ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲುಬು

ವಿಕಿಸೋರ್ಸ್ ಇಂದ
Jump to navigation Jump to search

ಅವಶ್ಯವಲ್ಲದ ಸಸ್ಯ (ವೀಡ್). ಕಳೆ ಪರ್ಯಾಯ ನಾಮ. ಇವು ಸಾಗುವಳಿಗಾಗಿ ಆರಿಸಿಕೊಂಡ ಎಲ್ಲ ಪ್ರದೇಶಗಳ ಮೇಲೂ ಆಕ್ರಮಣ ನಡೆಸುತ್ತವೆ. ಈ ಗಿಡಗಳು ವಿವಿಧ ರೀತಿಯ ಮಣ್ಣು ಹವಾಗುಣಗಳ ಪರಿಸ್ಥಿತಿಗಳಿಗೆ ಹೊಂದಿಕೊಂಡು ಬಾಳುತ್ತವೆ. ಮಂಜಿನ ವಾತಾವರಣದಲ್ಲಿಯೂ ಜೀವಿಸುವ ಸಾಮರ್ಥ್ಯ ಪಡೆದಿವೆ. ಸಾಗುವಳಿ ಮಾಡದ ಅಥವಾ ಬಂಜರು ಭೂಮಿಯಲ್ಲಿ ಪ್ರಬಲವಾಗಿರುವುವಲ್ಲದೆ ಪೈರಿನೊಂದಿಗೆ ನೀರು ಬೆಳಕು ಮತ್ತು ಆಹಾರಕ್ಕಾಗಿ ಅವು ಸತತ ಹೋರಾಟ ನಡೆಸುತ್ತವೆ. ಅವುಗಳ ಕ್ಷೀಣತೆ ಅಥವಾ ಪ್ರವರ್ಧಮಾನತೆ ಪೈರಿನ ಸ್ಥಿತಿಯನ್ನು ಅವಲಂಬಿಸಿದೆ. ದುರ್ಬಲ ಪೈರಿನಲ್ಲಿ ಕಳೆಯದೇ ಮೇಲುಗೈ. ಸರಿಯಾಗಿ ಬೆಳೆದ ಪೈರಿನ ನಡುವೆ ಕಳೆ ಇದ್ದೂ ಇಲ್ಲದಂತಾಗುವುದು.


ಕಳೆ ಉಪಯೋಗಕರವೂ ಹೌದು; ಉಪದ್ರವಕಾರಿಯೂ ಹೌದು. ತಾತ್ಕಾಲಿಕವಾಗಿ ಅನುಪಯುಕ್ತ ಅಥವಾ ಪರಿತ್ಯಕ್ತ ಭೂಮಿಯ ಮೇಲೆ ಬೇರೆ ಏನೂ ಆಕ್ರಮಣ ನಡೆಸದಂತೆ ನಿರ್ಬಂಧಿಸುವಲ್ಲಿ ಕಳೆಯ ಪಾತ್ರ ಮಹತ್ವವುಳ್ಳದ್ದು. ಅದು ಮಣ್ಣಿನ ಸವೆತ ತಡೆಗಟ್ಟುವುದು; ನೀರು ಹರಿದು ಹೋಗುವ ವೇಗ ಕಡಿಮೆ ಮಾಡುವುದು. ಮೀನು ಮತ್ತಿತರ ಜಲಚರ ಪ್ರಾಣಿಗಳಿಗೆ ಪಾಚಿಕಳೆ ಸ್ವಭಾವಸಿದ್ಧ ಆಹಾರ. ಕೆಲವು ಕಳೆಗಳನ್ನು ಮನುಷ್ಯ ಆಹಾರ, ವಸ್ತ್ರಗಳಿಗೂ ಮತ್ತೆ ಕೆಲವನ್ನು ವಸತಿ ಸೌಕರ್ಯಕ್ಕಾಗಿಯೂ ದನಗಳ ಮೇವಿಗಾಗಿಯೂ ಔಷಧಿಗಳಿಗಾಗಿಯೂ ಉಪಯೋಗಿಸುತ್ತಾನೆ. ಹೂ ಬಿಟ್ಟಿರುವ ಕಳೆ ಆ ಪ್ರದೇಶಕ್ಕೆ ಅಲಂಕಾರ ತರುವುದುಂಟು.


