ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಪಭ್ರಂಶ

ವಿಕಿಸೋರ್ಸ್ದಿಂದ

ಅಪಭ್ರಂಶ

ಶಿಷ್ಟ ಸಂಸ್ಕøತ ಭಾಷೆಯ ಸ್ವರೂಪಕ್ಕಿಂತ ಭಿನ್ನವಾದ ಶಬ್ದ ಅಥವಾ ಅಭಿವ್ಯಕ್ತಿಯನ್ನು ನಿರ್ದೇಶಿಸಲು ಪತಂಜಲಿ ತನ್ನ ಮಹಾಭಾಷ್ಯದಲ್ಲಿ ಈ ಶಬ್ದವನ್ನು ಮೊಟ್ಟಮೊದಲಬಾರಿಗೆ ಬಳಸಿದ್ದಾನೆ. ಬಹುಶಃ ಈ ಶಬ್ದ ಸಮಕಾಲೀನ ಮಧ್ಯಕಾಲೀನ ಇಂಡೋ ಆರ್ಯನ್ ಭಾಷೆಯ ಕೆಲವು ಪ್ರಾಂತೀಯ ಭೇದಗಳನ್ನು ಸೂಚಿಸುತ್ತಿದ್ದಿರಬೇಕು. ಆದರೆ ಇಂದು ಇದು ಮಧ್ಯಕಾಲೀನ ಇಂಡೋ ಆರ್ಯನ್ ಭಾಷೆಯ ಒಂದು ನಿರ್ದಿಷ್ಟ ಹಂತವನ್ನು ಸೂಚಿಸುತ್ತದೆ. ಪುರುಪೋತ್ತಮ, ಹೇಮಚಂದ್ರ ಮೊದಲಾದ ವೈಯಾಕರಣರು ಈ ಭಾಷೆಯ ಸ್ವರೂಪವನ್ನು ಸ್ವಷ್ಟವಾಗಿ ವಿವರಿಸಿದ್ದಾರೆ. ಇತರ ಪ್ರಾಕೃತ ಉಪಭಾಷೆಗಳೊಡನೆ ಸರಿದೊರೆಯಾಗಿ ಐದನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗೆ ಪೂರ್ವ ಮತ್ತು ಪಶ್ಚಿಮ ಭಾರತಗಳಲ್ಲಿ ಪ್ರಖ್ಯಾತ ಲೇಖಕರು ತಮ್ಮ ಬೃಹತ್ ಗ್ರಂಥಗಳಲ್ಲಿ ಈ ಭಾಷೆಯನ್ನು ಬಳಸಿದ್ದಾರೆ. ಅಪಭ್ರಂಶದ ಪ್ರಾಂತೀಯ ಭೇದಗಳೂ ಇದ್ದಿರಬೇಕು. ಪುರುಷೋತ್ತಮ ಅಪಭ್ರಂಶದ ಮೂರು ಉಪಭಾಷೆಗಳನ್ನು ಉಲ್ಲೇಖಿಸಿದ್ದಾನೆ : ನಾಗರ, ವ್ರಾಚದ ಮತ್ತು ಉಪನಾಗರ. ನಾಗರ ಅಂದು ಪ್ರಖ್ಯಾತ ಉಪಭಾಷೆಯಾಗಿದ್ದು ಸಾಹಿತ್ಯದಲ್ಲೂ ಹೆಚ್ಚಾಗಿ ಬಳಕೆಯಲ್ಲಿದ್ದಂತೆ ಕಂಡುಬರುತ್ತದೆ. ಹೇಮ ಚಂದ್ರ ಉಪಭಾಷೆಗಳನ್ನು ಹೆಸರಿಸಿಲ್ಲವಾದರೂ ಆತ ಮುಂದಿರಿಸಿರುವ ವಸ್ತುವನ್ನು ವಿಶ್ಲೇಷಿಸಿದರೆ ಅದರಲ್ಲಿ ಹಲವಾರು ಉಪಭಾಷೆಗಳ ಮಿಶ್ರಣ ಕಂಡುಬರುತ್ತದೆ. ಬೇರೊಂದು ದೃಷ್ಟಿಯಿಂದ ಪರಿಶೀಲಿಸಿದರೆ ಆತನ ಅಪಭ್ರಂಶದಲ್ಲಿ ಮಹಾರಾಷ್ಟ್ರ ಮತ್ತು ಶೌರಸೇನಿಯನ್ನು ಅಧಾರವಾಗುಳ್ಳ ಎರಡು ಭೇದಗಳಿದ್ದದು ಕಂಡು ಬರುತ್ತದೆ.

