ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಪಟೈಟ್

ವಿಕಿಸೋರ್ಸ್ ಇಂದ
Jump to navigation Jump to search

ಅಪಟೈಟ್

ರಾಸಾಯನಿಕ ಸಂಯೋಜನೆಯಲ್ಲಿ ಇದು ಮುಖ್ಯವಾಗಿ ಕ್ಯಾಲ್ಸಿಯಂ, ಫ್ಲೋರೀನ್ ಮುಂತಾದ ಧಾತುಗಳಿಂದ ಕೂಡಿದ ಫಾಸ್ಟೇಟ್ ಖನಿಜ. ಹೊರರೂಪಿನಲ್ಲಿ ಷಟ್ ಭುಜೀಯ (ಹೆಕ್ಸಾಗೋನಲ್) ವರ್ಗದ ಹರಳುಗಳಾಗಿಯೂ ಮತ್ತು ಕಣಗಳ ಮುದ್ದೆಯಾಗಿಯೂ ಕಂಡುಬರುತ್ತದೆ. ಹಲವುವೇಳೆ ಗುಂಡು ಗುಂಡಾಗಿದ್ದು ದ್ರಾಕ್ಷಿಗೊಂಚಲಿನಂತೆಯೂ ತೋರಿಬರುವುದುಂಟು.

ಖನಿಜದ ಬಣ್ಣ ಬಹುಮಟ್ಟಿಗೆ ಹಸಿರು ಛಾಯೆಯುಳ್ಳ ನೀಲಿ, ಊದ ಮತ್ತು ಬೂದು. ಕೆಲವುವೇಳೆ ಹಳದಿ ಮತ್ತು ಕೆಂಪು ಛಾಯೆಗಳೂ ತೋರಿಬರುತ್ತವೆ. ಒರೆ ಹಚ್ಚಿದಾಗ, ಯಾವ ಬಣ್ಣವೇ ಇರಲಿ, ಅಚ್ಚನೆಯ ಬಿಳುಪು. ಹೊಳಪು ಗಾಜಿನಂತೆ, ಖನಿಜ ಸೀಳದೆ ಒಡೆದು ಛಿದ್ರವಾಗುತ್ತದೆ. ಒಡೆದ ಭಾಗದಲ್ಲಿ ಕಪ್ಪೆಚಿಪ್ಪನ್ನು ಹೋಲುವ ಗುರುತುಗಳುಂಟಾಗುತ್ತವೆ. ಗುರುತು ಅಸ್ಪಷ್ಟವಾಗಿಯೂ ತೋರುವುದುಂಟು. ಕಾಠಿಣ್ಯ: 5, ಚಾಕುವಿನಿಂದ ಖನಿಜವನ್ನು ಗೀರಿ ಗುರುತಿಸಬಹುದು. ಶುದ್ಧ ಹರಳುಗಳು ಉತ್ತಮ ಪಾರದರ್ಶಕತೆಯನ್ನು ಹೊಂದಿವೆ. ಕೆಲವು ಅಪಾರ ದರ್ಶಕವೂ ಹೌದು. ಸಾಪೇಕ್ಷಸಾಂದ್ರತೆ: 3.17-3.23.

ಇದು ಬಹುಮಟ್ಟಿಗೆ ಅಗ್ನಿಶಿಲೆಗಳಲ್ಲೂ ಅಲ್ಪಸ್ವಲ್ಪ ಪ್ರಮಾಣದಲ್ಲಿ ರೂಪಾಂತರ ಶಿಲೆಗಳಲ್ಲೂ ದೊರೆಯುತ್ತದೆ. ಅಗ್ನಿಶಿಲಾವರ್ಗದ ಪೆಗ್ಮಟೈಟ್ ಎಂಬ ಒಡ್ಡುಶಿಲೆ (ಡೈಕ್ ರಾಕ್) ಈ ಖನಿಜದ ತವರು. ಉತ್ತಮದರ್ಜೆಯ ನಿಕ್ಷೇಪಗಳು ರಷ್ಯದ ಕೋಲಾ ಪ್ರಾಂತ, ಉತ್ತರ ಆಫ್ರಿಕದ ಟ್ಯೂನೀಸಿಯ ಮತ್ತು ಮೊರಾಕೋ, ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಪೆಸಿಫಿಕ್ ಸಾಗರದ ದ್ವೀಪಗಳಲ್ಲಿ ಹರಡಿವೆ.

ರಾಸಾಯನಿಕ ಗೊಬ್ಬರದ ತಯಾರಿಕೆಯಲ್ಲಿ ಇದನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಉತ್ತಮ ಬಣ್ಣದ ಪಾರದರ್ಶಕ ಹರಳುಗಳನ್ನು ಜವಾಹಿರಿಯಲ್ಲಿ ಉಪಯೋಗಿಸುವುದುಂಟು. (ಬಿ.ವಿ.ಜಿ.)