ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವೆಸ್ತ ಭಾಷೆ

ವಿಕಿಸೋರ್ಸ್ ಇಂದ
Jump to navigation Jump to search

ಇರಾನಿನ ಅತ್ಯಂತ ಪ್ರಾಚೀನ ಧರ್ಮವಾದ ಜರತುಷ್ಟ್ರ ಧರ್ಮದ ಭಾಷೆ. ಪ್ರಾಚೀನ ಪಾರಸಿಯ ಸಮೀಪಜ್ಞಾತಿಯೂ ಸಂಸ್ಕೃತದ ದೂರಜ್ಞಾತಿಯೂ ಆಗಿದೆ. ಇದು ಮತ್ತು ಪ್ರಾಚೀನ ಪಾರಸಿ ಭಾಷೆಗಳು ಇಂಡೋ ಯುರೋಪಿಯನ್ ಭಾಷಾ ಪಂಗಡದ ಆರ್ಯ ಶಾಖೆಯ ಉಪಶಾಖೆಯಾದ ಇರಾನಿ ಭಾಷೆಯ ಪ್ರಾಚೀನ ಮಜಲಿಗೆ ಸಂಬಂಧಿಸಿವೆ.


ಅವೆಸ್ತ ಸಾಹಿತ್ಯ ಆ ಭಾಷೆಯ ಎರಡು ಐತಿಹಾಸಿಕ ಮಜಲುಗಳನ್ನು ತೋರಿಸುತ್ತದೆ. ಆ ಪ್ರಾಚೀನ ಮಜಲನ್ನು ಗಾಥಿಕ್ ಅವೆಸ್ತ ಎಂದು ಕರೆಯುತ್ತಾರೆ. ಇರಾನಿನ ಪ್ರಾಚೀನ ಪ್ರವಾದಿ ಜರತುಷ್ಟ್ರ (ಪ್ರ.ಶ.ಪೂ. ಸು. 600) ಬರೆದ ಗಾಥೆಗಳ (ಅಥವಾ ಮಂತ್ರಗಳ) ಭಾಷೆ ಇದು. ಅನಂತರದ ಮಜಲನ್ನು ಕಿರಿಯ ಅವೆಸ್ತ ಎಂದು ಕರೆಯುತ್ತಾರೆ. ಇದರಲ್ಲಿ ಜರತುಷ್ಟ್ರನ ಪುರ್ವ ಮತ್ತು ಉತ್ತರವೆನಿಸುವ ನಾನಾ ಪ್ರಕಾರದ ವಿಷಯಗಳು ಅಡಕವಾಗಿವೆ. ಕಿರಿಯ ಅವೆಸ್ತ ಗ್ರಂಥದ ಭಾಷೆ ಒಂದೇ ರೀತಿಯಾಗಿಲ್ಲ. ಅದರಲ್ಲಿ ಪಹ್ಲವಿಯ (ಇರಾನೀ ಭಾಷೆಯ ನಡುವಣ ಮಜಲು) ವ್ಯಾಪಕ ಮಿಶ್ರಣವನ್ನು ಕಾಣಬಹುದು. ಅನೇಕ ಶತಮಾನಗಳ ವರೆಗೆ ಸಮೃದ್ಧವಾಗಿ ಬೆಳೆಸಲಾಗಿದ್ದು, ಅಲೆಕ್ಸಾಂಡರನ ದಾಳಿಯಿಂದಾಗಿ ವಿನಾಶಕ್ಕೆ ತುತ್ತಾದ ಆ ವ್ಯಾಪಕ ಧಾರ್ಮಿಕಸಾಹಿತ್ಯದ ತುಣುಕು ಮಾತ್ರ ಅವೆಸ್ತ ಸಾಹಿತ್ಯದ ಹೆಸರಿನಲ್ಲಿ ಇಂದು ನಮಗೆ ದೊರೆಯುತ್ತಿದೆ. ಪಹ್ಲವಿಯ ಮಿಶ್ರಣಕ್ಕೆ ಇದೇ ಕಾರಣ. ಸಸ್ಸಾನಿದ್ದರ ಆಳ್ವಿಕೆಯಲ್ಲಿ (3ನೆಯ ಶತಮಾನ) ಮಾಡಿದ ಸಂಕಲನ ಇಂದು ನಮಗೆ ಲಭ್ಯವಾಗಿದೆ. ಅದರಲ್ಲಿ ಬೇರೆ ಬೇರೆ ಕಾಲದಲ್ಲಿ ರಚಿಸಲಾಗಿರುವ ಪಠ್ಯಗಳೂ (ಅಪಸ್ತಕ್) ಪಹ್ಲವಿಯಲ್ಲಿ ಬರೆಯಲಾಗಿರುವ ವ್ಯಾಖ್ಯಾನವೂ (eóÁದ್) ದೊರೆಯುತ್ತವೆ.


