ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲಾಸ್ಕ

ವಿಕಿಸೋರ್ಸ್ದಿಂದ

ಅಮೆರಿಕ ಸಂಯುಕ್ತ ಸಂಸ್ಥಾನದ ಒಂದು ರಾಜ್ಯ. ಸಂಯುಕ್ತ ಸಂಸ್ಥಾನದ ಹೊರಗೆ ಪ್ರತ್ಯೇಕವಾಗಿ ಉತ್ತರ ಅಮೆರಿಕದ ವಾಯವ್ಯದಲ್ಲಿರುವ ಈ ರಾಜ್ಯದ ವಿಸ್ತೀರ್ಣ 1522596 ಚ.ಕಿಮೀ. ಜನಸಂಖ್ಯೆ 6,26,932 (2000). ರಾಜಧಾನಿ ಜೂನೆ.

ಅಮೆರಿಕ ಸಂಯುಕ್ತಸಂಸ್ಥಾನ, 1867ರಲ್ಲಿ ರಷ್ಯದಿಂದ ಈ ಭಾಗವನ್ನು ಕೊಂಡು 1884ರಲ್ಲಿ ಆರೆಗಾನ್ ಸಂಸ್ಥಾನದ ಒಂದು ಜಿಲ್ಲೆಯಾಗಿ ಪರಿಗಣಿಸಿತು. 1912ರಲ್ಲಿ ಒಂದು ಸೀಮೆಯಾಗಿ ರೂಪಗೊಂಡು 1959ರಲ್ಲಿ 49ನೆಯ ಪ್ರಾಂತ್ಯವಾಗಿ ಸಂಯುಕ್ತಸಂಸ್ಥಾನ ದಲ್ಲಿ ವಿಲೀನ ಹೊಂದಿತು. 1912ರಿಂದ ಈಚೆಗೆ ಸಂಯುಕ್ತಸಂಸ್ಥಾನಕ್ಕೆ ಸೇರಿದ ರಾಜ್ಯಗಳಲ್ಲಿ ಇದು ಮೊದಲನೆಯದು. ಬಹು ದೊಡ್ಡ ರಾಜ್ಯ. ಖಂಡದ ಇತರ ರಾಜ್ಯಗಳಿಗಿಂತ ಪ್ರತ್ಯೇಕವಾಗಿ ವಾಯವ್ಯದ ಅಂಚಿನಲ್ಲಿದ್ದು ಪರ್ವತಮಯವಾಗಿದೆ. ಉತ್ತರ ಅಕ್ಷಾಂಶ 650 ಮತ್ತು ಪಶ್ಚಿಮ ರೇಖಾಂಶ 1500 ಯಲ್ಲಿದೆ. ಆಗ್ನೇಯ ಮತ್ತು ಪುವಾಕ್ಕೆ ಕೆನಡ ದೇಶ, ಪಶ್ಚಿಮಕ್ಕೆ ಬೆರಿಂಗ್ ಜಲಸಂಧಿ ಮತ್ತು ಬೇರಿಂಗ್ ಸಮುದ್ರ, ಉತ್ತರಕ್ಕೆ ಮೆಕಿಂಜಿ ಕೊಲ್ಲಿ ಹಾಗೂ ದಕ್ಷಿಣಕ್ಕೆ ಅಲಾಸ್ಕ ಖಾರಿಗಳು ಸುತ್ತುವರಿದಿವೆ. ಅಮೆರಿಕೆಯ ಬಹು ದೊಡ್ಡ ಪರ್ವತಶ್ರೇಣಿಯ ವಾಯವ್ಯದ ಬಾಗಿದ ವಿಸ್ತೃತಭಾಗ ಇರುವುದು ಇಲ್ಲಿಯೇ. ದಕ್ಷಿಣದ ಸಾಧಾರಣ ಎತ್ತರದ ತೀರಪ್ರದೇಶದ ಶ್ರೇಣಿಯ ಜೊತೆಗೆ ಒಳಭಾಗದಲ್ಲಿ ಸ್ವಲ್ಪ ಎತ್ತರವಾದ ಸಮಾನಾಂತರ ಶ್ರೇಣಿ ಇದೆ. ಉತ್ತರ ಅಮೆರಿಕದ ಅತ್ಯಂತ ಎತ್ತರದ ಮೆಕಿನ್ಲೆ ಶಿಖರ (6193.5 ಮೀ) ಈ ಒಳಭಾಗದ ಶ್ರೇಣಿಯಲ್ಲಿದೆ. ತಗ್ಗಾದ ಉತ್ತರದ ಶ್ರೇಣಿ ಕಮಾನಿನಂತೆ ಬಾಗಿದೆ ಅಲಾಸ್ಕದ ಎತ್ತರಭಾಗ ಉತ್ತರಧ್ರುವದ ಆಚೆಗೆ ವ್ಯಾಪಿಸಿ ವಿಲಕ್ಷಣವಾದ ಖಂಡಾಂತರ ವಾಯುಗುಣವನ್ನು ಹೊಂದಿದೆ. ದಕ್ಷಿಣತೀರ ಜಪಾನ್ ಪ್ರವಾಹದ ಮಾರುತಗಳಿಂದ ಉಷ್ಣತೆಯನ್ನು ಪಡೆದು ಆಹ್ಲಾದಕರ ವಾಯುಗುಣವನ್ನು ಪಡೆದಿದೆ. 