ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಕೃತಿ ವಿಜ್ಞಾನ

ವಿಕಿಸೋರ್ಸ್ದಿಂದ

ಆಕೃತಿ ವಿಜ್ಞಾನ- ಯಾವುದೇ ಭಾಷೆಯ ಆಕೃತಿಮಾಗಳು (ಮಾರ್ಫೀಮ್) ಮತ್ತು ಅವುಗಳ ಜೋಡಣೆ, ಪರಸ್ಪರ ಸಂಬಂಧ ಇತ್ಯಾದಿಗಳನ್ನು ಕುರಿತ ಚರ್ಚೆಯನ್ನೊಳಗೊಂಡ ಭಾಷಾಶಾಸ್ತ್ರ ವಿಭಾಗ (ಮಾರ್ಫಾಲಜಿ). ಎಂದರೆ, ಆಕೃತಿಮಾಗಳನ್ನು ಗುರುತಿಸುವಿಕೆ ಮತ್ತು ಅವುಗಳ ವಿಂಗಡನೆಗೆ ಈ ಶಾಸ್ತ್ರದ ವಸ್ತು. ಆಕೃತಿ ವಿಜ್ಞಾನ ವ್ಯಾಕರಣದ ಮೊದಲ ಭಾಗ. ಎರಡನೆಯದು ವಾಕ್ಯವಿಜ್ಞಾನ (ಸಿಂಟ್ಯಾಕ್). ಕೆಲವು ವಿದ್ವಾಂಸರು ವ್ಯಾಕರಣ ಮತ್ತು ವಾಕ್ಯವಿಜ್ಞಾನಗಳೆರಡನ್ನೂ ಆಕೃತಿ ವಿಜ್ಞಾನದ ಭಾಗಗಳಾಗಿ ಪರಿಗಣಿಸುತ್ತಾರೆ. ಹಾಗೆ ಮಾಡಿದಾಗ ಆಕೃತಿ ವಿಜ್ಞಾನವನ್ನು ವ್ಯಾಕರಣದ ಅರ್ಥದಲ್ಲಿ ಬಳಸಿದ್ದಾರೆಂದು ಭಾವಿಸಬಹುದು. ವಾಕ್ಯ ವಿಜ್ಞಾನ ಭಾಗದಲ್ಲಿ ಆಕೃತಿ ವಿಜ್ಞಾನದಲ್ಲಿ ಗುರುತಿಸಲಾದ ಆಕೃತಿಮಾಗಳ ದೊಡ್ಡ ದೊಡ್ಡ ರಚನೆಗಳ ವಿವರಣೆ ಮಾಡುತ್ತಾರೆ. ಹೀಗೆ ಮೊದಲ ಪ್ರಕರಣಗಳ ಫಲಿತಾಂಶಗಳ ಮೇಲೆ ಮೇಲಿನ ಪ್ರಕರಣಗಳನ್ನು ಬೆಳೆಸಿಕೊಂಡು ಹೋಗುತ್ತಾರೆ. ಆದ್ದರಿಂದ ಯಾವುದೇ ಭಾಷೆಯ ಆಕೃತಿ ವಿಜ್ಞಾನವನ್ನು ಕುರಿತು ಮಾತನಾಡುವಾಗ ಆ ಭಾಷೆಯ ಧ್ವನಿವಿಜ್ಞಾನದ (ಫೋನೋಲಜಿ) ಪರಿಚಯವಿದೆಯೆಂದು ಭಾವಿಸಿಕೊಳ್ಳುತ್ತೇವೆ.