ಸಂಸ್ಕೃತದೊಂದಿಗೆ ಹೋಲಿಸಿದರೆ ಅವೆಸ್ತ ಭಾಷೆಯಲ್ಲಿ ಈ ಪ್ರಮುಖ ಲಕ್ಷಣಗಳು ಕಂಡುಬರುತ್ತವೆ :

1. ಸ್ವರಗಳ ಮಾತ್ರೆಯನ್ನು ಹೆಚ್ಚು ಕಡಿಮೆ ಮಾಡಬಹುದು.

2. ಏಕಸ್ವರೀಕರಣ ಪ್ರವೃತ್ತಿ ಕಾಣಬರುತ್ತದೆಯಾದರೂ ಸಂಯುಕ್ತಸ್ವರಗಳು ಇನ್ನೂ ಏಕಸ್ವರಗಳಾಗಿ ಪರಿಣಮಿಸಿಲ್ಲ,

3. ಘೋಷ ಮಹಾಪ್ರಾಣಗಳು ಘೋಷತ್ವ ಕಳೆದುಕೊಂಡಿವೆ.

4. ಸ್ಪರ್ಶಗಳ ಹಿಂದೆ (ಮೊದಲಿಗೆ ಅಘೋಷಗಳಾಗಿದ್ದು ಅನಂತರ ಘೋಷಗಳಾಗಿರುವುವು) (ಡಿ) ಕಾರ ಅಥವಾ ಊಷ್ಮ ಬಂದಾಗ ಅವು (ಸ್ಪರ್ಶಗಳು) ಊಷ್ಮೀಕೃತವಾಗುತ್ತವೆ.

5. ಸ್ವರಗಳ ನಡುವಣ ಸಕಾರ ಹಕಾರವಾಗುತ್ತದೆ.

6. ಘೋಷ ಊಷ್ಮಗಳು ಉಳಿದುಕೊಂಡಿವೆ.

7. ನಾಮಪದ ಮತ್ತು ಕ್ರಿಯಾಪದಗಳ ದ್ವಿವಚನ ರೂಪಗಳನ್ನು ಅಪರೂಪವಾಗಿ ಬಳಸಲಾಗುತ್ತದೆ.

8. ಚತುರ್ಥೀವಿಭಕ್ತಿ ಶೀಘ್ರವಾಗಿ ಕಣ್ಮರೆಯಾಗುತ್ತಿದೆ.

9. ಪಂಚಮೀವಿಭಕ್ತಿ ಏಕವಚನದಲ್ಲಿ ಎಲ್ಲ ಧಾತುಗಳಿಗೂ ಅತ್ ಪ್ರತ್ಯಯವನ್ನು ಸೇರಿಸಲಾಗುತ್ತದೆ.

10. ಸಪ್ತಮೀ ವಿಭಕ್ತಿಯ ರೂಪಗಳಲ್ಲಿ ಆ ಎನ್ನುವ ಉಪಸರ್ಗವನ್ನು ಅಧಿಕ ಪ್ರತ್ಯಯವಾಗಿ ಬಳಸಲಾಗುತ್ತದೆ.

11. ಅನೇಕ ಐತಿಹಾಸಿಕ ರೂಪಗಳನ್ನು ಅದರಲ್ಲೂ ಸ್ತ್ರೀಲಿಂಗ ನಾಮಪದಾತ್ಮಕ ರೂಪಗಳಲ್ಲಿ ಉಳಿಸಿಕೊಳ್ಳಲಾಗಿದೆ.

12. ಕರ್ತೃ, ಕರ್ಮ, ದ್ವಿವಚನ ರೂಪವಾದ ಔ ಅನ್ನುವುದನ್ನು ಬಳಸುವುದೇ ಇಲ್ಲ.

13. ಸಾಮಾನ್ಯ ಮತ್ತು ಅಪುರ್ಣ ಭೂತಕಾಲಗಳಲ್ಲಿ ಸಾಮಾನ್ಯವಾಗಿ ಆಗಮವನ್ನು ಬಳಸುವುದಿಲ್ಲ.

14. ವಿಶಿಷ್ಟ ಭವಿಷ್ಯತ್ ರೂಪಗಳಿಲ್ಲ.

15. ಮಧ್ಯಮ ಪುರುಷ ಏಕವಚನಾಂತ್ಯ ಸ ಅನ್ನು ಐತಿಹಾಸಿಕ ರೂಪವನ್ನಾಗಿ ಉಳಿಸಿಕೊಳ್ಳಲಾಗಿದೆ.

16. ದ್ವಿತೀಯಕ ಅಥವಾ ಗೌಣ ಸಾಧಿತ ರೂಪಗಳಲ್ಲಿ ಸಮಾಸಪದ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ.

17. ಸಾಮಾನ್ಯವಾಗಿ ಸಮಾನಪದ ಎರಡು ಶಬ್ದ ಘಟಕಗಳಿಗಿಂತ ಹೆಚ್ಚು ದೀರ್ಘವಾಗಿರುವುದಿಲ್ಲ.


