ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮೆಷಾ ಸ್ಪೆಂಟಾ

ವಿಕಿಸೋರ್ಸ್ದಿಂದ
Jump to navigation Jump to search

ಅಮೆಷಾ ಸ್ಪೆಂಟಾ

ಜರತುಷ್ಟ್ರನ ಮತಧರ್ಮದಲ್ಲಿನ ಆರುಮಂದಿ ಪ್ರಧಾನ ದೇವದೂತರಿಗೆ ಈ ಹೆಸರಿದೆ. ಅಮೆಷಾ ಎಂದರೆ ನಿತ್ಯರು, ಅಮರರು ಎಂದೂ ಸ್ಪೆಂಟಾ ಎಂದರೆ ಉಪಕಾರಮನೋವೃತ್ತಿಯುಳ್ಳವರು, ಹಿತಕರರು ಎಂದೂ ಅರ್ಥ. ಯಹೂದ್ಯ, ಕ್ರೈಸ್ತ ಇತ್ಯಾದಿ ಮತಗಳಲ್ಲಿನ ದೇವದೂತರು, ಹಿಂದೂಧರ್ಮದಲ್ಲಿನ ಆದಿತ್ಯರು, ನಿತ್ಯಸೂರಿಗಳು ಇವರುಗಳಿಗೆ ಅಮೆಷಾ ಸ್ಪೆಂಟಾರನ್ನು ಹೋಲಿಸಬಹುದು.

ಇವರು ಸದಾ ಪರಬ್ರಹ್ಮಸ್ವರೂಪನಾದ ಅಹುರಮಸ್ದನ ಸೇವೆಯಲ್ಲಿ ನಿರತರು. ಇವರ ವಿವರ ಹೀಗಿದೆ : (1) ವೊಹುಮನೊ-ಸಮ್ಯಗ್ಚಾರಿತ್ರ್ಯದ ರೂಪ; (2) ಅಷೆಮ್ ವಹಿಷ್ಟೆಮ್-ಸತ್ಯಂ ಶಿವಂ ಶುಭಂಗಳ ಮೂರ್ತಸ್ವರೂಪ; (3) ಕ್ಷಹತ್ರೆಮ್ ವೈರೀಮ್-ದುಷ್ಟನಿಗ್ರಹ, ಶಿಷ್ಟಪರಿಪಾಲನಸ್ವರೂಪ; (4) ಸ್ಪೆಂಟಾ ಆರ್ಮೈತಿ-ಸ್ತ್ರೀದೇವತೆ, ಅಹುರಮಸ್ದನ ಪುತ್ರಿ, ಭುವಿಯ ಮೇಲೆ ನೆಲೆಸಿದ ದೈವೀಶಕ್ತಿಯ ಪ್ರತೀಕ ; (5) ಹೌರ್ವತಾತ್-ಪರಿಪೂರ್ಣತೆಯ ಸ್ವರೂಪ ; (6) ಅಮೆರೆತಾತ್-ಅಮೃತತ್ತ್ವಸ್ವರೂಪ.

ಇವರೊಂದಿಗೆ ಸ್ರೌಷಾ ಎಂಬ ದೇವತೆಯೂ ಸೇರಿ ಅಹುರಮಸ್ದನ ಸಪ್ತಪರಿಚಾರಕಮಂಡಲಿಯಾಗುತ್ತದೆ.

ಇವರ ಮುಖ್ಯ ಕರ್ತವ್ಯವೆಂದರೆ ಭಗವಂತನ ಸೃಷ್ಟಿಯ ಮೇಲ್ವಿಚಾರಣೆ ನೋಡಿಕೊಳ್ಳುವುದು, ಸಂರಕ್ಷಣೆ ಮಾಡುವುದು ಮತ್ತು ಭಕ್ತರಿಗೆ ಅಭಯಪ್ರದಾನ ಮಾಡುವುದು. ಇವರು ಸದಾಕಾಲದಲ್ಲೂ ಪಾಪದೇವತೆಯನ್ನು ಪ್ರತಿಭಟಿಸುತ್ತಿರುತ್ತಾರೆ.

(ಆರ್.ಎಸ್.)