ ತಡೆಗೆ ಇಂಜಿನಿಯರಿಂಗ್‍ನಲ್ಲಿ ಈ ಹೆಸರಿದೆ (ಬ್ಯಾರೆಜ್). ಸಾಮಾನ್ಯವಾಗಿ ನೀರಿನ ಮಟ್ಟಕ್ಕಿಂತ ಎತ್ತರವಾಗಿರುವ ಈ ತಡೆಗಳಲ್ಲಿ ಹಲವು ಅಂಕಣಗಳಿರುತ್ತವೆ (ಸ್ಪ್ಯಾನ್). ಒಂದೊಂದು ಅಂಕಣವನ್ನೂ ದೊಡ್ಡ ದೊಡ್ಡ ಉಕ್ಕಿನ ಬಾಗಿಲುಗಳಿಂದ ಮುಚ್ಚಿ ಅಗತ್ಯಬಿದ್ದಾಗ ತೆರೆಯಲನುಕೂಲವಾಗುವಂತೆ ಮಾಡಿರುತ್ತಾರೆ. ಅಡ್ಡಗಟ್ಟಿನ ಮೇಲುಭಾಗದಲ್ಲಿ ಸಂಚಾರಕ್ಕನುಕೂಲವಾಗುವಂಥ ಸೇತುವೆ ಇರುತ್ತದೆ. ನದಿಯಲ್ಲಿ ಮಹಾಪ್ರವಾಹವುಂಟಾದರೂ ನೀರಿನ ಮಟ್ಟವನ್ನು ಅಂಕಣಬಾಗಿಲುಗಳ ಸಹಾಯದಿಂದ ನಿಯಂತ್ರಿಸಿ ನೀರು ಮೇಲೆ ಹರಿಯದಂತೆ ಮಾಡಬಹುದು. ಅಡ್ಡಗಟ್ಟುಗಳಿಂದ ನೀರಾವರಿ ವ್ಯವಸಾಯಕ್ಕೆ ಹೆಚ್ಚಿನ ಉಪಯೋಗವಾಗಿದೆ.
ಉತ್ತರಭಾರತದ ಸಿಂಧು ಪ್ರಾಂತದಲ್ಲಿ ಸುಕ್ಕೂರಿಗೆ 3 ಮೈ. ದೂರದಲ್ಲಿ ನಿರ್ಮಿಸಲಾದ (1927) ಇಂಥ ಒಂದು ಅಡ್ಡಗಟ್ಟು ಹಿಂದೆ ಭಾರತಕ್ಕೆ ಸೇರಿದ್ದು ಈಗ ಪಾಕಿಸ್ತಾನಕ್ಕೆ ಸೇರಿದೆ. ಇದು ಅತ್ಯಂತ ವ್ಯಾಪಕವಾದ ನೀರಾವರಿ ಯೋಜನೆಗಳಲ್ಲೊಂದಾಗಿದೆ. ಇದರಿಂದ ಏಳು ದೊಡ್ಡ ನೀರಾವರಿ ನಾಲೆಗಳು ಹೊರಟು 53 ಲಕ್ಷ ಎಕರೆಗಳಿಗೆ ನೀರನ್ನೊದಿಗಸಲಾಗಿದೆ. ಅಡ್ಡಗಟ್ಟಿನಲ್ಲಿ 60' ಅಗಲದ 36 ಅಂಕಣಗಳಿದ್ದು ಇವುಗಳ ನಡುವಣ ಕಲ್ಲುಗಾರೆಯ ಕಂಬಗಳು 10' ಅಗಲವಾಗಿವೆ. ಒಂದೊಂದು ಅಂಕಣವನ್ನು 46 ಟನ್‍ತೂಕದ 63 1/4 ಅಗಲ, 18 1/2 ಎತ್ತರದ ಉಕ್ಕಿನ ಬಾಗಿಲಿನಿಂದ ಮುಚ್ಚಲಾಗಿದೆ. ಒಂದೊಂದು ಬಾಗಿಲನ್ನೂ ಭದ್ರವಾದ ಕಾಂಕ್ರಿಟಿನ ಭಾರದಿಂದ ಸರಿತೂಗಿಸಿದ್ದಾರೆ. ಅಡ್ಡಗಟ್ಟಿನ ಮೇಲುಗಡೆ ತಳದಿಂದ 39' ಎತ್ತರದಲ್ಲಿ ಒಂದು ಮತ್ತು 62 1/2 ಎತ್ತರದಲ್ಲಿ ಒಂದು-ಹೀಗೆ ಎರಡು ಸಂಚಾರಾನುಕೂಲವಾದ ಸೇತುವೆಗಳಿವೆ. ಅಡ್ಡಗಟ್ಟಿನ ಒಟ್ಟು ಉದ್ದ ಒಂದು ಮೈ. ಗಿಂತ ಸ್ವಲ್ಪ ಹೆಚ್ಚಾಗಿದೆ. ಅದು ನದಿ ನೀರಿನ ಮಟ್ಟವನ್ನು ಎಂಥ ಮಹಾಪ್ರವಾಹದಲ್ಲಾದರೂ ಸಂಪೂರ್ಣವಾಗಿ ನಿಯಂತ್ರಣ ಮಾಡಬಲ್ಲುದು. (ಎಚ್.ಸಿ.ಕೆ.)