ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆದಿತ್ಯ
ಗೋಚರ
ಆದಿತ್ಯ ಅಪರಿಮಿತವಾಗಿ ತೋರುವ ಆಕಾಶದ ಒಂದು ಸ್ವರೂಪದ ಆಧಾರದ ಮೇಲೆ ಕಲ್ಪಿತವಾಗಿರುವ ಮತ್ತು ದೇವಮಾತೃವೆಂದು ಪ್ರಸಿದ್ಧಳಾದ ಅದಿತಿಯ ಪುತ್ರ. ವೇದದ ಕಾಲದಿಂದಲೂ ಅದಿತಿ ಪುತ್ರರಾದ ಆದಿತ್ಯರ ವಿಚಾರ ಬೆಳೆದು ಬಂದಿದೆ. ಅವರ ಸಂಖ್ಯೆ ಮೊದಲಿನ ಆರರಿಂದ ಹನ್ನೆರಡರವರೆಗೆ ವ್ಯತ್ಯಾಸಗೊಳ್ಳುವುದನ್ನೂ ಅಲ್ಲಲ್ಲಿ ಕಾಣಬಹುದು. ವರ್ಷದ ಹನ್ನೆರಡು ಮಾಸಗಳಲ್ಲಿ ಸೂರ್ಯನನ್ನು ಪ್ರತಿನಿಧಿಸುವ ದ್ವಾದಶಾದಿತ್ಯರ ವಿಚಾರ ಬ್ರಾಹ್ಮಣಗಳಲ್ಲಿ ಪ್ರತಿಪಾದಿತವಾಗಿದೆ. ಪ್ರಳಯಕಾಲದಲ್ಲಿ ಮಾತ್ರ ಅವರೆಲ್ಲರ ಉದಯವಾಗುವುದೆಂಬ ಪ್ರತೀತಿ ಉಂಟು. ಪ್ರಾರಂಭದಲ್ಲಿ ವರುಣ ದೇವತೆ ಆದಿತ್ಯರಲ್ಲಿ ಪ್ರಮುಖನಾದವ. ಕ್ರಮೇಣ ವಿಶೇಷವಾಗಿ ಸೂರ್ಯನೇ ಆದಿತ್ಯನೆನಿಸಿಕೊಂಡಿದ್ದಾನೆ. (ಬಿ.ಕೆ.ಎಸ್.)