ಅಪಭ್ರಂಶಕ್ಕೆ ಪ್ರಾಕೃತ ಮೂಲಾಧಾರ. ಅದು ಅಧುನಿಕ ಇಂಡೋ ಆರ್ಯನ್ ಭಾಷೆಗಳಿಗಿಂತಲೂ ಪ್ರಾಚೀನ. ಇಂದು ಬಳಕೆಯಲ್ಲಿರುವ ಇಂಡೋ ಆರ್ಯನ್ ಭಾಷೆಗಳಲ್ಲಿ ಕಾಣದೊರೆಯುವ ಹಲವಾರು ಅನುವಂಶಿಕ ಲಕ್ಷಣಗಳು ಇದರಲ್ಲೂ ಕಂಡು ಬರುತ್ತವೆ. ಇಂದು ಎಷ್ಟು ಇಂಡೋ ಆರ್ಯನ್ ಭಾಷೆಗಳು ಬಳಕೆಯಲ್ಲಿವೆಯೋ ಅಷ್ಟು ಅಪಭ್ರಂಶಗಳು ಇದ್ದಿರಬೇಕೆಂಬ ಸಿದ್ಧಾಂತವನ್ನು ಸಮರ್ಥಿಸಲು ಸಾಕಷ್ಟು ಪ್ರಮಾಣಗಳು ದೊರೆಯುತ್ತಿಲ್ಲ. ಆದರೆ ಆಧುನಿಕ ಇಂಡೋ ಆರ್ಯನ್ ಭಾಷೆಗಳ ಅಧ್ಯಯನಕ್ಕೆ ಅಪಭ್ರಂಶದಲ್ಲಿ ದೊರೆಯುವ ಮಾಹಿತಿ ಅತ್ಯಾವಶ್ಯಕವಾಗಿದೆ. ಗುಜರಾತಿ, ರಾಜಾಸ್ಥಾನಿ ಮತ್ತು ಬ್ರಜ ಭಾಷೆಗಳ ಪ್ರಾಚೀನ ಸ್ವರೂಪಕ್ಕೂ ಪಶ್ಚಿಮ ಭಾರತದ ಅಪಭ್ರಂಶಾ ನಂತರದ ಸ್ವರೂಪಕ್ಕೂ ಹೆಚ್ಚಿನ ಹೋಲಿಕೆ ಇದೆ. ಅಪಭ್ರಂಶ ಸಾಹಿತ್ಯದ (ನೋಡಿ- ಪ್ರಾಕೃತ-ಭಾಷೆಗಳು-ಮತ್ತು-ಸಾಹಿತ್ಯ) ಉಪಲಬ್ಧ ಉದಾಹರಣೆಗಳನ್ನು ಗಮನಿಸಿದರೆ ಭಕ್ತಿ, ಪ್ರಶಂಸೆ ಮತ್ತು ಶೃಂಗಾರಸ್ವರೂಪದ ಜನಪ್ರಿಯ ಕಾವ್ಯಕ್ಕೆ ಅತ್ಯುಚಿತವಾದ ಭಾಷೆಯಾಗಿ ಸ್ವೀಕರಿಸಲಾಗಿತ್ತೆಂದು ಸ್ಪಷ್ಟವಾಗುತ್ತದೆ.