ವ್ಯವಸಾಯ ರಂಗದಲ್ಲಿ ತಲೆದೋರುವ ಬೂಷ್ಟು, ಕ್ರಿಮಿಕೀಟಗಳಂಥ ಉಪದ್ರವಕಾರಿಗಳು ಉಂಟುಮಾಡುವ ಒಟ್ಟು ನಷ್ಟಕ್ಕಿಂತ ಅಲುಬು ಕಳೆಯಿಂದ ಆಗುವ ನಷ್ಟ ಹೆಚ್ಚಿನದು. ಫಸಲು ಕಲುಷಿತವಾದರೆ ಅದರ ಆದಾಯದ ಬೆಲೆ ಇಳಿಯುವುದು. ಕಳೆಯನ್ನೊಳಗೊಂಡ ಜಮೀನಿನ ಬೆಲೆ ತಗ್ಗುವುದು. ಬೇಸಾಯದ ವೆಚ್ಚ ಮತ್ತು ಸಾಮಾನು ಸರಂಜಾಮಿನ ಏರ್ಪಾಡು ಏರುವುದು. ಬೆಳೆಯ ಆಯ್ಕೆಯೂ ಪರಿಮಿತಿಗೊಳ್ಳುವುದು. ರೋಗರುಜಿನಗಳನ್ನು ಉಂಟುಮಾಡುವ ಬೂಷ್ಟು, ಕ್ರಿಮಿಕೀಟಗಳಿಗೆ ಕಳೆ ಆಶ್ರಯ ಕೊಟ್ಟು ಬೆಳೆಗಳ ಮೇಲೆ ಅವು ಆಕ್ರಮಣ ನಡೆಸಲು ಕಾರಣವಾಗುತ್ತದೆ. ಕಳೆ ಹೊಳೆಯನ್ನಾಗಲಿ ಚರಂಡಿಯನ್ನಾಗಲಿ ಪ್ರತಿಬಂಧಿಸಿ ತೊಡಕನ್ನುಂಟುಮಾಡಬಹುದು. ಸರೋವರಗಳನ್ನೂ ಕೊಳಗಳನ್ನೂ ಹೊದಿಕೆಯಂತೆ ಮುಚ್ಚಿದ್ದು ನೀರನ್ನು ಕಲುಷಿತಗೊಳಿಸಬಹುದು.


ಅಲುಬು ಕಳೆಯನ್ನು ವಾರ್ಷಿಕ, ದ್ವೈ ವಾರ್ಷಿಕ ಮತ್ತು ಬಹುವಾರ್ಷಿಕ ಗಿಡಗಳನ್ನಾಗಿ ವರ್ಗೀಕರಿಸಲಾಗಿದೆ. ಕಾಕಲ್ಬರ್, ಕ್ರ್ಯಾಬ್ಗ್ರಾಸ್, ಫಾಕ್ಸ್‌ಟೇಲ್‌ ವ್ಯವಸಾಯದ ಭೂಮಿಯಲ್ಲಿ ಸಾಮಾನ್ಯವಾಗಿ ಬೆಳೆಯುವ ಕಳೆ ಸಸ್ಯಗಳು ವಾರ್ಷಿಕ ಗುಂಪಿಗೆ ಸೇರಿವೆ. ದ್ವೈ ವಾರ್ಷಿಕ ಕಳೆಯ ಗುಂಪು ವೈಲ್ಡ್‌ ಕ್ಯಾರಟ್, ಬರ್ಡಾಕ್ ಮುಂತಾದ ಕೆಲವೇ ಕಳೆಗಳನ್ನು ಹೊಂದಿದೆ. ಬಹುವಾರ್ಷಿಕ ಕಳೆಯ ಗುಂಪಿನಲ್ಲಿ ನಟ್ಗ್ರಾಸ್, ಪ್ರಿಕ್ಲಿಪಿಯರ್, ರೆಡ್ ಸಾರೆಲ್, ಪಂಕ್ ಚರ್ ವೈನ್ ಮುಂತಾದುವನ್ನು ಸೇರಿಸಲಾಗಿದೆ.