ಶಬ್ದಕೋಶದ ವಿಷಯದಲ್ಲಿ ಅವೆಸ್ತ ಭಾಷೆಯ ಒಂದು ವೈಲಕ್ಷಣ್ಯ ಎದ್ದುಕಾಣುವಂಥದು. ದ್ವೈತ ತತ್ತ್ವದ ಪ್ರಭಾವದಿಂದ, ಕಣ್ಣು, ತಲೆ ಅಥವಾ ನೋಟ, ನುಡಿದಾಟ ಇತ್ಯಾದಿ ಸಾಮಾನ್ಯ ವಿಷಯಗಳಿಗೂ ಎರಡು ಬಗೆಯ ಶಬ್ದಗಳಿವೆ. ಅಹುರಮಜ್ದನ ಸೃಷ್ಟಿಗೆ ಸಂಬಂಧಪಡುವಂತೆ ಉಪಯೋಗಿಸಬೇಕಾದವು ಒಂದು ವರ್ಗ. ಅವನ ಪ್ರತಿಸ್ಪರ್ಧಿಯಾದ ಅಂಗ್ರಮೈನ್ಯುವಿನ ಸೃಷ್ಟಿಗೆ ಉಪಯೋಗಿಸಲ್ಪಡಬೇಕಾದಂತಹವು ಮತ್ತೊಂದು ವರ್ಗ.

ಅವೆಸ್ತ ಭಾಷೆ ಪಶ್ಚಿಮ ಇರಾನಿಗೆ ಸಂಬಂಧಿಸಿದ್ದೊ ಅಥವಾ ಪುರ್ವ ಇರಾನಿನದೊ ಎಂಬುದನ್ನು ನಿಶ್ಚಿತವಾಗಿ ಹೇಳುವಂತಿಲ್ಲ. ಅವೆಸ್ತದಲ್ಲಿ ಕಂಡುಬರುವ ಭೌಗೋಳಿಕ ಸಾಕ್ಷ್ಯ ಪುರ್ವ ಇರಾನಿನತ್ತ ಕೈ ಮಾಡಿ ತೋರಿಸುತ್ತದೆ. ಈಚೆಗೆ ಈ ಭಾಷೆಗೂ ಖ್ವಾರೆಜ್ಮಿಯನ್ ಭಾಷೆಗೂ ಸಂಬಂಧವುಂಟೆಂದು ತೋರಿಸಲು ಭಾಷಾಸಾಕ್ಷ್ಯಗಳನ್ನು ಮುಂದಿಡಲಾಗಿದೆ.

ಮೊದಮೊದಲು ಅದು ಯಾವ ಭಾಗಕ್ಕೇ ಸೇರಿದ್ದಾಗಿರಲಿ ಜರತುಷ್ಟ್ರಮತ ಹರಡಿದ ಮೇಲೆ ಆ ಮತದ ಭಾಷೆಯಾಗಿ ಅವನ ಕಾಲಾನಂತರ ಕೆಲವು ಶತಮಾನಗಳ ಪರ್ಯಂತವಾ ದರೂ ಸಮಗ್ರ ಇರಾನಿನಲ್ಲಿ ಅದರ ವ್ಯಾಸಂಗ ನಡೆದು ಸಮಸ್ತರಿಗೂ ಅದರ ಪರಿಜ್ಞಾನವಿತ್ತು.


ವ್ಯಾಕರಣ, ಛಂದಸ್ಸು ಹಾಗೂ ವಸ್ತು ಇವುಗಳ ದೃಷ್ಟಿಯಿಂದ ಅವೆಸ್ತ ಮತ್ತು ಸಂಸ್ಕೃತ (ವೈದಿಕ) ಭಾಷೆಗಳಿಗಿರುವ ಗಮನಾರ್ಹವಾದ ಸಾಮ್ಯ ಈ ಕೆಳಕಂಡ ಉದ್ಧರಣ, ಅದರ ಸಂಸ್ಕೃತ ಛಾಯೆ, ಅನುವಾದಗಳಿಂದ ಸ್ಪಷ್ಟವಾಗುತ್ತದೆ.

ತಂ ಅಮವನ್ತಮ್ ಯಜತಮ್

ಶೂರಂ ದಮೋಹು ಸವಿಸ್ತಮ್

ಮಿತ್ರಂ ಯಜೈ಼ ಜಾವೋತ್ರಬ್ಯೋ.

[ತಂ ಅಮವನ್ತಮ್ ಯಜತಮ್

ಶೂರಂ ಧಾಮಸು ಸವಿಸ್ಥಮ್

ಮಿತ್ರಂ ಯಜೈ ಹೋತ್ರಭ್ಯಾನ್ (=ಹೋತೃಭಿಃ)]

ಆ ಅಮವಂತನನು, ಪೂಜ್ಯನನು

ಶೂರನನು ಭೂಧಾಮದೊಳತಿ ಬಲವಂತನನು

ಮಿತ್ರನನು ಹೋತೃಗಳಿಂದರ್ಚಿಪೆನು.