ಹೇಮಚಂದ್ರ ತಾನು ನಿರೂಪಿಸಿರುವ ಅಪಭ್ರಂಶದಲ್ಲಿ ಪ್ರಾಕೃತದ ಅನೇಕ ಲಕ್ಷಣಗಳನ್ನು ಐಚ್ಛಿಕವಾಗಿ ಒಪ್ಪಿಕೊಂಡಿದ್ದಾನೆ. ಪ್ರಾಕೃತಕ್ಕಿಂತ ಭಿನ್ನವಾಗಿ ತೋರುವ ಈ ಕೆಲವು ಅಂಶಗಳನ್ನು ಅಪಭ್ರಂಶದ ಲಕ್ಷಣಗಳೆಂದು ಪರಿಗಣಿಸಬಹುದು. 1 ಅಪಭ್ರಂಶದಲ್ಲಿ ಸ್ವರಗಳು ಅದಲುಬದಲಾಗುತ್ತವೆ. ಅವುಗಳ ಮಾತ್ರೆಯಲ್ಲೂ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯವನ್ನು ಕಾಣಬಹುದು. ಒಂದೇ ಕಾರಕದ ಅಂತ್ಯದ ಹ ಅಥವಾ ಹು ಮತ್ತು ಹೆ ಅಥವಾ ಹು ಎಂಬ ರೂಪಗಳಿಗೆ ಇದು ವಿವರಣೆಯನ್ನು ನೀಡುತ್ತದೆ. ಅಂತೆಯೇ ಪ್ರಾಕೃತಕರ್ತೃಕಾರಕ ಏಕವಚನದ ಓ ಎಂಬುದು ಉ ಎಂದು ಹ್ರಸ್ವವಾಗಿ ಅಪಭ್ರಂಶದ ಅನೇಕ ಶಬ್ದಗಳಿಗೆ ಸೇರಿಕೊಳ್ಳುತ್ತದೆ. ಪುಣು, ವಿಣು, ಸಹು ಮೊದಲಾದ ಶಬ್ದಗಳಲ್ಲಿ ಇದನ್ನು ಕಾಣಬಹುದು. ಕರಣಕಾರಕ ಏಕವಚನದಲ್ಲಿ ಎಣ-ಎಮ್ ಮತ್ತು -ಮ್ ಎಂಬ ರೂಪಗಳು ಕಾಣದೊರೆಯುತ್ತವೆ. 2-ಮ್ ಎಂಬುದನ್ನು ಬಹಳವಾಗಿ ಒತ್ತಿ ಹೇಳುವುದಿಲ್ಲ. ಅನೇಕ ವೇಳೆ ಅನುನಾಸಿಕ ವಕಾರವಾಗಿ ಪರಿಣಮಿಸುತ್ತದೆ. 3 ವಿಭಕ್ತಿರೂಪಗಳ ಅಂತ್ಯದಲ್ಲಿ ಸಕಾರ ಹಕಾರವಾಗುವ ಪ್ರವೃತ್ತಿ ಕಂಡುಬರುತ್ತದೆ. ಇದು ಕೆಲವು ವಿಲಕ್ಷಣರೂಪಗಳಿಗೆ ವಿವರಣೆ ನೀಡುತ್ತದೆ; ಮಾರ್ಕಂಡೇಯ ಮತ್ತು ಇತರರು ಉಲ್ಲೇಖಿಸಿರುವ ಕರ್ತೃಕಾರಕ ಬಹುವಚನ ದೇವಹೊ ಎಂಬುದರ ಮೂಲವನ್ನು ವೈದಿಕ ದೇವಾಸಃ ಎಂಬುದರಲ್ಲಿ ಅಥವಾ ಚಂದ್ರಮಸಃದಂಥ ರೂಪಗಳ ಆಧಾರದ ಮೇಲೆ ಸಾಧಾರಣೀಕೃತವಾದ ರೂಪಗಳಲ್ಲಿ ಕಾಣಬಹುದು, ಪ್ರಾಕೃತದ ದೇವಸ್ಸದಿಂದ ದೇವಹಃ; ತಸ್ಸದಿಂದ ತಾಹ; ಅದನ್ನು ತಾಸ ಎಂದು ಸರಳಗೊಳಿಸಿ ಅದರ ಪ್ರತಿರೂಪವಾದ ತಾಸು ಎಂಬುದನ್ನೂ ಅಪಭ್ರಂಶದಲ್ಲಿ ಬಳಸಲಾಗುತ್ತದೆ; ತಂಸಿ ಯಿಂದ ತಹಿ; ಎಸೊಯಿಂದ ಎಹು. ಸಂಸ್ಕøತದ ಸಕಾರ ಅವೆಸ್ತ ಮತ್ತು ಇತಾನಿ ಉಪಭಾಷೆಗಳಲ್ಲಿ ಹಕಾರವಾಗಿ ಕಾಣ ದೊರೆಯುತ್ತದೆ. ಕೆಲವು ಪ್ರಾಕೃತ ಶಬ್ದಗಳಲ್ಲಿ ಹೇಮಚಂದ್ರ ಈ ಬದಲಾವಣೆಯನ್ನು ಗುರುತಿಸಿದ್ದಾನೆ. ಮಾಗಧಿಯಲ್ಲಿ ಮಾತ್ರ ಷಷ್ಠೀವಿಭಕ್ತಿಯ ಕೊನೆಯಲ್ಲಿ ಇದು ಕಾಣಬರುತ್ತದೆ. ಇಂದಿಗೂ ಗುಜರಾತಿ ಉಪಭಾಷೆಯೊಂದರಲ್ಲಿ ಸಕಾರ ಸಾಮಾನ್ಯವಾಗಿ ಹಕಾರವಾಗುವುದನ್ನು ಕಾಣಬಹುದು. ಈ ಬದಲಾವಣೆ ಆನುವಂಶಿಕ ಲಕ್ಷಣವಾಗಿದ್ದು ಮುಂದೆ ಸಾಮಾನ್ಯವಾಗಿ ಎಲ್ಲೆಡೆಗಳಲ್ಲೂ ಕಾಣಿಸಿಕೊಂಡಿದ್ದಿರಬಹುದು. 4 ಉಚ್ಚಾರಣೆಯನ್ನು ಸರಳಗೊಳಿಸುವುದಕ್ಕಾಗಿ ಪ್ರಾಕೃತಸಮುಚ್ಚಯಗಳ ಕರ್ಕಶತೆಯನ್ನು ಅನೇಕ ವೇಳೆ ದೂರ ಮಾಡಲಾಗುತ್ತದೆ. 5 ಕರ್ತೃ ಕರ್ಮ ಮತ್ತು ಸಂಬಂಧಕಾರಕಗಳಲ್ಲಿ ವಿಭಕ್ತ್ಯಂತಗಳನ್ನು ಕೈಬಿಡಲಾಗುತ್ತದೆ. ಅವ್ಯಯಗಳಾಗಿ ಮಾರ್ಪಡುವ ಪ್ರವೃತ್ತಿ ಇಲ್ಲಿ ಕಂಡುಬರುತ್ತದೆ. 6 ಧ್ವನಿಪರಿವರ್ತನೆಗಳು ವಿಭಕ್ತಿರೂಪಗಳ ಮೇಲೆ ಪ್ರಭಾವವನ್ನು ಬೀರುತ್ತವಾಗಿ ಇವುಗಳ ರೂಪಗಳೂ ಸರಳವಾಗುತ್ತವೆ, ಸಂಖ್ಯೆಯೂ ಕಡಿಮೆಯಾಗುತ್ತಿತ್ತು. 