ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಥೆನ್ಸ್‌

ವಿಕಿಸೋರ್ಸ್ದಿಂದ
Jump to navigation Jump to search

ಅಥೆನ್ಸ್

ಮೆಡಿಟರೇನಿಯನ್ ಸಮುದ್ರದ ಈಶಾನ್ಯದ ತೀರದಲ್ಲಿರುವ ಗ್ರೀಸ್ ದೇಶದ ರಾಜಧಾನಿ. ಎರಡು ಸಾವಿರ ವರ್ಷಕ್ಕೂ ಹಿಂದಿನಿಂದ ಪ್ರಸಿದ್ಧಿ ಪಡೆದಿದ್ದು ಎಲ್ಲ ದೇಶಗಳ ವಿದ್ವಾಂಸರ ಕಣ್ಮನಗಳನ್ನು ಸೆಳೆದಿದೆ. ಇದರ ಹೆಸರು ಕೇಳದ ವಿದ್ವಾಂಸರು ಪ್ರಪಂಚದಲ್ಲೆಲ್ಲೂ ಇಲ್ಲವೆನ್ನಬಹುದು. ಕಾರಣ, ಐರೋಪ್ಯ ಜನಾಂಗಗಳ ನಾಗರಿಕತೆ ಬೆಳೆದದ್ದು ಇಲ್ಲಿಂದ. ಪ್ರಪಂಚದ ಸಂಸ್ಕøತಿಯ ಬೆಳೆವಣಿಗೆಗೆ ಈ ನಗರ ನೀಡಿರುವ ಕಾಣಿಕೆ ಅಪಾರ.

ನಗರದ ಉತ್ತರಕ್ಕೆ, ಈಶಾನ್ಯಕ್ಕೆ ಮತ್ತು ಆಗ್ನೇಯಕ್ಕೆ ಮ್ಯೂಸೆಸ್, ನಿಂಫ್ ಮತ್ತು ನಿಕ್ಸ್ ಪರ್ವತಶ್ರೇಣಿಗಳಿವೆ. ಇವುಗಳಿಗೆ ಏರೋಪೇಗಸ್ ವಿಭಾಗವೆಂದು ಹೆಸರು. ಇವುಗಳ ಮಧ್ಯದ 900' ಎತ್ತರವುಳ್ಳ ಪರ್ವತಶ್ರೇಣಿಗಳ ಬಯಲೇ ಪ್ರಸಿದ್ಧ ಅಟಿಕ ಮೈದಾನ. ಇದರ ಪಶ್ಚಿಮಭಾಗದಲ್ಲಿ ಸೀಫೈಸಸ್ ಮತ್ತು ಪೂರ್ವಭಾಗದಲ್ಲಿ ಇಲಿಸಾಸ್ ನದಿಗಳಿವೆ. ನಾಲ್ಕು ಮೈಲಿ ದೂರವಿರುವ ಸಮುದ್ರದವರೆಗೂ ಈ ನಗರ ಬೆಳೆಯಿತು. ಅಕ್ರೋಪೋಲಿಸ್ ಎಂಬುದು ಪ್ರಾಚೀನ ಅಥೆನ್ಸ್ ಪಟ್ಟಣ. ನಿಯೋಪೋಲಿಸ್ ಎಂಬ ಹೊಸನಗರ ಅಕ್ರೋಪೋಲೀಸ್‍ಗೆ ಪಶ್ಚಿಮದಲ್ಲಿದೆ. ಈ ಬೃಹತ್ ಅಥೆನ್ಸ್ ನಗರದ ಜನಸಂಖ್ಯೆ ಈಗ ಸುಮಾರು ಹನ್ನೊಂದು ಲಕ್ಷ. ಗ್ರೀಸ್ ದೇಶದ ಕೈಗಾರಿಕೋತ್ಪನ್ನದ ಅರ್ಧದಷ್ಟು ಅಥೆನ್ಸ್ ಬಯಲಿನಲ್ಲಿ ಕೇಂದ್ರೀಕೃತವಾಗಿದೆ. ಮುಖ್ಯ ಉತ್ಪನ್ನಗಳು- ರೇಷ್ಮೆ, ಉಣ್ಣೆ, ಹತ್ತಿಬಟ್ಟೆ, ಯಂತ್ರಸಾಧನಗಳು, ಮತ್ತಿತರ ಜೀವನ ಸಾಮಗ್ರಿಗಳು. (ಎ.ಕೆ.)