ಪ್ರತಿಯೊಂದು ಪ್ರಕರಣದಲ್ಲೂ ಅಲ್ಲಿಗೆ ಸಂಬಂಧಪಟ್ಟಂತೆ ಒಂದು ಮೂಲ ವಸ್ತುವಿರುತ್ತದೆ. ಒಂದಕ್ಕೂ ಹೆಚ್ಚು ಧ್ವನಿ ವಿಶೇಷಾಂಶಗಳಿಂದ ಕೂಡಿದ್ದರೂ ಧ್ವನಿಮಾವನ್ನು ಹೇಗೆ ಧ್ವನಿ ವಿಜ್ಞಾನದ ಮೂಲವಸ್ತುವೆಂದು ಭಾವಿಸುತ್ತೇವೋ ಹಾಗೆ ಆಕೃತಿಮಾವನ್ನು ಆಕೃತಿ ವಿಜ್ಞಾನದ ಮೂಲವಸ್ತುವೆಂದು ಭಾವಿಸುತ್ತೇವೆ. ಉದಾಹರಣೆಗೆ, ದ್ ಕನ್ನಡ ಭಾಷೆಯ ಒಂದು ಧ್ವನಿಮಾ, ದನ ಆ ಭಾಷೆಯ ಒಂದು ಆಕೃತಿಮಾದ ಒಂದು ರೂಪ.

ಭಾಷೆಯಲ್ಲಿ ಪದೇಪದೇ ಕಾಣಿಸಿಕೊಳ್ಳುವ, ಆಕೃತಿಗಳೊಡನೆ ವಿಶಿಷ್ಟ ಸಂಬಂಧವುಳ್ಳ, ಧ್ವನಿಮಾಗಳ ಸಂಚಯವನ್ನು ಆಕೃತಿಮಾ ಎನ್ನಲಾಗುತ್ತದೆ. ಆದರೆ ಆ ರೀತಿ ಪದೇಪದೇ ತೋರಿಬರುವ ಸಂಚಯಗಳೆಲ್ಲ ಆಕೃತಿಮಾ ಎನಿಸಿಕೊಳ್ಳಲಾರವು. ಉದಾಹರಣೆಗೆ, ಆನೆ, ಸೋನೆ ಮತ್ತು ಗೊನೆ ಇವುಗಳಲ್ಲಿ ಕಂಡುಬರುವ ನೆ ಆಕೃತಿಮಾವಲ್ಲ. ಆದರೆ ಮನೆತನ, ಕಳ್ಳತನಗಳಲ್ಲಿ ಕಾಣಬರುವ ತನ ಆಕೃತಿಮಾ ಎನಿಸಿಕೊಳ್ಳುತ್ತದೆ. ಬಹುವಾಗಿ ಆಕೃತಿಮಾಗಳು ಅರ್ಥಸಂಬಂಧ ಹೊಂದಿವೆಯೆಂದು ತೋರಿಸಬಹುದಾದರೂ ಧ್ವನಿಮಾಗಳಿಗೆ ಸುಲಭವಾಗಿ ಅರ್ಥ ಕೊಡುವುದು ಸಾಧ್ಯವಿಲ್ಲ. ಆಮೆ, ಆನೆ, ಆಳು ಇವುಗಳಿಗೆ ವ್ಯವಹಾರ ಪ್ರಪಂಚದಲ್ಲಿ ನಿಶ್ಚಿತಾರ್ಥವುಂಟು. ಆದರೆ ಈ ಆಕೃತಿಮಾಗಳಲ್ಲಿರುವ ಮೊದಲ ಧ್ವನಿಮಾಕ್ಕೆ ಏನರ್ಥಕೊಡಬಹುದು?

