ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರಗುರೆಕ್ಕೆ ಹಕ್ಕಿ

ವಿಕಿಸೋರ್ಸ್ ಇಂದ
Jump to navigation Jump to search

ಅರಗುರೆಕ್ಕೆ ಹಕ್ಕಿ ರೆಕ್ಕೆಯ ಗರಿಗಳ ಕೊನೆ ಅರಗಿನಂತೆ ಕೆಂಪಗಿರುವುದರಿಂದ ಈ ಹೆಸರು (ವ್ಯಾಕ್ಸ್‍ವಿಂಗ್). ಇದು ಪಾಸರೈನ್ ಪಕ್ಷಿವರ್ಗದ ಬಾಂಬಿಸಿಲಿಡೆ ಪ್ರಭೇದ. ತಲೆಯ ಮೇಲೆ ಗರಿಗಳಿಂದಾದ ಒಂದು ಜುಟ್ಟು ಇದೆ. ಹಕ್ಕಿ ನೋಟಕ್ಕೆ ಬಲುಸುಂದರ. ಸೈಬೀರಿಯ ಮತ್ತು ಜಪಾನ್ ದೇಶಗಳಲ್ಲಿ ಗರಿಗಳ ತುದಿ ಮಾತ್ರವಲ್ಲದೆ ಬಾಲದ ಪುಕ್ಕಗಳೂ ಕೆಂಪು ಅರಗಿನ ಹೊಳಪನ್ನು ಹೊಂದಿರುತ್ತವೆ. ಕೆಲವು ಜಾತಿಯವು ಸಿಡಾರ್ (ದೇವದಾರು) ಮರವನ್ನು ಅವಲಂಬಿಸಿರುವುದರಿಂದ ಅವನ್ನು ಸಿಡಾರ್ ಹಕ್ಕಿಗಳೆಂದು ಕರೆಯುವುದುಂಟು.

ಇವು ಉತ್ತರ ಅಮೆರಿಕದಲ್ಲಿ ಹೇರಳ. ಚಳಿಗಾಲ ಸಮೀಪಿಸಿದಂತೆ ತಂಡೋಪತಂಡವಾಗಿ ಮಧ್ಯ ಮತ್ತು ದಕ್ಷಿಣ ಯೂರೋಪ್ ಖಂಡಗಳಿಗೆ ವಲಸೆಹೋಗುತ್ತವೆ. ಹಿಂದಿನ ಕಾಲದಲ್ಲಿ ಇವುಗಳು ಬರವನ್ನು ಅಷ್ಟಾಗಿ ಸಹಿಸುತ್ತಿರಲಿಲ್ಲ. ಅದು ಮುಂಬರುವ ಮಹಾ ಅಪಘಾತದ ಸೂಚನೆ ಎಂದು ನಂಬಿದ್ದರು. (ಜಿ.ಎಂ.ಬಿ.)