ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಂಥ್ರಸೀನ್ ಮತ್ತು ಫೀನಾಂಥ್ರಿನ್
ಆಂಥ್ರಸೀನ್ ಮತ್ತು ಫೀನಾಂಥ್ರಿನ್ ಒಂದೇ ಅಣು ಸೂತ್ರವುಳ್ಳ (ಅ14 ಊ10) ಎರಡು ಆರೋಮ್ಯಾಟಿಕ್ ಹೈಡ್ರೊಕಾರ್ಬನ್ನುಗಳು. ಇವೆರಡೂ ಕಲ್ಲಿದ್ದಲು ಟಾರಿನಲ್ಲಿ ದೊರೆಯುತ್ತದೆ. ಟಾರನ್ನು ಆಂಶಿಕವಾಗಿ ಬಟ್ಟಿ ಇಳಿಸುವಾಗ 3000 ಸೆಂ.ಗ್ರೇ.ಯಿಂದ 4000 ಸೆಂ.ಗ್ರೇ. ವರೆಗಿನ ಅವಧಿಯಲ್ಲಿ ಶೇಕರಿಸುವ ಭಾಗದಿಂದ ಇವನ್ನು ತೆಗೆಯುತ್ತಾರೆ.
ಆಂಥ್ರಸೀನ್ ವರ್ಣರಹಿತ ಘನಪದಾರ್ಥ; ಸಾಮಾನ್ಯ ಬೆಳಕನ್ನು ಹೀರಿ ನೀಲಿ ಬಣ್ಣದ ಪ್ರತಿದೀಪ್ತಿಯನ್ನು ಹೊರಸೂಸುತ್ತದೆ. ಅಶುದ್ಧತೆಯ ಕಾರಣ ಸಾಮಾನ್ಯವಾಗಿ ಇದಕ್ಕೆ ನಸು ಹಳದಿ ಬಣ್ಣವಿರುವುದುಂಟು. ಇದರ ದ್ರವಿಸುವ ಬಿಂದು 2160 ಸೆಂ.ಗ್ರೇ. ನೀರಿನಲ್ಲಿ ಅದ್ರಾವ್ಯ; ಆಲ್ಕೊಹಾಲ್ ಮತ್ತು ಈಥರ್‍ಗಳಲ್ಲಿ ಸ್ವಲ್ಪಮಟ್ಟಿಗೆ ವಿಲೀನವಾಗುತ್ತದೆ; ಬಿಸಿಯಾದ ಬೆಂಜೀನಿನಲ್ಲಿ ದ್ರಾವ್ಯ. ಉತ್ಕರ್ಷಣಕಾರಿಗಳೊಂದಿಗೆ (ಉದಾ: ಸೋಡಿಯಂ ಡೈ ಕ್ರೊಮೇಟ್ ಮತ್ತು ಸಲ್ಫೂರಿಕ್ ಆಮ್ಲಗಳ ಮಿಶ್ರಣ) ವರ್ತಿಸಿದಾಗ ಆಂಥ್ರಕ್ವಿನೋನ್ ಆಗುತ್ತದೆ.
ಚಿತ್ರ-1
ಕ್ಲೋರಿನ್ ಮತ್ತು ಬ್ರೊಮಿನ್‍ಗಳು ಕಡಿಮೆ ಉಷ್ಣತೆಯಲ್ಲಿ ( 2500 ಸೆಂ.ಗ್ರೇ.ಕೆಳಗೆ) ಉತ್ಕರ್ಷಣಕಾರಿಗಳಾಗಿ ವರ್ತಿಸುತ್ತವೆ; ಹೆಚ್ಚಿನ ಉಷ್ಣತೆಯಲ್ಲಿ 9.10 ಡೈಕ್ಲೋರೊ ಅಥವಾ 9.10 ಡೈ ಬ್ರೋಮೋ ಆಂಥ್ರಸೀನುಗಳನ್ನೂ ಕೊಡುತ್ತದೆ. ಸಲ್ಫ್ಯೋರಿಕ್ ಆಮ್ಲ ವಿವಿಧ ಸಲ್ಫೋನಿಕ್ ಆಮ್ಲಗಳನ್ನೂ ನೈಟ್ರಿಕಾಮ್ಲ ವಿವಿಧ ನೈಟ್ರೋ ಆಂಥ್ರಸೀನುಗಳನ್ನೂ ಕೊಡುತ್ತದೆ. ಪಿಕ್ರಿಕ್ ಆಮ್ಲದೊಡನೆ ವರ್ತಿಸಿದಾಗ ಆಂಥ್ರಸೀನ್ ಪಿಕ್ರೇಟಿನ ಕೆಂಪು ಹರಳುಗಳು ಉತ್ಪತ್ತಿಯಾಗುತ್ತವೆ.
ಚಿತ್ರ-2
ಈ ಕ್ರಿಯೆಯನ್ನು, ಆಂಥ್ರಸೀನನ್ನು ಗುರುತಿಸಲು ಉಪಯೋಗಿಸುವುದುಂಟು. ಆಂಥ್ರಸೀನ್‍ನ ಜನ್ಯಪದಾರ್ಥಗಳಲ್ಲಿ, ಮುಖ್ಯವಾಗಿ ಆಂಥ್ರಕ್ವಿನೋನ್ ವರ್ಣ ದ್ರವ್ಯಗಳ ತಯಾರಿಕೆಯಲ್ಲಿ ಉಪಯೋಗ ಪಡೆದಿದೆ.
ಚಿತ್ರ-3
ಫೀನಾಂಥ್ರೀನ್ ವರ್ಣರಹಿತ ಘನಪದಾರ್ಥ. ಇದರ ಬೆಂಜೀನ್ ದ್ರಾವಣ ನೀಲಿ ಪ್ರತಿ ದೀಪ್ತಿಯನ್ನು ಹೊರಸೂಸುತ್ತದೆ. ಇದರ ದ್ರವಿಸುವ ಬಿಂದು 990 ಸೆಂ.ಗ್ರೇ. ಉತ್ಕರ್ಷಣಕಾರಿಗಳೊಂದಿಗೆ ವರ್ತಿಸಿದಾಗ ಫೀನಾಂಥ್ರಕ್ವಿನೊನ್ ಉಂಟಾಗುತ್ತದೆ.
ಸಲ್ಫೂರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲ ಆಂಥ್ರಸೀನ್‍ನೊಂದಿಗೆ ವರ್ತಿಸಿದಂತೆಯೇ ಹ್ಯಾಲೋಜನ್‍ಗಳೂ ವರ್ತಿಸುತ್ತವೆ. ಮಾರ್ಫೀನ್ ಮೊದಲಾದ ಅಫೀಮಿನ ಆಲ್ಕಲಾಯ್ಡ್‍ಗಳು ಮತ್ತು ಕೊಲೆಸ್ಟೆರಾಲ್ ಮೊದಲಾದ ಸ್ಟೀರಾಯ್ಡ್‍ಗಳು, ಅಣುರಚನೆಯಲ್ಲಿ ಫೀನಾಂಥ್ರೀನ್ ಬಳಗಕ್ಕೆ ಸೇರಿದವು.
(ಜೆ.ಆರ್.ಎಲ್.)