ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಕ್ಸಿಯಸ್, ಲ್ಯೂಸಿಯಸ್
ಆಕ್ಸಿಯಸ್, ಲ್ಯೂಸಿಯಸ್ (ಕ್ರಿ. ಪೂ. 170 -ಸು. 86). ಅಂದಿನ ಒಬ್ಬ ಸುಪ್ರಸಿದ್ಧ ರೋಮನ್ ಕವಿಯಾದ ಈತನಿಗೆ ಅಟ್ಟಿಯಸ್ ಎಂದೂ ಹೆಸರಿದೆ. ಕೆಳಮಟ್ಟದ ಕುಟುಂಬದವನಾದರೂ ಬಹಳ ಆತ್ಮಪ್ರತ್ಯಯ ಉಳ್ಳವನು. ಪ್ರಖ್ಯಾತ ಹಿರಿಯ ನಾಟಕಕಾರರೊಡನೆ ಹೆದರದೆ ಸ್ಪರ್ಧಿಸಿದ. ರುದ್ರನಾಟಕವೇ ಅಲ್ಲದೆ ವ್ಯಾಕರಣ, ಸಾಹಿತ್ಯ ವಿಮರ್ಶೆ, ಚರಿತ್ರೆ ಭೂವ್ಯವಸಾಯಗಳನ್ನು ಕುರಿತು ಪದ್ಯಗಳನ್ನು ಬರೆದ. ಲ್ಯಾಟಿನ್ ಭಾಷೆಯನ್ನು ಬಿಗಿ ಮಾಡುವ, ಬಲಗೊಳಿಸುವ ಪ್ರಯತ್ನದಲ್ಲಿ ಇವನೊಬ್ಬ ಮುಂದಾಳು. ಉಪಲಬ್ಧವಾಗಿರುವ ಇವನ ವಾಕ್ಯಗಳಲ್ಲಿ (700) ವಾಗ್ಮಿಯ ಕಟ್ಟಾಸಕ್ತಿಯಿದೆ. ಉಪದೇಶಕನ ಘನಗಾಂಭೀರ್ಯವಿದೆ. ಜೊತೆಗೆ ಅಪೂರ್ವವಾದ ರಾಗ ತೀವ್ರತೆಯೂ ತೋರಿಬರುತ್ತದೆ.
ಇವನ ರುದ್ರನಾಟಕಗಳಲ್ಲಿ 45 ಹೆಸರುಗಳು ಮಾತ್ರ ನಮಗೆ ತಿಳಿದುಬಂದಿದೆ: ಅಂಡ್ರಾಮಿಡ, ಮೀಡಿಯ, ಫಿಲಾಕ್ಟಿಟೀಸ್, ಇತ್ಯಾದಿ. ಟ್ರಾಯಿನ ಉಪಾಖ್ಯಾನಗಳನ್ನು ಕಂಡರೆ ಅವನಿಗೆ ಹೆಚ್ಚು ಅಕ್ಕರೆಯಾದರೂ ರೋಮನರ ಚರಿತ್ರೆಗೆ ಸಂಬಂಧಿಸಿದ ಎರಡು ಗಂಭೀರ ನಾಟಕಗಳನ್ನು ರಚಿಸಿದ್ದಾನೆ. ಪಾತ್ರ ಕೆತ್ತುವದಲ್ಲಿಯೂ ಘಟನೆಗಳನ್ನು ನಿರೂಪಿಸುವುದರಲ್ಲಿಯೂ ರೋಮನರ ಕ್ಷಾತ್ರ ತೇಜಸ್ಸು ಎದ್ದು ಕಾಣುವಂತೆ ಮಾಡಿದ್ದಾನೆ. ಅವರಲ್ಲಿ ಮಹಾದಾಕಾಂಕ್ಷೆ ವೀರಾವೇಶಗಳು ಉಕ್ಕೇರುವಂತೆಯೂ ಕಾರ್ಯಪಟುತ್ವ, ಸಾಮಥ್ರ್ಯಗಳು ಕುದುರುವಂತೆಯೂ ಪ್ರಚೋದಿಸುವುದೇ ಅವನ ಕಾವ್ಯೋದ್ದೇಶ. ಆಳಜೀವನದ ಗ್ರಹಿಕೆ ಅವನಲ್ಲಿತ್ತೆಂದು ಊಹಿಸಬಹುದು. ನೋವು ನಷ್ಟಗಳಲ್ಲೂ ಸೌಂದರ್ಯಗಳನ್ನು ಕಂಡು ಅನುಕಂಪವನ್ನು ಆತ ಬೀರಬಲ್ಲವನಾಗಿದ್ದ. ಮನುಷ್ಯ ಮುಖ್ಯವಾಗಿ ಕಾಪಾಡಿಕೊಳ್ಳಬೇಕಾದದ್ದು ಆತ್ಮಗೌರವ ಎಂಬ ಉದಾತ್ತ ತತ್ವವನ್ನು ಅವನ ಹಲವು ವಚನಗಳು ಒತ್ತಿ ಹೇಳುತ್ತವೆ.
