ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರವಿಂದ ಘೋಷ್

ವಿಕಿಸೋರ್ಸ್ ಇಂದ
Jump to navigation Jump to search

ಅರವಿಂದ ಘೋಷ್ : 1872-1950. ಪೂರ್ಣಯೋಗಮಾರ್ಗವನ್ನು ಜಗತ್ತಿಗೆ ತೋರಿದ ಮಹಾಯೋಗಿಗಳು. 1872 ಆಗಸ್ಟ್ 15ರಂದು ಜನಿಸಿದರು. ತಂದೆ ಕೃಷ್ಣಧನ ಘೋಷ್, ತಾಯಿ ಸ್ವರ್ಣಲತಾದೇವಿ, ವಿನಯಭೂಷಣ ಅಣ್ಣ, ಮನಮೋಹನ ತಮ್ಮ, ಸರೋಜಿನಿ ತಂಗಿ.

ಐದು ವರ್ಷ ವಯಸ್ಸಾದಾಗ ತಮ್ಮ ಸಹೋದರರೋಡನೆ ಇಂಗ್ಲೆಂಡಿನಲ್ಲಿ ವಿದ್ಯಾಬ್ಯಾಸ ಆರಂಭವಾಯಿತು. 1879-92ವರೆಗೆ, ಹದಿನಾಲ್ಕು ವರ್ಷಗಳ ಕಾಲ ಮ್ಯಾಂಚೆಸ್ಟರ್, ಲಂಡನ್, ಕೇಂಬ್ರಿಜ್‍ಗಳಲ್ಲಿ ಅಧ್ಯಯನಮಾಡಿ ಲ್ಯಾಟಿನ್, ಗ್ರೀಕ್‍ಭಾಷೆಗಳಲ್ಲಿ ಅದ್ವಿತೀಯ ಪಾಂಡಿತ್ಯ ಪಡೆದು ಪ್ರಥಮಶೇಣಿಯಲ್ಲಿ ತೇರ್ಗಡೆಯಾದರು. ತಂದೆಯ ಅಭಿಲಾಷೆಯಂತೆ ಐ.ಸಿ.ಎಸ್. ಪರೀಕೆಯಲ್ಲಿ ಉತ್ತೀರ್ಣರಾದರೂ ಕುದುರೆ ಸವಾರಿಯ ಪರೀಕೆಗೆ ಹೋಗದಿದ್ದುದ ರಿಂದ ಐ.ಸಿ.ಎಸ್. ಪದವಿಗೆ ಅನರ್ಹರಾದರು. ಗಾಯಕವಾಡದ ಮಹಾರಾಜರ ಆಹ್ವಾನವನ್ನು ಸ್ವೀಕರಿಸಿ 1893ರ ಫೆಬ್ರವರಿ 2ರಂದು ಬರೋಡವನ್ನು ಸೇರಿದರು. ಕೆಲವು ಕಾಲದ ಬಳಿಕ ಬರೋಡ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾದ್ಯಾಪಕರಾದರು. ಜೊತೆಗೆ ಅವರು ಮಹಾರಾಜರ ಆಪ್ತಕಾರ್ಯದರ್ಶಿಯಾಗಿಯೂ ಕೆಲಸ ಮಾಡಬೇಕಾಯಿತು. ಇದೇ ಸಮಯದಲ್ಲಿ ತಂದೆ ಕಾಲವಾಗಲು ತಾಯಿ, ತಮ್ಮ ತಂಗಿಯರ ಜೀವನನಿರ್ವಹಣದ ಹೊರೆ ಇವರ ಮೇಲೆಯೇ ಬಿತ್ತು. ಅರವಿಂದರ ದೃಷ್ಟಿ ತಮ್ಮ ಮಾತೃಭಾಷೆಯಾದ ಬಂಗಾಲಿಯನ್ನು ಕಲಿತು, ಬಂಕಿಮಚಂದ್ರರ ಮಧುಸೂದನದತ್, ಸ್ವಾಮಿ ವಿವೇಕಾನಂದ, ರವೀಂದ್ರನಾಥಠಾಕೂರ್ ಮೊದಲಾದವರ ಕೃತಿಗಳನ್ನು ಮೂಲದಲ್ಲಿಯೇ ಅಧ್ಯಯನ ಮಾಡುವತ್ತ ಹರಿಯಿತು. ಸ್ವಾಮಿ ವಿವೇಕಾನಂದರ ಕೃತಿಗಳ ಭಾಷೆಯ ಶಕ್ತಿ, ಗಾಂಭೀರ್ಯ, ಅವುಗಳ ರಸಾಸ್ವಾದನೆ ಅವರನ್ನು ಆಕರ್ಷಿಸಿತು. ಅವರ ಮೇಲೆ ಪ್ರಭಾವ ಬೀರಿದ ಶ್ರೇಷ್ಠಕೃತಿ ಶ್ರೀ ರಾಮಕೃಷ್ಣ ಪರಮಹಂಸರ ವಚನಾಮೃತ, ಭರ್ತೃಹರಿಯ ನೀತಿಶತಕ, ಕಾಳಿದಾಸನ ವಿಕ್ರಮೋರ್ವಶೀಯ ಮೊದಲಾದವು. ಈ ಸಂಸ್ಕೃತ ಕೃತಿಗಳನ್ನು ಅವರು ಇಂಗ್ಲಿಷಿಗೆ ಭಾಷಾಂತರ ಮಾಡಿದುದಲ್ಲದೆ, ವಾಲ್ಮೀಕಿರಾಮಾಯಣ ಮತ್ತು ವ್ಯಾಸ ಭಾರತದ ಕೆಲವು ಭಾಗಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ್ದಾರೆ.

