ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮೋಘವರ್ಷ

ವಿಕಿಸೋರ್ಸ್ದಿಂದ

ಅಮೋಘವರ್ಷ

ರಾಷ್ಟ್ರಕೂಟ ಮನೆತನದಲ್ಲಿ ನೃಪತುಂಗನೆಂದು ಪ್ರಸಿದ್ಧನಾದ ರಾಜಕವಿ. ಉತ್ತರಭಾರತದ ದಿಗ್ವಿಜಯ ಮಾಡಿ ಬಂದ 3ನೆಯ ಗೋವಿಂದನ ಮಗ. ಗೋವಿಂದ ವಿಂಧ್ಯಪರ್ವತದ ತಪ್ಪಲಲ್ಲಿದ್ದ ಶ್ರೀಭವನದಲ್ಲಿ ಬೀಡುಬಿಟ್ಟಿದ್ದಾಗ ಶರ್ವ-ಅಮೋಘವರ್ಷ ಹುಟ್ಟಿದನೆಂದು ಸಂಜಾನ ಶಾಸನದಲ್ಲಿ ಹೇಳಿದೆ. 803ರ ಮಣ್ಣೆಯ ಶಾಸನದಲ್ಲಿ ಗೋವಿಂದ ಶ್ರೀಭವನದಲ್ಲಿದ್ದ ಸಂಗತಿ ಉಕ್ತವಾಗಿದೆಯಾದಕಾರಣ ಅಮೋಘವರ್ಷ ಸು. 800ರಲ್ಲಿ ಜನ್ಮವೆತ್ತಿರಬಹುದು. ಗೋವಿಂದ 814ರಲ್ಲಿ ತೀರಿಕೊಂಡಿದ್ದರಿಂದ ಅಮೋಘವರ್ಷ ಪಟ್ಟಕ್ಕೆ ಬಂದಾಗ 14 ಮರ್ಷದ ಚಿಕ್ಕಬಾಲಕನಾಗಿದ್ದ. ಈ ಸಂಧಿಯನ್ನು ಸಾಧಿಸಿ ಕೆಲವು ಶುಲ್ಕಕರೂ (ಚಾಲುಕ್ಯರೂ) ರಾಷ್ಟ್ರಕೂಟರೂ ಬಂಡು ಹೂಡಿ ಅಮೋಘವರ್ಷನನ್ನು ಪಟ್ಟದಿಂದ ತಳ್ಳಿ ರಾಷ್ಟ್ರಕೂಟ ರಾಜ್ಯವನ್ನು ಆಕ್ರಮಿಸಬೇಕೆಂದು ಹೊಂಚು ಹಾಕಿದರು. ಆದರೆ ಬಡೋದಾ ತಾಮ್ರಶಾಸನದಲ್ಲಿ (835) ಹೇಳಿದಂತೆ ಗುಜರಾತಿನ ರಾಜ ಬಂಡುಗಾರರನ್ನು ಗೆದ್ದು ಅಮೋಘವರ್ಷನನ್ನು ಸಿಂಹಾಸನದ ಮೇಲೆ ಸ್ಥಿರಪಡಿಸಿದ. ಸಂಜಾನ ತಾಮ್ರಶಾಸನದಲ್ಲಿ ಪಾತಾಲಮಲ್ಲನೆಂಬ ವೀರಭಟ ಶತೃಗಳನ್ನು ನಿಗ್ರಹಿಸಿ ರಾಜ್ಯದಲ್ಲಿ ಶಾಂತತೆಯನ್ನು ನೆಲೆಗೊಳಿಸಿ ಅಮೋಘವರ್ಷನನ್ನು ತನ್ನ ವಂಶಾನುಗತ ಸಿಂಹಾಸನದ ಮೇಲೆ ಸ್ಥಿರವಾಗಿ ಕೂಡಿಸಿದನೆಂದು ಬರೆದಿದೆ. 2ನೆಯ ಕೃಷ್ಣರಾಜನ ತಾಮ್ರಶಾಸನಗಳಲ್ಲಿ ಅಮೋಘವರ್ಷ ಶತೃಗಳನ್ನು ತಾನೇ ನಿರ್ಮೂಲನ ಮಾಡಿ ರಾಜ್ಯವನ್ನು ಸ್ಥಿರಪಡಿಸಿಕೊಂಡನೆಂದು ಹೇಳಿದೆ.

