ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರಕೇರಿಯ

ವಿಕಿಸೋರ್ಸ್ ಇಂದ
Jump to navigation Jump to search

ಅರಕೇರಿಯ ಅರಕೇರಿಯೇಸೀ ಕುಟುಂಬಕ್ಕೆ ಸೇರಿದ ನಿತ್ಯ ಹಸುರಾಗಿರುವ, ದೈತ್ಯಾಕಾರದ ಮರ. ಇದರಲ್ಲಿ 15 ಪ್ರಭೇದಗಳಿದ್ದು ಇವು ಮುಖ್ಯವಾಗಿ ಆಸ್ಟ್ರೇಲಿಯ, ದಕ್ಷಿಣ ಅಮೆರಿಕ ಹಾಗೂ ಪೆಸಿಫಿಕ್ ದ್ವೀಪಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ಹೀಗೆ ಮೂಲತಃ ದಕ್ಷಿಣಾರ್ಧಗೋಳವಾದರೂ ಹಲವು ಪ್ರಭೇದಗಳನ್ನು ಪ್ರಪಂಚದ ಬೇರೆ ಬೇರೆ ದೇಶಗಳಲ್ಲೂ ಬೆಳೆಸಿದ್ದಾರೆ. ಭಾರತದಲ್ಲೂ ಇದರ ಪ್ರಭೇದಗಳಾದ ಕುಕಿಯೈ, ಕನಿಂಗ್‍ಹ್ಯಾಮಿಯೈ ಎಕ್ಸೆಲ್ಸ ಮತ್ತು ಇಂಬ್ರಿಕೇಟಗಳನ್ನು ಬೆಳೆಸಲಾಗುತ್ತಿದೆ. ಗೋಪುರಾಕೃತಿಯ ಈ ಮರ ಸಾಮಾನ್ಯವಾಗಿ 30-60 ಮೀ. ಎತ್ತರಕ್ಕೆ ಬೆಳೆದು, ಸುಮಾರು 3-4 ಮೀ. ದಪ್ಪವಿರುತ್ತದೆ. ಈ ಮರಕ್ಕೆ ಅದರದೇ ಆದ ವಿಶಿಷ್ಟ ಹಾಗೂ ಸುಂದರವಾದ ಆಕೃತಿ ಇದ್ದು ಉದ್ಯಾನಗಳಿಗೆ ಶೋಭೆಯನ್ನುಂಟುಮಾಡುತ್ತದೆ. ಮರದಿಂದ ಸುತ್ತಲೂ ಮೇಲ್ಮುಖವಾಗಿ ಬಾಗಿರುವ ರೆಂಬೆಗಳು ಹೊರಟಿರುತ್ತವೆ. ಕಾಂಡದಿಂದ ರಾಳ ತಯಾರಾಗುತ್ತದೆ. ಇದರ ಎಲೆಗಳು ಹಸುರು, ಚೂಪು ಮತ್ತು ಬಿರುಸು. ಕೆಲವು ಪ್ರಭೇದಗಳಲ್ಲಿ ಎರಡು ರೀತಿಯ ಎಲೆಗಳಿರುವುದೂ ಉಂಟು. ಈ ಜಾತಿಯಲ್ಲಿ ಗಂಡು ಮತ್ತು ಹೆಣ್ಣುಮರಗಳು ಬೇರೆ ಬೇರೆಯಾಗಿರುತ್ತವೆ. ಗಂಡುಮರದಲ್ಲಿ ಕೊಳವೆಯಾಕಾರದ ಗಂಡು ಶಂಕುಗಳಿರುತ್ತವೆ. ಪ್ರತಿಯೊಂದು ಶಂಕುವಿನಲ್ಲೂ ಒತ್ತಾಗಿ ಸುತ್ತುವರಿದು ಜೋಡಣೆಗೊಂಡಿರುವ ಅನೇಕ ಕೇಸರಗಳಿರುತ್ತವೆ. ಹೆಣ್ಣುಮರದಲ್ಲಿ ಗುಂಡಗಿರುವ ಹೆಣ್ಣು ಶಂಕುಗಳಿದ್ದು ಪ್ರತಿಯೊಂದರಲ್ಲಿಯೂ ಅನೇಕ ಅಂಡಕಧರ ಬೀಜಗಳಿವೆ. ಇವು ಪಟ್ಟಿಗೆ ಅಂಟಿಕೊಂಡಿರುತ್ತವೆ. ಈ ಮರದ ಹಲವಾರು ಪ್ರಭೇದಗಳನ್ನು ಸಾಮಾನ್ಯವಾಗಿ ಉದ್ಯಾನಗಳಲ್ಲೂ ತೋಟಗಳಲ್ಲೂ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಶೀತ ದೇಶಗಳಲ್ಲಿ ಈ ಮರಗಳನ್ನು ಎಳೆಯವಾಗಿರುವಾಗ ಕುಂಡಗಳಲ್ಲಿ ಬೆಳೆಸುತ್ತಾರೆ. ಭಾರತದಲ್ಲಿ ಬೆಳೆಯುವ ಕನಿಂಗ್‍ಹ್ಯಾಮಿಯೈ ಪ್ರಭೇದದಿಂದ ಒಳ್ಳೆಯ ಬೆಲೆಬಾಳುವ ಚೌಬೀನೆ ದೊರಕುತ್ತದೆ. ಇದನ್ನು ಬೀರು, ಪೆಟ್ಟಿಗೆ, ಪ್ಲೈವುಡ್ ತಯಾರಿಕೆ ಇತ್ಯಾದಿ ಕೆಲಸಗಳಿಗೆ ಉಪಯೋಗಿಸುತ್ತಾರೆ. (ಕೆ.ಬಿ.ಎಸ್.) (ಪರಿಷ್ಕರಣೆ: ಕೆ ಬಿ ಸದಾನಂದ)