ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಟೋಮನ್ ಚಕ್ರಾಧಿಪತ್ಯ

ವಿಕಿಸೋರ್ಸ್ ಇಂದ
Jump to navigation Jump to search

ಆಟೋಮನ್ ಚಕ್ರಾಧಿಪತ್ಯ


ತುರ್ಕಿ ಭಾಷೆಯನ್ನಾಡುತ್ತಿದ್ದ ಒಂದು ಜನಾಂಗ. ಸ್ಥಾಪಿತವಾದುದು (14 ರಿಂದ 16ನೆಯ ಶತಮಾನ). ಇದಕ್ಕೆ ತುರ್ಕಿ ಸಾಮ್ರಾಜ್ಯವೆಂಬ ಹೆಸರೂ ಇದ್ದು ಈಗಿನ ತುರ್ಕಿಸ್ಥಾನವನ್ನೂ ಒಳಗೊಂಡ ದೊಡ್ಡ ರಾಷ್ಟ್ರವಾಗಿತ್ತು. ಏಷ್ಯಾಮೈನರ್ ಇದರ ಕೇಂದ್ರ. ಸ್ಥಾಪಿತವಾದದ್ದು ಕ್ರಿ.ಶ. ಸುಮಾರು 1300ರಲ್ಲಿ. ಆಗ ಶಾಸ್ತ್ರಸಮ್ಮತವಾದ ಸಾಂಪ್ರದಾಯಿಕ ಇಸ್ಲಾಂ ಧರ್ಮ ಸಂಪ್ರದಾಯಗಳು ಶಿಥಿಲವಾಗುತ್ತ ಬಂದಿದ್ದುವು; ಇಸ್ಲಾಮೀಯರ ನಾಗರಿಕತೆಯಲ್ಲೂ ಪ್ರಗತಿಯಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಸ್ಥಾಪಿತವಾದ ಹೊಸ ಸಾಮ್ರಾಜ್ಯ ಕೆಲಮಟ್ಟಿಗೆ ಇಸ್ಲಾಂ ಧರ್ಮ ಸಂಪ್ರದಾಯವನ್ನೇ ಬದಲಾಯಿಸಿತು. ಅಲ್ಲದೆ ಪೌರ್ವಾತ್ಯ ನಾಗರಿಕತೆಯ ಪ್ರಭಾವಕ್ಕೊಳಗಾಗಿ ಹೊಸ ಮಾರ್ಗದಲ್ಲಿ ಮುಂದುವರಿಯಿತು.

