ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರುಂಧತಿ

ವಿಕಿಸೋರ್ಸ್ದಿಂದ

ಅರುಂಧತಿ : ವಸಿಷ್ಠ ಮಹರ್ಷಿಯ ಹೆಂಡತಿ. ಶಕ್ತಿ ಮಹರ್ಷಿಯ ತಾಯಿ. ಸ್ವಾಯಂಭುವಮನುಪುತ್ರಿಯಾದ ದೇವಹೊತಿ ಇವಳ ತಾಯಿ. ಕರ್ದಮಮುನಿ ತಂದೆ. ಅಕ್ಷಮಾಲೆ, ಊರ್ಜೆ ಈಕೆಯ ಇನ್ನೆರಡು ಹೆಸರುಗಳು. ಅನಸೂಯೆ, ಶಾಂತಿ, ಖ್ಯಾತಿ, ಕ್ರಿಯೆ, ಗತಿ, ಹವಿರ್ಭುಕ್, ಶ್ರದ್ಧೆ, ಕಲೆ ಮುಂತಾದ ಋಷಿಪತ್ನಿಯರೂ ಕಪಿಲ ಮಹರ್ಷಿಯೂ ಈಕೆಯ ಒಡಹುಟ್ಟಿದವರು. ಒಮ್ಮೆ ಪತಿದ್ರೋಹ ಮಾಡಿದ್ದರಿಂದ ಸೂಕ್ಷ್ಮ ರೂಪವನ್ನು ತಳೆದಳು. ಅಗ್ನಿ ಸಪ್ತರ್ಷಿಗಳ ಹೆಂಡಿರನ್ನು ಕಾಮಿಸಿದಾಗ, ಸ್ವಾಹಾದೇವಿ ಆರು ಋಷಿಪತ್ನಿಯರ ರೂಪವನ್ನು ಮಾತ್ರ ಧರಿಸಲು ಸಮರ್ಥಳಾಗಿ ಅಗ್ನಿಯನ್ನು ಸಂತುಷ್ಟಿಪಡಿಸಿದಳು; ಆದರೆ ಅರುಂಧತಿಯ ರೂಪವನ್ನು ಧರಿಸಲು ಅವಳಿಂದಾಗಲಿಲ್ಲ. ಈಕೆ ತನ್ನ ಪತಿಯ ಎದುರಿಗೆ ಬಂದರೆ ಅದು ಲೋಕಕ್ಕೊಂ ಬಗೆಯ ಉತ್ಪಾತಸೂಚಕ ಎಂದು ಹೇಳುತ್ತಾರೆ. ಒಮ್ಮೆ ಉಕ್ಕಿನ ಬೋರೆ ಹಣ್ಣುಗಳನ್ನು ಪಾಕಮಾಡಿ ಈಶ್ವರವನ್ನು ಮೆಚ್ಚಿಸಿ, ಅವನಿಂದ ವರ ಪಡೆದಳು. ಈಕೆಯ ಹೆಸರಿನ ನಕ್ಷತ್ರವನ್ನು ಕಾಣಲು ಆಗದವರಿಗೆ ಮೃತ್ಯು ಸನ್ನಿಹಿತವಾಗಿದೆಯೆಂಬುದೊಂದು ಹೇಳಿಕೆ ಇದೆ. ಒಮ್ಮೆ ಋಷಿಸಮೂಹಕ್ಕೆ ಅನೇಕ ಧರ್ಮರಹಸ್ಯ ಗಳನ್ನು ಬೋಧಿಸಿದಳು. ಮದುವೆಯಾದ ರಾತ್ರಿ ಹೊಸ ದಂಪತಿಗಳಿಗೆ ಈ ನಕ್ಷತ್ರವನ್ನು ತೋರಿಸುವ ಪದ್ಧತಿ ತ್ರಿವರ್ಣದವರಲ್ಲೂ ಸಂಪ್ರದಾಯವಾಗಿದೆ. (ಎಸ್.ಕೆ.ಆರ್.)

ಸಪ್ತರ್ಷಿಮಂಡಲ (ಅರ್ಸಾ ಮೇಜರ್) ನಕ್ಷತ್ರಪುಂಜದ ಹಿಡಿಯಭಾಗದಲ್ಲಿ ಎರಡನೆಯ ನಕ್ಷತ್ರವಾದ ವಸಿಷ್ಠದ (ಮೈಝಾರ್) ಒತ್ತಿಗೆ, ಧ್ರುವನಕ್ಷತ್ರದೆಡೆಗೆ ಇರುವ ಮಂದ ಪ್ರಕಾಶದ ನಕ್ಷತ್ರ ಅರುಂಧತಿ (ಆಲ್ಗೋರ್).