ಆಕೃತಿವಿಜ್ಞಾನದಲ್ಲಿ ಆಕೃತಿಮಾ ಅತ್ಯಂತ ಸಣ್ಣ ವಿಭಾಗ. ಅದನ್ನು ಇನ್ನೂ ಸಣ್ಣ ವಿಭಾಗವಾಗಿ ಕತ್ತರಿಸಲು ಸಾಧ್ಯವಿಲ್ಲ. ಹಾಗೆ ಮಾಡಿದಲ್ಲಿ ಅರ್ಥ ವ್ಯತ್ಯಾಸವಾದೀತು. ಅರ್ಥ ಬದಲಾಯಿಸದೇ ಅರ್ಥ ಹೊಂದಿದಂತೆ ಸಣ್ಣ ತುಂಡುಗಳಾಗಿ ಮೇಲೆ ಉದಾಹರಿಸಿದ ಆಕೃತಿಮಾಗಳನ್ನು ಕತ್ತರಿಸಲು ಸಾಧ್ಯವಿಲ್ಲ. ಮನೆ ಎಂಬುದು ಒಂದು ಆಕೃತಿಮಾ ಮತ್ತು ಒಟ್ಟಾಗಿ ಅದಕ್ಕೆ ಅರ್ಥವುಂಟು. ಆದರೆ ಮನೆ ಅಥವಾ ಮ ಎಂಬುವುಗಳಿಗೆ ಅರ್ಥವಿದೆಯೆಂದೂ ಮನೆ ಎಂಬುದರ ಅರ್ಥದೊಡನೆ ಸಂಬಂಧವಿದೆಯೆಂದೂ ತೋರಿಸುವುದು ಸಾಧ್ಯ. ಮನೆಗಳು ಎಂಬಲ್ಲಿ ಒಂದಕ್ಕೂ ಹೆಚ್ಚಾಗಿ ಆಕೃತಿಮಾಗಳಿದ್ದರೂ, ಅರ್ಥವಿದೆ. ಅದನ್ನು ಮನೆ ಮತ್ತು ಗಳು ಎಂದು ಎರಡು ಭಾಗ ಮಾಡಬಹುದು, ಮತ್ತು ಅವುಗಳಿಗೆ ಪ್ರತ್ಯೇಕವಾಗಿ ಅರ್ಥವಿದೆಯೆಂದೂ ಮನೆಗಳು ಎಂಬುದರ ಒಟ್ಟು ಅರ್ಥಕ್ಕೆ ಸಂಬಂಧವಿದೆಯೆಂದೂ ತೋರಿಸಬಹುದು. ಆದ್ದರಿಂದ ಮನೆಗಳು ಎಂಬಲ್ಲಿ ಎರಡು ಆಕೃತಿಮಾಗಳಿವೆ. ಈ ಉದಾಹರಣೆಯಲ್ಲಿ ಕಂಡುಬಂದಂತೆ ಭಾಷೆಯಲ್ಲಿ ಆಕೃತಿಮಾಗಳು ಪರಸ್ಪರ ಸಂಬಂಧ ಹೊಂದಿರುವುವೆಂದು ಸುಲಭವಾಗಿ ನಿರ್ಧರಿಸಬಹುದು. ಕೆಲವು ವೇಳೆ ಒಂದೇ ಒಂದು ಧ್ವನಿಮಾ ಒಂದು ಆಕೃತಿಮಾವನ್ನು ಪ್ರತಿನಿಧಿಸಬಹುದು. ಆದರೆ ಪ್ರತಿಯೊಂದು ಧ್ವನಿಮಾ ಆಕೃತಿಮಾ ಎನಿಸಿಕೊಳ್ಳಲಾರದು. ಉದಾ: ಆ ಮನೆ, ಆ ಮರಗಳಲ್ಲಿನ ಆ ಎಂಬುದೇ ಒಂದು ಆಕೃತಿಮಾ.

 	ಆಕೃತಿವಿಜ್ಞಾನದ ವಸ್ತು ವಿಷಯವನ್ನು ಎರಡು ಹಂತಗಳಲ್ಲಿ ಚರ್ಚಿಸುವುದು ಅನುಕೂಲವಾಗಿ ಕಂಡು ಬಂದಿದೆ. 1 ಆಕೃತಿಮಾಗಳ ವಿಶ್ಲೇಷಣೆ ಮತ್ತು ಪದ ಇತ್ಯಾದಿಗಳ ರಚನೆಯಲ್ಲಿ ಅವುಗಳ ಕ್ರಮದ ವಿವರಣೆ (ಪದಶಾಸ್ತ್ರ-ಮಾರ್ಫೆಮಿಕ್ಸ್) ಮತ್ತು 2 ಆಕೃತಿಮಾಗಳಲ್ಲಿ ಧ್ವನಿಮಾಗಳಲ್ಲಿ ಮಾರ್ಪಾಡು (ಸಂಧಿವಿಜ್ಞಾನ-ಮಾರ್ಫೊಫೋನೆಮಿಕ್ಸ್) 