ಆದರೆ ಅಥೆನ್ಸ್ ನಗರದ ಖ್ಯಾತಿ ಉಳಿದಿರುವುದು ಅಲ್ಲಿ ಗ್ರೀಕರು ಬೆಳೆಸಿ ಪೋಷಿಸಿ ಪ್ರಪಂಚಕ್ಕೆ ನೀಡಿರುವ ಸಂಸ್ಕøತಿಯಿಂದ. ಒಂದು ದೊಡ್ಡ ವಿಶ್ವವಿದ್ಯಾನಿಲಯ (ಸ್ಥಾಪನೆ-1837), ವಿವಿಧ ಕಲಾಸಂಘ, ವೈe್ಞÁನಿಕ ವಿದ್ಯಾಶಾಲೆ, ಪ್ರಾಚ್ಯಶೋಧನ ಸಂಸ್ಥೆಗಳು, ವಿವಿಧ ವಸ್ತುಸಂಗ್ರಹಾಲಯಗಳು ಮತ್ತು ಅನೇಕ ಗ್ರಂಥಾಲಯಗಳು ಇಲ್ಲಿವೆ. ಗ್ರೀಕ್ ಕ್ರೈಸ್ತ ಧರ್ಮಾಧಿಕಾರಿಯ ಆಲೋಚನಾಸಭೆಯೂ ಇಲ್ಲಿದೆ. ಪ್ರಾಚೀನ ಗ್ರೀಕ್ ಸಂಸ್ಕøತಿಗೆ ಅದರ ಚರಿತ್ರೆಗೆ ಸಂಬಂಧಪಟ್ಟ ಸ್ಮಾರಕಗಳು, ಅವಶೇಷಗಳು, ಇಂದಿಗೂ ನಾನಾ ದೇಶಗಳ ಪ್ರವಾಸಿಗರನ್ನು ಇಲ್ಲಿಗೆ ಸೆಳೆಯುತ್ತಿವೆ. ಬಹುಮಟ್ಟಿಗೆ, ಗ್ರೀಕ್ ಸಂಸ್ಕøತಿ ಎಂದರೆ ಅಥೆನ್ಸ್ ಎಂದೇ ಹೇಳಬಹುದು.

ಅಥೆನ್ಸ್ ನಗರ ಸ್ಥಾಪಿತವಾದದ್ದು ಕ್ರಿ.ಪೂ. ಹದಿನೈದನೆಯ ಶತಮಾನದಲ್ಲಿರಬಹುದು ಎಂದು ಕೆಲವರ ಅಭಿಪ್ರಾಯ. ಆದರೆ ಅದರ ಭವ್ಯ ಭವಿಷ್ಯತ್ತಿನ ಮುನ್ಸೂಚನೆ ಕಂಡುಬಂದದ್ದು ಕ್ರಿ.ಪೂ.6ನೆಯ ಶತಮಾನದ ಕಾಲಕ್ಕೆ. ಅದಕ್ಕೆ ಮೊದಲು ನಿರಂಕುಶಾಧಿಪತಿಗಳು ರಾಜ್ಯವಾಳುತ್ತಿದ್ದರು. ಕ್ರಮೇಣ ಅಧಿಕಾರ ಶ್ರೀಮಂತವರ್ಗದವರ ಹತೋಟಿಗೆ ಬಂದಿತು. 6ನೆಯ ಶತಮಾನದಲ್ಲಿ ಸರ್ವಾಧಿಕಾರಿಯಾಗಿ ಬಂದ ಸೋಲನ್ ಸಾಮಾನ್ಯ ಜನರ ಪರಿಸ್ಥಿತಿಯನ್ನು ಉತ್ತಮಗೊಳಿಸಬೇಕೆಂಬ ಉದ್ದೇಶದಿಂದ ಸುಧಾರಣೆಗಳನ್ನು ಜಾರಿಗೆ ತಂದವರಲ್ಲಿ ಮೊದಲಿಗ. ರೈತರೇ ರಾಷ್ಟ್ರದ ಜೀವನಾಡಿ ಎಂಬುದನ್ನರಿತ ಅವನು, ಅವರು