ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಧಿಕರ
ಅಧಿಕರ
ವ್ಯಕ್ತಿಗಳ ಮೇಲೆ ಆದಾಯ ತೆರಿಗೆಯ ಜೊತೆಗೆ ಹಾಕುವ ಕರ (ಸೂಪರ್ ಟ್ಯಾಕ್ಸ್). ಜಾಯಿಂಟ್ ಸ್ಟಾಕ್ ಕಂಪನಿಗಳೂ ನೋಂದಣಿಮಾಡಿರುವ ವ್ಯಾಪಾರಸಂಸ್ಥೆಗಳೂ ಸಾಮಾನ್ಯ ಅಧಿಕರಗಳ ವ್ಯಾಪ್ತಿಗೊಳಪಡುವುದಿಲ್ಲ. ಆದರೆ ಅವು ಕಂಪನಿಗಳ ಮೇಲಣ ಅಧಿಕರಗಳೆಂಬ ಕಾರ್ಪೊರೇಷನ್ ತೆರಿಗೆಗಳನ್ನು ಕೊಡಬೇಕಾಗುತ್ತದೆ. ಒಂದೇ ಆದಾಯದ ಮೇಲೆ ಆದಾಯತೆರಿಗೆ ಮತ್ತು ಅಧಿಕರಗಳನ್ನು ಹಾಕಿದರೂ ಎರಡು ತೆರಿಗೆಗಳ ಪ್ರಮಾಣವನ್ನು ಗೊತ್ತುಮಾಡುವಾಗಲೂ ಕಟೌತಿಗಳನ್ನು (ರಿಬೇಟು) ಕೊಡಲವಕಾಶವಿಲ್ಲ. ಇದರಿಂದ ಒಬ್ಬನೇ ಅಧಿಕಾರಿ ಎರಡುಸಲ ತೆರಿಗೆ ಹಾಕಲು ಮಾರ್ಗವಾಗುತ್ತದೆ. ಆದರೆ ಇಂಥ ತೆರಿಗೆಯನ್ನು ಹಾಕುವುದರಿಂದ ತೆರಿಗೆಯ ಭಾರ ನಿಷ್ಪಕ್ಷಪಾತವಾಗಿ ಬೀಳುವುದರಿಂದ ಇದು ನ್ಯಾಯ ಸಮ್ಮತವೆನಿಸಿದೆ.
ಭಾರತದಲ್ಲಿ ಅಧಿಕರವನ್ನು ಮೊದಲಬಾರಿಗೆ 1917-18ರಲ್ಲಿ ಸರ್ಕಾರದ ಸಮರಾವಶ್ಯಕತೆಗಳ ಪೂರೈಕೆಗಾಗಿ ಹಾಕಲಾಯಿತು. ಅದನ್ನು ಸಾಮಾನ್ಯವಾಗಿ ಪಟ್ಟಿಯ ವ್ಯವಸ್ಥೆಯಂತೆ ಹಾಕುತ್ತಾರೆ. ಈ ಪಟ್ಟಿಗಳ ಸಂಖ್ಯೆಯನ್ನೂ ಹೆಚ್ಚಿಸಬಹುದು ಮತ್ತು ತೆರಿಗೆಯ ದರಗಳನ್ನು ಅವಶ್ಯವೆನಿಸಿದಾಗ ಕಡಿದಾಗಿ ಮೇಲಮೇಲಕ್ಕೇರಿಸಬಹುದು.
ಅಧಿಕರದ ಭಾರ ಹೆಚ್ಚಾದರೆ ಔದ್ಯೋಗಿಕ ಪ್ರಚೋದನೆಗಳಿಗೆ ಧಕ್ಕೆ ಬರುತ್ತದೆ. ಕರದಿಂದ ತಪ್ಪಿಸಿಕೊಳ್ಳುವ ಪ್ರವೃತ್ತಿ ಅಧಿಕವಾಗುತ್ತದೆ. ಅಧಿಕರ ಕಡಿದಾಗಿ ಏರಿದರೆ ಅದು ಉನ್ನತಶ್ರೇಣಿಯ ಆದಾಯವನ್ನು ಕಸಿದುಕೊಳ್ಳುವ ರೀತಿಯೆನಿಸುತ್ತದೆ ಮತ್ತು ಆ ದೆಸೆಯಿಂದ ಉಳಿತಾಯಮಾಡುವುದಕ್ಕೂ ಮತ್ತು ಬಂಡವಾಳವನ್ನು ಕೂಡಿಸುವುದಕ್ಕೂ ನಿರುತ್ಸಾಹವೇರ್ಪಡುತ್ತದೆ.
(ಟಿ.ಕೆ.)