ಇನ್ನಾವ ಕವಿಯಲ್ಲೂ ಕಾಣಿಸದ ಪ್ರಕೃತಿ ಪ್ರೇಮ ಅವನಲ್ಲಿದೆ. ಗ್ರಾಮಾಂತರದಲ್ಲಿ ಬೀಡನ್ನು ಕಟ್ಟಿಕೊಂಡ ರೋಮನ್ ಕವಿತೆಗಳಲ್ಲಿ ಅವನೇ ಮೊದಲಿಗ. ಬಿರುಗಾಳಿ, ತಾರಾಮಂಡಲ, ಸಮುದ್ರದ ಅಲೆಗಳು, ಅರುಣೋದಯ, ದನ ಕಾಯುವುದು, ಉಳುಮೆ ಮುಂತಾದವನ್ನು ಆತ ತಾದಾತ್ಮ್ಯದಿಂದ ಬಣ್ಣಿಸಿದ್ದಾನೆ. ಕೆಲವು ಕಡೆ ವಾಗಾಡಂಬರ, ಶಬ್ದಾಲಂಕಾರ ಕಂಡುಬಂದರೆ ಅದು ಕ್ಷಮಾರ್ಹ.
ಹಿಂದಣ ಕಾಲದ ಕವಿಗಳಿಗೆ ಸಹಜವಾದ ಆತ್ಮತೃಪ್ತಿಯೂ ಬಿಗುಮಾನವೂ ಆಕ್ಸಿಯಸ್‍ನಲ್ಲಿ ಪುಷ್ಕಳವಾಗಿತ್ತು. ಆತ ಕುಳ್ಳ, ಆದರೂ ಭಾರಿ ಪ್ರಮಾಣದ ಇನ್ನೊಂದು ವಿಗ್ರಹವನ್ನು ಗುಡಿಯಲ್ಲಿ ಸ್ಥಾಪಿಸಿದನಂತೆ. ಒಂದು ಸಾರಿ ಜೂಲಿಯಸ್ ಸೀಸರ್ ಒಂದು ಕವಿಕೂಟಕ್ಕೆ ಭೇಟಿ ಕೊಟ್ಟ. ಮಹಾಯೋಧನೆಂದು ಎಲ್ಲರೂ ಎದ್ದುನಿಂತು ಅವನಿಗೆ ಮರ್ಯಾದೆ ತೋರಿದರು. ಆಕ್ಸಿಯಸ್ ಒಬ್ಬನೆ ತಾನಿದ್ದ ಪೀಠದಿಂದ ಕದಲಲಿಲ್ಲ. ಅವನ ದೃಷ್ಟಿಗೆ ತನಗಿಂತ ಕಿರಿಯನಾದವ; ಎಲ್ಲೋ ಕೆಲವು ಕಳಪೆ ಗಂಭೀರ ನಾಟಕಗಳ ಲೇಖಕ ಮಾತ್ರ. (ಎಸ್.ವಿ.ಆರ್.)