ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನ್ಯಾಕ್ಸಗೊರಾಸ್

ವಿಕಿಸೋರ್ಸ್ ಇಂದ
Jump to navigation Jump to search

ಅನ್ಯಾಕ್ಸಗೊರಾಸ್ (ಸು. ಕ್ರಿ. ಪೂ. 500-428): ಪ್ರಾಚೀನ ಗ್ರೀಕ್ ದಾರ್ಶನಿಕರಲ್ಲಿ ಹೆಸರಾದವ. ಕ್ಲಾಸೋಮಿನ ಎಂಬಲ್ಲಿ ಹುಟ್ಟಿದ. ಕ್ರಿ. ಪೂ. 480 ರಲ್ಲಿ ಅಥೆನ್ಸ್‍ಗೆ ತೆರಳಿ ಪೆರಿಕ್ಲಿಸ್‍ನೊಡನೆ ಸ್ನೇಹ ಬೆಳೆಸಿದ. ಸೂರ್ಯ ಪೆಲೋಪೊನೀಸ್‍ಗಿಂತಲೂ ದೊಡ್ಡ ಆಕಾರದ, ಕೆಂಪಗೆ ಕಾದ ವಸ್ತು ಎಂದು ಹೇಳಿದ್ದರಿಂದ ಈತನನ್ನು ನಾಸ್ತಿಕವಾದಿ ಎಂದು ಕರೆದು, ಹೇಳಿದರು. ನಿಸರ್ಗದ ಮೇಲಿನ ಇವನ ಕೆಲವು ಗ್ರಂಥಗಳು ಉಪಲಬ್ಧವಾಗಿವೆ. ವೈಜ್ಞಾನಿಕವಿಚಾರಾತ್ಮಕ ಸಂಪ್ರದಾಯದಲ್ಲಿ ಬೆಳೆದ ಇವನ ಶೈಲಿ ಸರಳತೆ ಹಾಗೂ ಸಂಯಮಗಳಿಂದ ಕೂಡಿದೆ. ವಿಶ್ವನಿರ್ಮಾಣಕ್ಕೆ ಬಳಕೆಯಾಗಿರುವ ಅಸಂಖ್ಯಾತಘಟನಾಂಶಗಳನ್ನು ನಿಯಂತ್ರಿಸುವ ಬೌದ್ಧಿಕಶಕ್ತಿ, ಚೇತನಾಂಶ ಒಂದುಂಟು ಎಂದು ಪ್ರತಿಪಾದಿಸಿ ಅಥೆನ್ಸ್ ಜನರನ್ನು ಪೇಚಿಗೆ ಸಿಕ್ಕಿಸಿದ. ವಿಚಾರಣೆಗೆ ಗುರಿಯಾಗುವ ಮುನ್ನ ಈತ ಅಥೆನ್ಸ್ ತ್ಯಜಿಸಿ ಲೇಂಪಾಕಸ್ ಅನ್ನುವ ಸ್ಥಳಕ್ಕೆ ಹೋಗಿ ಏಕಾಂತ ವಾಸಮಾಡಿದ. ಅಲ್ಲಿಗೆ ಹೋದ ಸ್ಪಲ್ಪ ದಿನದಲ್ಲೇ ಮಡಿದ. ಇವನ ಹಿಂದಿನ ದಾರ್ಶನಿಕರು ಇಡೀ ಜಗತ್ತು ಅಚೇತನವಾದ ಮೂಲಪ್ರಕೃತಿಯಿಂದ ಉತ್ಪನ್ನವಾಯಿತೆಂದು ವಾದಿಸಿದರು. ಇವನು ಮಾತ್ರ ಜಗತ್ತು ಒಂದು ಚಿತ್ ಶಕ್ತಿಯ ಸೃಷ್ಟಿ ಎಂದೂ ಇದಿಲ್ಲದೇ ಜಗತ್ತು ಶೂನ್ಯವೆಂದೂ ಭೋಧಿಸಿದ. ಇವನ ಪ್ರಾಪಂಚಿಕ ಅಭಿಪ್ರಾಯಗಳು ಯೂರಿಪಿಡೀಸ್‍ನಂಥ ನಾಟಕಕಾರನ ಮೇಲೂ ಪ್ರಭಾವ ಬೀರಿದುವು. ಇವನ ನಿರ್ಭಯ ಹಾಗೂ ಸ್ಪಷ್ಟವಿಚಾರಸರಣಿ ಗೌರವಾನ್ವಿತವಾದದ್ದು. ಅರಿಸ್ಟಾಟಲ್ ಇವನ ಅಭಿಪ್ರಾಯಗಳನ್ನು ಟೀಕಿಸಿದರು. ಹರಟೆಮಲ್ಲರ ಗುಂಪಿನಲ್ಲಿ ಸ್ತಿಮಿತಚಿತ್ತದವನೆಂದು ಗೌರವಿಸಿದ್ದ.

(ಎಂ.ವೈ.; ಕೆ.ಎ.ಎಲ್.ಎಸ್.ಎಸ್.)