ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವಂತೀ ನಗರ

ವಿಕಿಸೋರ್ಸ್ ಇಂದ
Jump to navigation Jump to search

ಪುರಾಣಪ್ರಸಿದ್ಧವಾದ ಮುಕ್ತಿದಾಯಕ ಕ್ಷೇತ್ರ. ಈಗಿನ ಉಜ್ಜಯಿನೀ ನಗರವೇ ಇದೆಂದು ನಂಬಿಕೆ. ಇಲ್ಲಿನ ಹೆಂಗಳೆಯರು ಕಾಮಕೇಳಿ ಚತುರೆಯರೆಂದು ಬಾಲರಾಮಾಯಣ ಹೇಳುತ್ತದೆ. ಅವಂತೀನಾಥನಾದ ಉಜ್ಜಯಿನೀಮಹಾಕಾಲನ ದೇವಾಲಯ ಪುರಾಣಪ್ರಸಿದ್ಧವಾದುದು. ಅವಂತಿ ದೇಶವೆಂದೂ ಅದರಲ್ಲಿ ಉಜ್ಜಯಿನಿ ನಗರವೆಂದೂ ಇನ್ನೊಂದು ಕಲ್ಪನೆಯಿದೆ. ಮಾಳವ ದೇಶವೇ ಅವಂತಿಯೆಂದೂ ಹೇಳುವು ದುಂಟು. ಇದಿರುವುದು ನರ್ಮದಾನದಿಯ ದಕ್ಷಿಣಕ್ಕೆ. ಇಲ್ಲಿಯೇ ಕೃಷ್ಣಬಲರಾಮರ ವಿದ್ಯಾಭ್ಯಾಸ ನಡೆದದ್ದು. ಅವರ ಗುರುವಾದ ಸಾಂದೀಪಿನಿಯ ಆಶ್ರಮ ಇದ್ದುದೂ ಇಲ್ಲಿಯೇ. ಮಹಾಭಾರತದ ಕಾಲದಿಂದ ಇದು ಪ್ರಸಿದ್ಧ. ಇಲ್ಲಿ ವಿಂದ-ಅನುವಿಂದ ಎನ್ನುವ ಇಬ್ಬರು ಸೋದರರು ರಾಜ್ಯವಾಳುತ್ತಿದ್ದರು. ಧರ್ಮರಾಜ ರಾಜಸೂಯಯಾಗವನ್ನು ಮಾಡುವ ಸಂದರ್ಭದಲ್ಲಿ ಸಹದೇವ ಇವರನ್ನು ಗೆದ್ದು ಕಪ್ಪಕಾಣಿಕೆಗಳನ್ನು ಪಡೆದ. ಶ್ರೀವಿಷ್ಣು ಕುಶಗಳಿದ್ದ ಈ ಸ್ಥಳದಲ್ಲಿಯೇ ಬ್ರಹ್ಮನ ಪ್ರಾರ್ಥನೆಯನ್ನು ಮನ್ನಿಸಿ ನೆಲೆಸಿದನಾಗಿ ಇದಕ್ಕೆ ಕುಶಸ್ಥಲಿ ಎನ್ನುವ ಹೆಸರಾಯಿತು. ಇದನ್ನು ಕನಕಶೃಂಗ, ವಿಶಾಲಾ, ಮಹಾಕಾಲವನ, ಪದ್ಮಾವತಿ ಎಂದೂ ಪುರಾಣಗಳಲ್ಲಿ ಕರೆದಿದ್ದಾರೆ.