ಮೃಣಾಲಿನಿ ಎಂಬ 14 ವರ್ಷದ ಕನ್ಯೆಯನ್ನು 1901ರಲ್ಲಿ ಅರವಿಂದರು ವಿವಾಹವಾದರು. ಆ ಸಮಯದಲ್ಲಿ ಅವರು ಬರೋಡ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಆಗ ಅವರಿಗೆ ಬರುತ್ತಿದ್ದ ಮಾಸಿಕ ವೇತನ 710 ರೂಪಾಯಿಗಳು. ಅಂತರ್ಮುಖಿಗಳಾದ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಂಕಲ್ಪಮಾಡಿದರು. ಸರ್ಕಾರದ ಕೆಲಸಕ್ಕೆ ರಾಜಿನಾಮೆ ಕೊಟ್ಟು, ಕೇವಲ 150 ರೂಪಾಯಿಗಳ ಮಾಸಿಕ ವೇತನಕ್ಕೆ ರಾಷ್ಟ್ರೀಯ ಕಾಲೇಜಿನ ಪ್ರಾಂಶುಪಾಲರಾದರು.

1906ರ ಡಿಸೆಂಬರ್ 26ರಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನದಲ್ಲಿ ಪೂರ್ಣಸ್ವಾತಂತ್ರ್ಯವೇ ಕಾಂಗ್ರೆಸಿನ ಧ್ಯೇಯವೆಂದು ನಿರ್ಣಯಮಾಡಲು ಅರವಿಂದರು ಕಾರಣರಾದರು. ಅಂದಿನ ಭಾರತಕ್ಕೆ ಸ್ವಾತಂತ್ರ್ಯ ಬರುವವರೆಗೆ ಕಾಂಗ್ರೆಸಿನ ಧ್ಯೇಯ ಅದೇ ಆಗಿತ್ತು. 1907ರ ಡಿಸೆಂಬರ್ ತಿಂಗಳಲ್ಲಿ ಬೊಂಬಾಯಿ ಪ್ರಾಂತ್ಯದಲ್ಲಿ ಸಂಚರಿಸಿ, ಜನರಲ್ಲಿ ದೇಶಪ್ರೇಮವನ್ನುಕ್ಕಿಸುವ ಉಜ್ಜ್ವಲ ಭಾಷಣ ಮಾಡಿದರು. ಬೊಂಬಾಯಿಯಿಂದ ಬರೋಡಕ್ಕೆ ಹೋದಾಗ, ಅಲ್ಲಿ ವಿಷ್ಣು ಭಾಸ್ಕರಲೀಲೆ ಎಂಬ ಯೋಗಿಯ ಸಂದರ್ಶನವಾಯಿತು. ಅವನ ಸಾನ್ನಿಧ್ಯದಲ್ಲಿ ಪ್ರಾಣಾಯಾಮ ಮೊದಲಾದ ಯೋಗಸಾಧನೆ ಮಾಡಿ ವಿಶೇಷ ಅನುಭವಗಳನ್ನು ಪಡೆದರು.

ಈ ಜಗತ್ತು ಈಶ್ವರನ ಭೂಮಿಕೆ ಎಂಬುದು ಅವರಿಗೆ ಸ್ಪಷ್ಟವಾಯಿತು. ಭಾರತಮಾತೆ ಸಾಕ್ಷಾತ್ ರಾಜೇಶ್ವÀರಿಯಾಗಿ ಅವರಿಗೆ ಕಾಣಿಸಿದಳು. ಬ್ರಹ್ಮತೇಜಸ್ಸಿನಿಂದಲೇ ಭಾರತದ ಸ್ವಾತಂತ್ರ್ಯ ಸಾಧ್ಯವೆಂದು ಅವರಿಗೆ ಭಾಸವಾಯಿತು. ಕಲ್ಕತ್ತೆಗೆ ಹಿಂತಿರುಗಿದ ಬಳಿಕ, ಬಿಪಿನ್‍ಚಂದಪಾಲರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ವಂದೇಮಾತರಂ ಎಂಬ ಇಂಗ್ಲಿಷ್ ವಾರಪತ್ರಿಕೆಯಲ್ಲಿ ತೇಜೋಪೂರ್ಣವಾದ ಲೇಖನಗಳನ್ನು ಬರೆದು ಯುವಕರನ್ನು ಸ್ವಾತಂತ್ರ್ಯ ಸಮರಕ್ಕೆ ಸಿದ್ಧಮಾಡಿದರು. ಫಲವಾಗಿ ಭಾರತದಲ್ಲಿ ಸ್ವಾತಂತ್ರ್ಯಸಂಗ್ರಾಮ ಉಗ್ರರೂಪಕ್ಕೆ ತಿರುಗಿತು. ಅದನ್ನು ಕಂಡ ಬ್ರಿಟಿಷ್ ಸರ್ಕಾರ ಆ ಪತ್ರಿಕೆಯ ಸಂಪಾದಕರನ್ನೂ ಅರವಿಂದರನ್ನೂ ರಾಜದೋಹದ ಆಪಾದನೆಯ ಮೇಲೆ ಸೆರೆಮನೆಗೆ ಕಳುಹಿಸಿತು. ಕೆಲವು ದಿನಗಳ ಬಳಿಕ ಅರವಿಂದರನ್ನು ಬಿಟ್ಟರೂ ಪುನಃ 1908ರ ಮೇ 4ರಂದು ಸುಮಾರು ಒಂದು ವರ್ಷ ಕಾಲ ಅವರಿಗೆ ಕಾರಾಗೃಹವಾಸದ ಶಿಕ್ಷೆಯಾಯಿತು. ಸೆರೆಮನೆ ಅವರಿಗೆ ಯೋಗಸಾಧನೆಯ ಕ್ಷೇತ್ರವಾಯಿತು. ವೇದ, ಉಪನಿಷತ್ತು, ಗೀತೆ ಮೊದಲಾದ ಸದ್ಗ್ರಂಥಗಳ ಪಠನದಿಂದ ಅವರಿಗಾದುದು ಸರ್ವಂ ಖಲ್ವಿದಂ ಬ್ರಹ್ಮಂ ಎಂಬುದರ ಅನುಭೂತಿ. ಕಡೆಗೆ ಕಲ್ಕತ್ತೆಯ ಸುಪ್ರಸಿದ್ಧ ವಕೀಲರಾದ

ಚಿತ್ತರಂಜನದಾಸರ ಪಯತ್ನದಿಂದಾಗಿ ಸೆರೆಮನೆಯಿಂದ ಹೊರಬರುವಂತಾಯಿತು. ಕಾರಾಗೃಹದಿಂದ ಹೊರಬಂದ ಅರವಿಂದರು ಇಂಗ್ಲಿಷಿನಲ್ಲಿ ಕರ್ಮಯೋಗಿ, ಬಂಗಾಳಿ ಯಲ್ಲಿ ಧರ್ಮ ಎಂಬ ಸಾಪ್ತಾಹಿಕಗಳನ್ನು ಆರಂಭಿಸಿದರು. ಪ್ರಚಂಡಶಕ್ತಿಯ ಅವತರಣಣವಾಗದೆ ಭಾರತಕ್ಕೆ ಸ್ವಾತಂತ್ರ್ಯ ಅಸಾಧ್ಯಯವೆಂಬುದು ಅವರ ಲೇಖನಗಳಲ್ಲಿ ವ್ಯಕ್ತವಾಯಿತು. ಅವರ ಲೇಖನಗಳು ಅನೇಕ ಯುವಕರಿಗೆ ಸ್ಫೂರ್ತಿ ನೀಡಿದುವು. ಅಂತರ್ಮುಖಿಗಳಾದ ಅವರು ಯೋಗಸಾಧನೆಯಲ್ಲಿ ತೊಡಗಲು ಸಂಕಲ್ಪಮಾಡಿದರು. 1910 ಏಪ್ರಿಲ್ 4ರಂದು ಪಾಂಡಿಚೆರಿ ಯನ್ನು ಪ್ರವೇಶಿಸಿ, ತಮ್ಮ ಭೌತಿಕಶರೀರವನ್ನು ತ್ಯಜಿಸುವರೆಗೆ ಅವರು ಅಲ್ಲಿಂದ ಚಲಿಸಲಿಲ್ಲ. ದಿವ್ಯಜೀವನದಲ್ಲಿ ಸುಪ್ರತಿಷ್ಠಿತವಾಗುವುದೆ ಮಾನವನ ಆದರ್ಶವೆಂಬುದು ಅವರಿಗೆ ಸ್ಪಷ್ಟವಾ ಯಿತು. ಸು. 7 ವರ್ಷಗಳ ಕಾಲ ಆರ್ಯ ಎಂಬ ಪ್ರತಿಕೆಯಲ್ಲಿ ವೇದರಹಸ್ಯ , ಉಪನಿಷತ್ತು.ಳ ವ್ಯಾಖ್ಯಾನ, ದಿವ್ಯಜೀವನದ ಆದರ್ಶ, ಯೋಗಸಮನ್ವಯ, ಭಾರತೀಯ ಸಂಸ್ಕೃತಿಯ ಹಿರಿಮೆ, ಮಾನವಕುಲದ ಅಭ್ಯುದಯ, ಸಾಹಿತ್ಯ, ದರ್ಶನಇತ್ಯಾದಿ ಹಲವು ವಿಷಯಗಳನ್ನು ಕುರಿತ ಅವರ ಪ್ರಬುದ್ಧ ಲೇಖನಗಳು ಪ್ರಕಟವಾದುವು. 