ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವೆಂಜೋಯರ್

ವಿಕಿಸೋರ್ಸ್ ಇಂದ
Jump to navigation Jump to search

1113-62. ಅರಬ್ಬಿಯ ಅಬುಮಾರ್ವಾನ್ ಅಬ್ದುಲ್ ಮಲ್ಲಿಕ್ ಇಬ್ನ್‌ ಜೋರ್, ತಂದೆಯೂ ತಾತನೂ ವೈದ್ಯರಾಗಿದ್ದ ಹೆಸರಾಂತ ಕುಟುಂಬದ, ಸ್ಪೇನಿನ ಮುಸ್ಲಿಂ ವೈದ್ಯ. ತತ್ತ್ವಜ್ಞಾನಿ ವೈದ್ಯ ಅವಿರೊಯಿಜ಼್ನ ಸಮಕಾಲೀನನಾಗಿ, ಅವನ ಭಾಷಣಗಳನ್ನು ಕೇಳಿ ಅವನಿಂದಲೇ ವೈದ್ಯ ಕಲಿತ. ಬುದ್ಧಿ ಇಲ್ಲವೇ ಬುದ್ಧಿ ಪ್ರಮಾಣ ತತ್ತ್ವಶಾಲಿಯಾಗಿದ್ದ. ಆಗಿನ ಕಾಲದಲ್ಲಿ ಉನ್ನತಿಗೇರಿದ ಗ್ಯಾಲೆನ್ನನನ್ನು ಎದುರಿಸುವ ಎದೆಗಾರಿಕೆ ತೋರಿದ ಕೆಲವೇ ಮಂದಿಯಲ್ಲಿ ಇವನೊಬ್ಬ. ಬೊಗಳೆ ವೈದ್ಯಗಾರಿಕೆಯನ್ನೂ ಜ್ಯೋತಿಷಿಗಳ ಕುರುಡು ನಂಬಿಕೆಯ ಮದ್ದುಗಳನ್ನೂ ಬಲವಾಗಿ ವಿರೋಧಿಸಿ ತನ್ನ ಬರೆವಣಿಗೆಗಳಲ್ಲಿ ವ್ಯಕ್ತಪಡಿಸಿದ. ಗರ್ಭಕೋಶವನ್ನು ಪುರ್ತಿ ತೆಗೆದುಹಾಕಲು ಮೊದಲು ಕೈ ಹಾಕಿದ. ಪ್ರಾಣಿಗಳ ಮೇಲೆ ಪ್ರಯೋಗಗಳನ್ನು ನಡೆಸಿದ. ಜಠರದ ಏಡಿಗಂತಿ, ನನ್ನಿಲುಕದ (ಮೀಡಿಯಾಸ್ಟೈನಂ) ಕುರು, ಒಳಗಿವಿ ಕೀವು ಇವನ್ನೆಲ್ಲ ವಿವರಿಸಿದ. ಕಜ್ಜಿಗೆ ಕಾರಣವಾದ ಹುಳುವನ್ನು ಮೊದಲು ಬಣ್ಣಿಸಿದ. ಒಂದು ಹೊತ್ತಗೆಯಲ್ಲಿ (ಅಲ್ ಅಘದಿಯ) ಆಹಾರ, ಮದ್ದುಗಳನ್ನು ವಿವರಿಸಿದ. ಇನ್ನೊಂದರಲ್ಲಿ (ಅಲ್ ಇಕ್ತಿಸಾದ್) ಮಾನಸಿಕ ಬೇನೆ, ಜನಾರೋಗ್ಯವನ್ನು ವಿವರಿಸಿದ. ರೋಗಗಳು, ಚಿಕಿತ್ಸೆ, ಪಥ್ಯ, ಮದ್ದುಗಳ ವಿವರವಿರುವ ಅವನ ಅಲ್ಟೆಯಿಸಿರ್ (ಆರೋಗ್ಯದ ಸರಿಪಡಿಸಿಕೆ) ಎಂಬ ಪುಸ್ತಕ ಯೆಹೂದಿ ನುಡಿಗೂ (1260) ಆಮೇಲೆ ಲ್ಯಾಟಿನ್ನಿಗೂ (1280)ಅನುವಾದವಾಗಿ, 17ನೆಯ ಶತಮಾನದ ತನಕ ಜಾರಿಯಲ್ಲಿತ್ತು. ಮಗನೂ ತಂದೆಯ ಶಿಷ್ಯನಾಗಿ ಹಲವಾರು ವೈದ್ಯ ಗ್ರಂಥಗಳನ್ನು ಬರೆದ.