ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮೃತಸರದ ಕೌಲು
ಅಮೃತಸರದ ಕೌಲು
1809ರ ಏಪ್ರಿಲ್ 25ರಂದು ರಣಜಿತ್ ಸಿಂಗನಿಗೂ ಬ್ರಿಟಿಷರಿಗೂ ನಡೆದ ಈ ಕೌಲು ಬ್ರಿಟಿಷರ ವ್ಯಾಪ್ತಿಯನ್ನು ಹೆಚ್ಚಿಸಿತಾಗಿ ಭಾರತದ ಚರಿತ್ರೆಯಲ್ಲಿ ಮುಖ್ಯವಾಗಿದೆ.
ರಣಜಿತ್ ಸಿಂಗ್ ತನ್ನ ಸ್ಥಾನವನ್ನು ಬಲಪಡಿಸಿಕೊಂಡ ಮೇಲೆ ಸಟ್ಲೆಜ್ ನದಿಯ ಸುತ್ತಮುತ್ತಲ ಸಣ್ಣಪುಟ್ಟ ಸಿಖ್ ರಾಜ್ಯಗಳೆಲ್ಲವನ್ನೂ ತನ್ನ ಅಧೀನಕ್ಕೆ ಒಳಪಡಿಸಿಕೊಂಡು, ಸಿಖ್ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂಬ ಆಸೆಯಿಂದ 1806-07ರಲ್ಲಿ ಮುನ್ನುಗ್ಗಿದ. ಇದನ್ನು ಗಮನಿಸಿದ ಬ್ರಿಟಿಷರು ಬಲಯುತನಾದ ಅವನು ಫ್ರೆಂಚರ ಮೇಲೆ ಯುದ್ಧಮಾಡಲು ತಮಗೆ ಸಹಾಯಕನಾಗುತ್ತಾನೆಂದು ಭಾವಿಸಿ ಅವನೊಡನೆ ಒಪ್ಪಂದವನ್ನು ಮಾಡಿಕೊಳ್ಳಲು ಯೋಚಿಸಿದರು. ಅಷ್ಟರಲ್ಲಿ ನೆಪೋಲಿಯನ್ ಭಾರತದ ಮೇಲೆ ದಂಡೆತ್ತಿಬರುವ ಸಂಭವ ಕಡಿಮೆಯಾಗಲು ಬ್ರಿಟಿಷರು ರಣಜಿತ್ ಸಿಂಗನೊಡನೆ ಒಪ್ಪಂದ ಮಾಡಿಕೊಳ್ಳುವ ಬದಲು ಅವನ ಮೇಲೆ ಒಂದು ಸೈನ್ಯವನ್ನು ಕಳುಹಿಸಿದರು. ಸಟ್ಲೆಜ್ ನದಿಯ ಪೂರ್ವಕ್ಕಿರುವ ಸಣ್ಣಪುಟ್ಟ ಸಿಖ್ ರಾಜ್ಯಗಳು. ಈ ಯುದ್ದದಲ್ಲಿ ಬ್ರಿಟಿಷರಿಗೆ ಸಹಾಯಕರಾಗಿ ತನ್ನ ಮೇಲೆ ಯುದ್ಧಮಾಡಬಹುದೆಂಬ ಶಂಕೆಯಿಂದ, ರಣಜಿತ್ ಸಿಂಗ್ ಬ್ರಿಟಿಷರೊಡನೆ ಯುದ್ಧಕ್ಕೆ ಬದಲು ಕೌಲು ಮಾಡಿಕೊಂಡ. ಇದೇ ಅಮೃತ ಸರದ ಕೌಲು. ಇದರ ಪ್ರಕಾರ ರಣಜಿತ್‍ಸಿಂಗ್ ಸಟ್ಲೆಜ್ ನದಿಯ ಬಲಭಾಗದ ಪ್ರದೇಶಗಳಲ್ಲಿ ಮಾತ್ರ ರಾಜ್ಯವಾಳಬೇಕೆಂದೂ ಮಿಕ್ಕ ಇತರ ಸಿಖ್ ರಾಜ್ಯಗಳು ಬ್ರಿಟಿಷರ ಅಧಿಪತ್ಯಕ್ಕೆ ಒಳಪಡಬೇಕೆಂದೂ ತೀರ್ಮಾನವಾಯಿತು. ಇದರಿಂದ ಬ್ರಿಟಿಷರ ರಾಜ್ಯ ಸಟ್ಲೆಜ್ ನದಿಯವರೆಗೂ ವಿಸ್ತರಿಸಿತು ಮತ್ತು ಲೂಧಿಯಾನ ನಗರದಲ್ಲಿ ಬ್ರಿಟಿಷರ ಸೈನ್ಯ ತಂಗುವ ಏರ್ಪಾಡೂ ಆಯಿತು. (ಎಂ.ಎಸ್.ಬಿ.)