ಇಲ್ಲಿ ಕನ್ನಡದಲ್ಲಿನ ಒಂದೆರಡು ಸಂಧಿ ನಿಯಮಗಳನ್ನು ಮಾತ್ರ ಸೂಚಿಸುವುದಾದರೆ: ಳ ದ ಮುಂದಿನ ಲ, ಳ ಕ್ಕೆ ಬದಲಾಯಿಸುತ್ತದೆ. ಉದಾ: ಕೇಳ್ ಮತ್ತು ಲಿ=ಕೇಳಲಿ. ಣ ದನಂತರ ಬರುವ ದ ಯಾವಾಗಲೂ ಡ ರೂಪವನ್ನು ತಾಳುತ್ತದೆ. ಕಣ್ ಮತ್ತು ದ ಕಂಡ. ತ ಹಿಂದಿನ ದ, ತ ವಾಗಿ ಮಾರ್ಪಡುತ್ತದೆ. ಇದ ಮತ್ತು ತ್= ಇತ್ತ್ ಕಂಠ್ಯ ಸ್ಪರ್ಶದ ಹಿಂದಿನ ನ ಐಚ್ಛಿಕವಾಗಿ ಕೆಲವರ ನುಡಿಯಲ್ಲಿ ಙ ರೂಪವಾಗುತ್ತದೆ. ನನಗೆ>ನನ್‍ಗೆ ಅಥವಾ ನಙಗೆ. ಕ್ರಿಯಾಪದದ ಆಕೃತಿವಿಜ್ಞಾನದಲ್ಲಿ, ವಿಶೇಷವಾಗಿ ಭೂತಕಾಲದ ರೂಪಗಳಲ್ಲಿ ಹಲವಾರು ಬಗೆಯ ಸಂಧಿ ನಿಯಮಗಳನ್ನು ಕಾಣಬಹುದು. ರೂಪ (ಎಕ್ಸ್‍ಪ್ರೆಷನ್) ಮತ್ತು ಅರ್ಥದಲ್ಲಿ (ಕಂಟೆಂಟ್) ಪಾಕ್ಷಿಕ ವ್ಯತ್ಯಾಸ ತೋರಿಸುವ ಜೋಡಿ ನುಡಿಗಳ ಮೂಲಕ ಆಕೃತಿಮಾಗಳನ್ನು ಗುರುತಿಸುವಿಕೆ ನಡೆಯುತ್ತದೆ. ಉದಾ: ಹಸು ಬರುತ್ತೆ, ಹಸುಹೊಡಿ, ಹಸೂನ್‍ಹಾಲು ಮತ್ತು ಹಳ್ಳಿಹಸು ಇವುಗಳನ್ನು ಅದರ ವ್ಯಾಪ್ತಿ (ಡಿಸ್ಟ್ರಿಬ್ಯೂಷನ್) ಎನ್ನಬಹುದು. ಆಕೃತಿಮಾಗಳ ಅರ್ಥವನ್ನು ಅವುಗಳ ವ್ಯಾಪ್ತಿಯ ಮೂಲಕವೇ ತಿಳಿಯಬಹುದು. ಆಕೃತಿಮಾಗಳ ಒಟ್ಟು ಸಾಧ್ಯ ಸಂದರ್ಭಗಳು ಮತ್ತು ಸಾಧ್ಯವಿಲ್ಲದ ಸಂದರ್ಭಗಳೊಡನೆ ಹೋಲಿಕೆಯೇ ಅದರ ವ್ಯಾಪ್ತಿಯೆನಿಸಿಕೊಳ್ಳುತ್ತದೆ.

ಎರಡು ನುಡಿಗಳಲ್ಲಿನ ವ್ಯತ್ಯಾಸವನ್ನು ಸಹಪ್ರತ್ಯಯಗಳ (ಸೂಪರ್ ಫಿಕ್ಸ್) ಮೂಲಕವೂ ತೋರಿಸಬಹುದು. ಉದಾ: 3ಆಲ್ ಲ( ಅಲ್ಲ, 'ಅಲ್3 ಲ( ಅಲ್ಲ?

