ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಭ್ಯಂತರ ಕಾಲ
ಅಭ್ಯಂತರ ಕಾಲ ರಾಜ್ಯದಲ್ಲಿ ಕ್ರಮಪ್ರಾಪ್ತ ರಾಜನಿಲ್ಲದ ಕಾಲ (ಇಂಟರಗ್ನಂ). ಅಂದರೆ ಒಬ್ಬ ರಾಜನ ಆಳಿಕೆ ಮುಗಿದು ಇನ್ನೊಬ್ಬ ರಾಜ ಅಧಿಕಾರಕ್ಕೆ ಬರುವವರೆಗಿನ ಮಧ್ಯಂತರ ಕಾಲ. ರಾಜಕೀಯವಿಚ್ಛಿತ್ತ, ಈ ಅವಧಿಯಲ್ಲಿ ಅರಾಜಕತೆಯ ಎಲ್ಲ ಲಕ್ಷಣಗಳೂ ಕಂಡುಬರಬಹುದು. ಸಾಮಂತರು, ಇತರ ಪ್ರಬಲ ವ್ಯಕ್ತಿಗಳು ಸ್ವೇಚ್ಛಾಪ್ರವರ್ತಕರಾಗಿ ಸಾಮಾನ್ಯ ಜನರೊಡನೆ ದರ್ಪದಿಂದ ವರ್ತಿಸಿ ಅವರನ್ನು ದುರ್ಗತಿಗೀಡುಮಾಡಬಹುದು.
ಎಲ್ಲ ದೇಶಗಳ ಚರಿತ್ರೆಯಲ್ಲೂ ಇಂಥ ಕಾಲ ಕಂಡುಬರುವುದಾದರೂ ಜರ್ಮನಿಯ ಇತಿಹಾಸದಲ್ಲಿ 1254ರಿಂದ 1273ರ ವರೆಗಿನ ಅವಧಿಯನ್ನು ಬೃಹದಭ್ಯಂತರ ಕಾಲವೆಂದು (ದಿ ಗ್ರೇಟ್ ಇಂಟರೆಗ್ನಂ) ಕರೆಯುತ್ತಾರೆ. ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲದೆ ಕ್ರೈಸ್ತ ದೊರೆಗಳ ಆಡಳಿತದ ಮೇಲೂ ತಮ್ಮ ಹತೋಟಿ ಇಟ್ಟುಕೊಳ್ಳಲೆತ್ನಿಸುತ್ತಿದ್ದ ಪೋಷಕರ ಕಾಲ ಅದು; ಆಗಿನ ಊಳಿಗಮಾನ್ಯ ಪದ್ಧತಿಗನುಸಾರವಾಗಿ ಸಾಮಂತರು, ಪ್ರಬಲರಾದ ಪ್ರಜಾಮುಖಂಡರು, ಸ್ವೇಚ್ಛೆಯಿಂದ ವರ್ತಿಸಬಹುದಾಗಿತ್ತು. 1254ರಲ್ಲಿ ನಾಲ್ಕನೆಯ ಕಾನ್ರಾಡ್ ಎಂಬ ಜರ್ಮನಿಯ ದೊರೆ ಕಾಲವಾದ ಮೇಲೆ ಇಂಥ ಅರಾಜಕ ಪರಿಸ್ಥಿತಿ ಅಲ್ಲಿ ಏರ್ಪಟ್ಟಿತು. ಸಮಯಸಾಧಕರೆಲ್ಲ ಮುಂದೆ ಬಂದು ತಮ್ಮ ಸ್ವಂತ ಐಶ್ವರ್ಯಗಳನ್ನು ಹೆಚ್ಚಿಸಲೆತ್ನಿಸಿದರು: ಸ್ಥಳೀಯ ಕ್ರೈಸ್ತಧರ್ಮಾಧಿಪತಿಗಳು ಲೌಕಿಕಲಾಭ ಸಂಪಾದನೆಯ ಆಮಿಷಕ್ಕೆ ಮನಸೋತರು. ಈ ಪರಿಸ್ಥಿತಿ ಕೊನೆಗಂಡದ್ದು ಪೋಪ್ ಹತ್ತನೆಯ ಗ್ರೆಗರಿಯ ಪ್ರಯತ್ನದ ಫಲವಾಗಿ 1273ರಲ್ಲಿ ಹ್ಯಾಪ್ಸ್‍ಬರ್ಗ್ ಶ್ರೀಮಂತಮನೆತನದ ರಡೋಲ್ಪ್ ದೊರೆಯಾದ ಮೇಲೆ.