ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಪೀಲು
ಅಪೀಲು
ಮೇಲ್ಮನವಿ, ಮೊರೆ, ಬೇಡಿಕೆಯೆಂಬ ಅರ್ಥದಲ್ಲಿ ಕನ್ನಡ ವ್ಯವಹಾರದಲ್ಲಿ ಬಳಕೆಗೆ ಬಂದಿರುವ ಇಂಗ್ಲಿಷ್ ಪದ. ನ್ಯಾಯವ್ಯವಹಾರದಲ್ಲಿ ಒಂದು ನ್ಯಾಯಾಲಯ ಕೊಟ್ಟ ತೀರ್ಪು ಸರಿಯಾಗಿಲ್ಲವೆಂದು ತೋರಿದಾಗ ಅದನ್ನು ಪರಿಶೀಲಿಸಲು ಮೇಲ್ಮನವಿ ನ್ಯಾಯಾಲಯಗಳಿವೆ (ಅಪೀಲ್ ಕೋಟ್ರ್ಸ್). ತನಗೆ ಅನ್ಯಾಯವಾಗಿದೆಯೆಂದು ತಿಳಿದಿರುವ ಯಾರೇ ಆಗಲಿ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಯಾರು ಯಾವ ಸಂದರ್ಭದಲ್ಲಿ ಯಾವ ಮೇಲ್ಮನವಿ ನ್ಯಾಯಲಯಕ್ಕೆ ಬೇಡಿಕೆ ಸಲ್ಲಿಸಬೇಕೆಂಬುದನ್ನು ಕಾನೂನು ವಿಶದವಾಗಿ ವಿವರಿಸಿದೆ. ವ್ಯವಹಾರ (ಸಿವಿಲ್) ವ್ಯಾಜ್ಯಗಳ ವಿಷಯ ವ್ಯವಹಾರ ಪ್ರಕ್ರಿಯಾಸಂಹಿತೆಯಲ್ಲಿದೆ (ಸಿವಿಲ್ ಪ್ರೊಸೀಜರ್ ಕೋಡ್). ಅಪರಾಧಿಕ (ಕ್ರಿಮಿನಲ್) ವ್ಯಾಜ್ಯಗಳ ವಿಷಯವನ್ನು ದಂಡಪ್ರಕ್ರಿಯಾಸಂಹಿತೆ (ಕ್ರಿಮಿನಲ್ ಪ್ರೊಸೀಜರ್ ಕೋಡ್) ವಿವರಿಸುತ್ತದೆ. ಅಲ್ಲದೆ ವಿಶೇಷಶಾಸನಗಳಲ್ಲಿ ಮೇಲ್ಮನವಿಯ ಬಗ್ಗೆ ವಿವರಗಳಿವೆ. ಸರ್ವೋಚ್ಚ ನ್ಯಾಯಾಲಯಕ್ಕೆ (ಸುಪ್ರೀಮ್ ಕೋರ್ಟ್) ಮೇಲ್ಮನವಿ ಸಲ್ಲಿಸುವ ವಿಧಿನಿಯಮಗಳು ಸಂವಿಧಾನದಲ್ಲಿ ಬಂದಿವೆ.
ಯಾವ ನ್ಯಾಯಾಲಯವೇ ಆಗಲಿ ಕೊಡುವ ತೀರ್ಪು ತಪ್ಪಾಗಲು ಸಾಧ್ಯವೇ? ಅಂತಿಮವಾಗಿ ಮೇಲ್ಮನವಿಯ ಆಧಾರದಮೇಲೆ ನ್ಯಾಯಾಲಯ ಕೊಡುವ ತೀರ್ಪು ತೀರ ಸತ್ಯವಾದುದೆ? ನ್ಯಾಯ ತೀರ್ಮಾನಕ್ಕೂ ಒಂದು ಮಿತಿ ಇದೆ. ಯಾವ ಪರಿಶೀಲನೆಗೂ ಒಂದು ಮಿತಿ ಇರಬೇಕಾದುದು ಅಗತ್ಯ. ಇರಬಹುದಾದ ಲೋಪ ದೋಷಗಳ ನಿವಾರಣೆಯೇ ಮೇಲ್ಮನವಿ ನ್ಯಾಯಾಲಯಗಳ ಗುರಿ. ಅಂತಿಮ ತೀರ್ಪು ಸರಿಯಾಗಿರಲಿ ತಪ್ಪಾಗಿರಲಿ ಅದಕ್ಕೆ ಎಲ್ಲರೂ ಬದ್ಧರು. ಅದರ ಮೇಲೆ ಮತ್ತೆ ಮನವಿ ಇಲ್ಲ. ಅಲ್ಲಿಯವರೆಗೆ ನ್ಯಾಯಕ್ಕಾಗಿ ಮನವಿ ಸಲ್ಲಿಸುವ ಅವಕಾಶ ಮಾತ್ರ ಎಲ್ಲರಿಗೂ ಉಂಟು. (ಎಲ್.ಎಸ್.)