ಶ್ರೀಮಂತರಿಂದ ಪಡೆದಿದ್ದ ಸಾಲಗಳನ್ನೆಲ್ಲ ವಜಾ ಮಾಡಿದ, ಸಾಲಕ್ಕಾಗಿ ರೈತ ತನ್ನ ಹೆಂಡತಿ ಮಕ್ಕಳನ್ನು ಮಾರುವ ಪದ್ಧತಿಯನ್ನು ನಿಲ್ಲಿಸಿದ. ಇದರಿಂದ, ಶ್ರೀಮಂತರ ಹಿಡಿತಕ್ಕೆ ಸಿಕ್ಕಿ ಅವರ ದಾಸರಾಗಿ ಹತಾಶರಾಗಿದ್ದ ರೈತರಲ್ಲಿ ಹೊಸ ಭರವಸೆ ಮೂಡಿತು. ಜೀವನದಲ್ಲಿ ಅವರಿಗೆ ಹೊಸ ಉತ್ಸಾಹ ಬಂದಿತು. ಆಲಿವ್ ಗಿಡ ಬೆಳೆಯುವುದಕ್ಕೆ ಅನುಕೂಲತೆ ಹೊಂದಿದ್ದ ಅಟಿಕ ಬಯಲಿನಲ್ಲಿ ಅದನ್ನು ಬೆಳೆಸಲು ರೈತರಿಗೆ ಪ್ರೋತ್ಸಾಹ ನೀಡಿದ್ದರಿಂದ ಅದರ ಬೆಳೆ ಹೆಚ್ಚಿತು. ಆಲಿವ್ ಎಣ್ಣೆಯನ್ನು ಹೊರದೇಶಗಳಿಗೆ ಮಾರಿ ಅದಕ್ಕೆ ಬದಲಾಗಿ ಗೋದಿ ಮುಂತಾದ ಆಹಾರಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಅನುಕೂಲವಾಯಿತು. ಕೆಳವರ್ಗದ ಜನರ ನೆಮ್ಮದಿಗೆ ಪ್ರತಿಕೂಲವಾಗಿದ್ದ ಕಾಯಿದೆಗಳು ತೊಡೆದು ಹಾಕಲ್ಪಟ್ಟವು. ನೆಮ್ಮದಿಯ ಪರಿಣಾಮವಾಗಿ, ಹೊರದೇಶಗಳಿಂದ ಜನರು ಅಥೆನ್ಸಿಗೆ ಬಂದು ನೆಲಸತೊಡಗಿದರು. ಹೊರದೇಶಗಳೊಡನೆ ವ್ಯಾಪಾರ ಬೆಳೆಯಿತು. ಜನರು ಕುಶಲಕಲೆಗಳ ಕಡೆಗೆ ಗಮನ ಕೊಟ್ಟರು. ಕುಶಲ ವಿದ್ಯೆಗಳಾಗಲಿ ಲಲಿತ ಕಲೆಗಳಾಗಲೆ ಒಂದು ಜನಾಂಗದಲ್ಲಿ ಬೆಳೆಯಬೇಕಾದರೆ, ಅವರಿಗೆ ವ್ಯಕ್ತಿಸ್ವಾತಂತ್ರ್ಯವಿರಬೇಕು; ಆ ವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟು ಐದನೆಯ ಶತಮಾನದಲ್ಲಿ ಅಥೆನ್ಸ್ ನಾಗರಿಕರು ಬೆಳೆಸಿದ ವಿಸ್ಮಯಕರವಾದ ಕಲಾಪ್ರೌಢಿಮೆಗೆ ಸೋಲನ್ ಸ್ಫೂರ್ತಿಯನ್ನಿತ್ತ.

ಸೋಲನ್ನನ ತರುವಾಯ ಬಂದ ಪಿಸಿಸ್ಟ್ರಾಟಸ್ ಮತ್ತು ಅವನ ಮಕ್ಕಳು ಹಿಪಿಯಾಸ್ ಮತ್ತು ಹಿಪಾರ್ಕಸ್ಸರ ಕಾಲದಲ್ಲೂ ಅಥೆನ್ಸಿನ ಪ್ರಗತಿ ಯಾವ ಅಡೆತಡೆಯೂ ಇಲ್ಲದೆ ಸಾಗಿತು. ನೀರಾವರಿ ಕೆಲಸಗಳು ನಡೆದವು; ಕೈಗಾರಿಕೆ, ವ್ಯಾಪಾರ, ರಸ್ತೆನಿರ್ಮಾಣ, ಹಬ್ಬಹರಿದಿನಗಳಲ್ಲಿ ಸಾರ್ವಜನಿಕ ಸಮಾರಂಭಗಳಿಗೆ ಪ್ರೋತ್ಸಾಹ, ಕಲೆಗಳಿಗೆ ಉತ್ತೇಜನ-ಇವೆಲ್ಲ ಜನರಿಗೆ ದೊರೆತು, ಅಥೆನ್ಸ್ ಗ್ರೀಕ್ ಸಂಸ್ಕøತಿಯ ಕೇಂದ್ರವಾಯಿತು. ಕ್ರಿ.ಪೂ.507ರಲ್ಲಿ ಕ್ಲೀಸ್ತನೀಸ್ ಅಧಿಕಾರ ವಹಿಸಿ, ಅಥೆನ್ಸಿನಲ್ಲಿ ಪ್ರಜಾಪ್ರಭುತ್ವವನ್ನೇರ್ಪಡಿಸಿದ. ಇವನ ಸುಧಾರಣೆಗೆ ಪೂರ್ತ ಯಶಸ್ವಿಯಾಗದಿದ್ದರೂ ಅದು ಮುಂದೆ ಪೆರಿಕ್ಲಿಸ್‍ನ ಕಾಲದ ಅಥೆನ್ಸ್‍ಗೆ ಮಾರ್ಗಸೂಚಿಯಾಯಿತು. ಆದರೆ ಈ ಮಧ್ಯೆ ಪರ್ಷಿಯಾದೊಡನೆ ಯುದ್ಧ ಮಾಡಬೇಕಾದ ಪ್ರಸಂಗವೊದಗಿ (ಕ್ರಿ.ಪೂ.500-449), ಅಥೆನ್ಸಿನ ಪರಿಸ್ಥಿತಿ ಬದಲಾಯಿಸಿತು. ಸ್ಪಾರ್ಟಾಗಿಂತ ಅಥೆನ್ಸ್ ಚಿಕ್ಕದು, ಯುದ್ಧದಲ್ಲೂ ಅದರಷ್ಟು ಬಲಯುತವಾಗಿರಲಿಲ್ಲ; ಆದರೂ ಕಾರ್ಯಪಟುತ್ವದಲ್ಲಿ, ದಕ್ಷತೆಯಲ್ಲಿ, ಅದಕ್ಕಿಂತ ಮೇಲು. ಈ ಯುದ್ಧದಲ್ಲಿ ಅಥೆನ್ಸಿನ ಮಿಲ್ಟಿಯಾಡಿಸ್, ಥೆಮಿಸ್ಟಾಕ್ಲಿಸ್, ಸೈಮನ್ ಮುಂತಾದ ಅನೇಕ ವೀರರ ಶೌರ್ಯ, ಕದನಕೌಶಲಗಳು ಅಥೆನ್ಸಿಗೆ ಕೀರ್ತಿತಂದುವು. ಮ್ಯಾರಥಾನ್, ಸೆಲ್ಯಾಮಿಸ್ ಮುಂತಾದ ಕದನಗಳಲ್ಲಿ ಅಥೆನ್ಸ್ ಗಳಿಸಿದ ವಿಜಯ ಪ್ರಖ್ಯಾತವಾದದ್ದು; ಆದರೆ ಈ ಕದನಗಳಿಂದ, ತನಗೆ ಬಲಿಷ್ಠ ನೌಕೆಯೊಂದಿಲ್ಲದ ಕೊರತೆಯನ್ನು