ಅಮೋಘವರ್ಷ ಮಹಾಪ್ರತಾಪಶಾಲಿ. ತನ್ನ ತಂದೆ ವಿಸ್ತರಿಸಿದ್ದ ರಾಜ್ಯವನ್ನು ಅತಿ ಸಾಹಸದಿಂದ ಕಾಪಾಡಿಕೊಂಡು ಬಂದ. ಪೂರ್ವದ ಚಾಲುಕ್ಯ ಮತ್ತು ತಲಕಾಡಿನ ಗಂಗರೊಂದಿಗೆ ಹೋರಾಡಿ ಅವರ ರಾಜ್ಯದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡ. ವಿಸ್ತಾರವಾದ ರಾಜ್ಯವನ್ನು ಬಂಕೇಶ ಮೊದಲಾದ ಅನೇಕ ಮಾಂಡಲಿಕರ ಸಹಾಯದಿಂದ ಆಳುತ್ತ ದೇಶದಲ್ಲಿ ಶಾಂತತೆಯನ್ನು ನೆಲೆಗೊಳಿಸಿದ. ಲೋಕೋಪದ್ರವಶಾಂತಿಗೆಂದು ತನ್ನ ಎಡಗೈ ಬೆರಳನ್ನು ಮಹಾಲಕ್ಷ್ಮಿಗಾಗಿ ಬಲಿಯಾಗಿ ಕೊಟ್ಟನೆಂದು ಅವನ ಸಂಜಾನ ತಾಮ್ರಶಾಸನದಲ್ಲಿ ಬರೆದಿದೆ. ಈ ಲೋಕೋಪದ್ರವ ಯಾವುದೆಂಬುದು ಗೊತ್ತಿಲ್ಲ.

ಅಮೋಘವರ್ಷದ ಕಾಲದಲ್ಲಿ ಕೆಲವು ಯುದ್ಧಗಳು ಜರುಗಿದರೂ ಅವನ ಸುಮಾರು 62 ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ಲಲಿತಕಲೆಗಳ ಅಭಿವೃದ್ಧಿಗೆ ಅನುಕೂಲವಾದ ಶಾಂತಿ ಅವನ ರಾಜ್ಯದಲ್ಲಿ ನೆಲೆಸಿತ್ತು. ಈತ ಕನ್ನಡ ಸಾಹಿತ್ಯದಲ್ಲಿ ಉಪಲಬ್ಧಗ್ರಂಥಗಳಲ್ಲಿ ಅತಿ ಪ್ರಾಚೀನ ಗ್ರಂಥವೆನಿಸಿದ ಕವಿರಾಜಮಾರ್ಗವನ್ನೂ ಪ್ರಶ್ನೋತ್ತರ ಮಾಲಿಕಾ ಎಂಬ ಸಂಸ್ಕøತ ಗ್ರಂಥವನ್ನೂ ರಚಿಸಿದನೆಂದು ಒಂದು ವಾದವಿದೆ. ಆದರೆ ಅವುಗಳ ಕರ್ತೃ ಅಮೋಘವರ್ಷನಲ್ಲವೆಂದು ಭಾವಿಸುವವರೂ ಉಂಟು. ಕವಿರಾಜಮಾರ್ಗ ಭಾಮಹ ದಂಡಿಯರ ಅಲಂಕಾರ ಗ್ರಂಥಗಳನ್ನು ಬಹಳಮಟ್ಟಿಗೆ ಅನುಸರಿಸಿದೆ. ಕನ್ನಡ ಅಲಂಕಾರ ಗ್ರಂಥಗಳಲ್ಲಿ ಇದು ಪ್ರಮಾಣಭೂತವಾದುದು. ಅಮೋಘವರ್ಷ ಶ್ರೀವಿಜಯ ಮೊದಲಾದ ವಿದ್ವಾಂಸರಿಗೆ ತನ್ನ ಆಸ್ಥಾನದಲ್ಲಿ ಆಶ್ರಯವಿತ್ತಿದ್ದ. ಪಾಶ್ರ್ವಾಭ್ಯುದಯ, ಪೂರ್ವಪುರಾಣಗಳನ್ನು ಬರೆದ ಜಿನಸೇನಾಚಾರ್ಯರು ಈತನ ಗುರು. ಶಾಕಟಾಯಕನೆಂಬ ಜೈನ ವೈಯಾಕರಣ ಶಬ್ದಾನುಶಾಸನವನ್ನೂ ಅದಕ್ಕೆ ಟೀಕಾರೂಪವಾದ ಅಮೋಘವೃತ್ತಿಯನ್ನೂ ಆಗಲೇ ರಚಿಸಿದ. ಯುವರಾಜ ಕೃಷ್ಣರಾಜನಿಗೆ ಗುರುವಾಗಿದ್ದ ಗುಣಭದ್ರಾಚಾರ್ಯನು ಅಮೋಘವರ್ಷನ ಭಕ್ತಿಗೌರವಗಳಿಗೆ ಪಾತ್ರನಾಗಿದ್ದು ಉತ್ತರಪುರಾಣವನ್ನು ರಚಿಸಿದ. ಗಣಿತಸಾರಸಂಗ್ರಹದ ಕರ್ತನಾದ ವೀರಾಚಾರ್ಯ ತನ್ನ ಗ್ರಂಥ ರಚನೆಯ ಕಾಲದಲ್ಲಿ ಅಮೋಘವರ್ಷ ಸಾರ್ವಭೌಮನಾಗಿದ್ದನೆಂದು ಹೇಳಿದ್ದಾನೆ.