ಭಾಷೆಯಲ್ಲಿ ಆಕೃತಿಮಾಗಳ ಕ್ರಮದಲ್ಲಿ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯ ಕಂಡುಬಂದರೂ, ನಿರ್ದಿಷ್ಟ ಕ್ರಮದಲ್ಲಿರುವುದನ್ನು ಗಮನಿಸಬಹುದು. ಮನೆಗಳು ಎಂಬಲ್ಲಿ ಮನೆ ಮತ್ತು ಗಳು ಒಂದು ನಿರ್ದಿಷ್ಟ ಕ್ರಮದಲ್ಲಿವೆ. ಈ ಕ್ರಮವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಮನೆ ಬಾಡಿಗೆ ಮತ್ತು ಬಾಡಿಗೆ ಮನೆ ಎರಡೂ ಈ ಭಾಷೆಯಲ್ಲಿ ಸಾಧ್ಯ ಮತ್ತು ಅರ್ಥದಿಂದ ಕೂಡಿವೆ. ಹಾಗೆಯೇ ನಾಳೆನಮ್‍ಮನೇಗ್‍ಬಾ ಮತ್ತು ಬಾನಾಳೆನಮ್‍ಮನೇಗೆ ಒಪ್ಪಿತವಾಗುವುದಾದರೂ ನಮ್, ನಾಳೆನಮ್‍ಮನೇಗ್‍ಬಾ ಅಂಗೀಕೃತವಾಗುವುದಿಲ್ಲ.

ಆಕೃತಿಮಾಗಳನ್ನು ಹಲವು ಬಗೆಗಳಲ್ಲಿ ವಿಂಗಡಿಸಬಹುದು, ಅನೇಕ ಭಾಷೆಗಳಲ್ಲಿ ಪ್ರಕೃತಿ (ರೂಟ್) ಮತ್ತು ಪ್ರತ್ಯಯ (ಅಫಿಕ್ಸ್) ಎಂಬ ವಿಭಾಗ ಸಾಧ್ಯವೆಂದು ಕಂಡು ಬಂದಿದೆ. ಕನ್ನಡದಲ್ಲಿ ಮರ, ಅಣ್ಣ ಮೊದಲ ಬಗೆಯ ಆಕೃತಿಮಾಗಳಿಗೆ ಉದಾಹರಣೆಯಾದರೆ ಬರ್‍ತಾ ಎಂಬಲ್ಲಿ ತಾ ಮತ್ತು ಅಣ್ಣಂದ್ರು ಎಂಬಲ್ಲಿನ ಅಂದ್ರು ಪ್ರತ್ಯಯಗಳು. ಪ್ರತ್ಯಯಗಳಲ್ಲೂ ಅನೇಕ ಬಗೆಗಳುಂಟು. ಪೂರ್ವಪ್ರತ್ಯಯ (ಪ್ರಿಫಿಕ್ಸ್) ಪರಪ್ರತ್ಯಯ (ಸಫಿಕ್ಸ್) ಮತ್ತು ಅಂತಃಪ್ರತ್ಯಯ (ಇನ್‍ಪಿಕ್ಸ್). ಕನ್ನಡದಲ್ಲಿ ಪೂರ್ವಪ್ರತ್ಯಯಗಳು ಹೆಚ್ಚಾಗಿ ತೋರಿಬರುವುದಿಲ್ಲ. ಸಂಸ್ಕøತದಿಂದ ಬಂದಿರುವ ರೂಪಗಳಲ್ಲಿ ಅಸಾಧ್ಯ ಎನ್ನುವಲ್ಲಿ ಆ ಸುವಾಸನೆ ಎಂಬಲ್ಲಿ ಸು ಪೂರ್ವಪ್ರತ್ಯಯಗಳು. ನಾಮಪದಗಳಲ್ಲಿನ ಬಹುವಚನ ವಾಚಿ ಪ್ರತ್ಯಯ ಮತ್ತು ಕ್ರಿಯಾಪದದಲ್ಲಿನ ಕಾಲ ವಾಚಿ ಪ್ರತ್ಯಯ ಪರಪ್ರತ್ಯಯಗಳೆನಿಸಿಕೊಳ್ಳುತ್ತವೆ. ಹಾಗೆ, ಹೀಗೆ ಮತ್ತು ಹೇಗೆ ಎಂಬಲ್ಲಿ ಕಂಡು ಬರುವ ಮೊದಲ ಸ್ವರವನ್ನು ಅಂತಃಪ್ರತ್ಯಯಕ್ಕೆ ಉದಾಹರಣೆಯಾಗಿ ಕೊಡಬಹುದು. ಪ್ರತ್ಯಯಗಳು ಯಾವಾಗಲೂ ಪ್ರಕೃತಿಗಳೊಡನೆ ಕೂಡಿಕೊಂಡೇ ತೋರಿಬರುವುದರಿಂದ ಪ್ರಕೃತಿಗಳನ್ನು ಸ್ವತಂತ್ರರೂಪ (ಫ್ರೀಫಾರಂ) ಗಳೆಂದೂ, ಪ್ರತ್ಯಯಗಳನ್ನು ಬದ್ಧರೂಪಗಳೆಂದೂ (ಬಾಂಡ್ ಫಾರಂ) ಕರೆಯುವುದುಂಟು.

