ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಜ್ಞಾಪತ್ರ

ವಿಕಿಸೋರ್ಸ್ ಇಂದ
Jump to navigation Jump to search

ಆಜ್ಞಾಪತ್ರ ಕಾಯಿದೆಶಾಸ್ತ್ರದಲ್ಲಿ ಬಳಕೆಯಲ್ಲಿರುವ ಪದ. ವಾರಂಟ್, ಅನುಜ್ಞಾಪತ್ರ, ಅಧಿಪತ್ರ ಎಂಬ ಹೆಸರುಗಳಿವೆ. ವ್ಯಕ್ತಿಯನ್ನು ಹಿಡಿದುತರಲು ಮತ್ತು ವ್ಯಕ್ತಿ ಅಥವಾ ವಸ್ತುವನ್ನು ಕೈವಶಪಡಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರು ಮಾಡಲು ನ್ಯಾಯಾಲಯ ನೀಡುವ ಆದೇಶವೇ ಆಜ್ಞಾಪತ್ರ.

ಆಜ್ಞಾಪತ್ರದಲ್ಲಿ, ಕೈದುಮಾಡಲ್ಪಡಬೇಕಾದ ವ್ಯಕ್ತಿಯ ಹೆಸರು, ಗುರುತು, ವಿಳಾಸ ಇವುಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು. ಯಾರಿಗೆ ಆ ಆಜ್ಞಾಪತ್ರವನ್ನು ಕೊಡಲಾಗಿದೆಯೋ ಆ ಪೊಲೀಸ್ ಅಧಿಕಾರಿಯ ಹೆಸರು, ಗುರುತು, ಹುದ್ದೆ, ವಿಳಾಸಗಳನ್ನು ಕಾಣಿಸಿರಬೇಕು ಹಾಗೂ ಆಜ್ಞಾಪತ್ರವನ್ನು ಕೊಡುವ ನ್ಯಾಯಾಧೀಶರ ಸಹಿ ಇದ್ದು ಅಧಿಕಾರದ ಮುದ್ರೆಯೂ ಬಿದ್ದಿರಬೇಕು. ಯಾವ ಅಪರಾಧಕ್ಕಾಗಿ ಇಲ್ಲವೆ ಕಾರಣಗಳಿಗಾಗಿ ಕೈದುಮಾಡಬೇಕು ಎಂಬುದನ್ನು ಅದರಲ್ಲಿ ನಮೂದಿಸಿರಬೇಕು. ಈ ವಿವರಗಳಲ್ಲಿ ಏನಾದರೂ ತಪ್ಪಿದ್ದರೆ ಅದು ಅಕ್ರಮವಾಗುವುದು.

ವ್ಯಕ್ತಿಯನ್ನು ಹಿಡಿದುತರಲು ಕೊಡುವ ಆಜ್ಞಾಪತ್ರ ಜಾಮೀನು ಇರುವುದು ಮತ್ತು ಜಾಮೀನು ಇಲ್ಲದ್ದು ಎಂದು ಎರಡು ಬಗೆ. ಜಾಮೀನು ವಾರಂಟ್ ಕೊಟ್ಟಾಗ ಕೈದುಮಾಡಲ್ಪಡಬೇಕಾದ ಮನುಷ್ಯನನ್ನು ಕೈದು ಮಾಡಬೇಕಾದ ಅಧಿಕಾರಿ, ಆ ವ್ಯಕ್ತಿ ಇಂಥ ದಿನ, ಇಂಥ ವೇಳೆಗೆ, ಇಂಥ ಸ್ಥಳದಲ್ಲಿ, ಇಂಥ ನ್ಯಾಯಾಲಯದಲ್ಲಿ ಹಾಜರಾಗಬೇಕೆಂಬ ಮುಚ್ಚಳಿಕೆಗೆ ಜಾಮೀನುದಾರರಿಂದ ಅಥವಾ ಸ್ವಂತ ಜಾಮೀನಿನಿಂದ ಬರೆಸಿಕೊಂಡು ಆ ವ್ಯಕ್ತಿಯನ್ನು ಹಿಡಿದು ತರದೆ, ಬಿಟ್ಟು ಬರಬಹುದು. ಜಾಮೀನಿಲ್ಲದ ವಾರಂಟ್ ಕೊಟ್ಟಾಗ ಯಾವ ವ್ಯಕ್ತಿಯನ್ನು ಹಿಡಿದು ತರಬೇಕಾಗಿದೆಯೋ ಅಂಥವನನ್ನು ಜೊತೆಯಲ್ಲಿ ಹಿಡಿದುತರಲೇಬೇಕು; ಬಿಟ್ಟುಬರುವ ಅಧಿಕಾರ ಇಲ್ಲ.