ಮಧ್ಯ ಏಷ್ಯಾದಲ್ಲಿ ಶತಮಾನಗಳ ಕಾಲ ಭವ್ಯವಾದ ಇತಿಹಾಸವನ್ನು ಹೊಂದಿದ್ದ ತುರುಷ್ಕರಲ್ಲಿ ಕೆಲವರು ಪಶ್ಚಿಮದ ಕಡೆ ವಲಸೆ ಹೋಗಿ ಮಧ್ಯಪ್ರಾಚ್ಯಕ್ಕೂ ಬಂದರು. ಅವರಲ್ಲಿ ಮೊದಲನೆಯ ಸುಲ್ತಾನ ಉಸ್ಮಾನ್ I (1281-1325). ಅವನಿಂದಲೇ ಆ ವಂಶದ ಹೆಸರು ಬಂದದ್ದು. ಉಸ್ಮಾನ್ ಎಂಬ ಶಬ್ದವೇ ಆಟೋಮನ್ ಎಂದು ರೂಪಾಂತರ ಹೊಂದಿತು. ಅವನ ಮಗ ಅರ್‍ಹಾನ್ (1328-59). ಇಸ್ತಾಂಬುಲ್‍ಗೆ ಅಭಿಮುಖವಾಗಿ ಬರ್ಸಾವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ ಅರ್‍ಹಾನನ ಮಗನಾದ ಸುಲೈಮಾನ್ ಗ್ಯಾಲಿಪೋಲಿಯನ್ನು 1358ರಲ್ಲಿ ವಶಪಡಿಸಿಕೊಂಡ ಮೇಲೆ ತುರುಕರಿಗೆ ಮೊಟ್ಟಮೊದಲು ಯೂರೋಪಿನಲ್ಲಿ ನೆಲೆಸಲು ಸಾಧ್ಯವಾಯಿತು. ಮುರಾದ್ I (1359-80) ಏಡ್ರಿಯನೋಪಲನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಬೈಜಾಂಟೈನ್ ಸಾಮ್ರಾಜ್ಯ ಇಸ್ತಾನ್‍ಬುಲ್‍ಗೆ ಮಾತ್ರ ಸೀಮಿತವಾಗಿರುವಂತೆ ಮಾಡಿದ. ಸರ್ಬಿಯ ಮತ್ತು ಅದರ ಮಿತ್ರರಾಷ್ಟ್ರಗಳು ಪರಾಜಯ ಹೊಂದಿದುವು. ಇದೇ ಅವರ ಅತ್ಯಂತ ವೈಭವದ ಕಾಲವೆನ್ನಬಹುದು. ಅವರ ಸಾಮ್ರಾಜ್ಯ ವಿಸ್ತರಣ ಮುಂದುವರಿಯಿತು. ಮಹಮದ್ ಷಾ II (1451-81) ಸುಲ್ತಾನ 1453ರಲ್ಲಿ ಕಾನ್‍ಸ್ಟಾಂಟಿನೋಪಲ್‍ನ್ನೂ ವಶಪಡಿಸಿಕೊಂಡ. ಇವನ ಆಳ್ವಿಕೆಯಲ್ಲಿ ವಿದ್ಯೆಗೆ, ಕಲೆಗೆ, ವಿಶೇಷ ಪ್ರೋತ್ಸಾಹ ದೊರಕಿತು. ಈತ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದ ಕಾನ್‍ಸ್ಟಾಂಟಿನೋಪಲನ್ನು ಭವ್ಯಸೌಧಗಳಿಂದ, ಮಸೀದಿಗಳಿಂದ ಅಲಂಕರಿಸಿದ. ಅವನಿಗೆ ಎಂಟು ವಿದೇಶಿ ಭಾಷೆಗಳ ಪರಿಚಯವಿತ್ತು. ಅಲ್ಲದೆ ತಾನು ಗೆದ್ದ ಪ್ರದೇಶಗಳಲ್ಲಿ ಜನರ ಮತ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ರಕ್ಷಿಸಿದ. ಇವನ ಅತ್ಯಂತ ವೈಭವಯುತವಾದ ಆಳ್ವಿಕೆಯಲ್ಲಿ ತುರ್ಕಿ ಸಾಮ್ರಾಜ್ಯದ ಸರ್ವತೋಮುಖ ಪ್ರಗತಿಯ ಪರಾಕಾಷ್ಠೆಯನ್ನು ಕಾಣಬಹುದು.

ತುರುಕರು ಬೆಲ್‍ಗ್ರೇಡನ್ನು 1521ರಲ್ಲಿ ವಶಪಡಿಸಿಕೊಂಡರು. 1522ರಲ್ಲಿ ರ್ಹೋಡ್ಸ್ ಅವರ ಕೈ ಸೇರಿತು. 1524ರಲ್ಲಿ ಹಂಗೇರಿಯನ್ನೂ ಗೆದ್ದರು. ಅವರ ಈ ದಾಳಿ ಅಲ್‍ಜೀರಿಥಿಂದವರೆಗೂ ವ್ಯಾಪಿಸಿತು. ಅಲ್ಲದೆ ಆಫ್ರಿಕದ ಉತ್ತರ ಸಮುದ್ರ ತೀರಪ್ರದೇಶಗಳು ಅವರ ಕೈವಶವಾದುವು. ಆದರೆ ಮುಂದೆ ಬಂದ ಮೂವರು ಸುಲ್ತಾನರ ಕಾಲದಲ್ಲಿ ಈ ಕೀರ್ತಿವೈಭವಗಳು ಕುಂದಿದುವು.

ಅಹಮದ್ Iಗಿನ (1648-87) ಕಾಲದಲ್ಲಿ ಇಳಿಗತಿ ಕೊನೆಗಂಡು, ಆಟೋಮನ್ ಸಾಮ್ರಾಜ್ಯ ಪುನಶ್ಚೇತನಗೊಂಡಿತು. ಅವನ ಕಾಲದಲ್ಲಿ ಕ್ರೀಟ್, ಪೊಡೋಲಿಯ ಮತ್ತು ಉಕ್ರೈನಿನ ಒಂದು ಭಾಗ ತುರುಕರ ಕೈ ಸೇರಿದುವು. ಆದರೆ 1683ರಲ್ಲಿ ವಿಯನ್ನಾದ ಮೇಲೆ ಎರಡನೆಯ ಬಾರಿ ಮುತ್ತಿಗೆ ಹಾಕಿದರೂ ನಿಷ್ಫಲವಾಯಿತು. ಮುಂದಿನ ಒಂದು ನೂರ ಐವತ್ತು ವರ್ಷಗಳು ತುರ್ಕಿ ಸಾಮ್ರಾಜ್ಯದ ಇತಿಹಾಸದಲ್ಲಿ ಗಮನಾರ್ಹವಾದುವು. ಏಕೆಂದರೆ ಆ ಸಾಮ್ರಾಜ್ಯ ಬಾಲ್ಕನ್ ರಾಜ್ಯಗಳೊಂದಿಗೆ ನಡೆಸಿದ ಯುದ್ಧಗಳಲ್ಲಿ ಮೇಲಿಂದ ಮೇಲೆ ಜಯಾಪಜಯಗಳನ್ನು ಅನುಭವಿಸಬೇಕಾಯಿತು. ಅಬ್ದುಲ್ ಮಜೀದ್ ಎಂಬುವನ (1839-61) ಕಾಲದಲ್ಲಿ ಈಜಿಪ್ಟಿನ ಮಹಮ್ಮದ್ ಅಲಿ ನಡೆಸಿದ ದಾಳಿಯಿಂದ ಪಾರಾಗಲು ಪಾಶ್ಚಾತ್ಯ ರಾಷ್ಟ್ರಗಳ ನೆರವು ಪಡೆಯಬೇಕಾಯಿತು. 1876ರಲ್ಲಿ ಅಬ್ದುಲ್ ಹಮೀದ್ II ಸುಲ್ತಾನನಾದ. ರಷ್ಯಾ ತುರ್ಕಿಯ ವಿರುದ್ಧ ಯುದ್ಧ ಘೋಷಿಸಿತು (1877-78). ಈ ಯುದ್ಧ 1878ನೆಯ ಮಾರ್ಚ್‍ನಲ್ಲಾದ ಸ್ಯಾನ್ ಸ್ಟಿಫಾನೊ ಒಪ್ಪಂದದಿಂದ ಕೊನೆಗಂಡಿತು. ಒಪ್ಪಂದದ ಷರತ್ತುಗಳು ಇಂಗ್ಲೆಂಡ್ ಆಸ್ಟ್ರಿಯಾಗಳಿಗೆ ಒಪ್ಪಿಗೆಯಾಗಲಿಲ್ಲ. ಆಗ್ನೇಯ ಯೂರೋಪಿನಲ್ಲಿ ಹೊಸದಾಗಿ ನಿರ್ಮಿತವಾದ ಸಣ್ಣ ರಾಜ್ಯಗಳಲ್ಲಿ ರಾಜಕೀಯ ಶಾಂತಿಗೆ ಅನುಕೂಲ ಸಮಾನಬಲತೆ ಏರ್ಪಟ್ಟಿರಲಿಲ್ಲವೆಂದು ಆ ಎರಡು ರಾಷ್ಟ್ರಗಳ ಆಕ್ಷೇಪಣೆ. ಈ ಕೊರತೆಯ ನಿವಾರಣೆಗಾಗಿ ಅದೇ ವರ್ಷದ ಜೂನ್ ಜುಲೈ ತಿಂಗಳುಗಳಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವೊಂದು ಬರ್ಲಿನ್‍ನಲ್ಲಿ ನಡೆಯಿತು. ಇಲ್ಲಿ ಸ್ಯಾನ್ ಸ್ಟಿಫಾನೊ ಒಪ್ಪಂದ ಪರಿಷ್ಕರಣ ಹೊಂದಿ, ಬರ್ಲಿನ್ ಕೌಲು ಹೊರಬಂದಿತು. ಹೊಸ ಕ್ರೈಸ್ತ ರಾಜ್ಯಗಳು ಕೊಂಚ ಮಾರ್ಪಾಡು ಹೊಂದಿ ಹಾಗೆಯೇ ಉಳಿದುವು. ತುರ್ಕಿ ಮಾತ್ರ, ತನ್ನ ಅಧೀನದಲ್ಲಿದ್ದ ಅನೇಕ ಪ್ರಾಂತ್ಯಗಳನ್ನು ಕಳೆದುಕೊಂಡಿತು. ಕ್ರೀಟ್ ದ್ವೀಪವನ್ನು ಸ್ವಾಧೀನಪಡಿಸಿಕೊಳ್ಳಲು 1897ರಲ್ಲಿ ಗ್ರೀಕರು ತುರ್ಕಿಯ ಮೇಲೆ ಯುದ್ಧ ಹೂಡಿದಾಗ, ಸುಲ್ತಾನ್ ಆದಂ ಪಾಷಾ ಅವರನ್ನು ಸೋಲಿಸಿದ್ದಲ್ಲದೆ ಥೆಸಲಿಯನ್ನೂ ವಶಪಡಿಸಿಕೊಂಡ.