ಅಥೆನ್ಸ್ ಮನಗಂಡಿತು; ಮತ್ತು ಅಂಥ ಅಂತ ನೌಕೆಯೊಂದನ್ನು ತ್ವರಿತವಾಗಿ ನಿರ್ಮಿಸಿತು. ಗ್ರೀಸ್ ಸಣ್ಣದೇಶ; ಅಂಥ ಚಿಕ್ಕ ದೇಶದಲ್ಲೂ ನಗರ ರಾಜ್ಯಗಳಿದ್ದವೇ ವಿನಾ ಇಡೀ ದೇಶ ಒಂದಾಗಿರಲಿಲ್ಲ. ಅಥೆನ್ಸ್ ಆಗ ಯುದ್ಧದಲ್ಲಿ ಅಪ್ರತಿಮ ಸಾಹಸ ಪ್ರದರ್ಶಿಸಿ, ಬಲವಾದ ನೌಕೆಯೊಂದನ್ನು ಪಡೆದುದರ ಪರಿಣಾಮವಾಗಿ ಕ್ರಿ.ಪೂ.478ರಲ್ಲಿ ಡೇಲಿಯನ್ ಒಕ್ಕೂಟವನ್ನು ಸ್ಥಾಪಿಸಲು ಸಾಧ್ಯವಾಯಿತು. ಆದರೆ, ಸದಾ ವೈಮನಸ್ಯ ಹೊಂದಿದ್ದ ನಗರ ರಾಜ್ಯಗಳು, ಸ್ಪಾರ್ಟಾದ ಹುರುಡು, ಇವುಗಳಿಂದ ಅಥೆನ್ಸ್ ಪರ್ಷಿಯಾದೊಂದಿಗೆ ಶಾಂತಿ ಒಪ್ಪಂದವನ್ನು ಕ್ರಿ.ಪೂ.449ರಲ್ಲೂ ಸ್ಪಾರ್ಟಾದೊಂದಿಗೆ ರಾಜಿಯನ್ನು ಕ್ರಿ.ಪೂ.445ರಲ್ಲೂ ಮಾಡಿಕೊಂಡಿತು.

ಈ ಪರಿಸ್ಥಿತಿಯಲ್ಲಿ ಪೆರಿಕ್ಲಿಸ್ ಆಡಳಿತಸೂತ್ರಗಳನ್ನು ತನ್ನ ಕೈಗೆ ತೆಗೆದುಕೊಂಡ. ಇವನ ಕಾಲದಲ್ಲೇ ಅಥೆನ್ಸ್ ಏಳಿಗೆಯ ಪರಮಾವಧಿಯನ್ನು ತಲುಪಿದ್ದು. ಇವನ ಕಾಲದಲ್ಲೇ ಸಾಕ್ರಟೀಸ್ ಅಥೆನ್ಸಿನ ಬೀದಿಗಳಲ್ಲಿ ಸಂಚರಿಸಿ ಸಂವಾದರೂಪದಲ್ಲಿ ಜನರಲ್ಲಿ e್ಞÁನಪ್ರಸಾರ ಮಾಡಿದ್ದು; ಈಸ್ಕಿಲಸ್ ತನ್ನ ಪ್ರಖ್ಯಾತ ರುದ್ರನಾಟಕಗಳನ್ನು ಬರೆದದ್ದು; ಸೊಫೊಕ್ಲಿಸ್, ಯೂರಿಪಿಡೀಸ್ ತಮ್ಮ ಉಜ್ವ್ವಲವಾದ ಅಸದೃಶವಾದ ಕೃತಿಗಳನ್ನು ರಚಿಸಿದ್ದು. ವಾಸ್ತುಶಿಲ್ಪ, ಮೂರ್ತಿಶಿಲ್ಪ, ವರ್ಣಚಿತ್ರಣ- ಎಲ್ಲ ಕಲೆಗಳಲ್ಲೂ ವಿಸ್ಮಯಕಾರಕವಾದ ಪ್ರಗತಿಯನ್ನು ಸಾಧಿಸಿದರು ಅಥೆನ್ಸಿನ ಪ್ರತಿಭಾವಂತರು. ಅನುಪಮವಾದ ಪಾರ್ಥೆನಾನ್ ನಿರ್ಮಿತವಾದದ್ದೂ ಈ ಕಾಲದಲ್ಲೇ.

ಪೆರಿಕ್ಲಿಸ್ ಜಾರಿಗೆ ತಂದ ಸುಧಾರಣೆಗಳು, ಅವನ ಕಾಲದಲ್ಲಾದ ಜನಪ್ರಗತಿ, ಇವಾವುದೂ ಬಹುಕಾಲ ಉಳಿಯಲಿಲ್ಲ. ಸ್ಪಾರ್ಟದೊಂದಿಗೆ ಇದ್ದ ವೈಮನಸ್ಯ ಬೆಳೆಯಿತು. ಕ್ರಿ.ಪೂ.431ರಲ್ಲಿ ಅವೆರಡು ರಾಜ್ಯಗಳ ನಡುವೆ ಪೆಲಪೊನೀಸಿಯನ್ ಯುದ್ಧ ಪ್ರಾರಂಭವಾಗಿ 404ರವರೆಗೂ ನಡೆಯಿತು. ಎರಡೂ ರಾಜ್ಯಗಳಿಗೂ ಅಪಾರ ನಷ್ಟವಾಯಿತು. ಎರಡೂ ಸೋತವು. ಒಕ್ಕೂಟಕ್ಕೆ ಸೇರಿದ್ದ ಮಿತ್ರ ರಾಜ್ಯಗಳು ಎಂದೋ ಅಥೆನ್ಸಿನ ಮೈತ್ರಿಯನ್ನು ತ್ಯಜಿಸಿದ್ದವು. ಕ್ರಿ.ಪೂ.338ರಲ್ಲಿ ಮ್ಯಾಸಿಡೋನಿಯಾದ ದೊರೆ ಫಿಲಿಪ್ಪನು ಗ್ರೀಸ್ ದೇಶವನ್ನು ಗೆದ್ದು ತನ್ನ ವಶಪಡಿಸಿಕೊಂಡ. ಅವನ ಮಗ ಅಲೆಗ್ಸಾಂಡರ್ ಗ್ರೀಸಿನ ಮೇಲಣ ಹತೋಟಿಯನ್ನು ಇನ್ನೂ ಬಲಪಡಿಸಿದ. ಅಥೆನ್ಸ್ ಒಂದು ಪ್ರಾಂತೀಯ ನಗರವಾಗಿ ಉಳಿಯಿತು.

ಈ ದುರ್ದಶೆಯ ಕಾಲದಲ್ಲೂ ಅಥೆನ್ಸಿನ ಸಾಂಸ್ಕøತಿಕ ಚಟುವಟಿಕೆಗಳು, ಸಾಧನೆಗಳು ಮುಂದುವರೆದವು. ಅರಿಸ್ಟೋಫೆನಿಸ್ ತನ್ನ ಹರ್ಷನಾಟಕಗಳಲ್ಲಿ ಆಗಿನ ಜನಜೀವನವನ್ನು ವಿಡಂಬನಾತ್ಮಕವಾಗಿ ಚಿತ್ರಿಸಿದ. ಪ್ಲೇಟೋ ತನ್ನ ಅಕೆಡಮಿಯಲ್ಲಿ ಜೀವನ ರಹಸ್ಯಗಳನ್ನು ಹೊರಗೆಡವಿದ; ಅವನ ಗುರು ಸಾಕ್ರಟೀಸ್, ಜನಸಾಮಾನ್ಯರಲ್ಲಿ e್ಞÁನಪ್ರಸಾರಮಾಡುತ್ತಲಿದ್ದ, ಪ್ಲೇಟೋವಿನ ಶಿಷ್ಯ ಅರಿಸ್ಟಾಟಲ್ e್ಞÁನಭಂಡಾರವನ್ನೇ ಸೂರೆಗೊಳ್ಳಲೆತ್ನಿಸಿದ.