ಹಲವು ರೀತಿಯ ಪರ ಪ್ರಕ್ರಿಯೆಗಳು (ಟೂರ್ಫೋಲಾಜಿಕಲ್) ಭಾಷೆಯಲ್ಲಿ ಕಂಡುಬರುತ್ತವೆ. ಮೇಲೆ ಸೂಚಿಸಿದಂತೆ ಪ್ರತ್ಯಯಗಳ ಜೋಡಣೆ ಒಂದು ಬಗೆಯ ಪ್ರಕ್ರಿಯೆ. ಮನೆಮನೆ, ಊರೂರು ಇತ್ಯಾದಿಗಳಲ್ಲಿ ಇನ್ನೊಂದು ಬಗೆಯ ಪ್ರಕ್ರಿಯೆ ಕಾಣಬರುತ್ತದೆ. ಇಲ್ಲಿ ಆಕೃತಿಮಾಗಳು ದ್ವಿರುಕ್ತವಾಗಿವೆ. ಪ್ರತ್ಯೇಕತೆಯ ಅರ್ಥ ಸೂಚಿಸುವ ದ್ವಿರುಕ್ತಿಗಳೆಂದು ರಿಡೂಪ್ಲಿಕೇಷನ್ ಇದನ್ನು ಕರೆಯಬಹುದು. ಮತ್ತೊಂದು ರೀತಿಯ ಪ್ರಕ್ರಿಯೆ ಮನೆಗಿನೆ, ಹುಲಿಗಿಲಿ ಎಂಬ ರೂಪಗಳಲ್ಲಿ ತೋರಿ ಬರುತ್ತದೆ. ಇವುಗಳನ್ನು ಪ್ರತಿಧ್ವನಿ (ಎಕೊ) ರೂಪಗಳೆನ್ನುತ್ತಾರೆ.

ಬೇರೊಂದು ರೀತಿಯ ವಿಂಗಡಣೆಗಳಲ್ಲಿ ಆಕೃತಿಮಾಗಳನ್ನು ಸರಳ ಸಮ್ಮಿಶ್ರ ಮತ್ತು ಸಂಯುಕ್ತ ರೂಪಗಳಲ್ಲಿ ವಿಂಗಡಿಸಬಹುದು. ಸೊಸೆ, ತಮ್ಮ, ಎಂಬ ಆಕೃತಿಮಾಗಳನ್ನು ಸರಳರೂಪಗಳೆಂದು ಕರೆಯುತ್ತೇವೆ. ಸಮ್ಮಿಶ್ರ ರೂಪದಲ್ಲಿ ಒಂದು ಸ್ವತಂತ್ರ ರೂಪ, ಇನ್ನೊಂದು ಬದ್ಧ ರೂಪ. ಹೀಗೆ ಎರಡು ಆಕೃತಿಮಾಗಳಾದರೂ ಇರುತ್ತವೆ. ಉದಾ: ಮನೆಗಳು ಸಂಯುಕ್ತ ರೂಪದಲ್ಲಿ ಎರಡು ಆಕೃತಿಮಾಗಳೂ ಸ್ವತಂತ್ರ ರೂಪಗಳು ದನಕರು ಹೆಂಣ್ತಿಮಕ್ಕಳು ಈ ಬಗೆಯ ಆಕೃತಿಮಾಗಳು. ಶಬ್ದಕೋಶದಲ್ಲಿ ಸೇರಿಸಲ್ಪಡುವ ಆಕೃತಿಮಾಗಳು (ಲೆಕ್ಸಿಕಲ್), ಕೇವಲ ವ್ಯಾಕರಣ ರೂಪಗಳು (gಡಿಚಿmmಚಿಣiಛಿಚಿಟ) ಎಂದು ಸಹ ಆಕೃತಿಮಾಗಳ ವಿಂಗಡಣೆ ಸಾಧ್ಯ. ಮನೆ, ಮರ ಇತ್ಯಾದಿ ರೂಪಗಳನ್ನು ಕೋಶದಲ್ಲಿ ಕಾಣಬಹುದು. ಆದರೆ ಗಳು, ಅಂದ್ರು ಎಂಬ ರೂಪಗಳು ಕೋಶದಲ್ಲಿ ಸೇರಿಸಲ್ಪಡುವುದಿಲ್ಲ. ಒಂದು ಬಗೆಯ ಪ್ರಕ್ರಿಯೆಯನ್ನು ಸೂಚಿಸುವ ಪ್ರತ್ಯಯಗಳೆಂದು ಅವನ್ನು ಗುರುತಿಸಿದರಾಯಿತು.