1920 ಏಪ್ರಿಲ್ 24ರಂದು ಮೇರಿ ರಿಚರ್ಡ್ಸ್ ಎಂಬ ಫ್ರಾನ್ಸ್ ದೇಶದ ಮಹಿಳೆ ಅರವಿಂದರ ಶಿಷ್ಯೆಯಾಗಿ ಪಾಂಡಿಚೆರಿಯಲ್ಲಿ ನೆಲೆಸಿ ಅರವಿಂದಾಶ್ರಮವನ್ನು ರೂಪಿಸಿವುದರಲ್ಲಿ ಕಾರ್ಯಶೀಲಳಾದಳು, ಮಹಾಸಾಧಕರಾದ ಅರವಿಂದರಲ್ಲಿ 1926ರ ನವೆಂಬರ್ 24ರಂದು ಅತಿಮಾನಸತ್ವ ಅವತರಣವಾಯಿತು, ಅಷ್ಟರಿಂದಲೇ ಅವರು ತೃಪ್ತರಾಗದೇ , ಸಮಷ್ಟಿಯಲ್ಲಿ ಅತಿಮಾನಸತ್ವ ಅವಿರ್ಭವಿಸಲೆಂಬ ಅಭೀಪ್ಸೆಯಿಂದ ಅವರು ಮಹತ್ತರ ತಪಸ್ಸಿನಲ್ಲಿ ನಿರತರಾದರು. ಅವರ ಸಂದರ್ಶನ ದೊರಕುವುದು ಸಾಧಕರಿಗೆ ದುರ್ಲಭವಾದರೂ ವರ್ಷಕ್ಕೆ ನಾಲ್ಕು ಬಾರಿ ಅವರನ್ನು ಸಂದರ್ಶಿಸಲು ಅವಕಾಶವಿತ್ತು. ಸಾಧಕರು ಬರೆಯುತ್ತಿದ್ದ ಸಹಸ್ರಾರು ಪತ್ರಗಳಿಗೆ ಉತ್ತರ ಬರೆಯಲು ಅವರು ಮರೆಯುತ್ತಿರಲಿಲ್ಲ. ಮಹಾಯೋಗಿ ಅರವಿಂದರು 1950 ಡಿಸೆಂಬರ್ 5ರಂದು ತಮ್ಮ ಶರೀರವನ್ನು ತ್ಯಜಿಸಿ ಮಹಾಸಮಾಧಿಯಲ್ಲಿ ಲೀನವಾದರು.

ಅರವಿಂದರ ಕೃತಿಗಳು ಹಿಮಾಲಯ ಸದೃಶವಾಗಿವೆ. ಅವರ ಕೃತಿಶ್ರೇಣಿಗಳಲ್ಲಿ ಗೀತಾಪ್ರಬಂಧಗಳು, ಯೋಗಸಮನ್ವಯ, ದಿವ್ಯಜೀವನ, ಸಾವಿತ್ರಿಈ ಕೃತಿಗಳ ಸ್ಥೂಲಪರಿಚಯವನ್ನು ಮಾತ್ರ ಇಲ್ಲಿ ನಿರೂಪಿಸಿದೆ.

ಗೀತೆಯ ಚಿಂತನೆ, ಭಾವ ವಿಚಾರಇವೆಲ್ಲ ಯಾವ ಮತಪ್ರಚಾರಕ್ಕಾಗಿಯೂ ನಿಯೋಜಿತವಾಗಿಲ್ಲ. ಅನಾದಿಬ್ರಹ್ಮದಿಂದ ಈ ಜಗತ್ತಿನ ಸೃಷ್ಟಿಯಾಯಿತೆಂದು ಗೀತೆ ಪ್ರತಿಪಾದಿಸುವುದರಿಂದ ಅದು ಅದೈತ ತತ್ವವನ್ನು ನಿರೂಪಿಸುವ ಗ್ರಂಥವಲ್ಲ. ಮಾಯೆಯ ವಿಚಾರವನ್ನು ಹೇಳಿದರೂ ಮಾಯಾವಾದವನ್ನು ಪುಷ್ಟೀಕರಿಸುವುದಿಲ್ಲ. ಸಾಂಖ್ಯವಿದ್ದರೂ ಅದು ಪ್ರತಿಪಾದಿಸುವುದು ಸಾಂಖ್ಯತತ್ತ್ವವನ್ನಲ್ಲ. ಶ್ರೀಕೃಷ್ಣನ ವಿಚಾರ ಬಂದರೂ ಅದು ನಿರೂಪಿಸುವುದು ವೈಷ್ಣವತತ್ವವನ್ನಲ್ಲ. ಅದು ಹಲವು ದೃಷ್ಟಿಗಳನ್ನು ಸಮನ್ವಯಗೊಳಿಸುವ ಅಪೂರ್ವಕೃತಿ. ವಿಶ್ವವ್ಯಾಪಕ ತತ್ವಗಳನ್ನು ರೂಪಿಸಿ, ಮಾನವತ್ವದಿಂದ ದೈವತ್ವಕ್ಕೇರುವ ಸತ್ಪಥವನ್ನು ತೋರುವ ಸದ್ಗ್ರಂಥವಿದು. ಆಧುನಿಕ ನಾಗರಿಕಜೀವನ ಪ್ರಾಣ, ಮನಸ್ಸು, ಬುದ್ಧಿಇಷ್ಟರಲ್ಲಿಯೇ ವ್ಯವಹರಿಸುತ್ತದೆ. ಆಧ್ಯಾತ್ಮಿಕ ಜೀವನದೆತ್ತರಕ್ಕೆ ಏರಿಲ್ಲ. ಭಗವಂತನಲ್ಲಿ ವಾಸಿಸುತ್ತ, ಜಗತ್ತಿನ ಕಲ್ಯಾಣಕಾಗಿ ಕರ್ಮತತತ್ಪರರಾಗಬೇಕೆಂಬುದೇ ಗೀತೆಯ ಸಾರ. ಅರವಿಂದರ ಯೋಗಸಮನ್ವಯ ಎಂಬ ಕೃತಿ ನಮ್ಮ ದೃಷ್ಟಿಯನ್ನು ದಿವ್ಯಜೀವನದತ್ತ ಅರಳಿಸುವ ಸತ್ಕೃತಿ. ಜೀವನವೆಲ್ಲ ಒಂದು ರೀತಿಯ ಯೋಗ, ವಿಶಪ್ರಕೃತಿಯೇ ಮಹಾಯೋಗ ದಲ್ಲಿ ತನ್ಮಯವಾಗಿದೆ. ಕೇವಲ ಪ್ರಕೃತಿಗೆ ಬಿಟ್ಟರೆ, ಸಹಸ್ರಾರು ವರ್ಷಗಳಲ್ಲಾಗಬೇಕಾದ ಕಾರ್ಯವನ್ನು ಒಂದೇ ಜೀವನದಲ್ಲಿ ಸಾಧಿಸುವುದು ಯೋಗ. ಯೋಗದಲ್ಲಿ ಪ್ರಕೃತಿ, ಮಾನವ, ಆತ್ಮ, ಭಗವಂತಈ ಶಕ್ತಿಗಳ ಮಿಳನವಾಗುತ್ತದೆ. ಎಲ್ಲ ಶಾಸ್ರ್ತಗಳೂ ಜ್ಞಾನದ ಅಂಶ. ಯೋಗಿ ಶಾಸ್ರಗ್ರಂಥಗಳ ನೆರವಿನಿಂದ ಯುಕ್ತ ಮಾರ್ಗದಲ್ಲಿ ಮುನ್ನಡೆದು ಅನಂತಜ್ಞಾನ ವನ್ನೇ ಸಾಧಿಸಲು ಪ್ರಯತ್ನಿಸುತ್ತಾನೆ. ಭಗವಂತನ ಕೃಪೆಗೆ, ಸಾಕ್ಷಾತ್ಕಾರಕ್ಕೆ ಅಭೀಪ್ಸೆಯೇ ಕ್ರತುಶಕ್ತಿ . ಅದನ್ನು ಕುಗ್ಗದಂತೆ ರಕ್ಷಿಸುವ ಶಕ್ತಿ ಉತ್ಸಾಹ, ಯೋಗದಲ್ಲಿ ಮಾರ್ಗದರ್ಶಕನಾಗುವ, ಹೃದಯದಲ್ಲಿ ಸ್ಥಿತನಾಗಿರುವ ಗುರು ಲಭಿಸಲು ಕಾಲಬೇಕು. ಈ ಕಾಯುವ ಕೆಲಸ ಕಠೋರವಾಗಿ ಕಾಣಬಹುದು. ಸಮನ್ವಯದೃಷ್ಟಿಯ ಯೋಗಸಾಧಕನಿಗೆ ಹುಟ್ಟು ಸಾವುಗಳು ಆತ್ಮಯಾತ್ರಾಪಥದಲ್ಲಿರುವ ನಿಲ್ದಾಣಗಳು.

ದಿವ್ಯಜೀವನ ಒಂದು ದಿವ್ಯ ಕೃತಿ. ತಮ್ಮ ದರ್ಶನವನ್ನು ತರ್ಕಬದ್ಧವಾಗಿ, ವಿಚಾರಪೂರ್ವಕ ವಾಗಿ ಯೌಗಿಕ ಬೆಳಕಿನಿಂದ ರೂಪಿಸಿದ್ದಾರೆ ಈ ಬೃಹತ್‍ಗ್ರಂಥದಲ್ಲಿ. ಇಂದು ವಿಜ್ಞಾನಿಯ ದೃಷ್ಟಿ ಜಡಶಕ್ತಿಯ ಮೇಲೆ ಪ್ರಭುತ್ವ ಪಡೆಯುವತ್ತ ಸಾಗಿದೆ. ವಿಜ್ಞಾನಿಯ ಸಾಧನೆಯಿಂದ ದೇಶ ಕಾಲಗಳು ತುಂಬ ಹತ್ತಿರ ಬಂದಿವೆ. ಒಬ್ಬ ವಿಜ್ಞಾನಿಯ ಸಂಶೋಧನೆಯ ಫಲ ಸಮಸ್ತ ಮಾನವಕುಲಕ್ಕೆ ಇಂದು ದೊರಕುವಂತಾಗಿದೆ. ವಿಜ್ಞಾನಿಗೆ ಜಡವೇ ಏಕಮಾತ್ರ ಸತ್ಯ. ಅವನ ದೃಷ್ಟಿಯಲ್ಲಿ ದೇವರಿಗೆ ಅಸ್ತಿತ್ವವಿಲ್ಲ. ಸಂನ್ಯಾಸಿಗೆ ಏಕಮಾತ್ರ ಸತ್ಯ ದೇವರು. ಜಡವಾದಿ ಸ್ಥೂಲದಲ್ಲಿರುವ ಸೂಕ್ಮವನ್ನು ಮರೆತಿದ್ದಾನೆ. ಜಡದಲ್ಲಿಯೂ ಆತ್ಮತತ್ವವಿದೆಎಂಬುದನ್ನು ಸಂನ್ಯಾಸಿ ಮರೆತಿದ್ದಾನೆ. ವಿಜ್ಞಾನಿ ಮತ್ತು ಸಂನ್ಯಾಸಿಇವರಿಬ್ಬರಿಗೂ ದೃಷ್ಟಿ ವಿಶಾಲವಾದರೆ ಜಡ ಮತ್ತು ಆತ್ಮಎರಡೂ ಸತ್ಯವೆಂಬ ಅರಿವು ಮೂಡುತ್ತದೆ. ಜೀವ, ಜಗತ್ತು, ಬ್ರಹ್ಮಈ ಮೂರು ತತ್ತ್ವಗಳನ್ನು ಒಪ್ಪಿಕೊಂಡ ಅರವಿಂದರು ಈ ಜಗತ್ತನ್ನು ಅವಿದ್ಯಾಭೂಮಿಕೆ ಯಿಂದಾಗಲಿ, ಮಿಥ್ಯೆಯಿಂದಾಗಲಿ ತಿರಸ್ಕರಿಸುವುದಿಲ್ಲ. ಸಚಿದಾನಂದಸ್ವರೂಪವಾದ ಬ್ರಹ್ಮವೇ ಅತಿಮಾನಸ, ಮಾನಸ, ಚೈತ್ಯಪುರುಷ, ಪ್ರಾಣ ಮತ್ತು ಜಡವಾಗಿ ಅವತರಿಸಿರುವುದು; ಜಡದಿಂದ ಅತಿಮಾನಸಕ್ಕೇರುವುದೇ ಜೀವದ ಗುರಿ. ಅತಿ ಮಾನಸದಲ್ಲಿ ಮಾನವರು ಸ್ಥಿತರಾದಾಗ, ದಿವ್ಯಜೀವನ ಪ್ರಪಂಚದಲ್ಲಿ ಪತಿಷ್ಠಿತವಾಗುತ್ತದೆ. ಆ ದಿವ್ಯಜೀವನದ ಉದಯಕ್ಕೆ ಈ ಕೃತಿ ದಾರಿದೀಪವಾಗಿದೆ. ಸಾವಿತ್ರಿ ಒಂದು ಯೌಗಿಕ ಕಾವ್ಯ. ಅರವಿಂದರ ಯೌಗಿಕಾನುಭವಗಳು ಇಲ್ಲಿ ಕಾವ್ಯರೂಪ ದಲ್ಲಿ ಮೈವೆತ್ತಿವೆ. ಮಹಾಭಾರತದ ಕಥಾಸೂತ್ರವನ್ನೇ ಇಟ್ಟುಕೊಂಡು ಯೋಗದರ್ಶನವನ್ನು ಕಾವ್ಯಮಯವಾಗಿ ಚಿತ್ರಿಸಿದ್ದಾರೆ. ಪ್ರಾರ್ಥನೆ, ಮಹಾಕಾರ್ಯ, ಮಹಾಭಾವಇವು ಮಾನವನನ್ನು ಅತೀತಶಕ್ತಿಯೊಡನೆ ಸೇರಿಸುವ ದಿವ್ಯ ಶಕ್ತಿಗಳೆಂಬುದನ್ನು ಬಾಲ್ಯದಲ್ಲಿಯೇ ಸಾವಿತ್ರಿ ಅರಿತಿದ್ದಳು. ಅವಳು ಮೃತ್ಯುವನ್ನು ಪ್ರಜ್ಞಾಪೂರ್ವಕವಾಗಿ ಗೆದ್ದು ತಪಶ್ಶಕ್ತಿಯ ಹಿರಿಮೆಯನ್ನು ತೋರಿಸಿದ ಮಹಾಯೋಗಿನಿ. ಯೋಗಸಾಧನೆಯ ಶಿಖರವನ್ನು ಈ ಕೃತಿಯಲ್ಲಿ ಕಾಣಬಹುದು. ಅರವಿಂದರು ಸಾಧಕರಿಗೆ ಬರೆದ ಪತ್ರದಲ್ಲಿ ಕೆಲವು ಹಿತವಚನಗಳು ದೇದೀಪ್ಯಮಾನ ವಾಗಿ ಬೆಳಗುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನಿರೂಪಿಸಿದೆ. ಭಗವಂತನನ್ನು ಜೀವನದಲ್ಲಿ ಸುಪ್ರಕಟಗೊಳಿಸುವುದೇ ಮಾನವಜೀವನದ ಉದ್ದೇಶ. ನಿಮ್ಮಲ್ಲಿ ಎಂಥ ದೋಷಗಳೇ ಇರಲಿ ಭಗವಂತನನ್ನು ಪ್ರೀತಿಸಿ, ಅವನ ಸಂದರ್ಶನಕ್ಕಾಗಿ ಹಾರೈಸಿ, ಅವನ ಮನೆಯ ಬಾಗಿಲು ಎಂದೂ ಮುಚ್ಚಿರುವುದಿಲ್ಲ. ಪರರ ದೋಷಗಳನ್ನು ಹುಡುಕುವುದರಲ್ಲಿನಿರತರಾಗ ಬೇಡಿ. ಅದರಿಂದ ಪ್ರಯೋಜನವಿಲ್ಲ. ಶಾಂತವಾಗಿರುವುದನ್ನು ಅಭ್ಯಾಸಮಾಡಿ. ಕಾಯಕ ಕೆಳದರ್ಜೆಯದೆಂದು ಭಾವಿಸಬೇಡಿ. ಬುದ್ಧಿಜೀವಿಗಳೇ ಕಾಯಕವನ್ನು ಹೀನವೆಂದು ಭಾವಿಸುವುದು, ಭಗವದರ್ಪಿತ ಕಾಯಕಕ್ಕಿಂತ ಸ್ವಾರ್ಥಮೂಲವಾದ ಪಾಂಡಿತ್ಯ ಕೀಳಾದುದು. ಭಗವದರ್ಪಿತಕಾಯಕ ದಿವ್ಯವಾದುದು. ವಿದ್ವಾಂಸನಾಗುವುದೇ ಸರ್ವೋತ್ಕೃಷ್ಟವೆಂದು ತಿಳಿದು ಕಾಯಕವನ್ನು ತಿರಸ್ಕರಿಸುವುದು ಅಹಂಕಾರದ ಚಿಹ್ನೆ. ಮನಸ್ಸು ಚಂಚಲವಾಗಿರುವಾಗ ಅದು ಯೋಗದಲ್ಲಿ ನೆಲಸುವ ಸಂಭವವಿಲ್ಲ. ಪ್ರಥಮತಃ ಮನಸ್ಸು ನಿಶ್ಚಲವಾಗಬೇಕು. ವ್ಯಕ್ತಿಯ ಚೇತನವನ್ನು ಲುಪ್ತಗೊಳಿಸುವುದು ಯೋಗದ ಉದ್ದೇಶವಲ್ಲ; ಚೇತನವನ್ನು ಆಧ್ಯಾತ್ಮಿಕ ಪ್ರಜ್ಞೆಯಲ್ಲಿ ಅರಳಿಸುವುದೇ ಯೋಗದ ಪಥಮ ಕರ್ತವ್ಯ. ಈ ಕಾರಣಕ್ಕಾಗಿ ನಿಶ್ಚಲ ಮನಸ್ಸು ಅವಶ್ಯ . ಇಂಥ ಮಾರ್ಗದರ್ಶನದ ಬೆಳಕು ಅವರ ನಿರ್ದೇಶನದಲ್ಲಿ ಬೆಳಗುತ್ತದೆ. ಅರವಿಂದರ ಕೃತಿಗಳ ಅಧ್ಯಯನದಿಂದ ಹೊಸ ದೃಷ್ಟಿ, ಹೊಸ ಅಭಿರುಚಿಗಳನ್ನು ಚೇತನದಲ್ಲಿ ಮೂಡಿಸುವ ಜೀವನಪಥ ದೃಗ್ಗೋಚರವಾಗುತ್ತದೆ.

ಲೋಕದಲ್ಲಿ ಇದುವರೆಗೆ ಉದಿಸಿದ ಮಹಾತ್ಮರೆಲ್ಲ ದೈವೀಶಕ್ತಿ ಪ್ರಪಂಚದಲ್ಲಿ ವಿಕಾಸವಾಗಲು ಶಮಿಸಿದ್ದಾರೆ. ಅರವಿಂದರು ಹಿಂದಿನ ಮಹಾತ್ಮರೆಲ್ಲರ ವಿಚಾರದಾರೆಗಳನ್ನು ವಿಮರ್ಶಿಸಿ, ಮಹತ್ವಪೂರ್ಣ ಪೂರ್ಣಯೋಗಮಾರ್ಗವನ್ನು ಜನತೆಯ ಮುಂದೆ ಇರಿಸಿದ್ದಾರೆ. ಈ ಯೋಗಮಾರ್ಗದಲ್ಲಿ ಯಾರು ಬೇಕಾದರೂ ಸಾಧಕರಾಗಬಹುದು. ಯೋಗಸಾಧನೆ ಕೇವಲ ಆತ್ಮಸಾಕ್ಷಾತ್ಕಾರಕ್ಕಾಗಿಯಲ್ಲ, ಅದು ಸಮಷ್ಟಿಯ ಉದ್ಧಾರಕ್ಕೆಂಬುದನ್ನು ಅರವಿಂದರು ಸ್ಪಷ್ಟಡಿಸಿದ್ದಾರೆ. (ಯು,ಕೆ.ಎಸ್.)

ಅರವಿಂದರು ಭಾರತದ ಪ್ರಸಿದ್ಧ ದಾರ್ಶನಿಕ, ಕವಿ, ನಾಟಕಕಾರ, ವಿಮರ್ಶಕ. ಸಾಹಿತಿಯಾಗಿ ಗಳಿಸಿರುವುದಕ್ಕಿಂತ ಹೆಚ್ಚಿನ ಪ್ರಾಮುಖ್ಯವನ್ನು ಆಧ್ಯಾತ್ಮಿಕಮಾರ್ಗದರ್ಶಕರಾಗಿ, ವಂದೇಮಾತರಂ ಮತ್ತು ಕರ್ಮಯೋಗಿ ಪತ್ರಿಕೆಗಳಲ್ಲಿ ಬರೆದ ವಿಪುಲ ಲೇಖನಗಳಿಂದ, ಪ್ರಕಟಿಸಿದ ಗ್ರಂಥಗಳಿಂದ, ಕೊಟ್ಟ ಉಪದೇಶಪ್ರವಚನಗಳಿಂದ ಗಳಿಸಿದ್ದಾರೆ. ಅವರ ಕೃತಿಗಳಲ್ಲಿ ಕೆಲವನ್ನು ಮಾತ್ರ ಹೆಸರಿಸಬಹುದು: ಭಾರತದಲ್ಲಿ ನವೋದಯ (1920), ಕಾಳಿದಾಸ (1929), ಕವನಗಳು ಮತ್ತು ನಾಟಕಗಳು (1942), ಸಾವಿತ್ರಿಪೌರಾಣಿಕ ಕಥೆ ಮತ್ತು ಪ್ರತಿಮೆ (1946-54), ಭಾರತೀಯ ಸಂಸ್ಕೃತಿಯ ಅಸ್ತಿಬಾರ (1953), ಕಾವ್ಯದ ಭವಿಷ್ಯ (1953), ವ್ಯಾಸ ಮತ್ತು ವಾಲ್ಮೀಕಿ (1956) ಇವು ಸಾಹಿತ್ಯ ಚರಿತ್ರೆ ಮತ್ತು ಸಾಹಿತ್ಯವಿವರಣೆ ಮತ್ತು ವಿಮರ್ಶೆಗಳಲ್ಲಿ ಇವರ ಕೆಲವು ಪ್ರಯತ್ನಗಳು. ಡಾಂಟೆಯ ಅನುಭಾವಿಕ ಗುಲಾಬಿಯನ್ನು ನೆನಪಿಗೆ ತರುವ ಭಗವಂತನ ಗುಲಾಬಿ ಅನುಭಾವಿಕಭಕ್ತಿಯ ಅಭಿವ್ಯಕ್ತಿಯಾದರೆ, ಚಿತ್ರ ಮತ್ತು ಪ್ರತಿಮೆಗಳಿಂದ ಶ್ರೀಮಂತವಾದ ಭಾವಗೀತೆಅತೀವ ವಾಸ್ತವಿಕತೆಯ ಕನಸು ಎ ಡ್ರೀಮ್ ಆಫ್ ಸರಿಯಲ್ ಸೈನ್ಸ್ ಎನ್ನುವ ಅಷ್ಟಷಟ್ಪದಿ. ಇದು ಆಧುನಿಕ ವಿಜ್ಞಾನ ಮತ್ತು ಕಲೆಗಳ ವಿಮರ್ಶೆಯಾಗಿದ್ದು, ಕವಿಯ ವಿಡಂಬನಶಕ್ತಿಯ ಅಳತೆಗೋಲಾಗಿದೆ. ಷೇಕ್ಸ್‍ಪಿಯರ್ ಮತ್ತು ಹೋಮರರ ಭವ್ಯಕೃತಿಗಳು, ಬುದ್ಧನ ದರ್ಶನ ಮತ್ತು ಆಧ್ಯಾತ್ಮಿಕ ಅನುಕಂಪ, ನೆಪೋಲಿಯನ್ನನ ಚಂಡಮಾರುತದಂಥ ಸಮರೋತ್ಸಾಹ ಜೀವನಇವುಗಳಿಗೆ ಯಾವ ವೈಜ್ಞಾನಿಕ ಸಿದ್ಧಾಂತವೂ ವಿವರಣೆ ನೀಡಲಾರದೆಂದು ಕವಿ ಸಾಧಿಸುತ್ತಾರೆ. ವಾಸ್ತವಿಕತೆಯ ಇಂಥ ಅವಶ್ಯ ತಿಳಿವಳಿಕೆ, ಸಮರ ಮತ್ತು ನಾಗರಿಕತೆ ಹಾಗೂ ಜೀವನದ ಸರ್ವನಾಶದ ಹಾದಿ ಎಂದು ಸೂಚಿಸುತ್ತಾರೆ. ಆಧುನಿಕ ಜೀವನ ಮತ್ತು ಸಾಹಿತ್ಯಗಳ ಬಗೆಗೆ ತನ್ನ ವಿಮರ್ಶೆಯನ್ನು ಹಲವು ಪತ್ರಗಳಲ್ಲೂ ಕಾವ್ಯದ ಭವಿಷ್ಯ ಭಾರತೀಯ ಸಂಸ್ಕೃತಿಯ ಅಸ್ತಿಭಾರ, ಭಾರತದಲ್ಲಿ ನವೋದಯ ಇಂಥ ಕೃತಿಗಳಲ್ಲೂ ನೀಡಿದ್ದಾರೆ. ಸಾಹಿತಿಯಾಗಿ ಮತ್ತು ವೈಚಾರಿಕನಾಗಿ ವಿಜೃಂಬಿಸಿರುವ ಕವಿಯ ಜೀವನವನ್ನು ಮಹಾಮಾತೆಯ ಅಷೇ ಉಜ್ಜಲವಾದ ಜೀವನದೊಡನೆ ನೋಡಿ ತಿಳಿಯಬೇಕಾಗುತ್ತದೆ. ತಮ್ಮ ವೈಚಾರಿಕತೆಯಿಂದ ಅರವಿಂದರು ಬೇಂದ್ರೆ, ಪುಟ್ಟಪ್ಪ, ಗೋಕಾಕ ರಂಥ ಹಲವಾರು ಸುಪ್ರಸಿದ್ಧ ಸಾಹಿತಿಗಳ ಮೇಲೆ ಗಣನೀಯ ಪ್ರಭಾವ ಬೀರಿದ್ದಾರೆ. (ಕೆ.ಎ.)