ರೋಂ ಸಾಮ್ರಾಜ್ಯ ಸ್ಥಾಪಿತವಾದ ಮೇಲೆ ಅಥೆನ್ಸ್ ಆ ಸಾಮ್ರಾಜ್ಯಕ್ಕೆ ಸೇರಿ ಹೋಯಿತು. ಅಥೆನ್ಸಿನ ಸಂಸ್ಕøತಿ ಸಾಮ್ರಾಜ್ಯದ ನಾನಾಕಡೆ ಹರಡಿತು. ಕ್ರಿಸ್ತಶಕ ಐದನೆಯ ಶತಮಾನದ ಅನಂತರ ಆ ಸಾಮ್ರಾಜ್ಯ ಕೊನೆಗೊಂಡ ಮೇಲೆ, ಯೂರೋಪಿನ ಆಗ್ನೇಯ ಏಷ್ಯಾ ರಾಜ್ಯಗಳ ಕ್ಷೋಭೆಗೊಂಡ ರಾಜಕೀಯಕ್ಕೆ ಸಿಕ್ಕಿ, ಅಥೆನ್ಸ್ ಬಹುಕಾಲ ಯಾವುದಾದರೊಂದು ಬಲಿಷ್ಠ ರಾಜ್ಯದ ಅಧೀನದಲ್ಲುಳಿಯ ಬೇಕಾಯಿತು. ತುರ್ಕಿಯ ಸುಲ್ತಾನರ ಆಳ್ವಿಕೆ ಕಾನ್‍ಸ್ಟಾಂಟಿನೋಪಲ್ಲಿನಲ್ಲಿ ಸ್ಥಾಪಿತವಾದ ಮೇಲೆ, ಅನೇಕ ಸಲ ಅಥೆನ್ಸ್ ಅವರ ಧಾಳಿಗೆ ಸಿಕ್ಕಿ, ಅಲ್ಲಿನ ಭವ್ಯಮಂದಿರಗಳು ದೇವಾಲಯಗಳು, ಅನುಪಮ ಶಿಲ್ಪಕಲಾ ಮೂರ್ತಿಗಳು ನಾಶ ಹೊಂದಿದವು. 1834ರಲ್ಲಿ ಗ್ರೀಸ್ ಸ್ವತಂತ್ರರಾಜ್ಯವಾಗಿ ಅಥೆನ್ಸ್ ಅದರ ರಾಜಧಾನಿಯಾದ ಮೇಲೆ ಈಗಿನ ಅಥೆನ್ಸ್ ನಗರ ನಿರ್ಮಿತವಾಯಿತು. ಎರಡನೆಯ ಮಹಾಯುದ್ಧದಲ್ಲಿ ಮೂರು ವರ್ಷ ಕಾಲ (1941-1944) ಅಥೆನ್ಸನ್ನು ಜರ್ಮನರು ಆಕ್ರಮಿಸಿದ್ದರು. ಆಗ ಪ್ರಜೆಗಳು ನಾನಾ ಕಷ್ಟಗಳಿಗೆ ಈಡಾದರೂ ಊರು ನಾಶವಾಗಲಿಲ್ಲ. ಅಥೆನ್ಸಿನ ಹಿರಿಮೆಯ ಹೆಗ್ಗುರುತಾಗಿ ಹತ್ತಿರದಲ್ಲೇ ಆಕ್ರೋಪೋಲಿಸ್ ಎಂಬ ಗುಡ್ಡವಿದೆ. ಅದರ ಮೇಲೆ ಅಥೀನ ದೇವತೆಗಾಗಿ ಕಟ್ಟಿದ್ದ ಪಾರ್ಥೆನಾನ್ ಎಂಬ ಕಲಾ ಪರಿಪೂರ್ಣತೆಯನ್ನು ಮೆರೆಸುವ ಸುಂದರ ದೇವಾಲಯ, ಪ್ರೊಪೀಲಿಯ ಎಂಬ ಭವ್ಯವಾದ ಮುಖಮಂಟಪ, ಅಥೀನ ದೇವತೆಗಾಗಿ ನಿರ್ಮಿತವಾದ ಪಾರ್ಥೆನಾನ್‍ಗಿಂತಲೂ ಹೆಚ್ಚು ಪುರಾತನವಾದ ಎರೆಕ್ತಿಯಂ ದೇವಾಲಯ- ಇವುಗಳ ಮತ್ತು ಅನೇಕ ಕಟ್ಟಡಗಳ ಅವಶೇಷಗಳು, ಅಥೆನ್ಸಿನ ನಾಗರಿಕರು ಬೆಳೆಸಿದ ಉಚ್ಚತಮ ಸಂಸ್ಕøತಿಯ ಕುರುಹಾಗಿ ಇಂದಿಗೂ ನಿಂತಿವೆ.

ಅಮೆರಿಕದ ಸಂಯುಕ್ತ ಸಂಸ್ಥಾನದ ಅಲಬಾಮ, ಜಾರ್ಜಿಯ, ಓಹಿಯೊ, ಪೆನ್ಸಿಲ್ವೇನಿಯ, ಟೆನೆಸ್ಸಿ ಮತ್ತು ಟೆಕ್ಸಾಸ್ ರಾಜ್ಯಗಳಲ್ಲಿ ಅಥೆನ್ಸ್ ಎಂಬ ಪಟ್ಟಣಗಳಿವೆ. (ಎ.ಎಂ.)