ಭಾಷಾಶಾಸ್ತ್ರಿಗಳು ಆಕೃತಿ (ಅಲೊಮಾರ್ಫ) ಮತ್ತು ಆಕೃತಿಮಾ ಎಂಬ ವ್ಯತ್ಯಾಸ ಮಾಡುತ್ತಾರೆ. ಆಕೃತಿ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ತೋರಿಬರುವ ಒಂದು ರೂಪ. ಒಂದೇ ಅರ್ಥ ಮಿತಿ ಹೊಂದಿದ, ಪರಸ್ಪರ ಪೂರಕ ಸಂದರ್ಭಗಳಲ್ಲಿ ಮಾತ್ರ ಕಂಡುಬರುವ ಆಕೃತಿಗಳ ಗುಂಪಿಗೆ ಆಕೃತಿಮಾ ಎಂದು ಕರೆಯುತ್ತೇವೆ. ಒಂದು ಆಕೃತಿಮಾದಲ್ಲಿ ಒಂದು ಮತ್ತು ಹೆಚ್ಚಿನ ಆಕೃತಿಗಳಿರಬಹುದು. `ಭೂತಕಾಲದ ಆಕೃತಿಮಾದ ಆಕೃತಿಗಳಾದ -ದ, -ತ-ಇದ,-0 (ಶೂನ್ಯ) ಗಳನ್ನು ತಿಂದ, ನಿಂತ, ಮಾಡಿದ, ಮಾಡಿತು ಎಂಬಲ್ಲಿ ಕಾಣಬಹುದು. ಈ ಉದಾಹರಣೆಗಳಲ್ಲಿ ಒಂದು ಆಕೃತಿಯ ಸ್ಥಾನದಲ್ಲಿ ಮತ್ತೊಂದು ಆಕೃತಿ ಬರಲು ಸಾಧ್ಯವಿಲ್ಲ. ಇದರಿಂದಲೇ ಒಂದು ಆಕೃತಿ ಮಿಕ್ಕ ಆಕೃತಿಗಳಿಗೆ ಪೂರಕವಾಗಿದೆ ಎನ್ನುತ್ತೇವೆ. ಆಕೃತಿಗಳ ನಿರ್ದಿಷ್ಟ ರೂಪಗಳಿಗೆ ಧ್ವನಿಮಾ ಸಂಬಂಧವಾದ ಕಾರಣ ಅಥವಾ ಆಕೃತಿ ಸಂಬಂಧದ ಕಾರಣಗಳಿರಬಹುದು. ತಿಂದ, ನಿಂತ, ಎಂಬಲ್ಲಿ ತೋರಿಬರುವ ಭಿನ್ನಭಿನ್ನ, ಭೂತಕಾಲದ ಆಕೃತಿಮಾದ, ಆಕೃತಿಗಳು ಅಲ್ಲಿನ ಇತರ ಆಕೃತಿಮಾಗಳ ಸಂಬಂಧದಿಂದೆಂದು ನಿರ್ಧರಿಸಬೇಕು. ಕಾರಣ, ಈ ಆಕೃತಿಗಳು ಸ್ವತಂತ್ರ ರೂಪವಾದ ಪ್ರಕೃತಿಗಳ ಅರಿಕೆಯ ಮೇಲೆ ನಿರ್ಧರಿತವಾಗಿವೆ. ಆದರೆ ಅದೇ ಭೂತಕಾಲದ ಆಕೃತಿಮಾದ ಇನ್ನೊಂದು ಆಕೃತಿ ಡ ಅದರೊಡನಿರುವ ಧ್ವನಿಮಾದಿಂದ ನಿರ್ಧರಿಸಲ್ಪಡುತ್ತದೆ. ಉದಾ: ಕಂಡ. ತಿಂದ, ನಿಂತ ಈ ಎರಡು ರೂಪಗಳಲ್ಲೂ ಸ್ವತಂತ್ರರೂಪ ನಕಾರಾಂತವಾಗಿದ್ದರೂ ಪ್ರತ್ಯಯ ಒಂದು ಕಡೆ ದ ರೂಪವಾಗಿಯೂ, ಇನ್ನೊಂದುಕಡೆ ತ ರೂಪವಾಗಿಯೂ ಕಂಡು ಬರುವುದರಿಂದ ಈ ರೂಪ ವ್ಯತ್ಯಾಸಕ್ಕೆ ಧ್ವನಿಮಾ ಕಾರಣವಾಗಲಾರದು. ಆಕೃತಿ ವ್ಯತ್ಯಾಸವೇ ಕಾರಣ. ಆದರೆ, ಕಂಡ ಎಂಬಲ್ಲಿ ಮೂರ್ಧನ್ಯವಾದ ಣ, ದ ರೂಪವನ್ನು ಮೂರ್ಧನ್ಯವಾದ ಡ ರೂಪಕ್ಕೆ ಹೊಂದಿಕೊಳ್ಳುತ್ತದೆ. ಈ ಆಕೃತಿಗಳೆಲ್ಲ ಪರಸ್ಪರ ಪೂರಕವಾಗಿರುವುದರಿಂದಲೂ, ಒಂದೇ ಅರ್ಥ ವ್ಯಾಪ್ತಿ ಹೊಂದಿರುವುದರಿಂದಲೂ ಈ ಆಕೃತಿಗಳನ್ನು ಒಂದು ಆಕೃತಿಮಾದಲ್ಲಿ ಅಂತರ್ಗತ ಮಾಡುತ್ತೇವೆ.

