ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಡನ್, ವಿಸ್ಟನ್ ಹ್ಯೂ
ಆಡನ್, ವಿಸ್ಟನ್ ಹ್ಯೂ (1907). ಆಂಗ್ಲಕವಿ ಮತ್ತು ನಾಟಕಕಾರ. ಜರ್ಮನ್ ಮಹಿಳೆಯನ್ನು ವಿವಾಹವಾಗಿದ್ದು ಈಗ ಅಮೆರಿಕದ ನಾಗರಿಕನಾಗಿದ್ದಾನೆ. ಇವನ ಬರವಣಿಗೆಯಲ್ಲಿರುವ ಉತ್ತಮ ಅಂಶಗಳಲ್ಲಿ ಕೆಲವು ಎಲಿಯಟ್‍ನ ಪ್ರಭಾವದಿಂದ ಬಂದಿವೆ. ಇವನ ಕಾವ್ಯದುದ್ದಕ್ಕೂ ಮನೋವಿಜ್ಞಾನದ ಗಾಢಪರಿಚಯ ಕಾಣುತ್ತದೆ. ವೀರ್ಯವತ್ತಾದ ಪದಗಳ ವಿಸ್ತಾರ ಶಬ್ದಭಂಡಾರ ಆಡನ್ನನಿಗೆ ಕರಗತವಾಗಿದೆ. ಶಬ್ದಗಳ ನಾದಗುಣವನ್ನು ವಿಶೇಷವಾಗಿ ಗ್ರಹಿಸಬಲ್ಲ ಸಾಮಥ್ರ್ಯವಶವಾಗಿದೆ. ಕಾವ್ಯವನ್ನು ಆಡುಮಾತಿಗೆ ಹತ್ತಿರ ತರಲು ಪ್ರಯತ್ನಿಸಿ ಈತ ಸಫಲನಾಗಿದ್ದಾನೆ. ಮಾನವನ ಭವಿಷ್ಯದಲ್ಲಿ ಅವನಿಗಿರುವ ದೃಢವಾದ ನಂಬಿಕೆ ಅವನ ಕವನಗಳಲ್ಲಿ ಕಲಾತ್ಮಕವಾಗಿ ಮೂಡಿಬಂದಿದೆ. ಇಂದಿನ ಕಿರಿಯ ಕವಿಗಳಲ್ಲಿ ಬಹುಜನ ಅವನಿಂದ ಪ್ರಭಾವಿತರಾಗಿದ್ದಾರೆ. ಪೊಯಮ್ಸ್ (1930) ಪ್ರಥಮ ಕೃತಿ. ಅನಂತರ ಅರೆಟರ್ಸ್ (1932), ದಿ ಡಾನ್ಸ್ ಆಫ್ ಡೆತ್ (1933) ಪ್ರಕಟವಾದುವು. ಕಡೆ ಕಡೆಯ ರಚನೆಗಳು ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳ ವಿವರವನ್ನು ಮನೋವಿಜ್ಞಾನದ ಭಾಷೆಯಲ್ಲಿ ತಿಳಿಸುತ್ತವೆ. ಬಹುಶಃ ಸ್ಪೇನ್ (1937) ಅವನ ಶ್ರೇಷ್ಠ ಕವನ. ತನ್ನ ಆಂತರಿಕ ಪ್ರಯತ್ನಗಳಿಂದಾಗಿ ಮಾತ್ರವೇ ಸ್ಪೇನ್ ಸುರಕ್ಷಿತವಾಗಿ ಉಳಿಯಬಲ್ಲದು, ಸ್ಪೇನಿನ ವಿಧಿಗನುಗುಣವಾಗಿ ಜನರ ವ್ಯಕ್ತಿ ಪ್ರಜ್ಞೆ ಒಂದೇ ಉನ್ನತಿಗೇರುವುದು ಇಲ್ಲವೇ ಕುಸಿಯುವುದು ಎಂಬುದು ಕವನದ ಒಟ್ಟು ಅರ್ಥ. ನ್ಯೂ ಇಯರ್ ಲೆಟರ್ (1941) ಪ್ರಥಮ ಮಹಾಯುದ್ಧದ ಅನಂತರ ಬ್ರಿಟಿಷರ ಕಪಟವನ್ನು ಕುರಿತ ಟೀಕೆ. ಅವನ ಇತರ ಕೃತಿಗಳು-ಸಮ್‍ಪೊಯಮ್ಸ್ (1940), ಫಾರ್ ದಿ ಟೈಂ ಬೀಯಿಂಗ್ (1944), ಟೆನಿಸನ್ (1946), ದಿ ಏಜ್ ಆಫ್ ಆಂಗ್ಸೈಟಿ (1947), ಆಕ್ಸ್‍ಫರ್ಡ್ ಬುಕ್ ಆಫ್ ಲೈಟ್ ವರ್ಸ್ (1938), ಜರ್ನಿ ಟು ಎ ವಾರ್ (1939).
ಈತ ಕ್ರಿಸ್ಟೋಫರ್ ಷರ್‍ವುಡ್‍ನೊಂದಿಗೆ ದಿ ಡಾಗ್ ಬಿನೀತ್ ದಿ ಸ್ಕಿನ್ (1935), ದಿ ಅಸೆಂಟ್ ಆಫ್ ಎಫ್ ಸಿಕ್ಸ್ (1936), ಆನ್ ದಿ ಫ್ರಾಂಟಿಯರ್ (1938) ಎಂಬ ಉತ್ತಮ ನಾಟಕಗಳನ್ನೂ ರಚಿಸಿದ್ದಾನೆ.
ಆಡನ್ನನ ಕಡೆ ಕಡೆಯ ಕೃತಿಗಳಲ್ಲಿ ತಂತ್ರಕೌಶಲ್ಯ ತುಂಬ ಬೆಳೆದಿದೆ. ಪ್ರತಿಭೆ ಪಕ್ವಗೊಂಡಿದೆ. ಈ ಕಾಲದ ಬಗೆಬಗೆಯ ಸಮಸ್ಯೆಗಳ ಅರಿವಿನಿಂದ ಮೂಡಿದ ನಿರಾಶೆ ಬಹುಮಟ್ಟಿನ ಕವನಗಳಲ್ಲಿ ಕಂಡುಬಂದರೂ ಮೊದಲಿಗಿಂತ ಹೆಚ್ಚಿನ ಶಾಂತತೆ, ಸ್ಥಿಮಿತತೆ, ಎಲ್ಲ ಕೇಡುಗಳಲ್ಲಿ ಆಚೆ ಬೆಳಗುವ ಬದುಕನ್ನು ಕಾಣಬಲ್ಲ ದೃಷ್ಟಿ ವ್ಯಕ್ತವಾಗಿದೆ. (ಎಲ್.ಎಸ್.ಎಸ್.; ಎನ್.ಎಸ್.ಎಲ್.)