1898ರ ಸುವರ್ಣ ಶೋಧದ (ಗೋಲ್ಡ್ ರಷ್) ದಿನಗಳಲ್ಲಿ ಅಲಾಸ್ಕದ ಖನಿಜಗಳಲ್ಲಿ ಚಿನ್ನ ಅಗ್ರಸ್ಥಾನ ಪಡೆಯಿತು. ಇಂದು ಕಲ್ಲಿದ್ದಲು ಆ ಸ್ಥಾನಕ್ಕೇರಿದೆ. ಪೆಟ್ರೋಲಿಯಂ, ಸ್ವಾಭಾವಿಕ ಅನಿಲ ತವರ, ಕ್ರೋಮೈಟ್, ಪಾದರಸ, ತಾಮ್ರ, ಆಂಟಿಮನಿ, ಟಂಗ್ಸ್ಟನ್ ಮುಂತಾದ ಖನಿಜಗಳೂ ಅಲ್ಪ ಸ್ವಲ್ಪ ದೊರೆಯುತ್ತವೆ. ಅದಾಗ್ಯೂ 1977 ರಲ್ಲಿ ಟ್ರಾನ್ಸ್-ಅಲಾಸ್ಕ ಕೊಳವೆ ಮಾರ್ಗವನ್ನು ನಿರ್ಮಿಸಿದ ಅನಂತರ ಅಲಾಸ್ಕದ ಆರ್ಥಿಕ ವ್ಯವಸ್ಥೆಯಲ್ಲಿ ಬಹಳಷ್ಟು ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲಗಳ ಉತ್ಪಾದನೆಯನ್ನಾಧರಿಸಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕಚ್ಚಾ ತೈಲ ಉತ್ಪಾದಿಸುವ ಪ್ರಾಂತ್ಯಗಳಲ್ಲಿ ಟೆಕ್ಸಾಸ್ ಅನಂತರ ಅಲಾಸ್ಕ ದ್ವಿತೀಯ ಸ್ಥಾನದಲ್ಲಿದೆ. ಮಧ್ಯ ಅಕ್ಷಾಂಶ ಪ್ರದೇಶದ ಬೆಳೆಗಳ ಜೊತೆಗೆ ಪಶುಪಾಲನೆಯ ಉತ್ಪನ್ನವೂ ಸೇರುತ್ತದೆ. ಆಂಕೊರೇಜಿನ ಬಳಿಯ ಮಟನುಸ್ಕ ಕಣಿವೆಯ ಬೆಳೆ ರಾಜ್ಯದ ಅರ್ಧ ಉತ್ಪತ್ತಿಯಷ್ಟಾದರೂ ವ್ಯವಸಾಯ ಅಲ್ಲಿ ಅಷ್ಟಾಗಿ ಮುಂದುವರಿದಿಲ್ಲ; ಮೀನುಗಾರಿಕೆ ಮತ್ತು ಅದರ ರಫ್ತು ಅಲಾಸ್ಕದ ಮುಖ್ಯ ಕೈಗಾರಿಕೆ. ಇದರಲ್ಲಿ ಸಾಲ್ಮನ್ ಜಾತಿಯ ಮೀನುಗಳೇ ಹೆಚ್ಚು. ಈ ಕೈಗಾರಿಕೆ ರಾಜ್ಯದ ಬಹುಪಾಲು ಕಾರ್ಮಿಕವರ್ಗಕ್ಕೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ.

ಸಣ್ಣ ಕಣಿವೆಗಳಲ್ಲಿ ದಕ್ಷಿಣದ ತೀರಪ್ರದೇಶಗಳಲ್ಲಿ ಬಹುಪಾಲು ಪ್ರಜೆಗಳು ವಾಸಿಸಿದರೆ, 15,800ರಷ್ಟು ಅಲ್ಪ ಸಂಖ್ಯೆಯ ಎಸ್ಕಿಮೋಜನರು ರಾಜ್ಯದ ಉತ್ತರ ಹಾಗೂ ಪಶ್ಚಿಮ, ಭಾಗದಲ್ಲಿ ವಾಸಿಸುವರು. ಆಂಕೊರೇಜ್, ಫೇರ್‌ಬ್ಯಾಂಕ್, ಜೂನೆ ಮತ್ತು ಕೆಚಿಕನ್-ಇವು ಮುಖ್ಯ ನಗರಗಳು. ಜೂನ್ ಅಲಾಸ್ಕದ ರಾಜಧಾನಿ