ಕಡೆಯದಾಗಿ ಆಕೃತಿಮಾಗಳನ್ನು ಅವುಗಳ ರೂಪ ಅಥವಾ ಕಾರ್ಯಗಳ ಆಧಾರದ ಮೇಲೆ ಎರಡು ಗುಂಪಾಗಿ ವಿಭಾಗಿಸಬಹುದು. ಬಹುವಚನ ಪ್ರತ್ಯಯಗಳನ್ನು ಹೊಂದುವ ಮರ ಮತ್ತು ಮನೆ ಇತ್ಯಾದಿ ಆಕೃತಿಮಾಗಳನ್ನು ಒಂದು ಗುಂಪಿನಲ್ಲಿ ಸೇರಿಸಬಹುದು. ಹಾಗೆಯೇ, ಬರ್‍ತ್ತಾನೆ, ನಿಂತ ಎಂಬ ರೂಪಗಳನ್ನು ಇನ್ನೊಂದು ಗುಂಪಿಗೆ ಸೇರಿಸಬಹುದು. ಅನುಕೂಲಕ್ಕಾಗಿ ಮೊದಲ ಗುಂಪನ್ನು ನಾಮಪದಗಳೆಂದು ಎರಡನೆಯ ಗುಂಪನ್ನು ಕ್ರಿಯಾಪದಗಳೆಂದೂ ಕರೆಯಬಹುದು. ಹೀಗೆಯೇ ಆಯಾಯಾ ಭಾಷೆಗಳ ವಿನ್ಯಾಸಕ್ಕೆ ಹೊಂದಿದಂತೆ ಆಕೃತಿಮಾಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಬಹುದು.

(ಎಚ್.ಎಸ್.ಎ.)