ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಭಾವ

ವಿಕಿಸೋರ್ಸ್ದಿಂದ

ಅಭಾವ ಎಂದರೆ ಇಲ್ಲದ್ದು. ಇದೂ ಒಂದು ಆಲೋಚ್ಯ ವಿಷಯ. ಆಲೋಚ್ಯ ವಿಷಯವನ್ನು ವೈಶೇಷಿಕರು ಪದಾರ್ಥವೆಂದು ಕರೆದಿರುತ್ತಾರೆ. ವೈಶೇಷಿಕರ ಪ್ರಕಾರ ಆಲೋಚ್ಯ ವಿಷಯಗಳು ಏಳು: ದ್ರವ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ, ಸಮವಾಯ ಮತ್ತು ಅಭಾವ.

ಅಭಾವ ಎರಡು ಬಗೆಯಾಗಿವೆ: ಅನ್ಯೋನ್ಯಾಭಾವ ಮತ್ತು ಸಂಸರ್ಗಾಭಾವ. ಅನ್ಯೋನ್ಯಾಭಾವವೆಂದರೆ ಪರಸ್ಪರ ನಿಷೇಧ. ಒಂದು ಇದ್ದರೆ ಇನ್ನೊಂದಿಲ್ಲ. ಮನುಷ್ಯ ಮರವಲ್ಲ ಎಂಬ ಪ್ರತಿಜ್ಞೆಯಲ್ಲಿ ಮನುಷ್ಯನಿಗೂ ಮರಕ್ಕೂ ಏಕತ್ವವನ್ನು ಪ್ರತಿಷೇಧಿಸಿರುತ್ತದೆ. ಸಂಸರ್ಗಭಾವ ಮೂರು ವಿಧವಾಗಿದೆ: ಪ್ರಾಗಭಾವ, ಪ್ರಧ್ವಂಸಾಭಾವ, ಅತ್ಯಂತಾಭಾವ. ಒಂದು ವಸ್ತು ಹುಟ್ಟುವುದಕ್ಕೆ ಮುಂಚೆ ಅದು ಇರುವುದಿಲ್ಲ. ವಸ್ತು ಹುಟ್ಟುವುದಕ್ಕೆ ಮುಂಚಿನ ಅದರ ಅಭಾವ ಪ್ರಾಗಭಾವ. ಇದು ಅನಾದಿ. ಒಂದು ವಸ್ತು ಪ್ರಧ್ವಂಸವಾಗಲು ಅಂದರೆ ನಾಶವಾದಾಗ ಅದರ ಅಭಾವ ಹುಟ್ಟುತ್ತದೆ. ಒಂದು ಗಾಜಿನ ಬುರುಡೆ ನೆಲಕ್ಕೆ ಬಿದ್ದು ಒಡೆದು ಹಾಳಾಗುವುದು. ಹಾಗಾದ ಮೇಲೆ ಅದು ಗಾಜಿನ ಬುರುಡೆಯಾಗಿರುವುದಿಲ್ಲ. ಹೀಗೆ ಒಂದು ವಸ್ತು ನಾಶ ಹೊಂದಿದಾಗ ಪ್ರಧ್ವಂಸಾಭಾವ ಹುಟ್ಟುತ್ತದೆ. ಈ ಅಭಾವಗಳು ಅತ್ಯಂತಿಕವಲ್ಲ. ಅವುಗಳ ಹುಟ್ಟು ವಿನಾಶಕ್ಕೆ ಸಾಪೇಕ್ಷವಾಗಿ ಇರತಕ್ಕವು. ಆದರೆ ಅತ್ಯಂತಾಭಾವವಾದರೂ ಯಾವಾಗಲೂ ಇಲ್ಲದ್ದು. ಎಂದೆಂದಿಗೂ ಇರಲಾಗದ್ದು. ಬಂಜೆಯ ಮಗ ಎಲ್ಲಿಯೂ ಇಲ್ಲ. ಯಾವಾಗಲೂ ಇಲ್ಲ. ಬಂಜೆಯಾದರೆ ಮಕ್ಕಳಾಗುವುದಿಲ್ಲ. ಮಕ್ಕಳಾದರೆ ಬಂಜೆಯಾಗಿರುವುದಿಲ್ಲ. ಇವು ಒಂದನ್ನೊಂದು ನಿರಾಕರಿಸುತ್ತವೆ. ತಾರ್ಕಿಕರು ಅನ್ಯೋನ್ಯಾಭಾವವನ್ನು