7 ಅವ್ಯಯಗಳೂ ಪ್ರತ್ಯಯಗಳೂ ಅನೇಕ ವೇಳೆ ಗುರುತಿಸಲು ಸಾಧ್ಯವಾಗದಷ್ಟುಮಟ್ಟಿಗೆ ತಮ್ಮ ರೂಪಗಳನ್ನು ಬದಲಾಯಿಸಿಕೊಂಡುಬಿಡುತ್ತವೆ. ಕೆಲವು ಸಂದರ್ಭಗಳಲ್ಲಿ ಪ್ರಾಕೃತದ ಮೂಲಕ ಅವುಗಳ ಸಂಸ್ಕøತಮೂಲವನ್ನು ತಿಳಿಯುವುದೂ ಸಾಧ್ಯವಾಗುವುದಿಲ್ಲ. ಬಹುಶಃ ಅಂಥ ರೂಪಗಳು ದೇಶಭಾಷೆಗಳಿಂದ ಬಂದಿರಬಹುದು. 8 ಅನೇಕ ಶಬ್ದಗಳಲ್ಲಿ ಕ, ಡ, ಲ, ಉಲ್ಲಗಳಂಥ ಸ್ವಾರ್ಥೆ ಅಥವಾ ಬಹುಪದಯುಕ್ತವಾಗಿರುವಂಥ ಪೂರ್ವಪದ ಅಥವಾ ಉತ್ತರಪದಗಳು ಕಾಣದೊರೆಯುತ್ತವೆ. 9 ಕೊನೆಯದಾಗಿ, ದೇಶೀಶಬ್ದಗಳು ಅಥವಾ ಧಾತ್ವಾವಾದೇಶಗಳು ಹೇರಳವಾಗಿ ಕಾಣದೊರೆಯುತ್ತವೆ. ಸಿಂಹಾವಲೋಕನ ಮಾಡುತ್ತ ಅಪಭ್ರಂಶದ ವಿಚಾರವಾಗಿ ಪಿಶೆಲ್ ಈ ರೀತಿ ಹೇಳಿದ್ದಾನೆ. ಧ್ವನಿ ಸಂಬಂಧಿಯಾದ ಅವ್ಯವಸ್ಥೆ ಇದ್ದರೂ ಪ್ರಾಸಕ್ಕೋಸ್ಕರವಾಗಿ ಕವಿಗಳು ಮನ ಬಂದಂತೆ ಸ್ವರಗಳನ್ನು ಬದಲಾಯಿಸಿ ಶಬ್ದಾಂತ್ಯಗಳನ್ನು ಕೈಬಿಟ್ಟು ಸಂಪೂರ್ಣ ಅಕ್ಷರಗಳನ್ನೇ ಅವಷ್ಟಂಬನಗೊಳಿಸಿ, ಲಿಂಗ, ವಿಭಕ್ತಿ, ವಚನ ಮತ್ತು ವಾಚ್ಯಗಳ ವಿಚಾರದಲ್ಲಿ ಗೊಂದಲವನ್ನುಂಟುಮಾಡಿ, ಸ್ವೇಚ್ಛೆಯಿಂದ ವರ್ತಿಸಿದ್ದರೂ ಅಪಭ್ರಂಶ ವಿಶಿಷ್ಟ ಮಹತ್ತ್ವವನ್ನುಳ್ಳ, ಸ್ವಾರಸ್ಯಪೂರ್ಣಭಾಷೆಯಾಗಿ ಉಳಿದುಕೊಂಡುಬಂದಿದೆ. ವೈದಿಕ (ಸಂಸ್ಕøತ) ಭಾಷೆಗೂ ಇದಕ್ಕೂ ಇರುವ ಸಂಬಂಧ ನಿಕೃಷ್ಟವಾದುದೇನೂ ಅಲ್ಲ. ಹೀಗಾಗಿ ವೈದಿಕನುಡಿಗಟ್ಟಿನೊಡನೆ ಹೆಗಲೆಣೆಯಾಗಿ ಬೆಳೆಯುತ್ತಿದ್ದ ಆಡುಮಾತಿನ ಉಪಭಾಷೆಗಳಲ್ಲಿ ಅಪಭ್ರಂಶದ ಮೂಲ ಅಡಗಿದೆ. ಈ ವೈದಿಕನುಡಿಗಟ್ಟು ಅವಿರತವಾಗಿ ಅನೇಕ ಪ್ರದೇಶಗಳಲ್ಲಿ ಹರಿದು ಇಂದಿನ ಆಧುನಿಕಭಾರತೀಯ ಆರ್ಯಭಾಷೆಗಳ ರೂಪದಲ್ಲಿ ಮುಂದೆ ಸಾಗುತ್ತಿದೆ.

