ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರಬ್ಬೀ ಒಕ್ಕೂಟ

ವಿಕಿಸೋರ್ಸ್ದಿಂದ

ಅರಬ್ಬೀ ಒಕ್ಕೂಟ


1945ರ ಮಾರ್ಚ್ ತಿಂಗಳಲ್ಲಿ ಸ್ಥಾಪಿಸಲ್ಪಟ್ಟಿತು. ಕೇಂದ್ರ ಕಛೇರಿ ಕೈರೋನಲ್ಲಿದೆ. ಇದರ ಸ್ಥಾಪನೆಗೆ ಇಂಗ್ಲೆಂಡ್ ದೇಶವೆ ಮುಖ್ಯ ಕಾರಣವಾಗಿದೆ ಮೊದಲ ಮಹಾಯುದ್ಧ ಸಮಯದಲ್ಲಿ ಇದರ ಸ್ಥಾಪನೆಗೆ ಪ್ರಯತ್ನಗಳು ನಡೆದು ಎರಡನೆಯ ಮಹಾಯುದ್ಧ ಮುಗಿಯುವುದರೊಳಗೆ ಇದು ಕಾರ್ಯಗತವಾಯಿತು. ಈಜಿಪ್ಟ್ ದೇಶದ ಸಹಾಸ್ ಪಾಷ ಕೈರೊದಲ್ಲಿ ಕೂಡಿಸಿದ ಅರಬ್ ರಾಷ್ಟ್ರಗಳ ಸಭೆಯ ತೀರ್ಮಾನದಂತೆ ಒಕ್ಕೂಟ ಸ್ಥಾಪನೆಯಾಯಿತು. ಈ ಕೂಟದಲ್ಲಿ ಸಿರಿಯ, ಟ್ರಾನ್ಸ ಜೋರ್ಡಾನ್, ಇರಾಕ್, ಸೌದಿ ಅರೇಬಿಯ, ಲೆಬನಾನ್, ಯೆಮೆನ್ ಮತ್ತು ಈಜಿಪ್ಟ್(ಹೀಗೆ ಏಳು ರಾಷ್ಟ್ರಗಳು ಸೇರಿವೆ. ಈ ಕೂಟದ ನಿಬಂಧನೆಗಳ ಪ್ರಕಾರ, ಇವುಗಳ ಜೊತಗೆ ಬೇರೆ ಯಾವ ರಾಷ್ಟ್ರಗಳಾದರೂ ಸೇರಿಕೊಳ್ಳಲು ಅವಕಾಶವಿದೆ. ತನ್ನ ಸದಸ್ಯರಾಷ್ಟ್ರಗಳ ನಾಗರೀಕತೆ ಮತ್ತು ಸಂಸ್ಕøತಿಯನ್ನು ಮುಂದುವರಿಸಿಕೊಂಡು ಹೋಗುವುದೆ ಈ ಒಕ್ಕೂಟದ ಧ್ಯೇಯ. ಈ ಕೂಟದ ರಾಷ್ಟ್ರಗಳು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕೆಂತಲೂ ಯಾವುದೇ ಅಪಾಯವನ್ನು ಎದುರಿಸಬೇಕಾಗಿ ಬಂದಾಗ ಪರಸ್ಪರ ಸಹಾಯ ನೀಡಬೇಕೆಂತಲೂ ಒಪ್ಪಿಕೊಂಡಿವೆ. ಹೆಚ್ಚಾಗಿ ಇಸ್ಲಾಂ ರಾಷ್ಟ್ರಗಳೆ ಈ ಕೂಟದಲ್ಲಿ ಇದ್ದರೂ ಇದು ಇಸ್ಲಾಂ ಒಕ್ಕೂಟವಲ್ಲ. ಇದು ಅರಬ್ಬೀ ರಾಷ್ಟ್ರಗಳ ಮತ್ತು ಜನಗಳ ಏಳಿಗೆಗಾಗಿ ಕೆಲಸಮಾಡುವ ಒಂದು ಸಂಸ್ಥೆ ಮಾತ್ರ. ಈಚೆಗೆ ಇದು ಆಲ್ಜೀರಿಯ, ಸೂಡಾನ್, ಲಿಬಿಯ, ಟುನೀಷಿಯ ಮತ್ತು ಮೊರಾಕೊ ರಾಷ್ಟ್ರಗಳ ಸೇರುವಿಕೆಯಿಂದ ಬಲಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ಇದು ಒಂದು ವಿಶಿಷ್ಟ ಅರಬ್ಬೀಪ್ರಪಂಚವೆಂದು ಪರಿಗಣಿಸಲ್ಪಟ್ಟಿದೆ. ಈ ಕೂಟದ ರಾಷ್ಟ್ರಗಳು ಎಣ್ಣೆ ಮತ್ತು ಪೆಟ್ರೋಲಿಯಮ್‍ನ ತೌರುಗಳಾಗಿರುವುದರಿಂದ ಕೂಟದ ಪ್ರಾಮುಖ್ಯ ಹೆಚ್ಚಿದೆ. ಸರ್ಕಾರಗಳ ಧ್ಯೇಯ ಧೋರಣೆಗಳಲ್ಲಿ ರಾಜಕೀಯ ಉದ್ದೇಶಗಳಲ್ಲಿ ರಾಷ್ಟ್ರ ರಾಷ್ಟ್ರಕ್ಕೂ ವ್ಯತ್ಯಾಸವಿರುವುದರಿಂದ ಕೂಟದ ಭದ್ರತೆಗೆ ಸ್ವಲ್ಪ ಧಕ್ಕೆ ಬರುವ ಸಂಭವಗಳಿವೆಯೆಂದು ಹೇಳಬಹುದು.

(ಎಂ.ಕೆ.ಆರ್.)