ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರಬ್ಬೀ ಸಮುದ್ರ

ವಿಕಿಸೋರ್ಸ್ದಿಂದ

ಅರಬ್ಬೀ ಸಮುದ್ರ

ಹಿಂದೂ ಮಹಾಸಾಗರದ ಒಂದು ಭಾಗ. ಅದರ ವಾಯುವ್ಯ ಭಾಗದಲ್ಲಿದೆ. ಎರಿಥ್ರಿಯನ್ ಸಮುದ್ರ ಎಂಬುದು ಇದರ ಹಳೆಯ ಹೆಸರು. ಅರಬ್ಬರ ವಾಣಿಜ್ಯ ಈ ಭಾಗದಲ್ಲಿ ಹೆಚ್ಚಾಗಿರುವುದರಿಂದ, ಇದನ್ನು ಅರಬ್ಬೀ ಸಮುದ್ರವೆಂದು ಕರೆಯಲಾಯಿತು. ಪೂರ್ವಕ್ಕೆ ಭಾರತವೂ ಉತ್ತರಕ್ಕೆ ಪಾಕಿಸ್ತಾನ ಮತ್ತು ಇರಾನ್ ದೇಶಗಳ ಪಶ್ಚಿಮ ಭಾಗಗಳೂ ಪಶ್ಚಿಮಕ್ಕೆ ಅರೇಬಿಯ, ಆಫ್ರಿಕಗಳ ಪೂರ್ವಭಾಗಗಳೂ ಇವೆ. ಕೆಂಪು ಸಮುದ್ರವೂ ಪರ್ಷಿಯ ಕೊಲ್ಲಿಯು ಅರಬ್ಬೀ ಸಮುದ್ರಕ್ಕೆ ಸೇರಿಕೊಂಡಿವೆ. ಸಿಂಧು, ನರ್ಮದಾ ಮತ್ತು ತಪತೀ( ಇವು ಈ ಸಮುದ್ರವನ್ನು ಸೇರುವ ಮುಖ್ಯ ನದಿಗಳು. ಒಂದಾನೊಂದು ಕಾಲದಲ್ಲಿ ಈ ಸಮುದ್ರ ತೀರ ಹಡಗಿನ ಸಂಚಾರಕ್ಕೆ ಪ್ರಖ್ಯಾತಿ ಹೊಂದಿತ್ತು. ಈಗ ಯೂರೋಪು ಮತ್ತು ಭಾರತಗಳ ಮಧ್ಯೆ ಪ್ರಮುಖ ನೌಕಾಮಾರ್ಗವಾಗಿದೆ. ಅಕ್ಟೋಬರ್‍ನಿಂದ ಮೇವರೆಗೆ ಈಶಾನ್ಯ ವಾಣಿಜ್ಯ ಮಾರುತವೂ ಬೀಸುತ್ತವೆ. ಅರಬ್ಬೀ ಸಮುದ್ರದ ಪ್ರಾಮುಖ್ಯ ಸುಯೆಜ್ ಕಾಲುವೆಯನ್ನು ತೆರೆದ ಅನಂತರ (1869) ಬಹಳ ಹೆಚ್ಚಿತು. ಏಡನ್, ಬೊಂಬಾಯಿ ಮತ್ತು ಕರಾಚಿ ಈ ಸಮುದ್ರ ತೀರದ ಪ್ರಖ್ಯಾತ ಬಂದರುಗಳು. ಇಲ್ಲಿನ ಕೆಲವು ದ್ವೀಪಗಳಲ್ಲಿ ಸೊಕೊಟ್ರಾ ಮತ್ತು ಲಕ್ಷದ್ವೀಪ ಎಂಬುವು ಮುಖ್ಯವಾದುವು.

(ಎಂ.ಎಸ್.ಎಂ.)