ಅಪಭ್ರಂಶಕ್ಕೆ ತನ್ನದೇ ಆದ ಛಂದೋರೂಪಗಳಿವೆ. ವೈವಿಧ್ಯಮಯವಾದ ಛಂದೋರೂಪಗಳೂ ಪ್ರಾಸಗಳೂ ಕಾಣದೊರೆಯುತ್ತವೆ. 5ನೆಯ ಶತಮಾನದ ಹೊತ್ತಿಗಾಗಲೆ ಸಾಹಿತ್ಯಭಾಷೆಯ ರೂಪದಲ್ಲಿ ಅಪಭ್ರಂಶ ಪ್ರಚಲಿತವಾಗಿತ್ತು. ಆಡು ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪಭ್ರಂಶದ ವಿಶಿಷ್ಟರೂಪಗಳು ಗ್ರಂಥಸ್ಥ ಪ್ರಾಕೃತ ಭಾಷೆಯ ಮೇಲೆ ಬಹುಮಟ್ಟಿಗೆ ಕ್ರಿಸ್ತಶಕೆಯ ಆರಂಭಕಾಲದಿಂದಲೇ ಪ್ರಭಾವ ಬೀರತೊಡಗಿದ್ದವು. ಅಪಭ್ರಂಶದ ಕೆಲವು ವೈಶಿಷ್ಟ್ಯಗಳಿಗೆ ಆಭೀರರ ಮಾತಿನ ರೀತಿಯೇ ಕಾರಣವೆಂದು ಹೇಳಲಾಗುತ್ತಿದೆ. ಕ್ರಿಸ್ತಪೂರ್ವ 150ಕ್ಕಿಂತಲೂ ಕೊಂಚ ಮೊದಲೆ ಈ ಜನಾಂಗ ಭಾರತಕ್ಕೆ ಕಾಲಿಟ್ಟಿತು. ಈ ಅವಧಿಯಲ್ಲಿ ರಚಿತವಾದ ಮಹಾಭಾಷ್ಯದಲ್ಲಿ ಪತಂಜಲಿ ಈ ಜನಾಂಗವನ್ನು ಉಲ್ಲೇಖಿಸಿದ್ದಾನೆ. ಪೆಷಾವರ್ ಬಳಿ ನೆರೆಹೊರೆಯವರಂತೆ ಆಭೀರರೂ ಗೂರ್ಜರರೂ ವಾಸಿಸುತ್ತಿದ್ದರು. ಇವರ ಕೆಲವು ವೈಶಿಷ್ಯ್ಯಗಳು ಪ್ರಾಕೃತಭಾಷೆಗಳ ಮೇಲೆ ಪ್ರಭಾವ ಬೀರಿದುವು. ಅನಂತರ ಅಪಭ್ರಂಶರೂಪದಲ್ಲಿ ಇವು ಸ್ಥಿರವಾಗಿ ಬೇರೂರಿದವು. ಅಪಭ್ರಂಶದ ಶಬ್ದಕೋಶದ ಬಹುಭಾಗ ವಾಸ್ತವವಾಗಿ ಪ್ರಾಕೃತದಿಂದಲೇ ಬಂದಿದೆ. (ಎ.ಎನ್.ಯು.)