1908ರಲ್ಲಿ ಯಂಗ್ ಟಕ್ರ್ಸ್ ಚಳವಳಿ ಪ್ರಾರಂಭವಾದ ಮೇಲೆ ಆಧುನಿಕ ತುರ್ಕಿಯಲ್ಲಿ ಕ್ರಾಂತಿಕಾರಕ ರಾಜಕೀಯ ಘಟನೆಗಳು ಸಂಭವಿಸಿದುವು. ಸುಧಾರಣೆಗಳಿಗೆ, ಪ್ರಜಾಪ್ರಭುತ್ವಕ್ಕೆ, ಅನುಕೂಲವಾದ ರಾಜ್ಯವ್ಯವಸ್ಥೆಯನ್ನು ರೂಪಿಸಿ, ಅದಕ್ಕನುಸಾರವಾಗಿ 17ನೆಯ ಡಿಸೆಂಬರ್ 1908ರಲ್ಲಿ ಶಾಸನ ಸಭೆಯೊಂದು ಸೇರಿತು. ಸಂವಿಧಾನಾತ್ಮಕ ಆಡಳಿತ ಪ್ರಾರಂಭವಾಯಿತು. ಮೊದಲನೆಯ ಮಹಾಯುದ್ಧದಲ್ಲಿ ತುರ್ಕಿದೇಶ ಜರ್ಮನಿಯ ಪರವಾಗಿತ್ತು. ಯುದ್ಧ ಮುಗಿದ ಕೂಡಲೇ ಆಕ್ರಮಣಶೀಲವಾಗಿದ್ದ ಗ್ರೀಕರ ಸೈನ್ಯ ಒಂದು ಇಜ್‍ಮೀರ್‍ನಲ್ಲಿ ನೆಲೆಯೂರಿತು. ಆಗ ದೇಶಪ್ರೇಮಿ ತುರ್ಕಿ ಯುವಕ ತಂಡವೊಂದು ಮುಸ್ತಫ ಕೆಮಾಲ್‍ನ ನೇತೃತ್ವದಲ್ಲಿ ಮುನ್ನುಗ್ಗಿ ಗ್ರೀಕರ ಹಂಚಿಕೆಯನ್ನು ವಿಫಲಗೊಳಿಸಿತು. ದಿನಾಂಕ 20, ಡಿಸೆಂಬರ್ 1920 ರಂದು ತುರ್ಕಿಯ ಪಾರ್ಲಿಮೆಂಟಿನ ನ್ಯಾಷನಲಿಸ್ಟ್ ಪಕ್ಷದ ಸದಸ್ಯರು ಒಂದು ರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿದರು. ಆ ಶಾಂತಿ ಒಪ್ಪಂದವನ್ನೇ ಹೊಸ ತುರ್ಕಿಯ ಸ್ವಾತಂತ್ರ್ಯ ಘೋಷಣೆ ದಿನವೆಂದು ಉಲ್ಲೇಖಿಸಲಾಗುತ್ತಿದೆ. 1920ರ ಏಪ್ರಿಲ್‍ನಲ್ಲಿ ಮುಸ್ತಫ ಕೆಮಾಲ್ ಮೊದಲ ರಾಷ್ಟ್ರೀಯ ಸರ್ಕಾರವನ್ನು ಅನಟೋಲಿಯ ಪರ್ವತ ಪ್ರದೇಶದಲ್ಲಿರುವ ಅಂಕಾರಾದಲ್ಲಿ ಸ್ಥಾಪಿಸಿದ. (ನೋಡಿ- ಅಟಾಟರ್ಕ್,-ಕೆಮಾಲ್) ಗ್ರೀಕರು ತುರ್ಕಿ ದೇಶದೊಳಕ್ಕೆ ನುಗ್ಗಿದ್ದರು. ಕೆಮಾಲ್ ಅವರನ್ನು ಹೊಡೆದೋಡಿಸಿದ. ಈ ಯುದ್ಧ 1923ರ ಲಾಸೇನ್ ಶಾಂತಿ ಒಪ್ಪಂದದಿಂದ ಕೊನೆಗೊಂಡಿತು. ಪಾಶ್ಚಾತ್ಯ ರಾಷ್ಟ್ರಗಳ ಮಾದರಿಯಲ್ಲಿ ಪ್ರಗತಿಪರ ಪ್ರಜಾಧಿಪತ್ಯ ಸ್ಥಾಪಿತವಾದಾಗ ಆಟೋಮನ್ ಸಾಮ್ರಾಜ್ಯ ಕೊನೆಗಂಡಿತು.

(ಬಿ.ಎಸ್.ಎ.)