ಇಂಥ ಆಜ್ಞಾಪತ್ರದ ಆಧಾರದ ಮೇಲೆ ಪೊಲೀಸ್ ಅಧಿಕಾರಿ ತನ್ನ ಕ್ಷೇತ್ರದಲ್ಲಿ ಅಥವಾ ಇತರ ಕ್ಷೇತ್ರದಲ್ಲಿ ಆ ಪತ್ರ ಎಲ್ಲಿಯವರೆಗೆ ಜಾರಿಯಲ್ಲಿರುವುದೊ ಅಲ್ಲಿಯ ತನಕ ಯಾರನ್ನು ಹಿಡಿದು ತರಬೇಕೊ ಯಾವ ಸ್ಥಳವನ್ನು ಹುಡುಕಬೇಕೊ ಅದರಂತೆ ಮಾಡಬಹುದು. ಆಜ್ಞಾಪತ್ರ ಕೈಯಲ್ಲಿಲ್ಲದೆ ಅಧಿಕಾರ ಚಲಾಯಿಸಲು ಹೋಗಬಾರದು. ಏಕೆಂದರೆ ವ್ಯಕ್ತಿ ಬಯಸಿದಲ್ಲಿ ಪತ್ರವನ್ನು ಅವನಿಗೆ ತೋರಿಸಬೇಕಾಗಬಹುದು. ನಿಯಮಿಸಿದ ಆಜ್ಞೆಯನ್ನು ಈಡೇರಿಸಿದ ಮೇಲೆ ಅಥವಾ ನ್ಯಾಯಾಧೀಶರು ಸೂಚಿಸಿದ ಕಾಲಮೀರಿದ ಮೇಲೆ ಅಥವಾ ನ್ಯಾಯಾಧೀಶರು ಅದನ್ನು ಹಿಂತೆಗೆದುಕೊಂಡರೆ, ಅದರ ಮೇಲೆ ಷರಾ ಬರೆದು, ಯಾವ ನ್ಯಾಯಾಲಯದಿಂದ ಕೊಡಲಾಗಿತ್ತೊ ಆ ನ್ಯಾಯಾಲಯಕ್ಕೆ ಅದನ್ನು ಸಲ್ಲಿಸಬೇಕು. ಅಲ್ಲಿಗೆ ಅದರ ಕೆಲಸ ಮುಗಿಯುತ್ತದೆ.

ಸಿವಿಲ್ ಕಾಯಿದೆಯಲ್ಲೂ ಆಜ್ಞಾಪತ್ರ ಕೊಡುವುದುಂಟು. ಒಬ್ಬ ನಿರ್ದಿಷ್ಟ ವ್ಯಕ್ತಿಯ ಒಂದು ನಿರ್ದಿಷ್ಟ ಕೆಲಸ ಮಾಡುವುದಕ್ಕಾಗಿ ನ್ಯಾಯಾಲಯ ಕೊಡುವ ಆಜ್ಞಾಪತ್ರಗಳಿಗೂ ಈ ಮಾತು ಅನ್ವಯಿಸುತ್ತದೆ. ಆ ಕೆಲಸ ವ್ಯಕ್ತಿಯನ್ನು ಹಿಡಿದು ತರುವುದಾಗಿರಬಹುದು, ಸ್ಥಳ ಪರೀಕ್ಷೆ ಮಾಡುವುದಾಗಿರಬಹುದು, ನ್ಯಾಯಾಲಯಕ್ಕೆ ಬರಲಾರದವರ ಸಾಕ್ಷ್ಯವನ್ನು ದಾಖಲೆ ಮಾಡಿಕೊಂಡು ಬರುವುದಾಗಿರಬಹುದು. ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿದ ಸ್ಥಿರ, ಚರ, ಆಸ್ತಿ, ದಸ್ತಾವೇಜು ಮುಂತಾದುವುಗಳನ್ನು ಸ್ವಾಧೀನಪಡಿಸಿಕೊಂಡು ನ್ಯಾಯಾಲಯದ ಅಧೀನಕ್ಕೆ ಒಳಪಡಿಸುವುದಕ್ಕಾಗಿಯೂ ಆಜ್ಞಾಪತ್ರಗಳನ್ನು ಕೊಡುವುದುಂಟು. ಒಮ್ಮೊಮ್ಮೆ ಒಂದು ನಕಾಶೆಯನ್ನು ಬರೆಯಲು, ನಕಲು ಮಾಡಲು ದಸ್ತಾವೇಜನ್ನು ಇಲ್ಲವೇ ಸಾಕ್ಷ್ಯವನ್ನು ಭಾಷಾಂತರಿಸಲು, ಇಲ್ಲವೇ ತಿಳಿಯದಿರುವ ಲಿಪಿ, ಶಾಸನ ಮುಂತಾದುವುಗಳನ್ನು ಪ್ರಾಮಾಣಿಕವಾಗಿ ವಿವರಿಸುವುದಕ್ಕೂ ಆಜ್ಞಾಪತ್ರ ಕೊಡುವ ಅಧಿಕಾರವಿದೆ. ಇಂಥ ಸಂದರ್ಭಗಳಲ್ಲಿ ಅದನ್ನು ಕಮಿಷನ್ ವಾರಂಟ್ ಎಂದು ಕರೆಯುತ್ತಾರೆ.

  ಹೀಗೆ ಸಿವಿಲ್ ಮತ್ತು ಕ್ರಿಮಿನಲ್ ಕೋರ್ಟುಗಳಲ್ಲದೆ, ಸಂವಿಧಾನದ ಪ್ರಕಾರ ನೇಮಕವಾಗಬೇಕಾದ ಉಚ್ಚ ನ್ಯಾಯಾಲಯದ ಮತ್ತು ವರಿಷ್ಠನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕದ ಬಗ್ಗೆ ರಾಷ್ಟ್ರಾಧ್ಯಕ್ಷರು ಕೊಡುವ ಆಜ್ಞಾಪತ್ರಕ್ಕೆ ವಾರಂಟ್ ಎಂಬ ವಿಶಿಷ್ಟಪದದ ಪ್ರಯೋಗವಿದೆ.         											

(ಕೆ.ಸಿ.)