ಸಾಮಾನ್ಯವಾಗಿ ಎಲ್ಲೆಡೆಗಳಲ್ಲೂ ಕಾಣಬರುವ ಕಳೆಯ ಹಣ್ಣು ಮತ್ತು ಬೀಜಗಳ ಪ್ರಸಾರ ಬಹಳ ವಿಧಗಳಲ್ಲಾಗುವುದು. ಹಣ್ಣು ಬೀಜಗಳ ರಚನೆಯಲ್ಲಿನ ಮಾಪಾರ್ಡುಗಳು ಗಾಳಿ, ನೀರು ಮತ್ತು ಪ್ರಾಣಿಗಳಿಂದ ಪ್ರಸಾರವಾಗಲು ಅನುಕೂಲವಾಗಿವೆ. ಅವು ಪ್ರಾಣಿಗಳ ರೋಮಕ್ಕೆ ಅಂಟಿಕೊಳ್ಳಬಹುದು, ಗೊರಸಿಗೆ ಸಿಕ್ಕಿಕೊಳ್ಳಬಹುದು, ಅಥವಾ ಜೀರ್ಣಾಂಗದ ಜಾಡಿನಲ್ಲಿ ಹಾದು ಹೊರಬಂದು ಪ್ರಸಾರವಾಗಬಹುದು. ಹರಿಯುವ ನೀರು ಲಕ್ಷೋಪಲಕ್ಷ ಬೀಜಗಳನ್ನು ಕೊಂಡೊಯ್ದು ವಿಶಾಲ ಪ್ರದೇಶಗಳಲ್ಲಿ ಹರಡುವುದು. ಸರಿಯಾಗಿ ಶುದ್ಧಿಗೊಳಿಸದ ಬೀಜ ಬಿತ್ತುವ ಬೇಜವಾಬ್ದಾರಿತನ, ಹೊರದೇಶಗಳಿಗೆ ರಫ್ತು ಮಾಡುವ ಬಿತ್ತನೆಬೀಜವನ್ನು ಒಣ ಹುಲ್ಲು, ಆಹಾರ ಸಾಮಗ್ರಿ, ಗಿಡ ಶೇಖರಣೆ ಮುಂತಾದುವುಗಳೊಂದಿಗೆ ಕಳಿಸುವ ನಿರ್ಲಕ್ಷ್ಯ ಇವೂ ಕಳೆಯ ಪ್ರಸಾರಕ್ಕೆ ಕಾರಣವಾಗುತ್ತವೆ. ಬಹುಶಃ ಇದೇ ಕಾರಣದಿಂದಾಗಿ ಅಮೆರಿಕ, ಕೆನಡ ದೇಶಗಳಲ್ಲಿನ ಅನೇಕ ಜಾತಿಯ ಕಳೆಗಳು ಯುರೋಪ್ ಮತ್ತಿತ್ತರ ಏಷ್ಯ ಪ್ರದೇಶಗಳಿಗೆ ಸಾಗಿ ಬಂದಿರಬಹುದು.


ಕಳೆಯನ್ನು ನಿಯಂತ್ರಿಸುವುದರಲ್ಲಿ ಉಳುಮೆ ಅಥವಾ ಬೇಸಾಯ ಅತ್ಯಂತ ಪರಿಣಾಮ ಕಾರಿಯೂ ಮಿತವ್ಯಯದ್ದೂ ಆದ ಮಾರ್ಗ. ಕಳೆಕೀಳುವುದು, ಸುಡುವುದು, ಕತ್ತರಿಸುವುದು, ಇವೂ ನಿಯಂತ್ರಣದ ಹಲವು ವಿಧಗಳು. ಕಳೆ ವಿಸ್ತರಿಸಿದಂತೆಲ್ಲ ಹೊಸ ಕಳೆ ನಾಶಕಗಳೂ ಬಳಕೆಗೆ ಬರುತ್ತಿವೆ. ಕಳೆನಾಶಕಗಳಲ್ಲಿ ಎರಡು ವಿಧ. ಆರಿಸಿದ ಕಳೆನಾಶಕ ಮತ್ತು ಆರಿಸದ ಕಳೆನಾಶಕ. ಐರನ್ ಸಲ್ಫೇಟ್, ಕಾಪರ್ ನೈಟ್ರೇಟ್ ಮುಂತಾದ ಆರಿಸಿದ ಕಳೆನಾಶಕವನ್ನು ಮಿಶ್ರಿತ ಕಳೆಯಮೇಲೆ ನಿಶ್ಚಿತ ಪ್ರಮಾಣದಲ್ಲಿ ಸಿಂಪಡಿಸಿದರೆ ಬೇಡವಾದ ಕಳೆಮಾತ್ರ ನಾಶವಾಗುತ್ತದೆ. ಆರಿಸದ ಕಳೆನಾಶಕಗಳಾದ ಸೋಡಿಯಮ್ ಮತ್ತು ಅಮೋನಿಯಮ್ ಥೈಯೋಸೈನೈಟ್, ಅಮೋನಿಯಮ್ ಸಲ್ಫೇಟ್ ಪೆಟ್ರೋಲಿಯಂ ಎಣ್ಣೆ ಸಿಂಪಡಿಸಿದಾಗ ಅವುಗಳೊಂದಿಗೆ ಸಂಪರ್ಕ ಪಡೆಯುವ ಎಲ್ಲ ಕಳೆಯೂ ನಾಶವಾಗುತ್ತದೆ. ಭಾರತದಲ್ಲಿ 2,4-ಡಿ(2,4-ಡೈಕ್ಲೋರೋ ಫೀನೈಲ್, ಅಸಿಟಿಕ್ ಆಮ್ಲ) ಅಥವಾ ಎಂ. ಸಿ. ಪಿ. ಎ. (2-ಮೀಥೈಲ್ 4 ಫೀನಾಕ್ಸಿ ಅಸಿಟಿಕ್ ಆಮ್ಲ) ಹುಲ್ಲು ಕಳೆಯನ್ನುಳಿದು ಮಿಕ್ಕೆಲ್ಲ ವಾರ್ಷಿಕ ಕಳೆಯ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ.