ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರುವತ್ತನಾಲ್ಕು ವಿದ್ಯೆಗಳು

ವಿಕಿಸೋರ್ಸ್ದಿಂದ

ಅರುವತ್ತನಾಲ್ಕು ವಿದ್ಯೆಗಳು : ಪ್ರಪಂಚದಲ್ಲಿ ಬಾಳಿಬದುಕಿ ಯಶಸ್ಸುಗಳಿಸಬೇಕಾದರೆ ಈ ವಿದ್ಯೆಗಳ ಜ್ಞಾನ ಅತ್ಯಾವಶ್ಯಕವೆಂಬ ದೃಷ್ಟಿಯಿಂದ ಹಿಂದೆ ಪ್ರಚಲಿತವಿದ್ದ ವಿದ್ಯೆಗಳನ್ನೆಲ್ಲ ಒಂದೆಡೆ ಕಲೆ ಹಾಕಲಾಗಿದೆ. ಇವನ್ನು ಅಭ್ಯಸಿಸಿ ತಿಳಿದವನೇ ಪಂಡಿತ. ಅಂತಹವನನ್ನು ಪೂರ್ವದಲ್ಲಿ ಜ್ಞಾನಿ ಎನ್ನುತ್ತಿದ್ದರು. ಈ ವಿದ್ಯೆಗಳಲ್ಲಿ ಪಾರಂಗತನಾದವನು ತನ್ನ ಪಾಂಡಿತ್ಯವನ್ನು ಮೆರೆಯಲು ದೇಶವಿದೇಶಗಳನ್ನು ಸುತ್ತಿ, ರಾಜಾಶ್ರಯ ಪಡೆದು, ಆಯಾ ಸ್ಥಳದ ಪಂಡಿತರನ್ನು ಈ ವಿದ್ಯೆಗಳ ಹಿನ್ನೆಲೆಯ ವಾದ ವಿವಾದಗಳಲ್ಲಿ ಸೋಲಿಸಿ ದಿಗ್ವಿಜಯ ಪಡೆದು ರಾಜರುಗಳಿಂದ ಬಹುಮಾನಿತನಾಗಿ ಬರುವುದು ರೂಢಿಯಲ್ಲಿತ್ತು. ಭಾರತೀಯ ಇತಿಹಾಸದಲ್ಲಿ ದಿಗ್ವಿಜಯ ಪಡೆದು ಬಂದ ಪಂಡಿತರುಗಳ ಐತಿಹ್ಯಗಳಿಗೆ ಕೊರತೆಯೇನಿಲ್ಲ. ಈ ವಿದ್ಯೆಗಳಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ, ತಾಂತ್ರಿಕ, ಜ್ಯೋತಿಷ್ಯ, ಕುಲ್ಲಕ- ಎಲ್ಲ ವಿಷಯಗಳೂ ಸೇರುತ್ತವೆ, ಆಧುನಿಕ ಪ್ರಪಂಚದ ವಿದ್ಯೆಗಳಿಗೆಲ್ಲ ಈ ಅರುವತ್ತನಾಲ್ಕು ವಿದ್ಯೆಗಳೇ ಮೂಲ ಎಂಬುದನ್ನು ಮರೆಯುವಂತಿಲ್ಲ. ಈ ಮೂಲಗಳಿಂದ ಆಧುನಿಕ ಜ್ಞಾನ ಹೇಗೆ ಶಾಖೋಪಶಾಖೆಗಳಾಗಿ ಬೆಳೆದಿವೆಯೆಂಬುದನ್ನು ಗಮನಿಸಿದಾಗ ಆಶ್ಚರ್ಯವಾಗದಿರದು. ಅವು ಹೀಗಿವೆ:

ನಾಲ್ಕು ವೇದಗಳು: ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ.

ಆರು ಅಂಗಗಳು : ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ.

ಆರು ಶಾಸ್ತ್ರಗಳು : ವೇದಾಂತ, ಧರ್ಮ, ಕಾವ್ಯ, ಶಿಲ್ಪ, ಕಾಮ, ಅಲಂಕಾರ.

ಹದಿನೆಂಟು ಪುರಾಣಗಳು: ಬ್ರಾಹ್ಮ , ಪದ್ಮ , ವೈಷ್ಣವ, ಶೈವ, ಭಾಗವತ, ಭವಿಷ್ಯತ್, ನಾರದೀಯ, ಮಾರ್ಕಂಡೇಯ, ಆಗ್ನೇಯ, ಬ್ರಹ್ಮ ವೈವರ್ತ, ಲಿಂಗ, ವರಾಹ, ಸ್ಕಂದ ವಾಮನ, ಕೂರ್ಮ, ಮತ್ಸ್ಯ, ಗರುಡ, ಬ್ರಹ್ಮಾಂಡ.

ಹದಿನೆಂಟು ಸ್ಮೃತಿಗಳು: ಮನು, ಅತ್ರಿ, ವಿಷ್ಣು, ಹಾರೀತ, ಯಾಜ್ಞವಲ್ಕ್ಯ, ಉಶನ, ಅಂಗಿರ, ಯಮ, ಆಪಸ್ತಂಬ, ವಾತ್ಸ್ಯಾಯನ, ಬೃಹಸ್ಪತಿ, ಪರಾಶರ, ವ್ಯಸ¸, ಶಂಕಲಿಖಿತ, ದಕ್ಷ, ಗೌತಮ, ಶಾಂತಾತಪ, ವಸಿಷ್ಠ.

ಅಲ್ಲದೆ ಗಾಂಧರ್ವ, ವಿಶ್ವಕರ್ಮ, ಸೂದ ಭೈಷಜ, ಕಾವ್ಯ, ನರ್ತನ, ನಾಟಕ, ಅಲಂಕಾರ, ಕೃತಕ, ಚೋರ, ಕಳ, ಮಹೇಂದ್ರ ಈ ವಿದ್ಯೆಗಳ ಉಲ್ಲೇಖವನ್ನು ಭಾರತೀಯ ಕಾವ್ಯ, ಪುರಾಣಗಳಲ್ಲಿ ಕಾಣಬಹುದು.