ಅಮೋಘವರ್ಷನಿಗೆ ಶರ್ವ, ನೃಪತುಂಗ ಎಂಬ ಹೆಸರುಗಳಲ್ಲಿದೆ ಅತಿಶಯಧವಳ, ವೀರನಾರಾಯಣ, ಲಕ್ಷ್ಮೀವಲ್ಲಭೇಂದ್ರ, ಶ್ರೀವಲ್ಲಭ ಮತ್ತು ಮಾರ್ತಾಂಡ ಮುಂತಾದ ಬಿರುದುಗಳಿದ್ದುವು. ಇವನಿಗೆ ಶಂಖಾದೇವಿ, ಚಂದ್ರೊಬ್ಬಲಬ್ಬೆ ಎಂಬ ಇಬ್ಬರು ಹೆಣ್ಣುಮಕ್ಕಳೂ ಕೃಷ್ಣರಾಜನೆಂಬ ಮಗನೂ ಇದ್ದರು. ಈತ ಶಾಂತಿಪ್ರಿಯನಾದುದರಿಂದ ಶತ್ರುಗಳಾದ ಗಂಗ ಮತ್ತು ಪಲ್ಲವರನ್ನು ಸೋಲಿಸಿ ಅವರೊಡನೆ ಬಾಂಧವ್ಯವನ್ನು ಬೆಳೆಸಿದ. ರಾಷ್ಟ್ರಕೂಟವಂಶದಲ್ಲಿ 3ನೆಯ ಗೋವಿಂದ ದಿಗ್ವಿಜಯಗಳಿಂದ ಪ್ರಸಿದ್ಧನಾಗಿದ್ದರೆ ಅವನ ಮಗನಾದ ಅಮೋಘವರ್ಷ ತನ್ನ ರಾಜ್ಯದಲ್ಲಿ ಶಾಂತಿಯನ್ನು ನೆಲೆಗೊಳಿಸಿ ಲಲಿತಕಲೆಗಳಿಗೆ ಪ್ರೋತ್ಸಾಹವನ್ನು ಕೊಟ್ಟು ಕರ್ನಾಟಕದ ಕೀರ್ತಿಯನ್ನು ಬೆಳೆಗಿಸಿದ. (ಆರ್.ಎಸ್.ಪಿ.)