ವಸ್ತುವಿನಿಂದ ಭಿನ್ನವಾಗಿ (ವಸ್ತುವನ್ನು ಬಿಟ್ಟು) ತಿಳಿಯುತ್ತಾರೆ. ಇದು ಸರಿಯಲ್ಲವೆಂದು ದ್ವೈತ ವೇದಾಂತಿಗಳು ಖಂಡಿಸುತ್ತಾರೆ. ಅನ್ಯೋನ್ಯಾಭಾವವೆಂದರೆ ವಸ್ತುಗಳು ಒಂದಾಗಿ ಇಲ್ಲದಿರುವುದು. ಇದಕ್ಕೆ ಭೇದವೆಂದು ಹೆಸರು. ಮನುಷ್ಯ ಮರವಲ್ಲ. ಮನುಷ್ಯ ಮರದಿಂದ ಭಿನ್ನ. ಇವೆರಡರ ಅರ್ಥ ಒಂದೇ. ಇದಲ್ಲ ಅಂದರೆ ಇದು ಬೇರೆ ಎಂದು ಅರ್ಥ. ನಿಷೇಧsರೂಪ ವಿಧಿರೂಪವನ್ನು ಬೋಧಿಸುತ್ತದೆ. ಪಾಶ್ಚಾತ್ಯ ತಾತ್ವಿಕರು ಶುದ್ಧ ಅಭಾವವನ್ನು ಅಂದರೆ ಪರಮ ಅಭಾವವನ್ನು ನಿರಾಕರಿಸುತ್ತಾರೆ. ಏಕೆಂದರೆ ಹಾಗೆಲ್ಲ ಹೇಳುವಂತೆ ಅಭಾವ ಇದೆ ಎಂದು ಹೇಳುವುದು ಒಂದು ಆಭಾಸ. ಇರುವುದಾದರೆ ಅದು ಅಭಾವವಾಗಲಾರದು. ಅಭಾವವಾದರೆ ಅದು ಇರಲಾರದು. ಆದ್ದರಿಂದ ಅಭಾವ ಇರವಿಗೆ ಸಾಪೇಕ್ಷವಾದದ್ದು. ಯಾವುದಾದರೂ ಇದೆ ಎಂದು ಹೇಳಿದಾಗ ನಾವು ಅದರ ಅಭಾವವನ್ನು ನಿರಾಕರಿಸುತ್ತೇವೆಯಲ್ಲದೆ ಅದು ಬೇರೆಯ ಪದಾರ್ಥವಲ್ಲವೆಂದೂ ಸೂಚಿಸುತ್ತೇವೆ. ಇದೆ ಎಂದು ಹೇಳುವ ವಿಧಿರೂಪವಾದ ಪ್ರತಿಜ್ಞೆ, ಅದು ಬೇರೆಯಲ್ಲ ಎಂಬ ಅಭಾವವನ್ನು ಸೂಚಿಸುತ್ತದೆ. ಇಲ್ಲ ಎಂಬ ನಿಷೇಧ ಪ್ರತಿಜ್ಞೆ ಅದು ಹಾಗಿಲ್ಲದೆ ಬೇರೆಯಾಗಿದೆ ಎಂಬ ಅನ್ಯಾರ್ಥ ಸೂಚಕವಾಗಿರುತ್ತದೆ. ಎರಡು ಬಗೆಯಾದ ನಿಷೇಧವಿರಬಹುದು. ಅನ್ಯೋನ್ಯಾಭಾವ ಪ್ರಮಾಣ ಸಿದ್ಧವಾದದ್ದು. ಆದರೆ ಅತ್ಯಂತಾಭಾವ ಎರಡು ವಿರುದ್ಧ ವಸ್ತುಗಳನ್ನು ಸೇರಿದಂತೆ ತಿಳಿಸುತ್ತದೆ. ಒಂದು ವಸ್ತು ಒಂದೇ ಕಾಲದಲ್ಲಿ ಇದ್ದು ಇಲ್ಲದೆಯೂ ಇರಲಾರದು. ಈಶ್ವರಸಿದ್ಧವಾದ ಸತ್ಯವಾದ ಸತ್ಯವನ್ನು ಪಾಶ್ಚಾತ್ಯ ತಾರ್ಕಿಕರು ಆಲೋಚನೆಯ ಮೂಲನಿಯಮವಾಗಿ ತಿಳಿದಿರುತ್ತಾರೆ. ಇದಕ್ಕೆ ಲಾ ಆಫ್ ಕಾಂಟ್ರಡಿಕ್ಷನ್ ಎಂದು ಹೆಸರು. (ನೋಡಿ- ತರ್ಕಶಾಸ್ತ್ರ-(ಭಾರತೀಯ)) (ಜಿ.ಎಸ್.)