ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವಲೋಕಿತೇಶ್ವರ

ವಿಕಿಸೋರ್ಸ್ದಿಂದ
Jump to navigation Jump to search

ಅಮಿತಾಭನೆಂಬ ಧ್ಯಾನಿಬುದ್ಧನ ಸತ್ತ್ವದಿಂದ ಹುಟ್ಟಿ ಬಂದ ಬೋಧಿಸತ್ತ್ವನಿಗೆ ಈ ಹೆಸರಿದೆ. ಮಹಾಯಾನ ಬೌದ್ಧರ ನಂಬಿಕೆಯಂತೆ ಧ್ಯಾನಿಬುದ್ಧರು ತಮ್ಮ ಸತ್ತ್ವಗಳಿಂದ ಇಂಥ ಜಿನಪುತ್ರರನ್ನು ಅಥವಾ ಬೋಧಿಸತ್ತ್ವರನ್ನು ಉತ್ಪಾದಿಸುತ್ತಾರೆ. ಜಗತ್ತನ್ನು ಕರುಣೆಯಿಂದ ಕಾಣುವವನು ಎಂಬುದು ಅವಲೋಕಿತೇಶ್ವರ ಎಂಬ ಪದದ ಅರ್ಥ. ಇದು ಅಮಿತಾಭನ ಸಂಭೋಗಕಾಯ. ಇದರ ವರ್ತನೆಯಿಂದಲೇ ಜಗತ್ತಿನಲ್ಲಿ ಗೌತಮ ಬುದ್ಧ ಶಾಕ್ಯಮುನಿಯಾಗಿ ಅವತರಿಸುವನೆಂದೂ ಕಲ್ಪನೆ. ಅವಲೋಕಿತೇಶ್ವರನ ಶಕ್ತಿಯಾಗಿ ಶ್ವೇತತಾರಾ ಎಂಬ ಸ್ತ್ರೀ ಬುದ್ಧ ರೂಪವುಂಟು. ಚೀನದಲ್ಲಿ ಮತ್ತು ಜಪಾನಿನಲ್ಲಿ ಕುಆನ್-ಯಿನ್ ಅಥವಾ ಕ್ವನ್ನೋನ್ ಎಂಬ ಅಭಿಧಾನದಿಂದ ಪ್ರಚಲಿತವಾಗಿರುವ ಕರುಣಾಧಿ ದೇವತೆ ಈ ಶ್ವೇತ ತಾರೆಯೇ. ಸದ್ಧರ್ಮಪುಂಡರೀಕವೆಂಬ ಗ್ರಂಥದ ಒಂದು ಪರಿಚ್ಛೇದವಾದ ಕಾರಂಡ ವ್ಯೂಹದಲ್ಲಿ ಅವಲೋಕಿತೇಶ್ವರನ ವರ್ಣನೆ ನಿರೂಪಣೆಗಳಿವೆ. 4ನೆಯ ಶತಮಾನದಿಂದ ಈ ದೇವತೆಯ ಕಲ್ಪನೆಯೂ ಶಿಲ್ಪದಲ್ಲಿ ಚಿತ್ರಣವೂ ಬಂದಿದೆ.


ಅವಲೋಕಿತೇಶ್ವರನ ಮುಖ್ಯ ರಸವೇ ಕರುಣೆ; ಅವನ ಬೆರಳುಗಳಿಂದ ಹರಿದ ನದಿಗಳು ನರಕದ ಬೆಂಕಿಯನ್ನೆಲ್ಲ ಆರಿಸಿ ಶೀತಲಗೊಳಿಸುತ್ತವೆಂದೂ ಅವನ ಪ್ರತಾಪದಿಂದ ನರಕದ ನಿಯಾಮಕರಾದ ಕ್ರೂರಗಣಗಳೆಲ್ಲ ಬೆದರಿ ಓಡುತ್ತವೆಂದೂ ನಂಬಿಕೆಯಿದೆ. ಪಾಪಿ ಜನರನ್ನು ಉದ್ಧಾರಮಾಡುವ ಸಲುವಾಗಿಯೇ ಅವತರಿಸಿದ ಬೋಧಿಸತ್ತ್ವ ಇವನೆಂದೂ ಇದಕ್ಕಾಗಿಯೇ ಓಂ ಮಣಿಪದ್ಮೇಹಂ ಎಂಬ ಮಂತ್ರವನ್ನು ಧರೆಗೆ ಇಳಿಸಿದನೆಂದೂ ಟಿಬೆಟ್ ಜನರು ನಂಬುತ್ತಾರೆ. ಜಗತ್ತಿನ ಎಲ್ಲ ಪ್ರಾಣಿಗಳನ್ನೂ ಉದ್ಧರಿಸುತ್ತೇನೆ; ಈ ಪ್ರತಿಜ್ಞೆ ಸುಳ್ಳಾದರೆ ನನ್ನ ತಲೆ ಸೀಳಿಹೋಗಲಿ ಎಂಬುದು ಅವಲೋಕಿತೇಶ್ವರ ಶಪಥವಂತೆ. ಕನ್ನಡ ನಾಡಿನಲ್ಲಿ ಕೂಡ ಲೋಕೇಶ್ವರನೆಂಬ ಹೆಸರಿನಿಂದ ಈ ದೇವತೆ ಪುಜೆಗೊಳ್ಳುತ್ತಿದ್ದ. ಮಂಗಳೂರಿನ ಕದರಿಯಲ್ಲಿರುವ ದೇವಸ್ಥಾನ ಈ ದೇವತೆಯದೇ.